ಸೂತಕವನ್ನು ಬರಸೆಳೆದ ಸ್ವರ್ಗ

August 7, 2024
10:47 PM
ಈ ವರ್ಷ ಅತಿವೃಷ್ಠಿಯಿಂದಾಗಿಯೇ ವೈನಾಡಿನಲ್ಲಿ ಪ್ರಕೃತಿ ವಿಕೋಪ ಸಂಭವಿಸಿತೆಂಬುದು ನಿಜ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಮಳೆ ಹಿಂದೆಯೂ ಸುರಿಯುತ್ತಿತ್ತು. ಆಗ ಹೀಗೆ ಗುಡ್ಡಗಳು ಜರಿದ ಕಥೆಗಳನ್ನು ಕೇಳಲಿಲ್ಲ. ಹಾಗಿದ್ದರೆ ಕಾರಣವೇನು..?

ಬ್ರಿಟಿಷರು ಮಾಡಿದ್ದ ರಕ್ಷಿತಾರಣ್ಯ (Reserved Forest) ಎಂಬ ಕಾನೂನು ಭಾರತದಲ್ಲಿ ಈಗಲೂ ಜಾರಿಯಲ್ಲಿರುವುದು ನಮ್ಮ ಭಾಗ್ಯ. ಬ್ರಿಟಿಷ್ ಕಾಲದ ಗುಲಾಮಿ ಮನೋಧರ್ಮದ ಶಾಸನಗಳನ್ನು ಒಂದೊಂದಾಗಿ ಬದಲಾಯಿಸುತ್ತಿರುವ ಕೇಂದ್ರ ಸರಕಾರವು ಈ ಶಾಸನವನ್ನು ಮಾತ್ರ ಬಲಗೊಳಿಸಬೇಕು. ಈ ದಿಸೆಯಲ್ಲಿ ಸೂಕ್ತ ಮಾರ್ಗದರ್ಶನ ನೀಡುತ್ತಿರುವ ಮಾಧವ ಗಾಡ್ಗೀಳ್‍ರವರ ವರದಿಯನ್ನು ಜಾರಿಗೊಳಿಸಿ ಇನ್ನು ಮುಂದೆ ಅರಣ್ಯ ನಾಶವಾಗದಂತೆ ಪರಿಸರ ಸಮತೋಲನವನ್ನು ಕಾಯ್ದುಕೊಳ್ಳಬೇಕು. ಸುಖಪಿಪಾಸುಗಳಾದ ಶ್ರೀಮಂತ ವರ್ಗದವರ ದುರಾಸೆಗೆ ನೈಸರ್ಗಿಕ ಸಂಪತ್ತನ್ನು ಬಲಿ ಕೊಡಬಾರದು.

Advertisement
Advertisement

ಕಾಯ್ದಿಟ್ಟ ರಕ್ಷಿತಾರಣ್ಯದಂತೆ ಬ್ರಿಟಿಷ್ ಸರ್ವೆಯರ್‍ಗಳು ಕಂದಾಯ ಭೂಮಿ (Revenue Land) ಯನ್ನು ಕೂಡಾ ಗುರುತಿಸಿದ್ದರು. ಅದನ್ನು ಕೃಷಿ ಭೂಮಿಯಾಗಿ ಪರಿವರ್ತಿಸಲು ಭೂರಹಿತರಿಗೆ ನೀಡಲು ಅವಕಾಶವಿತ್ತು. ಆದರೆ ಭೂಮಾಲಕ ಕೃಷಿಕರೂ ಇಂತಹ ಭೂಮಿಯಲ್ಲಿ ಸಾಕಷ್ಟು ದರ್ಖಾಸ್ತುಗಳನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಆದರೆ ಸರಕಾರವು ಕಂದಾಯ ಭೂಮಿಯಲ್ಲಿ ದರ್ಖಾಸ್ತು ಕೊಡುವಾಗ ರಕ್ಷಿತಾರಣ್ಯದಿಂದ ನಾಲ್ಕೂವರೆ ಸಂಕಲೆ ಜಾಗವನ್ನು ಇಟ್ಟುಕೊಂಡು ನಂತರದ್ದನ್ನು ಕೊಡಬೇಕೆಂಬ ನಿಯಮವಿತ್ತು. ಆ ಜಾಗವನ್ನು ಬಫರೇರಿಯಾ ಎಂದು ಕರೆಯಲಾಗುತ್ತಿತ್ತು. ಅದನ್ನು ಕೃಷಿಕರು ಸೊಪ್ಪು ತರಲು ಬಳಸಬಹುದಿತ್ತು. ಆದರೆ ಅಕ್ರಮ ಒತ್ತುವರಿ ಮಾಡುವಂತಿರಲಿಲ್ಲ, ಹಾಗೂ ಮರಗಳನ್ನು ಕಡಿಯುವಂತಿರಲಿಲ್ಲ. ಈ ನಿಯಮ ಪಾಲನೆಯ ವಿಚಾರದಲ್ಲಿ ಅರಣ್ಯ ಸಂರಕ್ಷಕರು ಖಡಕ್ಕಾಗಿ ಅಧಿಕಾರ ಚಲಾಯಿಸುತ್ತಿದ್ದರು. ಎಲ್ಲಿಯಾದರೂ ಮರವನ್ನು ಕಡಿದದ್ದು ತಿಳಿದರೆ ಅದರ ಕುತ್ತಿಯನ್ನು ಕಂಡು ಹಿಡಿದು ಕೇಸ್ ಚಡಾಯಿಸುತ್ತಿದ್ದರು. ಹಾಗಾಗಿ ಜನರು ಪೊಲೀಸರಿಗೆ ಹೆದರಿದಷ್ಟೇ ಫಾರೆಸ್ಟ್ ಗಾರ್ಡ್‍ಗಳಿಗೂ ಹೆದರುತ್ತಿದ್ದರು.

Advertisement

ಇದು ನಾನು ಬಾಲ್ಯದಲ್ಲಿ ಅಂದರೆ ಸುಮಾರು 50-60 ವರ್ಷಗಳ ಹಿಂದೆ ಕಂಡ ವಿದ್ಯಮಾನ. ಆದರೆ ಈಗ ಬಫರೇರಿಯಾ ಕಾಣೆಯಾಗಿದೆ ಹಾಗೂ ಸಂರಕ್ಷಿತ ಅರಣ್ಯದಲ್ಲೂ ಒತ್ತುವರಿ ಮುಂದುವರೆದಿದೆ. ಇದಕ್ಕೆ ಸ್ವತಂತ್ರ ಭಾರತದಲ್ಲಿ ಅರಣ್ಯ ಸಂರಕ್ಷಣೆಯ ಕುರಿತು ಬಿಗಿ ಧೋರಣೆ ಇಲ್ಲದಿದ್ದುದು ಹಾಗೂ ಅರಣ್ಯ ಇಲಾಖೆಯಲ್ಲಿ ಕಾಡಿನ ಬಗ್ಗೆ ನಿಷ್ಠೆ ಹೊಂದಿದ ಅಧಿಕಾರಿಗಳಿಲ್ಲದಿದ್ದುದು ಪ್ರಮುಖ ಕಾರಣವಾಗಿದೆ. ಜುಲೈ ತಿಂಗಳಲ್ಲಿ ವನಮಹೋತ್ಸವ, “ಕಾಡು ಬೆಳೆಸಿ ನಾಡು ಉಳಿಸಿ”, “ಮನೆಗೊಂದು ಮರ ಊರಿಗೊಂದು ವರ” ಮುಂತಾದ ಘೋಷಣೆಳಿಗಷ್ಟೇ ಅವರ ನಿಷ್ಠೆ ಸೀಮಿತವಾಗಿದೆ. ಅವರು ಪ್ರಬಲರಿಂದ ಒಲಿಸಿಕೊಳ್ಳಬಹುದಾದ ವ್ಯಕ್ತಿಗಳಾಗಿ ಒದಗಿದ್ದುದರ ಫಲವಾಗಿ ಹಸಿರು ಮನೆ ಪರಿಣಾಮ (Green House effect) ಅಂದರೆ ವಾತಾವರಣದ ಉಷ್ಣತೆಯ ಏರಿಕೆಗೆ ಕಾಡಿನ ನಾಶದ ಮೂಲಕ ನಮ್ಮ ಕೊಡುಗೆಯೂ ಸೇರಿಕೊಂಡಿದೆ. ಜೊತೆಯಲ್ಲೇ ಪ್ರಕೃತಿ ವಿಕೋಪದ ದುರಂತಗಳಿಗೂ ನಿತ್ಯಹರಿದ್ವರ್ಣದ ಕಾಡುಗಳ ನಾಶ ಕಾರಣವಾಗಿದೆ. ಜೀವ ವೈವಿಧ್ಯದ ನೆಲೆವೀಡಾದ ಪಶ್ಚಿಮ ಘಟ್ಟದ ಅರಣ್ಯಗಳ ನಾಶವು ಸಮಸ್ತ ಜಗತ್ತಿನ ಮೇಲೂ ಪರಿಣಾಮ ಉಂಟು ಮಾಡುತ್ತದೆ ಎನ್ನುವುದು ನಿರ್ವಿವಾದ.

ಸುಮಾರು ಮೂವತ್ತೈದು ವರ್ಷಗಳಷ್ಟು ಹಿಂದಿನ ಒಂದು ಘಟನೆಯನ್ನು ನೆನಪಿಸುತ್ತೇನೆ. ನನ್ನ ಪರಿಚಿತರೊಬ್ಬರಿಗೆ ಸರಕಾರದ ಕಂದಾಯ ಭೂಮಿಯಲ್ಲಿ ಐದು ಎಕ್ರೆ ದರ್ಖಾಸ್ತು ಸಿಕ್ಕಿತ್ತು. ಜಾಗ ತೋರಿಸಲು ನನ್ನನ್ನು ಕರೆದಿದ್ದರು. ಎತ್ತರವಾದ ಗುಡ್ಡದ ಮೈಯಲ್ಲಿ ಇಳಿಜಾರು ಜಾಗವಾಗಿತ್ತು ಅದು. ಅದ್ಭುತವಾದ ಎತ್ತರದ ವೈವಿಧ್ಯಮಯ ಆಯ ಆಕಾರದ ಬಹುಜಾತಿಯ ವೃಕ್ಷಗಳು ಅಲ್ಲಿದ್ದುವು. “ಇದನ್ನು ಹೇಗೆ ಉಪಯೋಗಿಸುತ್ತೀರಿ?” ಎಂದು ಕೇಳಿದೆ. “ಮರಗಳನ್ನು ಕಡಿದು ಮಾರುವುದು, ರಬ್ಬರ್ ಹಾಕುವುದು” ಎಂದರು. “ಈ ಮಹಾನ್ ಸಂಪತ್ತನ್ನು ಕಡಿದು ಬಿಡುತ್ತೀರಾ?” ಎಂದೆ. “ನಿಮ್ಮ ಪರಿಸರವಾದ ನೆಚ್ಚಿಕೊಂಡಿದ್ರೆ ಯಾವ ಅಭಿವೃದ್ಧಿಯೂ ಆಗ್ಲಿಕ್ಕಿಲ್ಲ ದಾಮ್ಲೆಯವ್ರೇ. ನಾನು ಈ ಮರಗಳನ್ನಿಟ್ಟುಕೊಂಡು ಏನು ಮಾಡುವುದು? ಅವುಗಳ ಚಂದ ನೋಡುವುದೋ? ರಬ್ಬರ್ ನಲ್ಲಿಯಾದರೆ ಆದಾಯ ಬರುತ್ತದೆ. ನಾನೊಬ್ಬ ಕಡಿದರೆ ಏನು ಮಹಾ ನಷ್ಟ? ಇಷ್ಟು ದೊಡ್ಡ ಕಾಡಿನಲ್ಲಿ ನನ್ನ ಐದು ಎಕ್ರೆ ಯಾವ ಲೆಕ್ಕ?” ಎಂದರು. ಹೇಳಿದಂತೆಯೇ ಮಾಡಿದರು ಕೂಡಾ. ಮುಂದೆ ಅವರಂತೆ ಅನೇಕರು ಅಲ್ಲಿ ದರ್ಖಾಸ್ತು ಪಡೆದು ರಬ್ಬರ್ ಬೆಳೆಸುವುದಕ್ಕಾಗಿ ಕಾಡು ಬೋಳಾಯಿತು. ಇದೊಂದು ಸಹಜ ವಿದ್ಯಮಾನದಂತೆ ನಡೆದು ಹೋಗಿದೆ. ನಮ್ಮ ಆಕ್ಷೇಪಗಳನ್ನೆಲ್ಲ ‘ಅಭಿವೃದ್ಧಿ ವಿರೋಧಿ ಚಿಂತನೆ’ ಎಂದು ಹಣೆ ಪಟ್ಟಿ ಕಟ್ಟಿ ಆಗಿದೆ.

Advertisement

ಭಾರತದಲ್ಲಿ ‘ದೇವರ ನಾಡು’ ಎಂಬ ಖ್ಯಾತಿಯು ಕೇರಳ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಿಗಿವೆ. ನಾನು ಶಿಮ್ಲಾದಲ್ಲಿ ಒಂದು ವಿಚಾರ ಸಂಕಿರಣಕ್ಕಾಗಿ ಹೋಗಿದ್ದಾಗ ಅಲ್ಲಿನ ಬಸ್ಸುಗಳಲ್ಲಿ ದೇವರನಾಡು ಎಂಬ ಫಲಕಗಳಿದ್ದುವು. ಅಲ್ಲಿ ಸಾಕಷ್ಟು ಸುಂದರವಾದ ಪ್ರಕೃತಿಯ ದೃಶ್ಯಗಳಿವೆ. ಶಿಮ್ಲಾದಿಂದ ಧರ್ಮಶಾಲಾಕ್ಕೆ ಬಸ್ಸಲ್ಲಿ ಪ್ರಯಾಣಿಸುವಾಗ ಸಾಕಷ್ಟು ಹಸಿರು ಕಾಡುಗಳನ್ನು ಏರುತಗ್ಗುಗಳ ಬೆಟ್ಟಗಳನ್ನು ಅವುಗಳ ಕಡಿದಾದ ರಸ್ತೆಗಳನ್ನು ಭಯಾನಕವೆನ್ನಿಸುವ ತಿರುವುಗಳನ್ನು ಕಂಡಿದ್ದೇನೆ. ಅಲ್ಲಿನ ನಿಸರ್ಗ ಸೌಂದರ್ಯವೇ ಅದನ್ನು ದೇವರನಾಡು ಎಂದು ಕರೆಯಲು ಕಾರಣವೆಂಬುದು ಸ್ಪಷ್ಟವಾಗಿತ್ತು. ಕೇರಳಕ್ಕೂ ದೇವರ ನಾಡು ಎಂಬ ಹೆಸರಿರುವುದು ಆಗ ನನಗೆ ಗೊತ್ತಿರಲಿಲ್ಲ. ಆದರೆ ಈ ಎರಡೂ ರಾಜ್ಯಗಳಲ್ಲಿ ಪ್ರಕೃತಿ ಸೌಂದರ್ಯದ ಶ್ರೀಮಂತಿಕೆ ಇದೆ. ಆದರೆ ಅತಿವೃಷ್ಟಿಯಾದಾಗ ಭೂಕುಸಿತ, ಕಟ್ಟಡಗಳ ವಿನಾಶ, ಜನರ ಬದುಕು ಮೂರಾಬಟ್ಟೆಯಾಗುವ ಘಟನೆಗಳು ಸಂಭವಿಸುತ್ತವೆ. ಗುಡ್ದದ ತುದಿಯವರೆಗೆ ರೂಪಿಸಿದ ರಸ್ತೆಗಳು, ಅಲ್ಲಿ ಬಹುಮಹಡಿಗಳ ಕಟ್ಟಡಗಳು, ರೆಸಾರ್ಟ್‍ಗಳು, ಅಂಗಡಿಗಳು ಹೀಗೆ ಆಧುನಿಕ ಸೌಲಭ್ಯಗಳ ನಿರ್ಮಾಣಗಳು ಪ್ರಕೃತಿಯ ಮೇಲೆ ಉಂಟುಮಾಡುವ ಒತ್ತಡಗಳೇ ಇಂತಹ ಕುಸಿತಕ್ಕೆ ಕಾರಣವೆಂಬುದನ್ನು ಪರಿಸರ ಪ್ರೇಮಿಗಳು ಮತ್ತೆ ಮತ್ತೆ ಸರಕಾರದ ಗಮನಕ್ಕೆ ತರುತ್ತಾರೆ. ಆದರೆ ಈ ಗುಲ್ಲು ಒಂದೆರಡು ವಾರಗಳಲ್ಲಿ ಸ್ಥಬ್ಧವಾಗುತ್ತದೆ. ಮತ್ತೊಂದು ಪ್ರಕೋಪಕ್ಕೆ ದೇವರನಾಡುಗಳು ಕಾಯುತ್ತವೆ.

