ಹಿಂದೆಯೂ ನದಿಗಳಲ್ಲಿ ಪ್ರವಾಹವಾಗುತ್ತಿತ್ತು. ಈಗಲೂ ಪ್ತವಾಹವಾಗುತ್ತದೆ. ಆದರೆ ಆಗಿಗೂ ಈಗಿಗೂ ಈ ಪ್ರವಾಹದ ವಿಶ್ಲೇಷಣೆ ಬೇರೆ ಬೇರೆಯಾಗಿದೆ. ನದಿ ಪಾತ್ರದ ಪ್ರತಿ ಊರಿನಲ್ಲೂ ಜೆಸಿಬಿ ಮುಂತಾದ ಬೃಹತ್ ಯಂತ್ರದ ಮೂಲಕ ಮನುಷ್ಯನ ಹಸ್ತಕ್ಷೇಪ ” ಗುಡ್ಡ ಜೆರಿಸುವ, ಕಂದಕ ತುಂಬುವ ಕೆಲಸ ಬೇಸಿಗೆಯಿಡೀ ನಡೆಯುತ್ತಿರುತ್ತದೆ. ಒಂದು ಗ್ರಾಮ ಪಂಚಾಯತಿಗೆ ಕನಿಷ್ಠ ಆರರಿಂದ ಎಂಟು ಜೆಸಿಬಿಗಳಿರುತ್ತವೆ (ಇವು ಊರಿನವರದ್ದೇ ಮಾಲಿಕತ್ವದ್ದು) . ಇನ್ನ ಹೊರಗಿನಿಂದ ಬಂದ ಬಾಡಿಗೆ ಜೆಸಿಬಿ ಹಿಟಾಚಿ ಗಳು ಬೇರೆ ಕೆಲಸ ಮಾಡುತ್ತದೆ. ಲೇಔಟ್ ನಿರ್ಮಾಣ, ಕೃಷಿ ಭೂಮಿ ವಿಸ್ತರಣೆ, ಮನೆ ನಿರ್ಮಾಣ, ರಸ್ತೆ ನಿರ್ಮಾಣ ಇತರೆ ಕಾಮಗಾರಿಯ ಪ್ರಯುಕ್ತ ಪ್ರತಿ ಊರಿನಲ್ಲೂ ಬೇಸಿಗೆಯಲ್ಲಿ ಮಣ್ಣಿನ ಕೆಲಸ ನೆಡೆಯುತ್ತದೆ.
ನಮ್ಮ ಜನ ಸಾಮಾನ್ಯರು ಮತ್ತು ಸರ್ಕಾರದ ಇಲಾಖೆಯ ಎಲ್ಲಾ ನಿರ್ಮಾಣ ಯೋಜನೆಯಲ್ಲಿ ಮಳೆಗಾಲದ ಅತಿವೃಷ್ಟಿ ಪರಿಗಣನೆಗೇ ತೆಗದುಕೊಂಡಿರುವುದಿಲ್ಲ. ಗುಡ್ಡ ಬಯಲಿನಲ್ಲಿ ಹುಲ್ಲು ಗಾವಲು ಇಲ್ಲ… ಕೃಷಿ ಭೂಮಿಯಲ್ಲಿ ಕಳೆನಾಶಕ ಮತ್ತು ಕಳೆನಾಶಕ ಯಂತ್ರ ಗಳ ಮೂಲಕ ಭೂಮಿಯ ಮೇಲು ಹೊದಿಕೆಯ ಕಳೆ ಯನ್ನೇ ನಾಶ ಮಾಡಿ ಮಳೆಗಾಲದಲ್ಲಿ ಭಾರೀ ಪ್ರಮಾಣದಲ್ಲಿ ಮಣ್ಣಿನ ಸವಕಳಿಯಾಗುತ್ತದೆ. ಎಪ್ಪತ್ತು ಎಂಬತ್ತು ಡಿಗ್ರಿ ಇಳಿಜಾರಿನ ಗುಡ್ಡ ಪ್ರದೇಶದಲ್ಲಿ ಕಾಡು ಮರಗಳ ನಾಶ, ಕೃಷಿ ಮಾಡುವುದು, ಈ ಸಂಬಂಧಿಸಿದ ಉಳುಮೆ, ಸರ್ಕಾರದ ಇಂಗು ಗುಂಡಿ ಯೋಜನೆಗಳು…!!
ಇತ್ತಿಚೆಗೆ ಸಕಲೇಶಪುರ ದಲ್ಲಿ ಆದ ಭೂ ಕುಸಿತಕ್ಕೆ ಎತ್ತಿನ ಹೊಳೆ ಯೋಜನೆಯ ಪೈಪ್ ಲೈನ್ ಗೆ ರಸ್ತೆ ಪಕ್ಕದಲ್ಲಿ ತೋಡಿ ಹಾಕಿದ ಪೈಪ್ ಲೈನ್ ಕಾರಣ… ಉತ್ತರ ಕನ್ನಡ ಜಿಲ್ಲೆಯ ಶಿರೂರು ನಲ್ಲಿ ಅವೈಜ್ಞಾನಿಕ ರಸ್ತೆ ನಿರ್ಮಾಣ ಮಣ್ಣು ಕುಸಿತಕ್ಕೆ ಕಾರಣ…. ಈ ಎಲ್ಲಾ ಮಣ್ಣು ಕುಸಿದು ಹೋಗಿ ಸೇರುವುದು ನದಿಗಳಿಗೆ… ಈ ಜೆಸಿಬಿ ಕ್ರಾಂತಿ ಆಗುವ ಮೊದಲೂ ನದಿಗಳಲ್ಲಿ ಮಹಾಪೂರ ಪ್ರವಾಹ ಗಳಾಗು ತ್ತಿತ್ತು. ಆದರೆ ಅದು ತೊಂಬತ್ತು ಪ್ರತಿಶತ ನೀರಿನ ಪ್ರವಾಹ. ಒಂದು ಹತ್ತು ಪ್ರತಿಶತ ಭೂಸವಕಳಿಯ ಮಣ್ಣು ನೀರು ಸೇರುತ್ತಿತ್ತು.
ಇಪ್ಪತ್ತೈದು ವರ್ಷಗಳ ಹಿಂದಿನ ಪ್ರವಾಹ ಒಮ್ಮೆಲೆ ನೀರುಕ್ಕಿ ಅತ್ಯಂತ ವೇಗವಾಗಿ ಪ್ರವಾಹ ಇಳಿದು ಹೋಗುತ್ತಿತ್ತು. ಆದರೆ ಈಗ ಪ್ರವಾಹ ಬಂದರೆ ನೀರು ಹೋದರೂ ಕೆಸರು ಮಣ್ಣಿನ ರಾಶಿ ಜಮೀನು ಮನೆಗಳಲ್ಲಿ ಹಾಗೆಯೇ ಉಳಿಯುತ್ತದೆ. ಈಗ್ಗೆ ಐವತ್ತು ವರ್ಷಗಳ ಹಿಂದೆ ತುಂಗಾ ನದಿಯಲ್ಲಿ ಭಾರೀ ಪ್ರವಾಹ ಬಂದಿತ್ತಂತೆ. ತೀರ್ಥಹಳ್ಳಿಯ ಕುರುವಳ್ಳಿಯ ಪುತ್ತಿಗೆ ಮಠದಲ್ಲಿ ಈಗಲೂ ಆಗ ಬಂದ ತುಂಗೆಯ ಮಹಾಪೂರದ ಗುರುತು ಹಾಕಿ ಇಟ್ಟಿದ್ದಾರೆ. ನೆನಪಿಡಿ ಆಗ ಗಾಜನೂರಿನ ತುಂಗಾ ಆಣೆಕಟ್ಟು ಇರಲಿಲ್ಲ. ಆದರೂ ಆಗ ಆ ಪರಿ ಪ್ರವಾಹ ಬಂದಿತ್ತು.
ಈಗ ಬಹುತೇಕ ಎಲ್ಲಾ ನದಿ ಪಕ್ಕದಲ್ಲೂ ಜಮೀನು ಒತ್ತುವರಿಯಾಗಿದೆ. ಹತ್ತು ವರ್ಷಗಳ ಹಿಂದೆ ಭಂಡಿಗಡಿಗೆ ಬಸವಾನಿ ವಯ ಹೋಗುವಾಗ ತುಂಗಾ ನದಿ ದಂಡೆಗೆ ತಾಕಿಕೊಂಡು ಯಾರೋ ಜಮೀನ್ದಾರರು ಕೃತಕವಾಗಿ ಮಣ್ಣು ಹಾಕಿ ಅಡಿಕೆ ತೋಟ ನಿರ್ಮಾಣ ಮಾಡಿದ್ದು ಗಮನಿಸಿ ಈ ತೋಟ ನದಿ ಪ್ರವಾಹ ದಲ್ಲಿ ಉಳಿಯುತ್ತದಾ…? ಎಂದುಕೊಂಡಿದ್ದೆ..!!. ಹಿಂದೆ ನದಿ ಪಕ್ಕದಲ್ಲಿ ಜನರೇ ಹಸ್ತಕ್ಷೇಪ ಮಾಡದೇ ಭಫರ್ ಜೋನ್ ಬಿಡುತ್ತಿದ್ದರು. ಈಗ ನದಿ ದಂಡೆಗೇ ಮಣ್ಣು ಹಾಕಿ ಅಡಿಕೆ ತೋಟ ನಿರ್ಮಾಣ ಅಥವಾ ಕೃಷಿ ಮಾಡುತ್ತಿದ್ದಾರೆ. ಈ ಮದ್ಯೆ ತುಂಗೆ ಸೇರಿದಂತೆ ಬಹುತೇಕ ಎಲ್ಲಾ ನದಿಗಳಿಗೆ ಸಂಪರ್ಕ ಸೇತುವೆಗಳ ಸಂಖ್ಯೆ ಏರಿದೆ. ಹಳೆಯ ಸೇತುವೆಗಳ ಪಕ್ಕದಲ್ಲಿ ಹೊಸ ಸೇತುವೆ ನಿರ್ಮಾಣ ವಾಗಿದೆ.
ಈ ಸೇತುವೆಗಳ ಪಿಲ್ಲರ್ ಗಳು ಆಣೆಕಟ್ಟಿನಂತೆ ಪ್ರವಾಹ ಸಂಧರ್ಭದಲ್ಲಿ ಕಾರ್ಯ ನಿರ್ವಹಿಸುತ್ತದೆ…!! ಮನುಷ್ಯ ನಿಸರ್ಗದ ವಿಚಾರದಲ್ಲಿ ನಿಸರ್ಗವನ್ನು ಪಳಗಿಸಿ ನಿಸರ್ಗದ ಮೇಲೆ ಪ್ರಹಾರ ಮಾಡಿ ಜೀವನ ಮಾಡಲು ಪ್ರಯತ್ನ ಮಾಡುತ್ತಿದ್ದಾನೆ . ಅದರ ದುಷ್ಪರಿಣಾಮ ಇದು. ನಿದಿ ಪ್ರವಾಹ ನಿಯಂತ್ರಣಕ್ಕೆ ಮರಳು ಗಣಿಗಾರಿಕೆ ಪರಿಹಾರವೇ…? ಮನೆಗೆ ಕಲ್ಲಿನ ತಳಪಾಯ ಹೇಗೆ ಆಧಾರವೋ ಹಾಗೆಯೇ ನದಿಗಳಿಗೆ ಮರಳು ತಳಪಾಯ. ಈ ಮರಳು ಸ್ಪಂಜಿನ ರೀತಿಯಲ್ಲಿ ಕೆಲಸ ಮಾಡುತ್ತದೆ. ಲಕ್ಷಾಂತರ ಕೋಟ್ಯಂತರ ವರ್ಷಗಳ ಹಿಂದೆ ನದಿ ಸೃಷ್ಟಿಯಾದಾಗ ಕಲ್ಲು ಗೊಚ್ಚು , ಮರಳು ಹಾಕಿ ಚಾನಲ್ ಮಾಡಿದಂತೆ ನದಿ ಸೃಷ್ಟಿಯಾಗಿದ್ದು ದೊಡ್ಡ ವಿಸ್ಮಯ ಎನಿಸುತ್ತದೆ.
ಒಂದು ನದಿ ಅದರ ಸುತ್ತ ಮುತ್ತಲಿನ ಲಕ್ಷಾಂತರ ಎಕರೆ ವಿಸ್ತೀರ್ಣದ ಭೂ ಪ್ರದೇಶದ ನಿಸರ್ಗಕ್ಕೆ ಜೀವಜಲ ಆಗಿರುತ್ತದೆ. ಆ ನದಿಯ ಹರಿವು ಆ ಭಾಗಕ್ಕೆ ಸಮಶೀತೋಷ್ಣ ವಾತಾವರಣ ಇರುವಂತೆ ಮಾಡುತ್ತದೆ. ಕಳೆದ ಬರಗಾಲದಲ್ಲಿ ಕ್ಷೀಣವಾಗಿ ಹರಿದ ನದಿಗಳಲ್ಲಿ ತುಂಗಾ ನದಿ , ಸೀತಾ ನದಿ ಸೇರಿದಂತೆ ಕೆಲವೇ ಕೆಲವು ನದಿ. ನದಿ ಮೇಲೆ ಹರಿಯದಿದ್ದರೂ ನದಿ ಪಾತ್ರದ ಮರಳ ರಾಶಿಯಲ್ಲಿ ಗುಪ್ತಗಾಮಿನಿಯಾಗಿ ಇದ್ದು ಸಮಸ್ತ ಜೀವ ರಾಶಿಗೆ ಸುಪ್ತವಾಗಿ ತನ್ನಿಂದ ಜೀವ ಜಲ ನೀಡಿ ಕಾಪಾಡುತ್ತದೆ.
ನದಿಯ ಪಾತ್ರದಲ್ಲಿ ಮರಳು ಗಣಿಗಾರಿಕೆ ಮಾಡಬಾರದೇ…?: ಖಂಡಿತವಾಗಿಯೂ ನದಿಯಿಂದ ಮರಳು ತೆಗೆಯಬಹುದು ಅಥವಾ ಈ ಜೆಸಿಬಿ ಕಾಲದಲ್ಲಿ ಮರಳು ತೆಗೆಯಬೇಕು. ಆದರೆ ಎಲ್ಲಿ ಪ್ರವಾಹ ಬಂದಿದೆಯೋ..?ನದಿ ಕನಿಷ್ಠ ಹರಿವಿನ ಪಾತ್ರಕ್ಕಿಂತ ಹೆಚ್ಚು “ಮರಳು ” ಇರುವ ಜಾಗದಲ್ಲಿ ಮರಳು ಖಂಡಿತವಾಗಿಯೂ ತೆಗೆಯಬಹುದು. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾಣಿ ಎಂಬಲ್ಲಿ ವಾರಾಹಿ ನದಿಗೆ ಆಣೆಕಟ್ಟು ಕಟ್ಟುವಾಗ ತುಂಗಾ ನದಿಯ ಮರಳನ್ನು ವಿಜ್ಞಾನಿಗಳು ಸಂಶೋಧನೆ ಮಾಡಿದಾಗ ತೀರ್ಥಹಳ್ಳಿ ತಾಲ್ಲೂಕಿನ ದಬ್ಬಣಗದ್ದೆ ಎಂಬ ಸ್ಥಳದ (ತುಂಗೆ) ಮರಳು ಅತ್ಯುತ್ಕೃಷ್ಟ ಎಂದಾಗಿತ್ತು. ಎಲ್ಲಾ ಕಲ್ಲು ಪುಡಿ ಮರಳಲ್ಲ…
ಚಿಕ್ಕ ಮಣ್ಣಿನ ಪುಡಿ ಹೆಚ್ಚು ಮಿಶ್ರಿತ ವಾಗಿ ರುವ ಚಿಕ್ಕ ಚಿಕ್ಕ ಹಳ್ಳದ ನದಿ ಮರಳನ್ನು ಎಗ್ಗಿಲ್ಲದೇ ಜೆಸಿಬಿಯಲ್ಲಿ ಲಾರಿಗೆ ಲೋಡು ಮಾಡಿ ಮರಳು ವ್ಯಾಪಾರಿಗಳು ಲಕ್ಷ ಲಕ್ಷ ಎಣಿಸುತ್ತಾರೆ…!!
ಪ್ರತಿ ನದಿ ಪಾತ್ರದಲ್ಲೂ ಒಂದು ನಿರ್ದಿಷ್ಟ ಜಾಗದಲ್ಲಿ ಮನುಷ್ಯ ನಿಯಮಿತ ಪ್ರಮಾಣದಲ್ಲಿ ಬಳಸಬಹುದಾದ ಮರಳು ಲಭ್ಯವಿರುತ್ತದೆ. ಈ ಮರಳನ್ನು ಕಡ್ಡಾಯವಾಗಿ ನೀರ ಮಟ್ಟದಿಂದ ಬಹಳಷ್ಟು ಎತ್ತರ ವಿದ್ದ ಜಾಗದಲ್ಲಿ ಮಾತ್ರ ತೆಗೆಯಬೇಕು. ನಮ್ಮೂರಿನ ಚಿಕ್ಕ ಚಿಕ್ಕ ಹಳ್ಳಗಳ ಮಣ್ಣು ಮಿಶ್ರಿತ ಮರಳು ಜೆಸಿಬಿ ಮೂಲಕ ಗಣಿ ಗಾರಿಕೆ ಮಾಡುವುದು ಮತ್ತಷ್ಟು ಭೂ ಸವಕಳಿಗೆ ಆಹ್ವಾನ ನೀಡಿದಂತೆ. ದೊಡ್ಡ ನದಿಗಳಿಂದ ದೊಡ್ಡ ದೊಡ್ಡ ಹತ್ತು ಚಕ್ರದ ಟಿಪ್ಪರ್ ಲಾರಿಗಳಿಗೆ ಜಿಸಿಬಿ ಯಂತ್ರದ ಹೊರತಾಗಿ ಮನುಷ್ಯ ರಿಂದ ಮರಳು ಲೋಡು ಮಾಡಲು ಸಾಧ್ಯವಿಲ್ಲ. ಆದರೆ ಜಿಸಿಬಿಯಲ್ಲಿ ಮರಳನ್ನು ಲಾರಿಗೆ ತುಂಬಿದರೂ ನಿಯಮಾವಳಿ ಯ ಪ್ರಕಾರ ವೇ ಮರಳು ತುಂಬಿದರೆ ನದಿ ಸುರಕ್ಷಿತ. ಈ ಬಗ್ಗೆ ಸಂಬಂಧಿಸಿದ ಇಲಾಖೆ ಕಟ್ಟು ನಿಟ್ಟಿನ ಗಮನ ಹರಿಸಬೇಕು. ಎಲ್ಲಾತ ಎಲ್ಲಿ ಮರಳು ಎತ್ತುವುದು ಅಪಾಯಕಾರಿ.
