Advertisement
ಸಂಪಾದಕೀಯ ಆಯ್ಕೆ

ಅಡಿಕೆ ನಿಷೇಧವಿಲ್ಲ….ಮೌನವೂ ಬೇಡ

Share

ಅಡಿಕೆ ಕೃಷಿ ಎನ್ನುವುದು ಅನೇಕ ವರ್ಷಗಳಿಂದ ಕರಾವಳಿ-ಮಲೆನಾಡು ಭಾಗದ ಕೃಷಿ ಅಷ್ಟೇ ಅಲ್ಲ ಅದೊಂದು ಬದುಕು. ಇಂದು ಕರಾವಳಿ-ಮಲೆನಾಡು ದಾಟಿ ಮುಂದೆ ಸಾಗಿದೆ. ಸುಮಾರು 2 ಕೋಟಿ ಜನರಿಗೆ ಉದ್ಯೋಗ, ಬದುಕುನ್ನು ಕಟ್ಟಿಕೊಟ್ಟಿದೆ. ಅಷ್ಟೇ ಏಕೆ ಅದಕ್ಕಿಂತ ಮುಂದೆ ನೋಡಿದರೆ, ದಕ್ಷಿಣ ಏಷ್ಯಾದ ಸಂಸ್ಕೃತಿಯ ಭಾಗ. ಧಾರ್ಮಿಕ ಆಚರಣೆಗಳಲ್ಲಿ, ಸಾಮಾಜಿಕ ಜೀವನದಲ್ಲಿ, ಗ್ರಾಮೀಣ ಆರ್ಥಿಕತೆಯಲ್ಲಿ ಕೂಡಾ ಅಡಿಕೆ ಪಾತ್ರವಿದೆ. ಆದರೆ ಇಂದು ಅದೇ ಅಡಿಕೆ ಜಾಗತಿಕ ಮಟ್ಟದಲ್ಲಿ “ಕ್ಯಾನ್ಸರ್ ಕಾರಕ ” ಎಂಬ ಟ್ಯಾಗ್‌ ಅಡಿಯಲ್ಲಿ ಬರುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಇತ್ತೀಚೆಗೆ ನಡೆಸಿದ “Arecanut Challenge” ವೆಬಿನಾರ್ ಈ ವಾಸ್ತವವನ್ನು ಇನ್ನಷ್ಟು ಸ್ಪಷ್ಟವಾಗಿ ಹೊರಗೆಳೆದಿದೆ.

ಮದ್ಯ ಮತ್ತು ತಂಬಾಕು ಉತ್ಪನ್ನಗಳ ಪಟ್ಟಿಗೆ ಅಡಿಕೆಯನ್ನು ಸೇರಿಸುವ ಚರ್ಚೆ ನಡೆದಿರುವುದು ಸಣ್ಣ ಸಂಗತಿಯಲ್ಲ. ಇದು ಮುಂದಿನ ದಿನಗಳಲ್ಲಿ ಕೃಷಿ ಉತ್ಪನ್ನವೊಂದನ್ನು ಆರೋಗ್ಯದ ಅಪಾಯದ ಹೆಸರಿನಲ್ಲಿ ಯಾವ ದಿಕ್ಕಿಗೆ ಕೊಂಡೊಯ್ಯಬಹುದು ಎಂಬ ಎಚ್ಚರಿಕೆಯ ಸಂಕೇತ. ಒಮ್ಮೆಲೇ ಯಾವುದೂ ನಡೆಯದು. ಆದರೆ ಭವಿಷ್ಯದ ದೃಷ್ಟಿಯಿಂದ ಈ ಯೋಚನೆ ಅಗತ್ಯ ಇದೆ. ಈ ಹಿಂದಿನ ನಡೆಗಳನ್ನು ಗಮನಿಸಿದರೆ ಈಗಲೇ ಎಚ್ಚೆತ್ತುಕೊಳ್ಳಬೇಕಾದ್ದು ಅಗತ್ಯ.

ಆದರೆ ಇಲ್ಲಿ ಈಗ ಪ್ರಶ್ನೆ ಏನೆಂದರೆ – WHO ಯಾವ ಕಡೆಗೆ ಸಾಗುತ್ತಿದೆ? ಸಾರ್ವಜನಿಕ ಆರೋಗ್ಯದ ರಕ್ಷಣೆಯತ್ತವೇ? ಅಥವಾ ಒಂದು ಸಂಸ್ಕೃತಿಯನ್ನೇ ಅಪಾಯದ ಪ್ರತೀಕವಾಗಿ ಮಾಡಿಬಿಡುತ್ತದೆಯೇ? ಅಥವಾ ದಕ್ಷಿಣ ಏಷ್ಯಾ, ದಕ್ಷಿಣ ಭಾರತದ ಆರ್ಥಿಕತೆಯನ್ನೇ ಅಲ್ಲಾಡಿಸಲು ಹೊರಟಿದೆಯೇ..?

ಹೌದು, IARC ಅಡಿಕೆಯನ್ನು Class-1 Carcinogen ಎಂದು ಗುರುತಿಸಿದೆ. ಈ ವೈಜ್ಞಾನಿಕ ಸಾಕ್ಷ್ಯವನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಆದರೆ, ವಿಜ್ಞಾನವೂ ಒಂದು ಪ್ರಶ್ನೆ ಕೇಳಬೇಕು: ಅಡಿಕೆ ಎನ್ನುವುದು ಮೂಲ ಉತ್ಪನ್ನವೋ, ಅಥವಾ ಸಂಸ್ಕರಿತ ಉತ್ಪನ್ನಗಳೋ? “ಅಡಿಕೆ” ಮತ್ತು “ತಂಬಾಕು ಸೇರಿಸಿದ ಪಾನ್ ಮಸಾಲಾ” ಒಂದೇ ಆಗಿಬಿಡಬಹುದೇ? ಈ ವ್ಯತ್ಯಾಸವನ್ನು ಜಾಗತಿಕ ವೇದಿಕೆಗಳಲ್ಲಿ ಮಸುಕುಗೊಳಿಸುವುದು ಸರಿಯೇ?

ಇನ್ನೊಂದು ದೊಡ್ಡ ಪ್ರಶ್ನೆ: WHO ಈ ಚರ್ಚೆ ನಡೆಸುತ್ತಿರುವಾಗ, ಲಕ್ಷಾಂತರ ರೈತ ಕುಟುಂಬಗಳ ಭವಿಷ್ಯವನ್ನು ಚರ್ಚೆಗೇ ತೆಗೆದುಕೊಳ್ಳಲಾಗುತ್ತಿದೆಯೇ?

ಕರ್ನಾಟಕ, ಕೇರಳ, ಅಸ್ಸಾಂ ಸೇರಿದಂತೆ ಭಾರತದ ಹಲವೆಡೆ ಇಂದು ಅಡಿಕೆ ರೈತರ ಬದುಕಿನ ಆಧಾರ. ಇದು ಕೇವಲ ವ್ಯಾಪಾರ ಅಲ್ಲ – ಒಂದು ಗ್ರಾಮೀಣ ಆರ್ಥಿಕ ವ್ಯವಸ್ಥೆ. ನಾಳೆ ನೀತಿ ಹೆಸರಿನಲ್ಲಿ ಮಾರುಕಟ್ಟೆ ಕುಸಿದರೆ, ಬೆಳೆಗಾರನ ಬದುಕು ಕುಸಿಯುವುದಿಲ್ಲವೇ? ಇದಕ್ಕೆ ಯಾರು ಹೊಣೆ..?

ಅಡಿಕೆ ಕುರಿತು ಅಂತಿಮ ತೀರ್ಮಾನಕ್ಕೆ ಬರಲು ಕೇವಲ ಶೈಕ್ಷಣಿಕ ಅಧ್ಯಯನಗಳ ಮೇಲೆ ನಿಂತರೆ ಸಾಕಾಗದು ಎಂಬ ಧ್ವನಿ ವೆಬಿನಾರ್‌ನಲ್ಲಿಯೇ ಕೇಳಿಬಂದಿದೆ. ದೊಡ್ಡ ಪ್ರಮಾಣದ ಕ್ಲಿನಿಕಲ್ ಟ್ರಯಲ್‌ಗಳಿಲ್ಲದೆ, ಸಾರ್ವಜನಿಕವಾಗಿ ಫಲಿತಾಂಶ ಮಂಡಿಸದೆ, ನಿರ್ಧಾರಗಳನ್ನು ಕೈಗೊಳ್ಳುವುದು ಅರ್ಥಹೀನ ಮಾತ್ರವಲ್ಲ – ಅಪಾಯಕಾರಿ ಕೂಡ.

ಒಂದು ಕಡೆ WHO ಕೂಡಾ “ ಅಡಿಕೆ ನಿಷೇಧ ಸಾಧ್ಯವಿಲ್ಲ” ಎನ್ನುತ್ತದೆ. ಮತ್ತೊಂದೆಡೆ ನಿಯಂತ್ರಣದ ಹೆಸರಿನಲ್ಲಿ ಅಡಿಕೆಯನ್ನು ತಂಬಾಕು-ಮದ್ಯಗಳ ಸಾಲಿಗೆ ಸೇರಿಸುವ ಪ್ರಯತ್ನ ನಡೆಯುತ್ತಿದೆ. ಇದು ದ್ವಂದ್ವವಲ್ಲವೇ? ನಿಷೇಧವಲ್ಲ, ಆದರೆ ಸಾಮಾಜಿಕವಾಗಿ ತಳ್ಳಿಹಾಕುವ ನೀತಿ ಅಲ್ಲವೇ ಇದು ?. ಅಷ್ಟೇಕೆ, ಅಡಿಕೆ ಅನೇಕ ಕೃಷಿಕರ ಬದುಕು ಎನ್ನುವಾಗಲೂ,” ಪರ್ಯಾಯ ಬೆಳೆ ಬೆಳೆಯಿರಿ” ಎಂದು ಮೂರು ಶಬ್ದಗಳಲ್ಲಿ ಉತ್ತರ ಸಿಗುತ್ತದೆ. ಇದು ಅಷ್ಟು ಸುಲಭವೇ..?

ಈ ಸಂದರ್ಭದಲ್ಲಿ ಸರ್ಕಾರಗಳ, ಜನಪ್ರತಿನಿಧಿಗಳ ಮೌನವೇ ಅತ್ಯಂತ ಅಪಾಯಕಾರಿ. ಅಡಿಕೆ ಕುರಿತ ಜಾಗತಿಕ ಚರ್ಚೆಗಳಲ್ಲಿ ಭಾರತ ಏಕೆ ಮೌನ? ನಮ್ಮ ರೈತರ ಪರವಾಗಿ ವೈಜ್ಞಾನಿಕ ಪ್ರತಿಪಾದನೆ ಮಾಡುವ ಸಂಸ್ಥೆಗಳು ಯಾಕೆ ತಡವಾಗಿವೆ ? ಸಂಶೋಧನೆಯ ಹೊಣೆ ರೈತನ ಮೇಲೇ ಹಾಕಿ ಕೈತೊಳೆದುಕೊಳ್ಳುವುದೇ? ಅದು ರೈತನಿಂದ ಸಾಧ್ಯವೇ…? ಇಷ್ಟೂ ದೊಡ್ಡ ಆರ್ಥಿಕ ಶಕ್ತಿಯೂ ಆಗಿರುವಾಗ, ಭಾರತದ ಅರ್ಥ ಭಾಗದ ಆರ್ಥಿಕ ಚಟುವಟಿಕೆಯೂ ಅಡಿಕೆ ಆಗಿರುವಾಗ ಸುಮ್ಮನೆ ಕುಳಿತುಕೊಳ್ಳುವುದು ಎಂದರೆ…? ಅನೇಕ ವರ್ಷಗಳಿಂದಲೂ ಈ ಬಗ್ಗೆ ಚರ್ಚೆಗಳಾಗುತ್ತಿದ್ದರೂ ತೂಗುಗತ್ತಿಯ ಅಡಿಯಲ್ಲೇ ಇನ್ನೂ ಅಡಿಕೆ ಇರುವುದು ಭವಿಷ್ಯಕ್ಕೂ ಒಂದು ಆತಂಕ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಅಡಿಕೆ ಒಂದು ಸಂಸ್ಕೃತಿ ಎನ್ನುವ ಕಾರಣಕ್ಕೆ ಆರೋಗ್ಯದ ವಿಚಾರವನ್ನು ನಿರ್ಲಕ್ಷಿಸಲಾಗದು. ಆದರೆ, ಆರೋಗ್ಯದ ಹೆಸರಿನಲ್ಲಿ ಒಂದು ಕೃಷಿ ಸಮುದಾಯವನ್ನು ಅನಿಶ್ಚಿತತೆಯಲ್ಲಿ ತಳ್ಳುವುದೂ ನ್ಯಾಯವಲ್ಲ. ಇಂದು ಬೇಕಾಗಿರುವುದು ತಾತ್ಕಾಲಿಕ ಟ್ಯಾಗಿಂಗ್ ಅಲ್ಲ. ಬೇಕಾಗಿರುವುದು ಸಮತೋಲನದ ನೀತಿ. ವೈಜ್ಞಾನಿಕ ಪುರಾವೆ, ಸಂಸ್ಕೃತಿಯ ಅರಿವು ಮತ್ತು ರೈತರ ಬದುಕಿನ ಭದ್ರತೆ – ಈ ಮೂರನ್ನೂ ಒಳಗೊಂಡ ಒಂದು ಚೌಕಟ್ಟು. ಒಂದು ಸರಿಯಾದ ನಿರ್ಧಾರ ಅಗತ್ಯ. ಸಮಸ್ಯೆಗಳನ್ನು ಮುಂದಿನ 5 ವರ್ಷಗಳಿಗೆ ತಳ್ಳುವ ಪ್ರತಿನಿಧಿಗಳ ಮನಸ್ಥಿತಿಯಲ್ಲ..