ಕೇರಳದಲ್ಲಿರುವ ವೈನಾಡು ದೇವರ ಖಾಸಾ ಅರಮನೆ ಇರುವ ಸ್ಥಳವೆಂದು ಹೇಳಬಹುದು. ಅಷ್ಟೊಂದು ಪ್ರಕೃತಿ ಸೌಂದರ್ಯ ಅಲ್ಲಿ ತುಂಬಿದೆ. ಅಲ್ಲಿ ಇದೇ 2024 ಜುಲೈ 30 ರಂದು ಬೆಳಗ್ಗಿನ ಜಾವ 1 ಗಂಟೆಯಿಂದ 6 ಗಂಟೆಯ ನಡುವೆ ಏಕಾಏಕಿ ಭೂಮಿ ಕುಸಿದು ನಾಲ್ಕು ಹಳ್ಳಿಗಳೇ ನಾಮಾವಶೇಷವಾದುವು. ಹಿಂದಿನ ದಿನದಿಂದ ಸುರಿದ ಭಾರೀ ಮಳೆಗೆ ಗುಡ್ಡ ಕುಸಿತವಾಗಿ ಕಲ್ಲು ಮಣ್ಣುಗಳ ಪ್ರವಾಹವೇ ಹರಿದು ಮನೆಮಾರು, ಜಾನುವಾರು, ಹಾಗೂ ನಿದ್ರಾಧೀನ ಜನರು ತಮಗರಿವಿಲ್ಲದಂತೆಯೇ ಕೊಚ್ಚಿ ಹೋದರು. ಪ್ರವಾಹದ ರಭಸಕ್ಕೆ ಸಿಲುಕಿದ ಕೆಲವರು ಅಲ್ಲೇ ಭೂಸಮಾಧಿಯಾದರು. ಇನ್ನು ಕೆಲವರು ಅವಶೇಷಗಳ ಅಡಿಯಲ್ಲಿ ಅಡಗಿ ಹೋದರು, ಮತ್ತೆ ಕೆಲವರು ಛಿದ್ರವಿಚ್ಛಿದ್ರ ಶವಗಳಾಗಿ ಹರಿದು ಹೋಗಿ ಎಲ್ಲೆಲ್ಲೋ ಕಾಣಿಸಿಕೊಂಡರು. ನಿಲ್ಲದ ಮಳೆಯಲ್ಲೂ ರಕ್ಷಣಾ ಕಾರ್ಯ ನಡೆಸಿದ ಸೇನಾಪಡೆ, ರಾಷ್ಟ್ರೀಯ ಮತ್ತು ರಾಜ್ಯದ ವಿಪತ್ತು ನಿರ್ವಹಣಾ ಪಡೆಗಳು, ಸ್ಥಳೀಯ ರಕ್ಷಣಾ ಸಿಬ್ಬಂದಿ, ಸ್ವಯಂ ಸೇವಾ ಸಂಸ್ಥೆಗಳು ಉಳಿದರನ್ನು ತಾತ್ಕಾಲಿಕ ವಸತಿಕೇಂದ್ರಗಳಿಗೆ ತಲುಪಿಸುವುದಕ್ಕಿಂತ ಹೆಚ್ಚು ಏನುಮಾಡಲು ಸಾಧ್ಯ?

Advertisement

ಮುದ್ರಣ ಮಾಧ್ಯಮಗಳಲ್ಲಿ ಓದಿ, ದೃಶ್ಯ ಮಾಧ್ಯಮಗಳಲ್ಲಿ ನೋಡಿ ಸಾಕಷ್ಟು ವಿವರಗಳನ್ನು ತಿಳಿದಿರುವ ಇಂದಿನ ಜನರಿಗೆ ವಯನಾಡಿನಲ್ಲಾದ ಪ್ರಕೃತಿ ವಿಕೋಪದ ಅಗಾಧತೆಯ ಅರಿವಾಗುತ್ತದೆ. ಸದ್ಯ ಸಂಭವಿಸಿದ ಭೂಕುಸಿತದಲ್ಲಿ ಉಂಟಾಗಿರುವ ಪ್ರಾಣಹಾನಿಯ ಚಿತ್ರಣವು ಒಂದು ಯುದ್ಧ ಮುಗಿದ ಭೂಮಿಯಂತಿದೆ. ಆಧುನಿಕ ನಾಗರಿಕತೆಯ ಆಟಾಟೋಪದೊಡನೆ ಪ್ರಕೃತಿಯು ನೇರವಾಗಿ ಹೋರಾಟಕ್ಕಿಳಿದಂತೆ ಈ ಬಾರಿಯ ದುರಂತ ಸಂಭವಿಸಿದೆ. ನದಿಯಲ್ಲಿ ಮೈಲುಗಟ್ಟಲೆ ಹರಿದು ಹೋದ ಶವಗಳು, ಅಲ್ಲಲ್ಲಿ ತುಂಡರಿಸಲ್ಪಟ್ಟ ದೇಹಗಳು, ಶರೀರದ ತಲೆ, ಕೈ, ಕಾಲು, ಮುಂಡ ಹೀಗೆ ಯಾವುದಾದರೊಂದು ಭಾಗ ಮಾತ್ರ ಲಭ್ಯವಾಗುವುದು, ಒಂದೊಂದು ಕಡೆ ಎಸೆಯಲ್ಪಟ್ಟ ಶರೀರದ ತುಂಡುಗಳು, ಅನಾಥರಾದ ವೃದ್ಧರು, ತಮ್ಮ ಮಕ್ಕಳನ್ನು ಹುಡುಕುತ್ತ ಅಲೆದಾಡುತ್ತಿರುವ ಪೆÇೀಷಕರು, ಹೆತ್ತವರನ್ನು ಹುಡುಕಿಕೊಳ್ಳಲಾಗದೆ ಅಲೆದಾಡುವ ಮಕ್ಕಳು, ಕುಟುಂಬಗಳಲ್ಲಿ ಒಬ್ಬೊಬ್ಬರೇ ಉಳಿದು ಇನ್ನೇಕೆ ಬದುಕಬೇಕೆಂದು ರೋದಿಸುವ ಒಂಟಿ ಜೀವಗಳು, ಎದೆ ಮಟ್ಟ ಏರಿ ಬಂದ ಪ್ರವಾಹಕ್ಕೆ ಹೆದರಿ ಬದುಕುವ ಆಸೆಯಿಂದ ಗುಡ್ಡ ಹತ್ತಿ ಅಲ್ಲಿಂದ ತಮ್ಮ ಮನೆಯೂ, ಬಂಧುಗಳ ಮನೆಯೂ ದೊಡ್ಡ ಬಂಡೆಗಳ ಉರುಳುವಿಕೆಗೆ ಹುಡಿಯಾಗಿ ಹರಿದು ಹೋದದ್ದನ್ನು ಕಂಡು ಮರುಗಿದ ಮನಸ್ಸುಗಳು ಹೀಗೆ ವರ್ಣಿಸಲಸದಳವಾದ ದುರಂತ ವೈನಾಡಿನಲ್ಲಿ ಸಂಭವಿಸಿದೆ. ಕಳೆದು ಹೋದ ಮಗಳನ್ನು ಹುಡುಕುತ್ತಿದ್ದ ಅಪ್ಪ ಕೈಯೊಂದು ನೆಲದಿಂದ ಎದ್ದು ಕಾಣಿಸುತ್ತಿದ್ದುದನ್ನು ನೋಡಿ ಅದರ ಬೆರಳಿನಲ್ಲಿರುವ ಉಂಗುರವನ್ನು ಗುರುತಿಸಿ ತನ್ನ ಮಗಳದ್ದೇ ಎಂದು ಭಾವುಕನಾಗಿ ಆ ಕೈಯನ್ನಷ್ಟೇ ಬಿಳಿ ಬಟ್ಟೆಯಲ್ಲಿ ಸುತ್ತಿ ದಹನ ಮಾಡಿ ಅಂತ್ಯಸಂಸ್ಕಾರ ನೆರವೇರಿಸಿದ ಘಟನೆ ಇಡೀ ದುರಂತದ ಒಂದು ತೀಕ್ಷ್ಣ ಚಿತ್ರಣ ನೀಡುತ್ತದೆ.

ಈ ವರ್ಷ ಅತಿವೃಷ್ಠಿಯಿಂದಾಗಿಯೇ ವೈನಾಡಿನಲ್ಲಿ ಪ್ರಕೃತಿ ವಿಕೋಪ ಸಂಭವಿಸಿತೆಂಬುದು ನಿಜ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಮಳೆ ಹಿಂದೆಯೂ ಸುರಿಯುತ್ತಿತ್ತು. ಆಗ ಹೀಗೆ ಗುಡ್ಡಗಳು ಜರಿದ ಕಥೆಗಳನ್ನು ಕೇಳಲಿಲ್ಲ. ಆದರೆ ಈಗ ಅದೇ ಗುಡ್ಡಗಳ ಶಿಖರದಲ್ಲಿ ರೆಸಾರ್ಟ್, ರಸ್ತೆ, ಉದ್ಯಾನವೆಂದು ಕಾಡು ಕಡಿದು ನೆಲವನ್ನು ಗೀರಿದರೆ ಮಳೆನೀರು ಇಂಗಿ ಮಣ್ಣಿನ ಬಿಗಿ ಸಡಿಲಗೊಳ್ಳುವುದು ಸಹಜ. ಅದು ಪುನರಪಿ ಆಗುತ್ತಿದ್ದಂತೆ ಒಟ್ಟಾಗಿ ಎಲ್ಲವೂ ಕುಸಿಯುವ ದಿನ ಬಂದೇ ಬರುತ್ತದೆ. ಈಗ ನಾಲ್ಕು ಹಳ್ಳಿಗಳಿಗೆ ಬಂದಿದೆ. ಇನ್ನು ಇದು ತಮ್ಮ ಹಳ್ಳಿಗೂ ಬರಬಹುದೆಂದು ಜನರು ಅರ್ಥೈಸಿಕೊಳ್ಳುವಂತಹ ಪಾಠ ವೈನಾಡಿನ ಚೂರಲ್‍ಮಲೆ, ಮುಂಡಕೈ ಮುಂತಾದೆಡೆ ಸಿಕ್ಕಿದೆ. ಹಿಮಾಚಲ ಪ್ರದೇಶದಿಂದಲೂ ಇಂತಹ ದುರ್ಘಟನೆಗಳು ವರದಿಯಾಗಿವೆ.

