ಸದಾ ನಿಮ್ಮ ಹೃದಯವನ್ನು ಹಸಿರಾಗಿಟ್ಟು ಕೊಳ್ಳಿ, ಅದೊಂದು ದಿನ ಪುಟ್ಟ ಹಕ್ಕಿಯೊಂದು ಗೂಡು ಕಟ್ಟ ಬಹುದು.
– ಚೀನೀ ಗಾದೆ ಇದು.
ಗುಬ್ಬಚ್ಚಿಯೊಂದು ಈಗ ಮಾತನಾಡುತ್ತಿದೆ……
ಕಣ್ಣುಗಳನ್ನು ದೂರದಿಂದ ಹಾರಿಕೊಂಡು ಬರುವ ಅಮ್ಮನತ್ತಲೇ ನೆಟ್ಟ ಮಕ್ಕಳ ನಿರೀಕ್ಷೆ ಇಂದು ಸುಳ್ಳಾಗಲಿಲ್ಲ. ತನ್ನ ಕೊಕ್ಕುಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ಧಾನ್ಯಗಳನ್ನು ಅಮ್ಮ ತಂದಿತ್ತು. ಮಕ್ಕಳಿಗೆ ಬಹಳ ದಿನಗಳ ನಂತರ ಹೊಟ್ಟೆ ತುಂಬಾ ಆಹಾರ. ಮರಿಗಳು ನೋಡುತ್ತಿದ್ದಂತೆ ಅಮ್ಮ ಮತ್ತೆ ಹಾರಿತು. ಹೊಟ್ಟೆ ಹಸಿವು ಜೋರಿದ್ದುದರಿಂದ ತಿನ್ನುವುದರತ್ತಲೇ ಮರಿಗಳ ಗಮನ. ಸ್ವಲ್ಪ ಹೊತ್ತಲೇ ಅಮ್ಮ ಮತ್ತೆ ಕಾಳುಗಳೊಂದಿಗೆ ಮಕ್ಕಳ ಬಳಿಗೆ ಬಂತು. ಹೊಟ್ಟೆ ತುಂಬಿದ್ದ ಮಕ್ಕಳು ಅಮ್ಮನ ಮಾತಿಗೆ ಕಿವಿಯಾಗುವ ಭಂಗಿಯಲ್ಲಿದ್ದುವು.
ಮಕ್ಕಳೇ ಆಶ್ಚರ್ಯವಾಗುತ್ತಿದೆಯಾ….? ಹೆಚ್ಚಾಗಿ ಬರಿಗೈಯಲ್ಲಿ ಬರುತ್ತಿದ್ದ ಅಮ್ಮ ಇಂದು ಹೊಟ್ಟೆ ತುಂಬ ಆಹಾರ ತರುತ್ತಿದ್ದಾಳಲ್ವಾ ಅಂತ? ಇವತ್ತು ಒಂದು ವಿಶೇಷ ದಿನವಂತೆ ಮಕ್ಕಳೇ. ಇಂದು ಮಾರ್ಚ್ 20. ಪ್ರಪಂಚವಿಡೀ ‘ಗುಬ್ಬಚ್ಚಿ ದಿನ’ ವೆಂದು ಆಚರಿಸುತ್ತಿದ್ದಾರೆ. ಹಾಗಾಗಿ ಇಂದು ಎಲ್ಲೆಲ್ಲೂ ನಮಗೆ ವಿಶೇಷ ಮರ್ಯಾದೆ. ಆದರೆ ನಮ್ಮ ಸಂಖ್ಯೆಯೇ ಕಮ್ಮಿಯಾಗಿದೆ. ಹಿಂದೆ ಮನೆ, ಕೈತೋಟ. ಶಾಲಾ ಕಟ್ಟಡಗಳಲ್ಲಿ ಗೂಡು ಕಟ್ಟಿಕೊಂಡು ಆರಾಮವಾಗಿದ್ದ ನಮ್ಮನ್ನು ಅಭಿವೃದ್ಧಿಯ ಹೆಸರಿನಲ್ಲಿ ನೆಲೆಯಿಲ್ಲದಂತೆ ಮಾಡಿದರು. ನಮ್ಮ ಪುಟ್ಟ ಗೂಡುಗಳಿಗೆ ನೆಲೆಯಿಲ್ಲದಂತೆ ಆಯಿತು. ಗುಂಪು ಗುಂಪಾಗಿ ಧೂಳು ಸ್ನಾನ ಮಾಡುತ್ತಿದ್ದ ನೆನಪುಗಳು ನಿನ್ನೆ ಮೊನ್ನೆಯಂತಿದೆ. ಈಗ ಎಲ್ಲೆಲ್ಲೂ ಸಿಮೆಂಟ್, ಚೆಂದಕೆ ಬೆಳೆಸಿದ ಹುಲ್ಲುಹಾಸು. ರೆಕ್ಕೆ ಕತ್ತರಿಸಿದಂತಾಗುತ್ತಿದೆ.
ಜೀರೋ ವೇಸ್ಟೇಜ್ ಹೆಸರಿನಲ್ಲಿ ಆಹಾರ ಎಲ್ಲೂ ಪೋಲಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಅಂಗಡಿ ,ಮುಂಗಟ್ಟುಗಳ ಜಾಗವನ್ನು ಮಾಲುಗಳು ಆಕ್ರಮಿಸಿಕೊಂಡಿವೆ. ಏರ್ ಕಂಡೀಷನರ್ ಗಳ ವ್ಯವಸ್ಥೆಗಳಿಂದಾಗಿ ಕಿಟಕಿಗಳೇ ಇಲ್ಲದ ಕಟ್ಟಡಗಳು ನಮ್ಮ ಪ್ರವೇಶವನ್ನು ನಿರ್ಬಂಧಿಸಿವೆ. ಊರಿಡೀ ನಿರ್ಬಂಧವೇ ಇಲ್ಲದೆ ತಿರುಗುತ್ತಿದ್ದಾಗ ನಮ್ಮ ಸಂಖ್ಯೆಯೂ ಹೇರಳವಾಗಿತ್ತು. ಆದರೆ ಈಗ ನಗರ ಸುಂದರೀಕರಣದ ನೆಪದಲ್ಲಿ ನಮ್ಮ ಸೂರಿಗೆ ಕತ್ತರಿ ಬಿದ್ದಿದೆ. ಜನರ ಆಹಾರ ಪದ್ಧತಿ, ಜೀವನ ಕ್ರಮ ಎಲ್ಲವೂ ಬದಲಾಗಿದೆ. ಗೊತ್ತಿದ್ದೊ ಗೊತ್ತಿಲ್ಲದೆಯೋ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಹ್ಯಾಗೋ, ಏಕೋ ನಮ್ಮ ಸಂಖ್ಯೆಯೂ ದಿನದಿಂದ ದಿನಕ್ಕೆ ಕಮ್ಮಿಯಾಗುತ್ತಿರುವುದರಿಂದ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಮಕ್ಕಳೆ.
ಮಹಮದ್ ದಿಲ್ವಾರ್ ಎಂಬ ನಾಸಿಕ್ ಮೂಲದ ವ್ಯಕ್ತಿ ನಮ್ಮ ಭಾರತದಲ್ಲಿ ಮೊದಲ ಬಾರಿಗೆ ಗುಬ್ಬಚ್ಚಿಗಳ ಅಳಿವಿನ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಆರಂಭಿಸಿದರು. ಆ ಸಂಬಂಧ ಮಾರ್ಚ್ 20 ರಂದು ‘ ಗುಬ್ಬಚ್ಚಿ ದಿನ’ ವೆಂದು ಆಚರಿಸಲು ನಿರ್ಧರಿಸಲಾಯಿತು. ಹಾಗಾಗಿ ಇಂದು ನನಗೆ ಯಥೇಚ್ಛವಾಗಿ ಆಹಾರ ದೊರೆಯಿತು. ಇಂದು ಆನಂದಿಸಿ ಮಕ್ಕಳೇ . ಗುಬ್ಬಚ್ಚಿ ದಿನವನ್ನು ಸವಿಯೋಣ.
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel