ಪ್ರಪಂಚದಲ್ಲಿ ಹಲವರ ದೃಷ್ಟಿಕೋನಗಳು ಹಲವು ಬಗೆ. ಪ್ರತಿಯೊಬ್ಬರಿಗೂ ಅವರವರದೇ ದೃಷ್ಟಿಕೋನಗಳಿವೆ. ಇನ್ನೊಬ್ಬರ ತಪ್ಪು ಒಪ್ಪುಗಳನ್ನು ವಿಮರ್ಷಿಸುವ ಹಕ್ಕು ನಮಗಾರಿಗೂ ಇಲ್ಲ. ಈ ದೃಷ್ಟಿ ಕೋನದಿಂದ ಕಳೆದ 40ಕ್ಕೂ ಹೆಚ್ಚುವರ್ಷಗಳಿಂದ 20ಕ್ಕಿಂತಲೂ ಹೆಚ್ಚು ದನಗಳನ್ನು ಇಂದಿನವರೆಗೂ ಸಾಕಿಕೊಂಡು ಬಂದ ನನ್ನ ಅನುಭವದಲ್ಲಿ ಒಂದಷ್ಟು ವಿಚಾರ ವಿಮರ್ಶೆ…..
ಇತ್ತೀಚಿಗಿನ ವರ್ಷಗಳಲ್ಲಿ ಅವ್ಯಾಹತವಾಗಿ ಕೇಳಿಬರುವ ಗೋ ರಕ್ಷಣೆ, ಸಂವರ್ಧನೆಯ ಹೆಸರಿನಲ್ಲಿ ನಡೆಯುವ ಚಳುವಳಿ, ಭಾಷಣಗಳು ಪ್ರಚಾರಗಳು ಎಲ್ಲಿಯೋ ದಾರಿ ತಪ್ಪುತ್ತಿದೆ ಎಂದೇ ನನಗೆ ಭಾಸವಾಗುತ್ತಿದೆ. ಒಬ್ಬೊಬ್ಬರ ಗೋಸಾಕಣೆಯ ಉದ್ದೇಶ ಒಂದೊಂದು. ಸಂರಕ್ಷಣೆ ಸಂವರ್ಧನೆಯ ಉದ್ದೇಶ ಒಂದು ಬಗೆಯಾದರೆ, ಪ್ರೀತಿಗೋಸ್ಕರ ಸಾಕಣೆ ಇನ್ನೊಂದು ಬಗೆ. ಗೋಮಾತೆ ಎಂದು ಪ್ರತ್ಯಕ್ಷ ತಾಯಿಯನ್ನು ಕಂಡು ಸಾಕುವವರು ಮತ್ತೊಬ್ಬರು. ಕೃಷಿ ಮತ್ತು ಭೂಮಿ ಮಣ್ಣು ಪರಿಸರದ ಕಾಳಜಿಯಿಂದ ಸಾಕುವವರು ಮಗದೊಬ್ಬರು. ಆರ್ಥಿಕ ದೃಷ್ಟಿಕೋನದಿಂದ ಗೋವನ್ನು ಸಾಕುವವರು ಹಲವರು.
ಇದರಲ್ಲಿ ಆರ್ಥಿಕ ದೃಷ್ಟಿಕೋನದಿಂದ ಸಾಕುವವರು ಲೆಕ್ಕಾಚಾರದ ಏರುಪೇರಿನಲ್ಲಿ ನಷ್ಟದಾಯಕ ಎಂದೇ ಗೋವಿನಿಂದ ವಿಮುಖರಾಗಿದ್ದಾರೆ. ಸಂರಕ್ಷಣೆಯ ಸಂವರ್ಧನೆಯ ಉದ್ದೇಶದಲ್ಲಿ ಸಾಕುವವರು ಹೆಚ್ಚಾಗಿ ಗೋಶಾಲೆಗಳನ್ನು ನಡೆಸುತ್ತಾರೆ. ಆರ್ಥಿಕವಾಗಿ ಸದಾ ಬಳಲಿಕೊಂಡು ಸಮಾಜದ ಸಹಾಯಕ್ಕಾಗಿ ನಿರೀಕ್ಷಿಸುತ್ತಲೇ ಇರುತ್ತಾರೆ. ಪ್ರೀತಿಗಾಗಿ ಮತ್ತು ಸಾಕ್ಷಾತ್ ಮಾತೇಯನ್ನೇ ಕಾಣುವ ಮಂದಿ ಒಂದೆರಡು ಗೋವಿಗೆ ಸೀಮಿತಗೊಳಿಸಿ ಸಂಖ್ಯೆ ವೃದ್ದಿಸಿದಂತೆ ಹೆಚ್ಚಾದ ಸಂಖ್ಯೆಯನ್ನು ಯಾವುದಾದರೂ ಗೋಶಾಲೆಗೆ ದಾನವಾಗಿ ನೀಡಿ ಕೈ ತೊಳೆದುಕೊಳ್ಳುತ್ತಾರೆ.
ಅಷ್ಟೂ ವರ್ಷಗಳಿಂದ ಕೃಷಿಗಾಗಿ ಮತ್ತು ಮಣ್ಣು ಪರಿಸರದ ಕಾಳಜಿಯಿಂದ, ಗೃಹೋಪಯೋಗದ ದೃಷ್ಟಿಯಿಂದ ಗೋವನ್ನು ಸಾಕಿಕೊಂಡು ಬಂದ ವರ್ಗ ಬಹಳ ದೊಡ್ಡದು. ಈ ದೊಡ್ಡವರ್ಗ ಆರ್ಥಿಕವಾಗಿ ಎಂದೂ ಪ್ರಭಲರಲ್ಲ. ತಾನಾಯಿತು ತನ್ನ ಕೆಲಸವಾಯಿತು ಎಂದು ಸದಾ ಗೋವು ಮತ್ತು ಕೃಷಿ ಕೆಲಸದಲ್ಲಿ ಮುಳುಗಿ ಸದಾ ಗೋ ಸಂತತಿಯನ್ನು ಬೆಳೆಸಿ ಪೋಷಿಸುತ್ತಲೇ ಬಂದಿದ್ದಾರೆ. ಅವರೆಂದೂ ಯಾವುದೇ ಉದ್ರೇಕಕಾರಿ ಭಾಷಣಗಳನ್ನೂ ಮಾಡಿಲ್ಲ. ಗೋವನ್ನು ಉಳಿಸುತ್ತೇನೆ ಬೆಳೆಸುತ್ತೇನೆ ಎಂದೂ ಹೇಳಿಕೊಂಡಿಲ್ಲ. ಹೆಚ್ಚಾದ ಸಂಖ್ಯೆಯನ್ನು ಯಾರು ಕೊಂಡು ಹೋಗುತ್ತಾರೋ ಅವರಿಗೆ ಪ್ರತಿಫಲದ ನಿರೀಕ್ಷೆಯಲ್ಲಿಯೇ ಕೊಡುತ್ತಾ ಬಂದಿರುತ್ತಾರೆ. ನಮ್ಮ ಕೈ ಜಾರಿದ ಮೇಲೆ ಅದು ಎಲ್ಲಿ ಹೋಯಿತು ಯಾಕಾಗಿ ಹೋಯಿತು ಎಂಬ ಚಿಂತೆ ಕೃಷಿಕರ ಮನದಲ್ಲಿ ಎಂದೂ ಮೂಡಿರಲಿಲ್ಲ. ಕೃಷಿ ಮತ್ತು ಗೋವನ್ನು ಪ್ರತ್ಯೇಕ ಪ್ರತ್ಯೇಕವಾಗಿ ಕಂಡಿರಲಿಲ್ಲ.
ಆರ್ಥಿಕ ಲೆಕ್ಕಾಚಾರದ ಮತ್ತು ಸುಲಭ ಕೃಷಿಯ ಬೆನ್ನು ಹತ್ತಿದ ಕೃಷಿಕ ಸಮಸ್ಯೆಗಳ ತಾಕಲಾಟದಿಂದ ಹೊರಬರಲು ಗೋವಾಧಾರಿತ ಕೃಷಿಯಿಂದ ಹೊರಬಂದು ರಾಸಾಯನಿಕ ಮತ್ತು ಯಾವುದೋ ಕಂಪೆನಿಗಳು ನೀಡುವ ಗೊಬ್ಬರದ ಕೃಷಿಯತ್ತ ಮುಖ ಮಾಡಿ ಗೋಸಾಕಣೆಯಿಂದ ವಿಮುಖರಾದರು. ಗೋವನ್ನು ಮತ್ತು ಮಣ್ಣನ್ನು ಉಸಿರಾಗಿಸಿಕೊಂಡ ನನ್ನಂತ ರೈತರು ಆರ್ಥಿಕ ದೃಷ್ಟಿಕೋನದ ಗೋವಿನಿಂದ ಹೊರಬಂದು ಪಾರಂಪರಿಕ ದೇಶೀ ಗೋವಿನತ್ತ ಮುಖ ಮಾಡಿದರು. ಇಂದೇನಾದರೂ ಗೋವು ಉಳಿದಿದ್ದರೆ ಅಂತಹ ಕೃಷಿಕರಿಂದಲೇ ಎಂಬುದು ಒಪ್ಪಿಕೊಳ್ಳಲೇ ಬೇಕಾದ ಸತ್ಯ.
ನಾನು ಮೊದಲೇ ತಿಳಿಸಿದಂತೆ ಒಬ್ಬ ಗೋಪಾಲಕನಾಗಿ ನನ್ನ 20 ದನ ಕರುಗಳ ಆದಾಯ ಮತ್ತು ವೆಚ್ಚದ ಪಟ್ಟಿಯನ್ನು ಸ್ಥೂಲವಾಗಿ ಈ ರೀತಿ ಚಿತ್ರಿಸಬಹುದು.
ಆದಾಯ : ದಿನವೊಂದರ 10 ಬುಟ್ಟಿ ಸಗಣಿಯಂತೆ ಬುಟ್ಟಿಯೊಂದರ ಐವತ್ತು ರೂನಂತೆ ವರುಷವೊಂದಕ್ಕೆ 1,82,500, ಹಾಲು ಸರಾಸರಿ ದಿನಕ್ಕೆ 5 ಲೀಟರ್ನಂತೆ ಲೀಟರ್ ಒಂದರ ೮೦ ರುನಂತೆ ವರುಷಕ್ಕೆ 146000, ಗೊಬ್ಬರದ ಅನಿಲ :ಅನಿಲ ಜಾಡಿ ಒಂದಕ್ಕೆ 900ರಂತೆ ವರ್ಷವೊಂದಕ್ಕೆ 18 ಜಾಡಿ ( ಜಾಡಿಯನ್ನೇ ಸಂಪೂರ್ಣವಾಗಿ ಬಳಕೆ ಮಾಡುತ್ತಿದ್ದರೆ ನಮ್ಮ ಅಗತ್ಯ )16200, ದನಗಳನ್ನು ತೋಟಕ್ಕೆ ಬಿಟ್ಟು ಮೇಯಿಸುವುದರಿಂದಾಗಿ ಹುಲ್ಲು ತೆಗೆಯುವ ಖರ್ಚಿನ ಉಳಿತಾಯ ರೂ.50,000, ಅಲ್ಲಿಗೆ ವರ್ಷವೊಂದರ ಆದಾಯ 3,94,700 ರೂಗಳು.
