ಗ್ರಾಮೀಣ ಭಾಗದಲ್ಲಿ ಬೇಸಗೆಯಲ್ಲಿ ಪವರ್ ಕಟ್, ಮಳೆಗಾಲದಲ್ಲೂ ಪವರ್ ಕಟ್..!. ಬೇಸಗೆಯಲ್ಲಿ ಎಲ್ಲಾ ಕಡೆ ಇರುವಂತೆಯೇ ವಿದ್ಯುತ್ ಕಡಿತ ಇದ್ದೇ ಇರುತ್ತದೆ. ಮಳೆಗಾಲದಲ್ಲಿ ಬೇರೆಯದೇ ಸಮಸ್ಯೆ. ಕಾಡಿನ ಒಳಗೆ, ಗುಡ್ಡ, ತೋಟದ ಒಳಗೆ ವಿದ್ಯುತ್ ತಂತಿ ಹಾದುಹೋಗುವ ಕಾರಣ ಸಣ್ಣ ಗಾಳಿಗೆ ಮರದ ಗೆಲ್ಲು ಬೀಳುವುದು, ತಾಗುವುದು ಆಗಿ ಟ್ರಿಪ್ ಆಗುತ್ತಲೇ ಇರುತ್ತದೆ. ಮೆಸ್ಕಾಂ ಸಿಬಂದಿಗಳು ನಿರಂತರ ಶ್ರಮ ಪಡುತ್ತಾರೆ. ಹಾಗಿದ್ದರೂ ರಾತ್ರಿ ವೇಳೆ ಯಾವುದೇ ಕೆಲಸ ಮಾಡಲು ಕಷ್ಟ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಭಾಗದ ಮನೆಗೆ ಬೆಳಗಾಗುವುದು ಕಿರು ಜಲವಿದ್ಯುತ್..! , ಈ ಕಡೆಗೆ ನಮ್ಮ ಇಂದಿನ ಬೆಳಕು…
ಸುಳ್ಯ: ಕೆಲವು ವರ್ಷಗಳ ಹಿಂದೆ ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಇರಲಿಲ್ಲ. ಕಾಡಿನ ಮೂಲಕ ವಿದ್ಯುತ್ ತಂತಿ ಹಾದುಹೋಗಬೇಕಾಗಿರುವ ಕಾರಣದಿಂದ ಸಮಸ್ಯೆ ಇತ್ತು. ಹೀಗಾಗಿ ಈ ಸಂದರ್ಭ ಇಲ್ಲಿನ ಹಲವು ಮನೆಗಳ ನೆರವಿಗೆ ಬಂದದ್ದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ. ಯೋಜನೆಯ ಮೂಲಕ ಕಿರು ಜಲವಿದ್ಯುತ್ ಘಟಕ ಅಳವಡಿಸಿ ನೀರಿನ ಮೂಲಕ ವಿದ್ಯುತ್ ಉತ್ಪಾದಿಸಿ ಮನೆ ಬೆಳಗಿಸಿದರು. ಇಂದು ವಿದ್ಯುತ್ ಸಂಪರ್ಕ ಆದರೂ ಹಲವು ಮನೆಗಳು ಇದೇ ವಿದ್ಯುತ್ ಬಳಕೆ ಮಾಡುತ್ತಿದ್ದಾರೆ.
ಮಡಪ್ಪಾಡಿ ಗ್ರಾಮದ ಪಣೆಯಾಲ ಸೀತಾರಾಮ ಅವರ ಪುತ್ರ ಭರತ್ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯ. ಕೆಲವು ವರ್ಷಗಳಿಂದ ಸಂಘದಲ್ಲಿ ಕೆಲಸ ಮಾಡುತ್ತಾರೆ. ಮನೆಗೆ ವಿದ್ಯುತ್ ಯೋಜನೆಗಾಗಿ ಕಿರುಜಲವಿದ್ಯುತ್ ಘಟಕವನ್ನು ಗ್ರಾಮಾಭಿವೃದ್ಧಿ ಯೋಜನೆ ಪರಿಚಯ ಮಾಡಿದಾಗ ತಾನೂ ಅದನ್ನು ಹಾಕಿಸಿಕೊಂಡರು. 5 ಸಾವಿರ ರೂಪಾಯಿ ವೆಚ್ಚದ ಕಿರು ಘಟಕ ಅದು. ಈ ಘಟಕದಲ್ಲಿ 6 ಸಿ ಎಫ್ ಎಲ್ ಬಲ್ಬ್ ಉರಿಯುತ್ತದೆ. ಆದರೆ ಭರತ್ ಅವರು 15 ಸಾವಿರ ರೂಪಾಯಿ ಸಾಲ ಪಡೆದು ಬ್ಯಾಟರಿ ಅಳವಡಿಕೆ ಮಾಡಿ ಅದನ್ನು ಚಾರ್ಜ್ ಮಾಡಿಕೊಂಡು ಇಡೀ ದಿನ ಮನೆ ಬೆಳಗುವಂತೆ ಮಾಡಿದರು. ಇದಕ್ಕೆ 3 ಸಾವಿರ ರೂಪಾಯಿ ಅಂದು ಸಹಾಯಧನವೂ ದೊರೆತಿದೆ.