Advertisement

ಆದರೆ, ಪಾಠ ಕಲಿಯುವ ಮನಸ್ಸು ಮನುಷ್ಯನಿಗಿದೆಯಾ? ಪರಿಸರವನ್ನು ಸೂರೆಗೊಂಡು ರೆಸಾರ್ಟ್ ಕಟ್ಟಿ ಸಿಕ್ಕುವ ಲಾಭದ ರುಚಿ ಬಂಡವಾಳದಾರರರಿಗೆ ಸಿಕ್ಕಿದೆ. ಕೆಲಸಕ್ಕೆ ನಿಂತು ಸಾಯೋದಕ್ಕೆ ಬಡ ಕಾರ್ಮಿಕರು ಸಿಗುತ್ತಾರೆ. ಹಾಗಾಗಿ ಲಾಭಬಡುಕರು ಇನ್ನು ಮುಂದೆಯೂ ರೆಸಾರ್ಟ್ ಮತ್ತು ರಸ್ತೆಗಳನ್ನು ಮಾಡದೆ ಬಿಡಲಾರರು. ಅರಣ್ಯ ಸಚಿವರು ಹಣ ಹರಿದು ಬರುವ ಗಣಿ ಸಿಕ್ಕಿತೆಂದು ತಿಳಿಯದಿರಲಾರರು. ಅರಣ್ಯಾಧಿಕಾರಿಗಳು ಆಮಿಷಗಳನ್ನು ಮೀರಿ ನಿಲ್ಲಲಾರರು. ಹಾಗಾಗಿ ಮನುಷ್ಯ ಮತ್ತು ಪ್ರಕೃತಿಯ ನಡುವಿನ ಈ ಯುದ್ಧ ನಡೆಯುತ್ತಲೇ ಇರುತ್ತದೆ. ಅಣುಬಾಂಬ್ ವಿನಾಶಕಾರಿ ಎಂದು ಗೊತ್ತಿದೆ. ಆದರೆ ಬಾಂಬ್ ತಯಾರಿ ನಿಲ್ಲುವುದಿಲ್ಲ. ಕಾಡಿನ ನಾಶ ವಿನಾಶಕಾರಿ ಎಂದು ಗೊತ್ತಿದೆ. ಆದರೆ ಕಾಡಿನ ನಾಶ ನಿಲ್ಲುವುದಿಲ್ಲ, ಪ್ರಕೃತಿ ಪ್ರತೀಕಾರ ಮಾಡದೆ ಬಿಡುವುದಿಲ್ಲ. ಮುಗ್ಧ ಜನರ ಸಾವಿಗೆ ಕೊನೆಯಿಲ್ಲ!

ಬರಹ :
ಚಂದ್ರಶೇಖರ ದಾಮ್ಲೆ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

ಇದನ್ನೂ ಓದಿ

ಗ್ರಾಮೀಣ ಪರಿಸರದಲ್ಲಿ ಕೃಷಿ ಜ್ಞಾನಾನುಭವದ ಜೀವಂತ ಸಾಕ್ಷಿ ಬದನಾಜೆ ಶಂಕರ ಭಟ್
September 18, 2024
9:11 PM
by: ಡಾ.ಚಂದ್ರಶೇಖರ ದಾಮ್ಲೆ
ಧರ್ಮಕ್ಕೆ ಸಿಗುವುದಾದರೆ ಇರಲಿ ಎಂಬ ಮನೋಭಾವ
September 11, 2024
11:27 PM
by: ಡಾ.ಚಂದ್ರಶೇಖರ ದಾಮ್ಲೆ
ಅಡಿಕೆ ಬೆಳೆಗಾರರಿಗೆ ಮುಂದೊಂದು ದಿನ ಹೀಗಾಗಬಹುದೇ…!?
September 8, 2024
9:24 PM
by: ಪ್ರಬಂಧ ಅಂಬುತೀರ್ಥ
ವಿಶ್ವಗುರುವಾಗುವತ್ತ ಭಾರತ | ಶಿಕ್ಷಣ ಮತ್ತು ಕೃಷಿಕ್ಷೇತ್ರಗಳು ಅಸ್ಥಿರವಾಗುತ್ತಿರುವುದು ಗಮನದಲ್ಲಿದೆಯೆ?
September 4, 2024
9:29 PM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror