ಸವಣೂರು : ನಾಟಿಕೋಳಿಗೆ ವೈರಸ್ ಬರ್ತಾ ಇದೆ. ಇದ್ದಕ್ಕಿದ್ದಂತೆ ಸಾಯ್ತಾ ಇದೆ. ಹೀಗಾಗಿ ಸಾಕಾಣಿಕೆದಾರರೇ ಇರಲಿ ಎಚ್ಚರ. ತಕ್ಷಣವೇ ಚಿಕಿತ್ಸೆ ಕಡೆಗೆ ಗಮನ ಬೇಕಿದೆ.
ನಾಟಿಕೋಳಿ ಸಾಕಾಣೆಗೆ ವಿಶೇಷವಾಗಿ ಕರಾವಳಿ ಭಾಗಗಳು ಹೆಸರುವಾಸಿ.ಇಲ್ಲಿನ ನಾಟಿಕೋಳಿಗಳಿಗೆ ಬೇಡಿಕೆ ಹೆಚ್ಚು. ಆದರೆ ಈಗ ನಾಟಿಕೋಳಿಗಳಿಗೆ ವೈರಸ್ ಕಾಯಿಲೆಯಿಂದಾಗಿ ಹಲವೆಡೆ ನಾಟಿಕೋಳಿಗಳು ಸಾಯತ್ತಿದ್ದು, ಸಾಕಾಣೆದಾರರು ಆತಂಕ ವ್ಯಕ್ತಪಡಿಸಿದ್ದಾರೆ. ಒಂದು ಕೋಳಿಗೆ ಕಾಯಿಲೆ ಬಂದರೆ ಔಷದಿ ನೀಡಿದರೂ ಎಲ್ಲಾ ಕೋಳಿಗಳೂ ಸಾಯುತ್ತವೆ. ಹೀಗಾಗಿ ಸಾಕಾಣೆದಾರರು ಆತಂಕಿತರಾಗಿದ್ದಾರೆ.
ಕರಾವಳಿ ಭಾಗಗಳಲ್ಲಿ ಹೆಚ್ಚಾಗಿ ಎಲ್ಲಾ ಮನೆಗಳಲ್ಲೂ ನಾಟಿಕೋಳಿಗಳನ್ನು ಸಾಕುತ್ತಾರೆ.ನಾಟಿ ಕೋಳಿಗಳನ್ನು ಫಾರಂ ಹೊರತಾಗಿಯೂ ಪ್ರತಿಯೊಂದು ಮನೆಯಲ್ಲೂ ಸಾಕುತ್ತಾರೆ. ಮನೆಯೊಂದರಲ್ಲಿ ಕನಿಷ್ಟ 30ರಿಂದ 40ರತನಕ ಕೋಳಿಗಳು ಇದ್ದೇ ಇರುತ್ತವೆ.ಈ ಕೋಳಿಗಳು ಈಗ ಕಾಯಿಲೆಯಿಂದ ಸಾಯುತ್ತಿದ್ದು, ಇದಕ್ಕೆ ಪರಿಹಾರ ಏನೆಂಬುದು ತೋಚುತಿಲ್ಲ.ರೋಗದ ಲಕ್ಷಣ ಕಂಡು ಬಂದ ಕೆಲದಿನದಲ್ಲೇ ಕೋಳಿಗಳು ಸಾಯುತ್ತವೆ. ಈ ರೋಗ ಪುತ್ತೂರು,ಸುಳ್ಯ,ಕಡಬ ತಾಲೂಕಿನ ವಿವಿದೆಡೆಗಳಲ್ಲಿ ವ್ಯಾಪಿಸಿದೆ.
ಈ ರೋಗ ರಾಣಿಕೆಟ್ ಎನ್ನುವ ವೈರಸ್ ನಿಂದ ಬರುತ್ತಿದ್ದು, ಈ ರೋಗಬಂದಾಗ ಕೋಳಿ ಕೊಕ್ಕರೆ ರೀತಿಯಲ್ಲಿ ನಿಲ್ಲುವುದರಿಂದ ಇದಕ್ಕೆ ಕೊಕ್ಕರೆ ರೋಗ ಎಂದೂ ಕರೆಯುತ್ತಾರೆ ಎಂದು ಪಶುವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರೋಗಕ್ಕೆ ತುತ್ತಾದ ಕೋಳಿಯ ಒಂದು ಚಿಕ್ಕ ಗರಿಯಿಂದಲೂ ವೈರಸ್ ಹರಡುತ್ತದೆ. ಸತ್ತ ಕೋಳಿಯನ್ನು ಸೂಕ್ತವಾಗಿ ವಿಲೇ ಮಾಡದಿದ್ದರೆ ಈ ರೋಗ ವ್ಯಾಪಕವಾಗುತ್ತದೆ.
ರೋಗ ಲಕ್ಷಣಗಳು
ಈ ರೋಗಕ್ಕೆ ತುತ್ತಾದ ಕೋಳಿ ಕೊಕ್ಕರೆಯ ರೀತಿ ಕೂಗಾಡುತ್ತದೆ. ತತ್ ಕ್ಷಣದಿಂದ ಆಹಾರ ಸೇವನೆ ನಿಲ್ಲಿಸಿ ಹೆಚ್ಚಾಗಿ ನೀರನ್ನೇ ಸೇವಿಸುತ್ತದೆ. ತೂಕ ಇಳಿದು ನಿತ್ರಾಣಕ್ಕೊಳಗಾಗುತ್ತದೆ. ಬಿಳಿ ಬಣ್ಣದ ಮಲ ವಿಸರ್ಜಿಸುತ್ತದೆ. ಆಹಾರ ಸೇವನೆ ಬಿಟ್ಟು ನಿಶಕ್ತಿಯಿಂದ ಕೋಳಿ ನಡೆಯಲಾಗದೆ ರೆಕ್ಕೆ , ಕಾಲುಗಳನ್ನು ಅಗಲಿಸಿ ಕೊಕ್ಕರೆಯಂತೆ ಮುದುಡಿಕೊಳ್ಳುತ್ತದೆ. ಕೋಳಿಗಳ ತಲೆಯಲ್ಲಿ ಕಜ್ಜಿಯಾಗಿ ಬಾಯಲ್ಲಿ ರಕ್ತ ಬರುವ ಸಾಧ್ಯತೆಯೂ ಇರುತ್ತದೆ. ರೋಗಕ್ಕೆ ತುತ್ತಾದ ಕೋಳಿ ಒಂದೇ ವಾರದಲ್ಲಿ ಸಾಯುತ್ತದೆ.
ಹೇಗೆ ನಿಯಂತ್ರಣ ಮಾಡಬಹುದು :
ರೋಗ ಬಾರದಂತೆ ಮುಂಜಾಗ್ರತೆ ವಹಿಸಿಕೊಳ್ಳುವುದು ಉತ್ತಮ. ಪ್ರತೀ ಆರು ತಿಂಗಳಿಗೊಮ್ಮೆ ಕೋಳಿಗಳಿಗೆ ರೋಗ ನಿರೋಧಕ ಚುಚ್ಚು ಮದ್ದನ್ನು ನೀಡುವುದರಿಂದ ರೋಗ ಬಾರದಂತೆ ತಡೆಗಟ್ಟಬಹುದು. ಒಂದು ಕೋಳಿಯಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಂಡರೆ ತತ್‍ಕ್ಷಣ ಆ ಕೋಳಿಯನ್ನು ಪ್ರತ್ಯೇಕಿಸಿ ಉಳಿದ ಕೋಳಿಗಳಿಗೆ ರೋಗ ನಿರೋಧಕ ಚುಚ್ಚುಮದ್ದು ನೀಡಬೇಕು.