ಖರ್ಚು: ಸರಾಸರಿ ಎರಡು ಆಳು ಆಳೊಂದರ 400 ರಂತೆ ವಾರ್ಷಿಕ 2,92,000, ಹಿಂಡಿ ವಾರಕ್ಕೆ ರೂ 3000 ದಂತೆ 50 ವಾರ 1,50,000,( ಎರಡು ವಾರ ಬಿಟ್ಟಿರುತ್ತೇನೆ ) ಒಣ ಮೇವು ಹೆಚ್ಚು ರೂ 50,000. ನಾಲ್ಕು ಲಕ್ಷದ 92 ಸಾವಿರ ಒಟ್ಟು ಖರ್ಚು.
ಅಲ್ಲಿಗೆ ಆದಾಯ ಖೋತ 97,300ಗಳು.
ನಾವು ಮನೆಯವರೆ ಹೆಚ್ಚಿನ ಕೆಲಸ ಮಾಡುವ ಕಾರಣ ಒಂದಾಳಿನ ಮಜೂರಿ ಉಳಿಸಿದರೆ 1,46,000 ಉಳಿತಾಯವಾಗಿ ಖೋತ ಬಜೆಟ್ ಸರಿಸಮವಾಗಿಬಿಡುತ್ತದೆ
ಪ್ರಕೃತಿಯನ್ನು ಮಣ್ಣನ್ನು ಜೀವಧಾರಕವಾಗಿ ಮುಂದಿನ ಪೀಳಿಗೆಗೆ ಹಸ್ತಾಂತರಿಸಿದ ಪುಣ್ಯ ಮತ್ತು ಸಂತೃಪ್ತಿ ಒಂದು ಕಡೆಯಾದರೆ, ಗೋ ಸಂತತಿಯನ್ನು ಸಂವರ್ಧನೆ ಮಾಡುವಲ್ಲಿ ಕೈಜೋಡಿಸಿದ ತೃಪ್ತಿ ಇನ್ನೊಂದು ಕಡೆ.
ಸಹಸ್ರಮಾನಗಳಿಂದ ಇದೇ ಮನೋಭಾವದಲ್ಲಿ ಗೋವನ್ನು ರಕ್ಷಿಸಿಕೊಂಡ ಬಂದ ಕೃಷಿಕನಿಗೆ ದಾನವಾಗಿ ಕೊಡು, ಹುಟ್ಟಿದ್ದೆಲ್ಲವನ್ನು ನೀನೇ ಸಾಕು ಮತ್ತು ನಿನ್ನ ಜವಾಬ್ದಾರಿ ಎಂದು ಒತ್ತಾಯ ಹೇರುತ್ತಾ ಬಂದಲ್ಲಿ ಆರ್ಥಿಕವಾಗಿ ಎಂದೂ ಪ್ರಬಲರಲ್ಲದ ರೈತರು ಹೇರಿದ ಜವಾಬ್ದಾರಿಯನ್ನು ಇಳಿಸಿ ಕೈ ತೊಳೆದುಕೊಂಡಾರು.
ಮುಂದೇನೋ ಮತ್ತೇನೋ ಇಂದಿಗಾಮಾತೇಕೆ?!
ಸಂದರ್ಭ ಬರಲಿ ಬಂದಾಗಳಾ ಚಿಂತೆ
ಹೊಂದಿಸುವನಾರೋ ನಿನ್ನಾಳಲ್ಲ ಬೇರಿಹನು,
ಇಂದಿಗಿಂದಿನ ಬದುಕು -ಮಂಕುತಿಮ್ಮ .
ತಿಮ್ಮ ಕವಿಯ ನುಡಿಯಂತೆ ಇಂದಿಗಿಂದಿನ ಸರಳ ಬದುಕನ್ನು ಕಾಣುವ ರೈತರನ್ನು ರೈತರಷ್ಟಕ್ಕೆ ಬಿಡಿ. ಉಪದೇಶದ ಬೆನ್ನು ಹತ್ತದಿರಿ.
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…