ಬದುಕು ಪುರಾಣ | ಅದು ‘ಎಚ್ಚರ’ದ ರೇಖೆ!

April 27, 2025
11:29 AM
ಬದುಕಿನ ಯಾನಕ್ಕೆ ಪಾಲಕರು ರೇಖೆಯನ್ನು ಎಳೆದು ತೋರಿಸುತ್ತಾರೆ. ಅದು ಭವಿಷ್ಯದ ಕೈತಾಂಗು. ರಕ್ಷಣೆ ಕೊಡುವ ದೀವಿಗೆ. ಪಥ ದರ್ಶನಕ್ಕೆ ಪೂರಕವಾದ ಮಾನಸಿಕ ದೃಢತೆಯನ್ನು ತಂದೀವ ಕ್ಯಾಪ್ಸೂಲ್. ರೇಖೆಯಲ್ಲಿ ಸಾಗದೆ, ರೇಖೆಯಿದೆ ಎನ್ನುವ ಎಚ್ಚರ ಇದ್ದು ರೇಖೆಯನ್ನು ದಾಟಿದರೆ? ಅದು ಅಪಾಯಕ್ಕೆ ಮುನ್ನೆಚ್ಚರಿಕೆ.
ಪಂಚವಟಿಯಲ್ಲಿ ಸೀತಾಪಹಾರದ ಪ್ರಸಂಗ. ಎಲೆಮನೆಯ ಮುಂದೆ ಲಕ್ಷ್ಮಣನು ಸೀತೆಯ ರಕ್ಷಣೆಗಾಗಿ ‘ರೇಖೆ’ಯನ್ನು ಎಳೆದಿದ್ದ. ಅವಳು ರೇಖೆಯನ್ನು ದಾಟಿ ಬಂದಳು. ರಾವಣದ ವಶವಾದಳು. ರಾಮನಿಂದ ದೂರವಾದಳು. ಹೆಣ್ಣು ತನ್ನ ಬದುಕಿನಲ್ಲಿ ಆತ್ಮರಕ್ಷಣೆಗಾಗಿ ತನಗೆ ತಾನೆ ‘ಲಕ್ಷ್ಮಣ ರೇಖೆ’ಯನ್ನು ಎಳೆದುಕೊಳ್ಳಬೇಕೆನ್ನುವ ಅವ್ಯಕ್ತ ಸಂದೇಶವನ್ನು ರಾಮಾಯಣ ಸಾರಿದೆ.
ಇಂದು ‘ಹೆಣ್ಣು ಅಬಲೆಯಲ್ಲ, ಅವಳು ಸಬಲೆ. ಅವಳನ್ನು ರಕ್ಷಿಸಲು ಯಾರೂ ಬೇಕಾಗಿಲ್ಲ. ಸ್ವ-ರಕ್ಷಣೆ ಮಾಡಿಕೊಳ್ಳಬಲ್ಲಳು’ ಎನ್ನುವ ಮಾತುಗಳನ್ನು ಕೇಳುತ್ತೇವೆ. ಇದು ಸ್ತ್ರೀವಾದದ ಝಲಕ್. ರಕ್ಷಿಸಿಕೊಂಡರೆ ಸಂತೋಷ. ಯಾರಿಗೂ ತೊಂದರೆಯಿಲ್ಲ. ಆದರೆ ‘ನ ಸ್ತ್ರೀ ಸ್ವಾತಂತ್ರ್ಯಮರ್ಹತಿ’ ಎನ್ನುವ ಶ್ಲೋಕದ ಮೂರು ಪದವನ್ನು ಹಿಡಿದುಕೊಂಡು, ಅದನ್ನು ಅರ್ಥೈಸದೆ, ಸಮರ್ಥನೆಗಳನ್ನು ಹೊಸೆಯುವುದನ್ನು ಕಾಣುತ್ತೇವೆ. ಮನು ಹೇಳಿದ ವಾಕ್ಯದ ಉತ್ತರಾರ್ಧವನ್ನು ಪೋಸ್ಟ್ ಮಾರ್ಟಂ ಮಾಡುವ ‘ಬುದ್ಧಿಜೀವಿ’ಗಳ ಮಹಾಬುದ್ಧಿಗೆ ಶರಣು!
ಮನು ಏನು ಹೇಳಿದ್ದಾನೆ – “ಪಿತಾ ರಕ್ಷತಿ ಕೌಮಾರೇ ಭರ್ತಾ ರಕ್ಷತಿ ಯೌವನೇ | ಪುತ್ರೋ ರಕ್ಷತಿ ವಾರ್ಧಕ್ಯೇ ನ ಸ್ತ್ರೀ ಸ್ವಾತಂತ್ರ್ಯಮರ್ಹತಿ||” ಬಾಲ್ಯದಲ್ಲಿ ಸ್ತ್ರೀಯನ್ನು (ಹೆಣ್ಣು ಮಕ್ಕಳನ್ನು) ತಂದೆಯು ರಕ್ಷಿಸುತ್ತಾನೆ. ಯೌವನ ಕಾಲದಲ್ಲಿ ಗಂಡನು ರಕ್ಷಿಸುತ್ತಾನೆ. ಮುಪ್ಪಿನಲ್ಲಿ ಮಗನ ರಕ್ಷೆಯಲ್ಲಿರುತ್ತಾಳೆ. ಆದುದರಿಂದ ಸ್ತ್ರೀಗೆ ಸ್ವಾತಂತ್ರ್ಯವು ಸಲ್ಲದು. ಪೂರ್ವಾರ್ಧದ ಅರ್ಥದ ಒಳಹೊರಗನ್ನು ಅರ್ಥ ಮಾಡಿಕೊಳ್ಳದೆ ‘ಸ್ತ್ರೀ ಸ್ವಾತಂತ್ರ್ಯವನ್ನೇ ಕಿತ್ತುಕೊಂಡರು’ ಎಂಬ ಬೊಬ್ಬಾಟ.
ಪಂಡಿತ ದಿ.ಪೆರ್ಲ ಕೃಷ್ಣ ಭಟ್ಟರು ರಾಮಾಯಣ ಉಪನ್ಯಾಸವೊಂದರಲ್ಲಿ ಹೇಳಿದ ಮಾತು ಇಲ್ಲಿ ಉಲ್ಲೇಖನೀಯ. “ಇಲ್ಲಿ ಸ್ತ್ರೀಯರ ರಕ್ಷಣೆ ಪ್ರಸ್ತುತ. ‘ತನ್ನನ್ನು ತನು ರಕ್ಷಿಸಿಕೊಳ್ಳುತ್ತೇನೆಂಬ ಸ್ವಾತಂತ್ರ್ಯವನ್ನು ಅವಳಿಗೆ ವಹಿಸಬಾರದು’ ಎಂಬ ನಿಲುವು ಮನುವಿನದ್ದು. ಶ್ರೀರಾಮನು ಸೀತಾರಕ್ಷಣೆಗಾಗಿ ಲಕ್ಷ್ಮಣನನ್ನು ನಿಯೋಜಿಸಿ ಮಾಯಾಮೃಗವನ್ನು ಹಿಂಬಾಲಿಸಿದ. ಲಕ್ಷ್ಮಣನನ್ನು ಒತ್ತಾಯದಿಂದ ಕಳಿಸಿ ಸೀತೆ ‘ಸ್ವತಂತ್ರ’ಳಾದಳು! ಸ್ವಾತಂತ್ರ್ಯದ ನೋವನ್ನು ಅನುಭವಿಸಿದಳು.”
“ಲಕ್ಷ್ಮಣನು ಅತ್ಯಂತ ಪರಿಶುದ್ಧ ಹೃದಯವಂತ ಎಂದು ಸೀತೆಗೆ ತಿಳಿದಿತ್ತು. ಶೋಕಾವೇಶದಲ್ಲಿ ‘ಎಚ್ಚರ’ ತಪ್ಪಿ ದುಡುಕಿನ ಮಾತನ್ನು ಆಡಿದಳು. ‘ಶೋಕ, ಭಯ, ಕ್ರೋಧ’.. ಅತಿರೇಕವಾದಾಗ ಬುದ್ಧಿ ಹತೋಟಿಯಲ್ಲಿರುವುದಿಲ್ಲ. ವಿವೇಕವು ಲುಪ್ತವಾಗುತ್ತದೆ. ಸೀತೆಗಾದರೋ ‘ತನ್ನ ಪತಿಗೆ ಏನಾಗುತ್ತದೋ’ ಎಂಬ ಭಯ. ‘ಏನಾಗಿ ಬಿಟ್ಟಿತು’ ಎನ್ನುವ ಶೋಕ, ‘ತನ್ನ ಮಾತನ್ನು ಲಕ್ಷ್ಮಣನು ನಡೆಸದೆ ಹೋದನಲ್ಲ’ ಎನ್ನುವ ಕ್ರೋಧ.. ಹೀಗೆ ಬುದ್ಧಿಯನ್ನು ಕೆಡಿಸುವ ಮೂರು ಕಾರಣಗಳು ಸೇರಿದಾಗ ಅವಳ ಬಾಯಿಂದ ಕಟುವಾಕ್ಯಗಳು ಹೊರಬಂದುದು ಸಹಜ. ಇದಕ್ಕಾಗಿ ಅವಳು ಅನಂತರ ಪಶ್ಚಾತ್ತಾಪ ಪಟ್ಟಳು.”
ಒಂದು ಮಾತಂತೂ ಸತ್ಯ, ಸನಾತನೀಯವಾದ ಪರಂಪರೆ ಹಾಗೂ ಪುರಾಣಗಳು ಹಾಕಿಕೊಟ್ಟ ನಂಬುಗೆಗಳಲ್ಲಿ ಬದುಕಿನ ಸುಭಗತೆ ಇದೆ. ಯಾವುದೇ ಕೆಲಸಕಾರ್ಯಗಳಲ್ಲಿ ಲಕ್ಷ್ಮಣ ರೇಖೆ ಹಾಕಿಕೊಂಡರೆ, ಅಂದರೆ ಚೌಕಟ್ಟು ಹಾಕಿಕೊಂಡರೆ ಕೆಲಸವು ಸುಲಭವಾಗಿ ಮುಗಿಯುತ್ತದೆ.
ನ್ಯಾಯಾಲಯದ ಒಂದು ಆದೇಶವನ್ನು ಓದೋಣ. “ವೈವಾಹಿಕ ಸಮಸ್ಯೆಗಳಂತಹ ಖಾಸಗಿ ವಿಷಯಗಳನ್ನು ವರದಿ ಮಾಡುವಾಗ ಮಾಧ್ಯಮಗಳು ಲಕ್ಷ್ಮಣ ರೇಖೆಯನ್ನು ದಾಟಬಾರದು. ಸಮಾಜದಲ್ಲಿರುವ ಭ್ರಷ್ಟಾಚಾರ, ಪಕ್ಷಪಾತೀಯ ನಿಲುವು, ಕಾನೂನು ಪಾಲಿಸದಿರುವುದು, ನಿಂದನೆ, ಹಲ್ಲೆ, ಅಧಿಕಾರದ ದುರುಪಯೋಗ, ಕಾನೂನು ಸುವ್ಯವಸ್ಥೆ, ಆರ್ಥಿಕತೆ, ಆರೋಗ್ಯ, ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳನ್ನು ವರದಿ ಮಾಡುವುದರ ಕಡೆಗೆ ಇರಬೇಕು. (ಕನ್ನಡಪ್ರಭ, 15-3-2019)
ಇಲ್ಲಿ ಲಕ್ಷ್ಮಣರೇಖೆ ಎಂದರೆ ‘ಎಚ್ಚರ’ ಎಂದು ಆರ್ಥ. ಅದು ವಾಹನ ಚಾಲನೆಗೂ ಅನ್ವಯ. ವ್ಯಕ್ತಿಯ ಮಾತು ಹೇಗಿರುತ್ತದೋ ಅದನ್ನು ಅನುಸರಿಸಿ ಕೃತಿ. ಮಾತಿನಲ್ಲಿ ಎಚ್ಚರದ ಹಿಡಿತ ಬೇಕು. ಒಂದು ಋಣಾತ್ಮಕ ಪದ ಬಾಯಿಂದ ಹೊರಟರೆ ಮತ್ತೆ ಸಿಗದು. ಹೊರಬಿದ್ದುದನ್ನು ಪಡೆಯಲು ಸಾಧ್ಯವಿಲ್ಲ. ಎಷ್ಟು ‘ಸ್ಸಾರಿ’ ಕೇಳಿದರೂ ಅದರ ಗಾಢತೆ ಆರದು. ‘ಕ್ಷಮಿಸಿ’ ಎಂದು ಬೊಬ್ಬಿಟ್ಟರೂ ಕೇಳುವ ಕಿವಿಗಳಿರುವುದಿಲ್ಲ. ‘ಮಾಧ್ಯಮದವರು ತಿರುಚಿದ್ದಾರೆ’ ಎಂದು ಪ್ರತಿಕ್ರಿಯೆ ನೀಡಿದರೂ ಅರಣ್ಯರೋದನ.
ಖಾಸಗಿ, ಸರಕಾರಿ, ಅರೆ ಸರಕಾರಿ.. ಯಾವುದೇ ಕಚೇರಿಯಲ್ಲಿರುವ ಹುದ್ದೆಗಳಿಗೆ ಚೌಕಟ್ಟಿದೆ. ಅದರೊಳಗೆ ಕರ್ತವ್ಯವನ್ನು ನಿರ್ವಹಿಸುವುದು ಬದ್ಧತೆ. ತನ್ನ ವ್ಯಾಪ್ತಿಗಿಂತ ಹೊರಗೆ ಹೋಗಿ ಅಧಿಕಾರ ಚಲಾಯಿಸಿದಾಗ ‘ಲಕ್ಷ್ಮಣ ರೇಖೆ ಮೀರಿದ’ ವ್ಯವಹಾರ ಎನ್ನುತ್ತೇವೆ. ಇಲ್ಲಿ ‘ಚೌಕಟ್ಟು’ ಅರ್ಥವ್ಯಾಪ್ತಿಯಲ್ಲಿ ಬಳಕೆಯಾಗಿದೆ.
ರಾಜಕೀಯ ಕ್ಷೇತ್ರಕ್ಕೆ ಬಂದಾಗ, ‘ನನಗೆ ನಾನೇ ಲಕ್ಷ್ಮಣ ರೇಖೆ ಹಾಕಿಕೊಂಡಿದ್ದೇನೆ’, ‘ಪಕ್ಷ ಹಾಕಿದ ಲಕ್ಷ್ಮಣ ರೇಖೆಯನ್ನು ದಾಟುವಂತಿಲ್ಲ’, ‘ಲಕ್ಷ್ಮಣರೇಖೆ ದಾಟದಂತೆ ಹೈಕಮಾಂಡ್ ಖಡಕ್ ಸೂಚನೆ’.. ಮುಂತಾದ ವಾಕ್ಯಗಳನ್ನು ಕೇಳಿದ್ದೇವೆ. ಇಲ್ಲೆಲ್ಲಾ ತಮಗೆ ಬೇಕಾದಂತೆ ಲಕ್ಷ್ಮಣ ರೇಖೆಯನ್ನು ಎಳೆದುಕೊಂಡಿದ್ದಾರೆ! ಅಂದರೆ ‘ಎಚ್ಚರ’ ಎಂಬರ್ಥದಲ್ಲಿ.. ಇವರ ಹೇಳಿಕೆಗಳಲ್ಲಿ ಬರುವ ಎಚ್ಚರಕ್ಕೆ ಆಯುಷ್ಯ ಕಡಿಮೆ. ಒಂದೈದು ನಿಮಿಷದಲ್ಲಿ ಢಾಳಾಗುತ್ತವೆ.
ತಾಳಮದ್ದಳೆಯೊಂದರಲ್ಲಿ ಡಾ.ಶೇಣಿಯವರು ‘ಮತಂಗ’ ಪಾತ್ರದ ಮೂಲಕ ಹೆಣ್ಣಿನ ಸ್ಥಾನ ಗೌರವವನ್ನು ವಿವರಿಸುತ್ತಾರೆ, “ಹೆಂಗಸರು ಪೂಜಿಸಲ್ಪಡುವಂತಹ ದಿವ್ಯ ಪ್ರತಿಮೆಗಳಾಗಬೇಕು. ಯಾವಾಗ ದಿವ್ಯವಾದುದು ಬಹಳಷ್ಟು ಬೆಲೆಯುಳ್ಳದ್ದು. ಅದು ದೇವರ ವಿಗ್ರಹದಂತೆ ಇದ್ದುದು. ಅದು ಇನ್ನೊಬ್ಬರ ರಕ್ಷಣೆಯಲ್ಲಿ ಇರಬೇಕಾದುದು. ಬಂಗಾರವು ಕಬ್ಬಿಣದ ಪೆಟ್ಟಿಗೆಯಲ್ಲಿ ರಕ್ಷಿಸಲ್ಪಡುವಂತೆ ಹೆಣ್ಣು ರಕ್ಷಿಸಲ್ಪಡಬೇಕು. ಇದು ನಮ್ಮ ಸನಾತನ ಧರ್ಮ. ಭಾರತೀಯ ಸಂಸ್ಕೃತಿ.”
