ಮಂಗಳೂರಿನಲ್ಲಿ ನೀರಿಲ್ಲದೆ ಕಾಲೇಜುಗಳಿಗೆ ರಜೆ ಕೊಟ್ಟರು…! , ಇದು ಅಚ್ಚರಿ ಏಕೆಂದರೆ, ಮಲೆನಾಡಿನ ಅದರಲ್ಲೂ ಕರಾವಳಿ ತೀರದ, ಸಮುದ್ರದ ಹತ್ತಿರದ ಪ್ರದೇಶದಲ್ಲಿ ನೀರಿಲ್ಲದೆ ಕಾಲೇಜು ಮುಂದುವರಿಸುವುದು ಹಾಗೂ ಕಾಲೇಜಿಗೆ ರಜೆ ನೀಡುವುದು ಎನ್ನುವುದೇ ಅಚ್ಚರಿ ಹಾಗೂ ಚಿಂತನೆಗೆ ದೂಡುವ ಸಂಗತಿ.
ಮಂಗಳೂರಿನ ಬಹುತೇಕ ಎಲ್ಲಾ ಪಿಯು ಕಾಲೇಜುಗಳ ಆರಂಭ ಒಂದು ವಾರ ವಿಸ್ತರಣೆಗೊಂಡಿದೆ. ಕಳೆದ ಕೆಲವು ದಿನಗಳಿಂದ ಮಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇತ್ತು. ರೇಶನ್ ಮೂಲಕ ನೀರು ಸರಬರಾಜು ಮಾಡುತ್ತಿದ್ದರು. ಹೀಗಾಗಿ ಕಾಲೇಜುಗಳೂ ಈ ಸಮಸ್ಯೆಯಿಂದ ಮುಕ್ತಿಹೊಂದಿರಲಿಲ್ಲ. ಅದಕ್ಕೂ ಹೆಚ್ಚಾಗಿ ಕೊಳವೆಬಾವಿ, ಬಾವಿಗಳಲ್ಲೂ ನೀರು ಆಳಕ್ಕೆ ಇಳಿದಿದಿತ್ತು. ಒಂದೊಮ್ಮೆ ಒಂದೇ ವಾರಕ್ಕೆ ಮಾತ್ರವೇ ನೀರು ಎಂದು ನಂಬಲಾಗಿತ್ತು. ಆದರೆ ಒಂದು ಸಣ್ಣ ಮಳೆ ಬಂದು ಕೊಂಚ ನೆಮ್ಮದಿಯಾಯ್ತು. ನೀರಿಲ್ಲದೆ ಇರುವುದು ಕುಡಿಯಲಷ್ಟೇ ಅಲ್ಲ ಹಾಸ್ಟೆಲ್ ಗಳಲ್ಲಿ ಯಥೇಚ್ಛ ನೀರು ಬೇಕು, ಪಿಜಿಗಳಲ್ಲಿ ನೀರಿಲ್ಲದೆ ಯಾವುದೂ ನಡೆಸಲು ಕಷ್ಟ. ಹೀಗಾಗಿ ವಿದ್ಯಾರ್ಥಿಗಳಿಗೆ ವಸತಿಯೇ ಇಲ್ಲದ ಸ್ಥಿತಿ ಇದೆ.
ನಿರೀಕ್ಷೆಯಂತೆ ಜೂನ್ ಮೊದಲೇ ಮಳೆ ಆರಂಭವಾಗಬೇಕಿತ್ತು. ಆದರೆ ಇನ್ನೂ ಮಳೆ ಆರಂಭವಾಗಿಲ್ಲ. ಹೀಗಾಗಿ ಬರುವ ವಾರವೂ ಕಾಲೇಜುಗಳಿಗೆ ರಜೆ ನೀಡುವುದೋ ಬೇಡವೋ ಎಂಬ ಗೊಂದಲ ಇನ್ನೂ ನಿವಾರಣೆಯಾಗಿಲ್ಲ. ಏಕೆಂದರೆ ರಜೆ ವಿಸ್ತರಣೆ ಹೆಚ್ಚಾದರೆ ಪಿಯು ಬೋರ್ಡ್ ನಿಗದಿತ ಸಮಯದಲ್ಲೇ ಪರೀಕ್ಷೆ ಮಾಡುತ್ತದೆ ದಾಖಲೆಗಳನ್ನು ನಿಗದಿತ ಸಮಯದಲ್ಲೇ ಕೇಳುತ್ತದೆ. ಹಾಗಾಗಿ ಕಾಲೇಜುನಲ್ಲಿ ವಿದ್ಯಾರ್ಥಿಗಳಿಗೆ ಪಾಠಗಳನ್ನು ಮುಗಿಸುವ ಹಾಗೂ ಫಲಿತಾಂಶದ ಕಡೆಗೆ ದೃಷ್ಠಿ ನೆಡುವ ಕೆಲಸ ಸಂಸ್ಥೆಗಳಿಂದ ನಡೆಯಬೇಕು. ನೀರಿಲ್ಲ ಎನ್ನುವುದು ಎಷ್ಟೆಲ್ಲಾ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದರೆ ವಿದ್ಯಾರ್ಥಿಗಳ ಭವಿಷ್ಯದ ಮೇಲೂ ಪರಿಣಾಮ ಬೀರುತ್ತಿದೆ.