ಒಟ್ಟಾರೆ ಹೇಳುವುದಾದರೆ ಬೇಸಿಗೆಯಲ್ಲಿ ಮಲೆನಾಡಿನ ಪಶ್ಚಿಮ ಘಟ್ಟಗಳ ಭಾಗದಲ್ಲಿ ಖಾಸಗಿ ಮತ್ತು ಸರ್ಕಾರಿ ಜಾಗದಲ್ಲಿ ಯಾವುದೇ ತಡೆಯಿಲ್ಲದೆ ಜೆಸಿಬಿ ಹಿಟಾಚಿಗಳ ಮಣ್ಣು ಕೆಲಸದ ಮೇಲೆ ನಿಯಂತ್ರಣ ಮಾಡದಿದ್ದಲ್ಲಿ ಭವಿಷ್ಯದಲ್ಲಿ ಮಲೆನಾಡಿನ ಊರೂರೂ ವಯನಾಡು ಆಗಲಿದೆ..!!!. ನಮಗೆ ಕಸ್ತೂರಿ ರಂಗನ್ ವರದಿಯೂ ಬೇಡ… ಮಾಧವ ಗಾಡ್ಗೀಳ್ ವರದಿಯಂತೂ ಬೇಡವೇ ಬೇಡ ಎಂದು ತಿರಸ್ಕರಿಸಿದರೆ ಒಂದಲ್ಲ ಒಂದು ದಿನ ನಿಸರ್ಗವೇ ಮನುಷ್ಯನಿಗೆ ಅಥವಾ ಮನುಷ್ಯ ನ ಹಸ್ತಕ್ಷೇಪ ಕ್ಕೆ ಭೂ ಕುಸಿತ ಮತ್ತು ಪ್ರವಾಹದ ಮೂಲಕ ಪಾಠ ಕಲಿಸು ತ್ತದೆ.ಈ ವರೆಗೆ ಆದ ಯಾವುದೇ ಪ್ರವಾಹ ವೂ ಮತ್ತು ಭೂ ಕುಸಿತವೂ ಮನುಷ್ಯ ನ ಪ್ರಭಾವ ಇಲ್ಲದೇ ಆದ ಅನಾಹುತವಲ್ಲ…! ನದಿ ಇಕ್ಕೆಲ.. ಗುಡ್ಡದ ಅಂಚಿನ ದರೆ …
ಇರಲಿ ಮನುಷ್ಯನ ಅಂತರ… ಮುಂದಿನ ಬೇಸಿಗೆಯಲ್ಲಿ ಸರ್ಕಾರ ಜೆಸಿಬಿ ಬಳಕೆಯನ್ನು ನಿಯಂತ್ರಣ ಮಾಡದಿದ್ದಲ್ಲಿ ಭಾರೀ ಅಪಾಯ ಬಂದೊದಗಲಿದೆ ಎನಿಸುತ್ತಿದೆ.ಮನುಷ್ಯ ನಿಸರ್ಗದ ಜೊತೆಯಲ್ಲಿ ಸಹಬಾಳ್ವೆ ಮಾಡುವುದನ್ನು ಅಭ್ಯಾಸ ಮಾಡದಿದ್ದಲ್ಲಿ ಬಹಳ ವರ್ಷ ಗಳ ಕಾಲ ಈ ಭೂಮಿಯ ಮೇಲೆ ಮನುಷ್ಯ ಜೀವಿ ಉಳಿಯಲಾರ…!!!
ನಿಸರ್ಗ ಮಳೆಗಾಲದಲ್ಲಿ ಪ್ರವಾಹ ಭೂ ಕುಸಿತದ ಮೂಲಕ ಮತ್ತು ಬೇಸಿಗೆಯಲ್ಲಿ ಬರ ದ ಮೂಲಕ ಮನುಷ್ಯನಿಗೆ ಎಚ್ಚರಿಕೆ ನೀಡುತ್ತಲೇ ಇದೆ. ದುರಂತ ಎಂದರೆ ಮೂರು ಕಾಸಿನ ಸಾಮಾನ್ಯ ಮನುಷ್ಯ ನಂತೆ ನಮ್ಮ ಸರ್ಕಾರಗಳೂ ಜಾಗೃತೆ ವಹಿಸುತ್ತಿಲ್ಲ. ಖಂಡಿತವಾಗಿಯೂ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ನಿಸರ್ಗದ ಜೊತೆಯಲ್ಲಿ ಸಹಬಾಳ್ವೆ ಮಾಡುವುದನ್ನು ಈ ಅನಾಹುತದಿಂದಾದರೂ ಮನುಷ್ಯ ಪಾಠ ಕಲಿಯುವುದು ಉತ್ತಮ….ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದುರಹಂಕಾರಿ ಮನುಷ್ಯ ನಿಸರ್ಗ ದ ಕಠಿಣ ಶಿಕ್ಷೆಗೆ ಗುರಿಯಾಗುವುದು ಖಂಡಿತ….
ಮತ್ತೊಮ್ಮೆ.. ವಯನಾಡು ಸಮಸ್ತ ಮಲೆನಾಡಿಗೆ ಪಾಠವಾಗಲೆಂದು ಆಶಿಸುತ್ತೇನೆ…