ಈ ಯಂತ್ರಕ್ಕೆ ಒಂದು ಇಂಚಿನಷ್ಟು ನೀರು ಸರಾಗವಾಗ ಬರಬೇಕು. ಗುಡ್ಡದಿಂದ ಬರುವ ನೀರುನ್ನು ಪೈಪ್ ಮೂಲಕ ಈ ಕಿರು ಜಲವಿದ್ಯುತ್ ಘಟಕಕ್ಕೆ ವೇಗವಾಗಿ ಬೀಳುವಂತೆ ಮಾಡಿದಾಗ ಘಟಕ ತಿರುತ್ತದೆ, ವಿದ್ಯುತ್ ಹರಿಯುತ್ತದೆ. ಮನೆ ಬೆಳಗುತ್ತದೆ. 10 ವರ್ಷಗಳಿಂದ ಈ ಕಿರುಜಲವಿದ್ಯುತ್ ಘಟಕ ಚಾಲೂ ಆಗುತ್ತಿದೆ, ಯಾವುದೇ ಸಮಸ್ಯೆ ಆಗಿಲ್ಲ ಎನ್ನುತ್ತಾರೆ ಭರತ್. ಮನೆಯ ವಿದ್ಯುತ್ ಬಿಲ್ ಶೇ.50 ರಷ್ಟು ಕಡಿಮೆಯಾಗಿದೆ ಎನ್ನುತ್ತಾರೆ ಅವರು. ಮಳೆಗಾಲ ಸುಮಾರು 5 ತಿಂಗಳು ಹಗಲು ರಾತ್ರಿ ವಿದ್ಯುತ್ ಬಂದರೆ ಬೇಸಗೆಯಲ್ಲಿ ಮಾತ್ರಾ ಕಷ್ಟವಾಗುತ್ತದೆ. ಆಗ ವಿದ್ಯುತ್ ಬಳಕೆ ಮಾಡುತ್ತೇವೆ ಎನ್ನುತ್ತಾರೆ.
Advertisementಮಡಪ್ಪಾಡಿಯ ವಿವಿಧ ಪ್ರದೇಶಗಳಲ್ಲಿ ಇಂತಹ ಕಿರುಜಲ ವಿದ್ಯುತ್ ಘಟಕಗಳು ಇವೆ. ಕೆಲವು ಕಡೆ ನೀರಿನ ಲಭ್ಯತೆ ಹೆಚ್ಚಿದ್ದ ಕಡೆಗಳಲ್ಲಿ ದೊಡ್ಡ ಕಿರುಜಲವಿದ್ಯುತ್ ಅಳವಡಿಕೆ ಮಾಡಲಾಗಿದೆ, ಅಲ್ಲಿ ಟಿವಿಯಿಂದ ತೊಡಗಿ ಮಿಕ್ಸಿ, ಗ್ರೈಂಡರ್ ಕೂಡಾ ಚಾಲೂ ಮಾಡುತ್ತಾರೆ. ಗ್ರಾಮೀಣ ಭಾಗದ ಜನರಿಗೆ ಇದು ಉಪಯುಕ್ತವಾಗಿದೆ. ವಿದ್ಯುತ್ ಉಳಿತಾಯವೂ ಆಗಿದೆ. – ಪ್ರೇಮಾ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾಪ್ರತಿನಿಧಿ, ಮಡಪ್ಪಾಡಿ