ಇದನ್ನೂ ಓದಿ……

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಅಡಿಕೆ ತೋಟದಿಂದ ನ್ಯಾನೋತಂತ್ರಜ್ಞಾನದವರೆಗೆ…! ಬೆಳೆಗಾರರಿಗೆ ಹೊಸ ಮೌಲ್ಯ ಸೃಷ್ಟಿಸುವ ಸಂಶೋಧನೆ

ಅಡಿಕೆ ಸಿಪ್ಪೆ, ಸೋಗೆ ಮತ್ತು ಇತರ ಕೃಷಿ ಅವಶೇಷಗಳಿಂದ ಕಾರ್ಬನ್ ನ್ಯಾನೋಸ್ಫಿಯರ್‌ಗಳನ್ನು ಅಭಿವೃದ್ಧಿಪಡಿಸಿ,…

1 hour ago

ದಕ್ಷಿಣ ಕನ್ನಡ ಜಿಲ್ಲೆ ಮರುನಾಮಕರಣಕ್ಕೆ ಬೆಳ್ಳಾರೆ ಬಳಕೆದಾರರ ವೇದಿಕೆ ವಿರೋಧ- ಜನಮತ ಸಂಗ್ರಹಕ್ಕೆ ಆಗ್ರಹ

ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಬೆಳ್ಳಾರೆ…

3 hours ago

ಗುತ್ತಿಗಾರಿನಲ್ಲಿ ಚಣಿಲ ಹೋಮಿಯೋಪಥಿ ಕ್ಲಿನಿಕ್‌ ಆರಂಭ

ಸುಬ್ರಹ್ಮಣ್ಯದಲ್ಲಿ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಹೋಮಿಯೋಕೇರ್‌ ಗುತ್ತಿಗಾರಿಗೆ ಸ್ಥಳಾಂತರಗೊಂಡಿದ್ದು, ಎಸ್‌ಎಂಎಸ್‌ಜಿ ಕಾಂಪ್ಲೆಕ್ಸ್‌ನಲ್ಲಿ…

3 hours ago

ಹವಾಮಾನ ವರದಿ | 16-10-2026 | ಕರ್ನಾಟಕದಲ್ಲಿ ಇನ್ನೂ 10 ದಿನ ಮಳೆ? ಅ.19ರ ನಂತರ ಹಿಂಗಾರು ಮಾರುತಗಳ ಆಗಮನದ ನಿರೀಕ್ಷೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಗುಡುಗು…

4 hours ago

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದಾಖಲೆ ಉದ್ಯೋಗ ಸೃಷ್ಟಿ – 2.04 ಕೋಟಿ ಮಾನವ ದಿನಗಳ ಕೆಲಸ

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…

1 day ago