ಏನಿದು? ಲಕ್ಷ್ಮಣ ರೇಖೆ : ಪಿತೃವಾಕ್ಯ ಪರಿಪಾಲನೆಗಾಗಿ ಶ್ರೀರಾಮನಿಗೆ ವನವಾಸ ದೀಕ್ಷೆ. ಸೀತಾ ಲಕ್ಷ್ಮಣರ ಸಹಿತ ಪಂಚವಟಿಯಲ್ಲಿ ವಾಸವಾಗಿರುವ ಸಂದರ್ಭ. ಅಲ್ಲಿಗೆ ಶೂರ್ಪನಖೆಯ ಪ್ರವೇಶವಾಗುತ್ತದೆ. ಪುರುಷಾತಿಕ್ರಮಣ ಫಲವಾಗಿ ಲಕ್ಷ್ಮಣನು ಅವಳ ಕಿವಿ, ಮೂಗುಗಳನ್ನು ಛೇದಿಸುತ್ತಾನೆ. ಇವಳ ನೆರವಿಗೆ ಬಂದ ಖರ ದೂಷಣಾದಿ ಹದಿನಾಲ್ಕು ಸಾವಿರ ರಾಕ್ಷಸರು ಯುದ್ಧದಲ್ಲಿ ಶ್ರೀರಾಮನಿಂದ ಹತರಾಗುತ್ತಾರೆ.
ಶೂರ್ಪನಖೆಯು ರಾವಣನಲ್ಲಿ ತನಗಾದ ಅನ್ಯಾಯವನ್ನು ವಿವರಿಸುತ್ತಾ ಸೀತೆಯ ಸೌಂದರ್ಯವನ್ನು ವರ್ಣಿಸುತ್ತಾಳೆ. ಅವಳನ್ನು ವಿವಾಹವಾಗಬೇಕೆಂದು ನಾನಾ ಬಗೆಯಿಂದ ಒತ್ತಾಯಿಸುತ್ತಾಳೆ. ಸೀತೆಯ ಮೋಹಪಾಶಕ್ಕೆ ರಾವಣ ಸಿಲುಕುತ್ತಾನೆ. ತನ್ನ ಮಾವ ಮಾರೀಚನು ಚಿನ್ನದ ಜಿಂಕೆಯಾಗಿ ಪಂಚವಟಿಯಲ್ಲಿ ಸುಳಿದು ಸೀತೆಯ ಮನಸ್ಸನ್ನಾಕರ್ಷಿಸುವಂತೆ ಯೋಜನೆ ರೂಪಿಸುತ್ತಾನೆ. ಸಂದರ್ಭ ನೋಡಿ ಸೀತೆಯನ್ನು ಅಪಹರಿಸುವ ರೂಪುರೇಷೆ ಸಿದ್ಧವಾಗುತ್ತದೆ.
ಮಾರೀಚನ ಮಾಯೆಯಾದ ಪೊಮ್ಮಿಗವು ಪಂಚವಟಿಯಲ್ಲಿ ಸುಳಿದಾಡುತ್ತಿದ್ದು, ಅದು ಸೀತೆಯ ಚಿತ್ತವನ್ನು ಆಕರ್ಷಿಸುತ್ತದೆ. ಅದನ್ನು ತಂದು ಕೊಂಡಂತೆ ಶ್ರೀರಾಮನಲ್ಲಿ ಬಿನ್ನವಿಸುತ್ತಾಳೆ. ಅದು ಮಾಯದ ಮೃಗವೆಂದೂ, ರಾಕ್ಷಸರ ಮಾಯೆ ಇರಬಹುದೆಂದು ಪರಿಪರಿಯಿಂದ ಹೇಳಿದರೂ, ‘ಅದು ಜೀವಂತ ಸಿಗದಿದ್ದರೆ ಬೇಡ, ಅದನ್ನು ಕೊಂದು ಚರ್ಮವನ್ನಾದರೂ ತಂದುಕೊಡಿ’ ಹಠ ಹಿಡಿಯುತ್ತಾಳೆ. ಸೀತೆಯ ರಕ್ಷಣೆಯ ಹೊಣೆಯನ್ನು ಲಕ್ಷ್ಮಣನಿಗೆ ವಹಿಸಿ, ಜಿಂಕೆಗಾಗಿ ತೆರಳುತ್ತಾನೆ.
ಮಾಯಾ ಜಿಂಕೆಯು ಶ್ರೀರಾಮನನ್ನು ಕಾಡಿನಲ್ಲಿ ಅಟ್ಟಾಡಿಸಿ ಪರ್ವತ ಪ್ರಾಂತ್ಯದತ್ತ  ಕರೆದೊಯ್ಯುತ್ತದೆ. ಕುಣಿಯುತ್ತಾ, ಜಿಗಿಯುತ್ತಾ, ಮರೆಯಾಗುತ್ತಾ ರಾಮನಲ್ಲಿ ಭ್ರಮೆಯನ್ನು ಸೃಷ್ಟಿಸುತ್ತದೆ. ಜೀವಂತ ಸಿಗುವ ಅವಕಾಶಗಳಿಲ್ಲದುದರಿಂದ ಬಾಣವನ್ನು ಹೂಡುತ್ತಾನೆ. ಜಿಂಕೆಯ ರೂಪದಲ್ಲಿದ್ದ ಮಾರೀಚನು ರಾಮಬಾಣದಿಂದ  ಹತನಾಗುವ ಹೊತ್ತಿನಲ್ಲಿ ‘ಹಾ ಸೀತಾ, ಹಾ. ಲಕ್ಷ್ಮಣಾ.’ ಎಂಬ ಧ್ವನಿಯಿಂದ ಬೊಬ್ಬಿಟ್ಟು ಪ್ರಾಣ ಬಿಡುತ್ತಾನೆ.
ಈ ಧ್ವನಿಯನ್ನು ಕೇಳಿದ ಸೀತೆಯು ಭಯಭೀತಳಾಗುತ್ತಾಳೆ. ‘ಶ್ರೀರಾಮನಿಗೆ ವಿಪತ್ತು ಸಂಭವಿಸಿದೆ, ಹೋಗಿ ರಾಮನನ್ನು ರಕ್ಷಿಸು’, ಲಕ್ಷ್ಮಣನಲ್ಲಿ ವಿನಂತಿಸುತ್ತಾಳೆ. ರಾಮನಿಗೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಸಾಮರ್ಥ್ಯವಿದೆ. ಇನ್ನೇನು.. ಸ್ವಲ್ಪ ಹೊತ್ತಲ್ಲಿ ಬರುತ್ತಾನೆ ಎಂದು ಸಮಾಧಾನ ಪಡಿಸಿದರೂ ಸೀತೆಯ ದುಃಖ ಕಡಿಮೆಯಾಗಲಿಲ್ಲ.
ಕೊನೆಗೆ ‘ನೀನು ಅಯೋಧ್ಯೆಯಿಂದ ಊರ್ಮಿಳೆಯನ್ನು ಬಿಟ್ಟು ಬಂದುದು ಯಾಕೆಂದು ಆರ್ಥವಾಗುತ್ತದೆ. ನನ್ನನ್ನು ಹೊಂದಬೇಕೆಂಬ ನಿನ್ನ ಅವ್ಯಕ್ತ ಆಶೆಗೆ ಧಿಕ್ಕಾರವಿರಲಿ.” ಎಂದು ಲಕ್ಷ್ಮಣನಲ್ಲಿ ಸಂಶಯ ತಾಳಿದಳು. ಸೀತೆಯಿಂದ ಇಂತಹ ಮಾತನ್ನು ನಿರೀಕ್ಷಿಸದ ಲಕ್ಷ್ಮಣನು ದುಃಖದಿಂದ ಕುಸಿಯುತ್ತಾನೆ. ಆಶ್ರಮದ ಮುಂದೆ ಬಾಣದಿಂದ ಮೂರು ಗೆರೆಗಳನ್ನು ಎಳೆದು, ‘ಅತ್ತಿಗೆ, ಈ ಗೆರೆಗಳನ್ನು ದಾಟಿ ಬರಬೇಡಿ’ ಎಂದು ಹೇಳಿ ಧ್ವನಿ ಬಂದ ದಿಕ್ಕಿನತ್ತ ಹೊರಡುತ್ತಾನೆ.
ಈ ಸಂದರ್ಭದಲ್ಲಿ ಪಾರ್ತಿಸುಬ್ಬ ಕವಿಯ ರಚನೆ ಗಮನಿಸೋಣ : “ಕಾಮಿನಿಯ ಕಠಿಣತರ ವಾಕ್ಯಮಂ ಕೇಳ್ದು ಶ್ರೀರಾಮ ರಾಮಾಯೆಂದು ಕಿವಿಗಳೆರಡಂ ಮುಚ್ಚಿ | ಭೂಮಿಯೊಳಗೇಳಾಣೆಯಂ ಬರೆದಿದರ ಮೀರಿ ಅಡಿಯಿಡದಿರೆಂದುಸಿರ್ದು | ಸೋಮಾರ್ಕಭೂಮಿದೇವಿಯ ಸಾಕ್ಷಿಯಂ ಮಾಡಿ  | ತಾ ಮನದಿ ನೊಂದುಕೊಂಡಾಕ್ಷಣದೊಳಯ್ದಿದಂ | ರಾಮಚಂದ್ರನ ಪಾದದೆಡೆಗಿತ್ತಲಾದ ವೃತ್ತಾಂತಮಂ ಲಾಲಿಸಿ” ||
ಸನ್ಯಾಸಿ ವೇಷದಿಂದ ಬಂದ ರಾವಣನು ಗೆರೆಯನ್ನು ದಾಟಬೇಕು ಎಂದಷ್ಟರಲ್ಲಿ ಅದರಿಂದ ಬೆಂಕಿ ಕಾಣಿಸಿಕೊಂಡು ಹಿಂದೆ ಸರಿಯುತ್ತಾನೆ. ಮುಂದೆ ಸೀತೆಯೇ ಗೆರೆಯನ್ನು ದಾಟಿ ಬಂದು ಭಿಕ್ಷೆ ನೀಡಿದಾಗ ಸಂನ್ಯಾಸಿ ರೂಪದ ರಾವಣನು ಅವಳನ್ನು ಅಪಹರಿಸುತ್ತಾನೆ. ಆಶ್ರಮದ ಮುಂದೆ ಲಕ್ಷ್ಮಣನು ಎಳೆದ ಗೆರೆಯು ‘ಲಕ್ಷ್ಮಣ ರೇಖೆ’ಯಾಗಿ ಜನಮಾನಸದಲ್ಲಿ ನೆಲೆಯಾಗುತ್ತದೆ. (ವಾಲ್ಮೀಕಿ ರಾಮಾಯಣದಲ್ಲಿ ‘ಲಕ್ಷ್ಮಣ ರೇಖೆ’ಯ ಉಲ್ಲೇಖವಿಲ್ಲ.)

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಇದನ್ನೂ ಓದಿ

ಮುಂಗಾರು ಮೇ 27 ರಂದು ಆರಂಭ | ನಿಗದಿತ ಸಮಯಕ್ಕಿಂತ ಮೊದಲೇ ಮಳೆಗಾಲ ಆರಂಭ | ಕೇರಳದಲ್ಲಿ ಇಂದು ಮಳೆ ಸಾಧ್ಯತೆ |
May 13, 2025
7:20 AM
by: ದ ರೂರಲ್ ಮಿರರ್.ಕಾಂ
ಆಪರೇಷನ್ ಸಿಂದೂರ್ ಕೇವಲ ಹೆಸರಲ್ಲ, ಅದು ದೇಶದ ಜನರ ಸಾಮೂಹಿಕ ಭಾವನೆ – ಪ್ರಧಾನಿ ನರೇಂದ್ರ ಮೋದಿ
May 12, 2025
10:14 PM
by: The Rural Mirror ಸುದ್ದಿಜಾಲ
ಕೃಷಿ ಅಕಾಡೆಮಿ ರಚನೆ – ಮುಳಿಯ ಕೃಷಿ ಗೋಷ್ಟಿಯಲ್ಲಿ ಕೇಶವ ಪ್ರಸಾದ್ ಮುಳಿಯ |
May 12, 2025
11:31 AM
by: ದ ರೂರಲ್ ಮಿರರ್.ಕಾಂ
ಬದುಕು ಪುರಾಣ | ಮೂಡದಿರಲಿ, ಮಂಥರೆ ಮನಸ್ಸು
May 11, 2025
7:15 AM
by: ನಾ.ಕಾರಂತ ಪೆರಾಜೆ

You cannot copy content of this page - Copyright -The Rural Mirror

Join Our Group