ಪುತ್ತೂರು ಕೂಡ ಶೈಕ್ಷಣಿಕ ಕೇಂದ್ರ. ಇಲ್ಲಿನ ಕಾಲೇಜುಗಳು ರಜೆಯನ್ನು ಮುಂದೆ ಹಾಕಿಲ್ಲ. ಇದ್ದ ನೀರನ್ನೇ ಬಳಸಿಕೊಂಡು ವ್ಯವಸ್ಥೆ ಮಾಡಿದರೆ. ಕೆಲವು ಪಿ ಜಿ ಗಳಲ್ಲಿ ನೀರಿನ ಸಮಸ್ಯೆ ಇದೆ. ಅಲ್ಲೂ ಸರ್ಕಸ್ ಮಾಡುತ್ತಿದ್ದಾರೆ. ಮಕ್ಕಳು ಕೇಳಬೇಕಲ್ಲಾ ಕಡಿಮೆ ನೀರು ಬಳಸಲು ಎಂದು ಪಿ ಜಿ ನಡೆಸುವ ಮೋಹನ್ ರಾವ್ ಹೇಳುತ್ತಾರೆ.
ಸುಳ್ಯದಲ್ಲಿ ನೀರಿನ ಸಮಸ್ಯೆ ಅಷ್ಟೊಂದು ಕಾಡಿಲ್ಲ. ಹಾಸ್ಟೆಲ್, ಪಿಜಿಗಳಲ್ಲಿ ನೀರಿನ ಸಮಸ್ಯೆಯನ್ನು ನಿಭಾಯಿಸುತ್ತಿದೆ. ಬೆಳ್ತಂಗಡಿಯಲ್ಲೂ ನೀರಿನ ಕೊರತೆಯ ಕಾರಣದಿಂದ ಕಾಲೇಜು ಆರಂಭಕ್ಕೆ ಯಾವುದೇ ತೊಂದರೆ ಆಗಿಲ್ಲ.
ಮಂಗಳೂರಿನ ನೀರಿನ ಸಮಸ್ಯೆ ಬಗ್ಗೆ ಗೃಹಿಣಿ ಸಂಧ್ಯಾ ಹೇಳುತ್ತಾರೆ, ಈಗ ರೇಶನ್ ಮೂಲಕ ನೀರು. ಹೀಗೇ ಆದರೆ ಮುಂದೆ ಅದಕ್ಕೂ ಪರದಾಟ ಮಾಡಬೇಕಾಗಬಹುದು ಎನ್ನುತ್ತಾರೆ.
ಮಂಗಳೂರಿನಲ್ಲಿ ನೀರಿಲ್ಲ ಎನ್ನುವುದೇ ಬಹುದೊಡ್ಡ ಸಮಸ್ಯೆ ಹಾಗೂ ಅಚ್ಚರಿಯಾಗಿದೆ. ಶೈಕ್ಷಣಿಕ ಕಾರಣಕ್ಕಾಗಿ ನಾವು ಮಕ್ಕಳನ್ನು ಮಂಗಳೂರಿನಲ್ಲಿ ಕಾಲೇಜಿಗೆ ಸೇರಿಸುತ್ತೇವೆ. ಈಗ ನೀರಿಲ್ಲ ಎನ್ನುವ ಕಾರಣಕ್ಕೆ ಕಾಲೇಜಿಗೆ ರಜೆ ನೀಡಲಾಗುತ್ತದೆ ಎನ್ನುವುದು ದಿಗ್ಭ್ರಮೆಯಾಗುತ್ತದೆ ಏಕೆಂದರೆ ಅದು ಮಲೆನಾಡಿನ ತಪ್ಪಲು, ಕರಾವಳಿ. ಯಾಕೆ ಹೀಗೆ ಎನ್ನುವುದರ ಬಗ್ಗೆ ಗಮನಹರಿಸಲೇಬೇಕಿದೆ ಎನ್ನುತ್ತಾರೆ ಪೋಷಕ ಗಿರೀಶ್.
ಉಡುಪಿಯಲ್ಲೂ ನೀರಿನ ಸಮಸ್ಯೆ ಕಾಡುತ್ತಿದ್ದು ಸರಕಾರಿ ಶಾಲೆಗಳಿಗೆ ಮಧ್ಯಾಹ್ನ ನಂತರ ರಜೆ ಸಾರಲು ಚಿಂತನೆ ನಡೆಸಲಾಗುತ್ತಿದೆ.