Advertisement
ಅಂಕಣ

ನಾಚಿಕೆ ಏತಕೆ?

Share

ಸಣ್ಣ ಮಗುವೊಂದು ನಗ್ನವಾಗಿ ಎಲ್ಲರ ಎದುರು ಬಂದರೆ ಕುಚೋದ್ಯಕ್ಕಾಗಿ ಅಲ್ಲಿದ್ದವರು ‘ಶೇಮ್ ಶೇಮ್’ ಎಂತ ಹೇಳುವ ಮೂಲಕ ನಾಚಿಕೆಯ ಪಾಠ ಶುರುವಾಗುತ್ತದೆ. ಆ ಮಗು ಇನ್ನೊಂದು ಮಗುವಿಗೆ ಶೇಮ್ ಹೇಳ ತೊಡಗುವಷ್ಟರಲ್ಲಿ ಅದಕ್ಕೆ ನಾಚಿಕೆ ಎಂದರೇನು? ಯಾವಾಗ? ಯಾವುದಕ್ಕೆ ನಾಚಿಕೆ ಆಗಬೇಕು? ಎಂಬ ಅರಿವು ಬಂದಿರುತ್ತದೆ.

Advertisement
Advertisement
Advertisement

ಒಬ್ಬನಿಗೆ ಆಗುವ ನಾಚಿಕೆಯು ಅವನದ್ದೇ ಆದ ವಿಶಿಷ್ಟ ಮಟ್ಟದಲ್ಲಿರುತ್ತದೆ. ಅದು ಸುಖ ದುಃಖಗಳ ಹಾಗೆ ಹಂಚಿಕೊಳ್ಳುವ ಭಾವನೆ ಅಲ್ಲ. ನಮಗೆ ದುಃಖವಾದದ್ದು ಇನ್ನೊಬ್ಬರಿಗೂ ದುಃಖಕಾರಕವಾಗಬಹುದು. ನಮ್ಮ ಸಂತೋಷವನ್ನು ಇನ್ನೊಬ್ಬರೂ ಹಂಚಿಕೊಳ್ಳಬಹುದು ಹೀಗೆ ದುಃಖ ಮತ್ತು ಸಂತೋಷಗಳಲ್ಲಿ ಇರುವ ಸಾಮ್ಯತೆಯು ನಾಚಿಕೆಯ ವಿಷಯದಲ್ಲಿ ಇರಬೇಕಾಗಿಲ್ಲ. “ಹಾಗೆ ಮಾಡುವುದು ನಾಚಿಕೆ ಅಲ್ವಾ?” ಎಂದರೆ “ಏಕೆ ನಾಚಿಕೆ?” ಎಂಬ ಪ್ರಶ್ನೆ ಬರಬಹುದು. ಹಾಗೆಯೇ, “ಇಷ್ಟಕ್ಕೆಲ್ಲಾ ನಾಚಿಕೆಯೇಕೆ?” ಎಂತ ನಾವು ಕೇಳಿದರೆ ಅವರ ಮಟ್ಟಿಗೆ ಅದು ನಾಚಿಕೆ ಪಡಲೇಬೇಕಾದ ಸಂಗತಿಯಾಗಿರುತ್ತದೆ. ಹಾಗಾಗಿ ನಾಚಿಕೆ ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಮತ್ತು ಸಂಸ್ಕೃತಿಯಿಂದ ಸಂಸ್ಕೃತಿಗೆ ಭಿನ್ನವಾಗಿರುತ್ತದೆ. ನಾಚಿಕೆಯ ವಿಷಯವು ಒಂದು ಸಂದರ್ಭದಿಂದ ಇನ್ನೊಂದು ಸಂದರ್ಭಕ್ಕೆ ವ್ಯತ್ಯಸ್ತಗೊಳ್ಳಬಹುದು. ಅಂದರೆ ಇಂದು ನಾಚಿಕೆಯ ವ್ಯಾಪ್ತಿಯಲ್ಲಿರುವ ವರ್ತನೆಯು ನಾಳೆ ನಾಚಿಕೆ ಪಡಬೇಕಾಗಿಲ್ಲದ ವರ್ತನೆಯಾಗಬಹುದು. ಉದಾಹರಣೆಗೆ ಇಂದು ಸೊಸೆಗೆ ವಿಧಿಸಿದ ವಸ್ತ್ರ ಸಂಹಿತೆಯ ನಿಯಮವು ನಾಳೆ ಮಗಳಿಗಾಗುವಾಗ ಸಡಿಲಾಗಬಹುದು. ತಂಗಿಗೆ ಉದ್ದ ಜಡೆಯೇ ಚಂದ ಎನ್ನುವ ಅಣ್ಣ ತನ್ನ ಹೆಂಡತಿಯ ಬಾಬ್ ಕಟ್ ಒಪ್ಪುವ ಸಾಧ್ಯತೆ ಇದೆ. ಹೀಗಾಗಿ ನಾಚಿಕೆಯನ್ನು ನಿರ್ಧರಿಸುವ ವ್ಯಾಪ್ತಿಯು ಗೋಜಲಾಗಿರುತ್ತದೆ.
********
ನಾಚಿಕೆ ಎಂಬುದು ಒಂದು ಅಂತರ್ಗತವಾದ ಅನುಭೂತಿ. ತಾನು ತಪ್ಪು ಮಾಡಿದೆನೆಂದು ಚುಚ್ಚುವ ಭಾವನೆಯಾಗಿ ಅದು ಬಾಧಿಸುತ್ತದೆ. ಮುಂದೆ ಅಂತಹ ವರ್ತನೆಗಳಾಗದಂತೆ ನಮ್ಮನ್ನು ತಡೆ ಹಿಡಿಯುತ್ತದೆ. ನಮ್ಮ ಆತ್ಮ ಗೌರವದ ನೆಲೆ ಅಲುಗಾಡದಂತೆ ಮಾಡಬೇಕೆಂಬ ಒತ್ತಡ ಉಂಟಾಗುತ್ತದೆ.

Advertisement

ಆಧುನಿಕ ಕಾರ್ಪೋರೇಟ್ ಜಗತ್ತಿನಲ್ಲಿ ನಮ್ಮ ಸಹೋದ್ಯೋಗಿಗಳ, ಗಿರಾಕಿಗಳ ಹಾಗೂ ಬಾಸ್‍ಗಳ ದೃಷ್ಠಿಯಲ್ಲಿ ಉದ್ಯೋಗಿಗಳು ಹೇಗೆ ಕಾಣಿಸಿಕೊಳ್ಳಬೇಕೆಂಬ ನಿಯಮವಿದೆ. ಅದನ್ನು ಅವರು Formals ಎನ್ನುತ್ತಾರೆ. ಅದು ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯ ಇರುವ ಹಾಗೆ compulsory ಆಗಿದೆ. ಸಮವಸ್ತ್ರ ಇಲ್ಲದೆ ಶಾಲೆಗೆ ಪ್ರವೇಶ ಇಲ್ಲ. ಹಾಗೆಯೇ Formals ಇಲ್ಲದೆ ಕಚೇರಿಗೆ ಹೋಗುವ ಹಾಗೆ ಇಲ್ಲ. ಹೋದರೆ ಮರ್ಯಾದೆ ಹೋಗುವುದು ಗ್ಯಾರಂಟಿ. ಹಾಗಾಗಿ ನಮಗೆ ಬೇಕೇ ಬೇಕೆಂಬ ಒಳತುಡಿತ ಇಲ್ಲದಿದ್ದಾಗಲೂ ನಿಯಮ ಪ್ರಕಾರ ವೇಷ ಭೂಷಣಗಳನ್ನು ಹಾಕಬೇಕು. ಆದರೆ ಆಧುನಿಕ Authenticity movement ನ ವ್ಯಕ್ತಿಗಳು ಇನ್ನೊಬ್ಬರ ಟೀಕೆಗೆ ಬೆಲೆ ಕೊಡದೆ ತಮಗೆ ಬೇಕಾದಂತೆ ಇರಲು ಹೇಳುತ್ತದೆ. ಇಂತಹ ಸ್ವಾತಂತ್ರ್ಯವು ಮತ್ತೆ ಮೇರೆ ಮೀರಿ ಜನರು ಮಾನಸಿಕ ವ್ಯಾಧಿಗೊಳಗಾಗಿ ನಿರಾಶಾವಾದಿಗಳಾಗಿ ಕಾಣಿಸಿಕೊಳ್ಳುವ ಮೂಲಕ ಹೆಚ್ಚಿನ ನಾಚಿಕೆಗೇಡಿಗೆ ಬಲಿಯಾಗುವುದೂ ಇದೆ.
****************
ವಿರೋಧ ಪಕ್ಷಗಳು ಮಾಡಿದ ಟೀಕೆಗಳು ಒಪ್ಪುವಂತಹದ್ದಲ್ಲ ಎನ್ನುತ್ತ ಆಡಳಿತ ಪಕ್ಷದವರು “ಇಂತಹ ಟೀಕೆ ಮಾಡಲು ನಾಚಿಕೆ ಯಾಗ್ಬೇಕು ಅವರಿಗೆ” ಎಂದು ಅಬ್ಬರಿಸುತ್ತಾರೆ. ಅದೇ ಹೊತ್ತಿನಲ್ಲಿ ಸರಕಾರವು ಮಾಡಿದ ಭ್ರಷ್ಟಾಚಾರವನ್ನು ಉಲ್ಲೇಖಿಸಿ ವಿರೋಧಪಕ್ಷಗಳು “ಬಡವರ ಹಣ ತಿಂದು ಹಾಕಲು ನಾಚಿಕೆಯಾಗ್ಬೇಕು ಸರಕಾರಕ್ಕೆ” ಎಂದು ಟೀಕಿಸುತ್ತಾರೆ. ಎರಡೂ ದಿಕ್ಕುಗಳಿಂದ ಬರುವ ಟೀಕೆಯ ಬಾಣ ಒಂದೇ. ಆದರೆ “ನಮಗೆ ಯಾಕೆ ನಾಚಿಕೆ ಆಗ್ಬೇಕಾಗಿಲ್ಲ” ಎಂದು ಯಾರೊಬ್ಬರೂ ಹೇಳುವುದಿಲ್ಲ. ಅವರಿಗೂ ನಾಚಿಕೆ ಇಲ್ಲ, ಇವರಿಗೂ ಇಲ್ಲ, ಮತ್ಯಾರಿಗೆ ನಾಚಿಕೆ ಆಗ್ಬೇಕು? ಪ್ರಜೆಗಳಿಗೇ ಅಲ್ವೇ?

ಎತ್ತರದ ಸ್ತರದಲ್ಲಿದ್ದವರಿಗೇ ನಾಚಿಕೆ ಇಲ್ಲದಿದ್ದ ಬಳಿಕ ಸಾಮಾನ್ಯರ ಪಾಡೇನು? ಅವರಿಗಾದರೂ ನಾಚಿಕೆ ಯಾಕೆ ಆಗಬೇಕು? ಐವತ್ತು ವರ್ಷಗಳ ಹಿಂದೆ ಕೈಸಾಲವಾಗಲೀ, ಸೊಸೈಟಿಯ ಸಾಲವನ್ನಾಗಲೀ ಮಾಡುವುದು ವ್ಯಕ್ತಿಯ ಮರ್ಯಾದೆ ಕಡಿಮೆಗೊಳಿಸುವ ಸಂಗತಿಯಾಗಿತ್ತು. ಆದರೆ ಬೆಂಕ್‍ಗಳಲ್ಲಿ ಸಾಲಮೇಳಗಳು ಜರಗಿದಾಗ ಸಾಲ ಮಾಡುವುದೇ ಮರ್ಯಾದೆಯೆನ್ನಿಸಿತು. ಮುಂದೆ ಸಾಲ ಹಿಂದಿರುಗಿಸದಿದ್ದರೆ ನಾಚಿಕೆ ಪಡಬೇಕಾಗಿಲ್ಲ ಎಂಬ ಸಹಿಷ್ಣುತೆಗೆ ಸಮಾಜವು ತಲುಪಿತು. ಅಲ್ಲದೆ ಕೃಷಿ, ಕೈಗಾರಿಕೆ ಹಾಗೂ ಇತರ ಉದ್ಯಮಗಳಿಗೆ ಸಾಲ ಮಾಡುವುದು ಅಭಿವೃದ್ಧಿಯ ದಾರಿ ಎಂಬ ಗೌರವವು ಪ್ರಾಪ್ತವಾಯಿತು. ಹಾಗಾಗಿ ಬೇಂಕ್ ಗಳಲ್ಲಿ ಸಾಲ ಇರುವವನೇ ಕ್ರಿಯಾಶೀಲ ಪಾಲುದಾರ ಎಂಬ ಮರ್ಯಾದೆ ದೊರಕಿತು. ಒಂದು ಕಾಲದಲ್ಲಿ ನಾಚಿಕೆ ಪಡಬೇಕಾಗಿದ್ದ ಸಂಗತಿಯು ಮತ್ತೊಂದು ಕಾಲದಲ್ಲಿ ಘನಸ್ಥಿಕೆಗೆ ತಲುಪಿದ್ದಕ್ಕೆ ಇದೊಂದು ಉದಾಹರಣೆ.

Advertisement

ಇನ್ನೊಂದು ಉದಾಹರಣೆ ಎಂದರೆ ಟ್ಯೂಶನ್‍ಗಳದ್ದು. ಸುಮಾರು 1980 ರ ದಶಕದ ವರೇಗೆ ಒಬ್ಬ ವಿದ್ಯಾರ್ಥಿಯು ಟ್ಯೂಶನ್‍ಗೆ ಹೋಗುತ್ತಾನೆಂಬುದು ನಾಚಿಕೆಯ ವಿಷಯವಾಗಿತ್ತು. ಅದೇ ರೀತಿ ಟ್ಯೂಶನ್ ಕೊಡುವರಿಗೂ ಘನಸ್ಥಿಕೆ ಏನೂ ಇರಲಿಲ್ಲ. ಆದರೆ ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಕ್ಷೇತ್ರಗಳ ಸೀಟುಗಳನ್ನು ಬಾಚುವುದಕ್ಕಾಗಿ ಸ್ಪರ್ಧಾತ್ಮಕ ಅಂಕಗಳನ್ನು ಗಳಿಸುವ ಹಪಾಹಪಿಯಲ್ಲಿ ಇಂದು ವಿದ್ಯಾರ್ಥಿಗಳು ಟ್ಯೂಶನಿಗೆ ಹೋಗುವುದೇ ಗೌರವಾಗಿದೆ. ಈಗ “ನಮ್ಮ ಮಕ್ಕಳನ್ನು ಟ್ಯೂಶನ್ನಿಗೆ ಕಳಿಸ್ತಾ ಇಲ್ಲ” ಎಂಬುದು ನಾಚಿಕೆಯ ವಿಷಯವಾಗಿದೆ. ಒಂದು ತಲೆಮಾರಿಗಿಂತ ಹಿಂದಿನವರು ಊರಿನ ಸರಕಾರಿ ಶಾಲೆಗೆ ಹೋಗಿ ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗೆ ಏರಿದ್ದಾರೆ. ಆದರೆ ಈಗ ಅವರ ಮಕ್ಕಳನ್ನು ಅದೇ ಸರಕಾರಿ ಶಾಲೆಗೆ ಸೇರಿಸಲು ನಾಚಿಕೆ ಪಡುತ್ತಾರೆ. ಹಾಗೇನಾದರೂ ಒಬ್ಬರು ಕನ್ನಡ ಮಾಧ್ಯಮಬೇಕು ಎಂದು ಸರಕಾರಿ ಶಾಲೆಗೆ ಸೇರಿಸಿದರೆ “ನಿಮ್ಮ ಮಕ್ಕಳ ಭವಿಷ್ಯವನ್ನು ಯಾಕೆ ಹಾಳು ಮಾಡುತ್ತೀರಿ?” ಎಂದು ಸಾರ್ವಜನಿಕ ಸಮಾರಂಭಗಳಲ್ಲಿ ಸಂಬಂಧಿಕರಿಂದ ಪ್ರಶ್ನೆಯನ್ನೆದುರಿಸಬೇಕಾಗುತ್ತದೆ. ಕನ್ನಡದಲ್ಲಿ ಕಲಿತು ಉನ್ನತಿಯನ್ನು ಸಾಧಿಸಿದ ತಾವೇ ಯಾಕೆ ತಮ್ಮ ಮಕ್ಕಳಿಗೆ ಉದಾಹರಣೆಯಾಗುವುದಿಲ್ಲ? ತಮ್ಮ ಶಾಲೆಯ ಸುಧಾರಣೆಗೆ ತೊಡಗದೆ ಇದ್ದ ಅವರ ಮರ್ಯಾದೆ ಮತ್ತು ನಾಚಿಕೆಗಳು ಹೇಗೆ ಬದಲಾಗಿವೆ ನೋಡಿ!
*****************
ಆದಾಯಕ್ಕಿಂತ ಎಷ್ಟೋ ಹೆಚ್ಚು ಸಂಪತ್ತನ್ನು ಹೊಂದಿರುವ ಬಗ್ಗೆ ಬಂದ ದೂರಿನ ಆಧಾರದ ಮೇಲೆ ಭ್ರಷ್ಟ ಸರಕಾರಿ ಅಧಿಕಾರಿಗಳ ಮೇಲೆ ಇ.ಡಿ. ಇಲಾಖೆಯವರು ದಾಳಿ ಮಾಡುತ್ತಾರೆ. ಈ ವಾರ್ತೆ ದೂರದರ್ಶನದಲ್ಲೂ ಪತ್ರಿಕೆಗಳಲ್ಲೂ ಫೋಟೋ ಸಹಿತ ಪ್ರಸಾರವಾಗುತ್ತದೆ. ಹಾಗಾಗಿ ಈ ದಾಳಿಯ ಬಳಿಕ ಆ ಭ್ರಷ್ಟ ಅಧಿಕಾರಿಗಳಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ನಾಚಿಕೆಯಾಗಬೇಕು. ಆದರೆ ಅವರು ಇಂತಹ ದಾಳಿಯ ಬಳಿಕ ಒಂದೆರಡು ತಿಂಗಳಲ್ಲೇ ಸಾರ್ವಜನಿಕ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ತಾವು ಸದಸ್ಯರಾಗಿರುವ ಕ್ಲಬ್‍ಗಳ ಸಭೆಗಳಲ್ಲಿ ಭಾಗವಹಿಸುತ್ತಾರೆ. ಅವರ ಮುಖದಲ್ಲಿ ಅಪಮಾನದ ಲವಲೇಶ ಇರುವುದಿಲ್ಲ. ಅಲ್ಲಿ ಎದುರಾದ ಸ್ನೇಹಿತರು “ನೀವು ಹಾಗೆ ಅಥವಾ ಹೀಗೆ ತಪ್ಪಿಸಿಕೊಳ್ಳಬಹುದಿತ್ತು” ಎಂಬುದನ್ನು ಬೋಧಿಸುತ್ತಾರೆ. ಆದರೆ “ನೀವು ಯಾಕೆ ಹೀಗೆ ಮಾಡಿದಿರಿ? ಯಾಕೆ ಭ್ರಷ್ಟರಾದಿರಿ? ಅಧರ್ಮ ಮಾರ್ಗದ ಹಣ ಯಾವ ಪ್ರಯೋಜನಕ್ಕೆ ಬರುತ್ತದೆ?” ಇಂತಹ ಪ್ರಶ್ನೆಗಳನ್ನು ಕೇಳುವುದಿಲ್ಲ. ಬದಲಾಗಿ “ನಿಮ್ಮನ್ನು ಒಮ್ಮೆ ಬಂಧಿಸಿ ಜಾಮಿನಿನ ಮೇಲೆ ಬಿಟ್ಟಿದ್ದಾರಲ್ವ? ಇನ್ನು ಶಿಕ್ಷೆ ತಪ್ಪಿಸಿಕೊಳ್ಳುವ ದಾರಿ ಹುಡುಕಿದರಾಯಿತು. ಅದಕ್ಕೆ ಚಾಣಾಕ್ಷ ವಕೀಲರನ್ನು ಹಿಡಿದರಾಯಿತು” ಎಂತ ಸಲಹೆ ಕೊಡುವವರೇ ಜಾಸ್ತಿ. ಅಂದರೆ ಪ್ರತಿಷ್ಟಿತರೆನ್ನಿಸಿಕೊಂಡವರು ಕೂಡಾ ತಪ್ಪು ಮಾಡಿದವರನ್ನು ದೂರ ಇಡುವುದಿಲ್ಲ. ಮನಸ್ಸಿನೊಳಗೆ ಏನೇ ಭಾವಿಸಿಕೊಂಡಿದ್ದರೂ ಎದುರಲ್ಲಿ ಸೆರೆಸಿಕ್ಕಿದ ಭಷ್ಟ್ರರ ಬಗ್ಗೆ ಅನುಕಂಪ ತೋರಿಸುತ್ತಾರೆ. ಹೀಗಾಗಿ ತಪ್ಪಿತಸ್ಥರು ನಾಚಿಕೆ ಪಡಬೇಕಾದ ಅಗತ್ಯ ಕಾಣುವುಲ್ಲ. ವಿಶ್ವವಿದ್ಯಾಲಯವೊಂದರ ಉಪಕುಲಪತಿಗಳು ಪತ್ರಿಕೆಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಮಹಾಭಷ್ಟ್ರರೆಂದು ಪ್ರಚಾರ ಪಡೆದ ದಿನದಂದೇ ನಡೆಯಲಿದ್ದ ಸಮಾರಂಭಕ್ಕೆ ಬಾರದೆ ಉಳಿಯಬಹುದೆಂಬ ಮಾತು ಹಬ್ಬಿತ್ತು. ಆದರೆ ಅವರು ತಮ್ಮ ವಿ.ವಿ.ಯ ಕಾರಿನಲ್ಲೇ ಬಂದರು. ಮುಖದಲ್ಲಿ ಯಾವುದೇ ಆತ್ಮ ಗ್ಲಾನಿಯ ಚಿಹ್ನೆ ಇರಲಿಲ್ಲ. ನಗುತ್ತಲೇ ಸ್ವಾಗತವನ್ನು ಸ್ವೀಕರಿಸಿದರು. ವೇದಿಕೆಯಿಂದ ಸತ್ಯ, ಧರ್ಮ, ನ್ಯಾಯಗಳನ್ನು ಬದುಕಿನಲ್ಲಿ ಅಳವಡಿಸಬೇಕೆಂದು ತಮ್ಮ ನಿರರ್ಗಳ ಭಾಷಣದಲ್ಲಿ ಹೇಳಿದರು. ಜನರೆಲ್ಲಾ ಚಪ್ಪಾಳೆ ತಟ್ಟಿದರು. ತಮ್ಮ ವ್ಯಕ್ತಿತ್ವಕ್ಕೆ ಏನೂ ಕುಂದಾಗಲಿಲ್ಲವೆಂದು ತಿಳಿದುಕೊಂಡ ಉಪಕುಲಪತಿಗಳು ತೆರಳಿದರು. “ನಾಚಿಕೆ ಬಿಟ್ಟವ ಊರಿಗೆ ದೊಡ್ಡವ” ಎಂಬ ಮಾತಿಗೆ ಬೇರೆ ಸಾಕ್ಷಿ ಬೇಕೆ?
************
ನಾಚಿಕೆ ಪಡಬೇಕಾಗುವ ಭಯವು ವ್ಯಕ್ತಿಗಳನ್ನು ಸದ್ವರ್ತನೆಗೆ ತಿರುಗಿಸುತ್ತದೆಯೇ ಎಂಬುದು ಒಂದು ಪ್ರಶ್ನೆ. ಕುಟುಂಬ ಸಂಬಂಧಗಳು ಗಟ್ಟಿಯಾಗಿದ್ದಾಗ ಒಬ್ಬರು ಮಾಡುವ ತಪ್ಪು ಇಡೀ ಕುಟುಂಬಕ್ಕೆ ಅಪಮಾನವಾಗಿ ಕಾಡುತ್ತಿತ್ತು. ಕೆಲವು ವರ್ಷಗಳ ಹಿಂದೆ ಒಬ್ಬ ಬ್ಯಾಂಕ್ ಮೇನೇಜರ್ ಅಕ್ರಮ ಸಂಪಾದನೆ ಮಾಡಿ ಸಿಕ್ಕಿಬಿದ್ದ ಸುದ್ಧಿ ಪತ್ರಿಕೆಗಳಲ್ಲಿ ಬಂದ ಮರುದಿನ ಮುಂಜಾನೆ ಆತನ ಪತ್ನಿ ಮತ್ತು ಮಗಳು ಅಪಮಾನಕ್ಕೆ ಹೆದರಿ ಆತ್ಮಹತ್ಯೆ ಮಾಡಿದ ಘಟನೆ ವರದಿಯಾಗಿತ್ತು. ತುಂಬಾ ಆತ್ಮ ಪ್ರತಿಷ್ಠೆ ಇದ್ದವರಿಗೂ ನಾಚಿಕೆ ಹೋಗುವ ಪ್ರಸಂಗ ನಡೆದಾಗ ಆತ್ಮಹತ್ಯೆಯೇ ಬಿಡುಗಡೆಯಾಗಿ ಕಾಣುತ್ತದೆ. ಇತ್ತೀಚೆಗೆ ಬೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಅವ್ಯವಹಾರಕ್ಕೆ ಸಂಬಂಧಿಸಿ ನಡೆದ ಅನೇಕ ವಿಚಾರಣೆಗಳ ಪ್ರಕ್ರಿಯೆಯಲ್ಲಿ ಜೀವಾ ಎಂಬ ಮಹಿಳಾ ಉದ್ಯಮಿಯ ವಿಚಾರಣೆ ನಡೆದಿತ್ತು. ಆಕೆ ತನ್ನನ್ನು ಪೊಲೀಸರು ವಿಚಾರಿಸಿದ್ದನ್ನೇ ಕಾರಣವಾಗಿ ಹೇಳಿ ಆತ್ಮಹತ್ಯೆ ಮಾಡಿಕೊಂಡರು ಎಂದು ವರದಿಯಾಗಿದೆ. ಈ ತನಿಖೆಯಲ್ಲಿ ಆರೋಪಿಗಳಾಗಿ ಗುರುತಿಸಲ್ಪಟ್ಟ ಅಧಿಕಾರಿಗಳಾರೂ ಇಂತಹ ಒತ್ತಡಕ್ಕೆ ಒಳಗಾಗಲಿಲ್ಲ. ಆದರೆ ಜೀವಾ ಎಂಬವರು ಜೀವಕಳಕೊಂಡರು. ಏಕೆಂದರೆ ಒಂದು ಉದ್ಯಮದ ಒಡತಿಯಾಗಿದ್ದು ಮರ್ಯಾದೆಗೆಟ್ಟ ವರ್ತನೆಯವಳೆಂಬ ಅಪಖ್ಯಾತಿಯನ್ನು ಸಹಿಸುವಷ್ಟು ಶಕ್ತಿ ಆಕೆಗೆ ಬಂದಿಲ್ಲ. ಅಂದರೆ ನಮ್ಮ ಸಮಾಜದಲ್ಲಿ ಅಪಮಾನವನ್ನು ಸಹಿಸಿಕೊಳ್ಳಲಾಗದವರೂ ಇದ್ದಾರೆ, ಸಹಿಸಿಕೊಳ್ಳಬಲ್ಲವರೂ ಇದ್ದಾರೆ. ಸುಳ್ಳು ಆಪಾದನೆಯಾದರೆ ಮಾತ್ರ ಅದನ್ನು ಎದುರಿಸುವಷ್ಟು ಧೈರ್ಯವನ್ನು ವ್ಯಕ್ತಿಗಳು ಪಡೆದಿರಬೇಕು. ಆದರೆ ಆಪಾದನೆ ಸತ್ಯವಾಗಿದ್ದರೆ ನಾಚಿಕೆ ಪಡಬೇಕು. ಅಂತಹ ಸಮಾಜೀಕರಣದ ಪ್ರಕ್ರಿಯೆ ಜರಗಬೇಕಾದ ಅಗತ್ಯವಿದೆ.

ಬರಹ :
ಚಂದ್ರಶೇಖರ ದಾಮ್ಲೆ
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

Published by
ಡಾ.ಚಂದ್ರಶೇಖರ ದಾಮ್ಲೆ

Recent Posts

ಜೇನುನೊಣಗಳಿಂದ ನಿಮ್ಮ ಹತ್ತಿರದ ಪರಿಸರ ಮಾಲಿನ್ಯ ಪತ್ತೆ…! | ಜೇನುತುಪ್ಪದ ಮೂಲಕ ಪರಿಸರ ಮಾಲಿನ್ಯದ ಸುಳಿವು..! |

ಪ್ರಾದೇಶಿಕ ಪರಿಸರ ಮಾಲಿನ್ಯದ ಮಾದರಿಗಳನ್ನು ಪತ್ತೆ ಮಾಡಲು ಜೇನುಹುಳ ಹಾಗೂ ಜೇನುತುಪ್ಪ ಉತ್ತಮ ದಾರಿಗಳಾಗಿವೆ.…

23 hours ago

ಹವಾಮಾನ ವರದಿ | 10.12.2024 | ರಾಜ್ಯದ ಕೆಲವೆಡೆ ಇಂದೂ ಮಳೆ ಸಾಧ್ಯತೆ | ಡಿ.16ರಿಂದ ವಾಯುಭಾರ ಕುಸಿತ| ಮತ್ತೆ ಮಳೆ ಸಾಧ್ಯತೆ

11.12.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…

1 day ago

ಹೆಚ್ಚುತ್ತಿರುವ ವಾಯುಮಾಲಿನ್ಯ ಹಾಗೂ ತಾಪಮಾನ | ಸೋಲಾರ್‌ ಇಂಧನದ ಮೇಲೆ ಪರಿಣಾಮ ಏನು..?

ಅಧ್ಯಯನದ ಪ್ರಕಾರ, 2041-2050ರ ಅವಧಿಯಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಸೌರ ವಿಕಿರಣದ ಇಳಿಮುಖವಾಗುವ…

2 days ago

ದೇಶದಲ್ಲಿ 138.34 ಕೋಟಿ ಆಧಾರ್ ಸಂಖ್ಯೆಗಳು ನೋಂದಣಿ

ಭಾರತದ ಡಿಜಿಟಲ್ ಮೂಲ ಸೌಕರ್ಯವು ಅಭೂತಪೂರ್ವ ಬೆಳವಣಿಗೆ ಸಾಧಿಸಿದ್ದು, ಇಲ್ಲಿಯವರೆಗೆ 138.34 ಕೋಟಿ…

2 days ago

ಪರಿಸರ ಆಧಾರಿತ ಹೂಡಿಕೆಗಳಿಂದ 32 ಮಿಲಿಯನ್‌ ಉದ್ಯೋಗ ಸೃಷ್ಟಿ | ಹೊಸ ಅಧ್ಯಯನ ವರದಿ |

ಪರಿಸರ ಆಧಾರಿತವಾದ ಹೂಡಿಕೆಗಳು ಹಾಗೂ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಅಗತ್ಯ ಇದೆ. ಭವಿಷ್ಯದಲ್ಲಿ ಪರಿಸರ…

2 days ago

ಅಡಿಕೆ ಧಾರಣೆ ಏರಿಕೆಯ ಹಾದಿಯ ನಡುವೆಯೇ ಅಕ್ರಮವಾಗಿ ಅಡಿಕೆ ಆಮದು | ಬರ್ಮಾ ಅಡಿಕೆ ಸಾಗಾಟದ ಇನ್ನೊಂದು ಪ್ರಕರಣ ಪತ್ತೆ |

ಅಡಿಕೆ ಧಾರಣೆ ಏರುತ್ತಿದ್ದತೆಯೇ ಬರ್ಮಾ ಅಡಿಕೆ ಅಕ್ರಮ ಸಾಗಾಟ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

2 days ago