ಆತ್ಮದ ಕಣ್ಣೀರು……

November 13, 2019
2:44 PM

ವಿಶ್ವ ಪರ್ಯಟನೆ ಮುಗಿಸಿ ಸೂರ್ಯ ತನ್ನ ಸ್ಥಾನವ ಸೇರುತ್ತಿರುವ ಹೊತ್ತು. ಬೆಳಕಿನಲಿ‌ ಹೊಳೆಯುತ್ತಿದ್ದ ಜಗವೆಲ್ಲವೂ ಕತ್ತಲೆಯ ಮಸುಕಿನಿಂದ ಆವರಿಸುತ್ತಿದೆ. ಹೌದು ! ನನ್ನ ಮನದಲ್ಲೂ ಈ ಕತ್ತಲು ಮೂಡಿದೆ.ನನ್ನ ಹೆತ್ತಬ್ಬೆ ಒಂಭತ್ತು ತಿಂಗಳು ಗರ್ಭದಲ್ಲಿ ಪೋಷಿಸಿ ಈ ಭುವಿಯನ್ನು ಪರಿಚಯಿಸುವಷ್ಟರವರೆಗೆ ಎಷ್ಟೊಂದು ಕನಸುಗಳನ್ನು ಕಂಡಿರಬಹುದು. ತನ್ನೊಡಲ ಆಸೆಗಳನ್ನು ಕನಸಿನ ಗುಚ್ಛದಲ್ಲಿ ಪೋಣಿಸಿರಬಹುದು.ಹುಟ್ಟಿದಾಗ ನನ್ನಮ್ಮ ಖುಷಿಯಿಂದ ಹಿಗ್ಗಿದರೆ ಉಳಿದವರೆಲ್ಲರೂ ನನ್ನೆಡೆಗೆ ಅಸಹನೆಯ ನೋಟವ ಬೀರಿದರು. ಬಹುಷಃ ಅದು ಅಸಹನೆಯಲ್ಲವೇನೋ , ಸುತ್ತಣ ಜಗದೊಳಗೆ ಅವಿತುಕೊಂಡಿರುವ ಆ ಕೆಲವು ವ್ಯಾಘ್ರ ಮೃಗಗಳಿಂದ ರಕ್ಷಿಸಿಕೊಳ್ಳುವ ಭಯದ ನೆರಳೊಂದು ಅವರನ್ನು ಕಾಡಿರಬೇಕು.

Advertisement
Advertisement
Advertisement

ಹೆತ್ತಾಕೆಗೆ ನನ್ನ ಮೊಗದಲ್ಲಿ ನಗುವನ್ನು ಕಾಣುವಾಸೆ ಅಪ್ಪನಿಗೆ ಆ ಕಿಲ ಕಿಲ ನಗುವನ್ನು ಮನದಲ್ಲಿ ತುಂಬಿಕೊಳ್ಳುವ ಆಸೆ.ಮೇಲಿಟ್ಟರೆ ಕಾಗೆ ಕಚ್ಚಬಹುದೆಂದು,ಕೆಳಗಿಟ್ಟರೆ ಇಲಿ ಹೆಗ್ಗಣಗಳು ಮುಟ್ಟಬಹುದೆಂದು ,ಅಂಗೈಯಲ್ಲಿಟ್ಟು ಕಾಪಾಡುತ್ತಿದ್ದರು.ಹೋದವರು,ಬಂದವರು ಸಿಕ್ಕವರು ಎಲ್ಲರೂ ಎತ್ತಿ ಮುದ್ದಾಡುವವರೇ.., ಕೆಲವೊಮ್ಮೆ ಆ ಮುದ್ದಾಟ ಕಿರಿಕಿರಿಯಾಗಿ ಅತ್ತು ಬಿಡುತ್ತಿದ್ದೆ. ಮರುಕ್ಷಣ ಅಮ್ಮ ಎತ್ತಿ ಸಂತೈಸುತ್ತಿದ್ದಳು. ಆ ಮುದ್ದಾಟದ ಸಹಜತೆ ಮತ್ತು ಅಸಹಜತೆಯ ಭಾವಗಳನ್ನು ಹೇಳಿಕೊಳ್ಳಲಾಗದ ಕಾಲವದು.

Advertisement

ಅಂಬೆಗಾಲಿಟ್ಟು ಅಪ್ಪನ ಕೈ ಹಿಡಿದು ನಡೆಯುತ್ತಿದ್ದ ದಿನಗಳುರುಳಿ ಓಡಾಟವ ಅರಿಯುವ ಹೊತ್ತದು.ಅಮ್ಮನ ತೋಳಿನಾಸರೆ ಬಿಟ್ಟು ಸ್ವಚ್ಛಂದವಾಗಿ ಹಾರಾಡುವ ಹೊತ್ತು. ಅದೇಕೋ ಕೇಳಿದ್ದನ್ನೆಲ್ಲಾ ಕಾಲಬುಡದಲ್ಲಿ ತಂದಿಡುತ್ತಿದ್ದ ಅಪ್ಪ ಇಂದೇಕೋ ಯೋಚಿಸುತ್ತಿರುವಂತೆ ಕಾಣುತ್ತಿದೆ. ಹೋದ ಬಂದ ಹೆಜ್ಜೆಗಳನ್ನೆಲ್ಲವನ್ನೂ ಅಮ್ಮ ಸೂಕ್ಷ್ಮ ವಾಗಿ ಗಮನಿಸುತ್ತಿದ್ದಾಳೆ.ಪ್ರತಿಯೊಂದಕ್ಕೂ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.ಯಾಕೆ ಈ ಬದಲಾವಣೆ..? ಇಷ್ಟು ದಿನ ನನ್ನ ಅರಮನೆಗೆ ನಾನೇ ಯುವರಾಣಿ ಎಂದು ಬೀಗುತ್ತಿದ್ದೆ.ಆದರೆ ಇಂದು ನನ್ನ ಅರಮನೆ ಚಿನ್ನದ ಪಂಜರದಂತೆ ಕಾಣುತ್ತಿದೆ. ಇದಕ್ಕೆ ಕಾರಣವಾದರೂ ಏನು? ನನ್ನನ್ನೇ  ನಾನು ಹಲವು ಬಾರಿ ಪ್ರಶ್ನಿಸಿಕೊಂಡೆ ,ಉತ್ತರ ಸಿಗಲಿಲ್ಲ.

ನಿಜ! ಅವರಾರೋ ಹೇಳಿದ್ದರು ” ಹದಿಹರೆಯದ ವಯಸ್ಸೆನ್ನುವುದು ಹುಚ್ಚು ಕುದುರೆಯ ಹಾಗೆ ಲಗಾಮು ಹಾಕಿ ಹಿಡಿದು ನಿಲ್ಲಿಸುವ ಸ್ಥೈರ್ಯ ನಮ್ಮಲ್ಲಿರಬೇಕು” ಎಂದು. ನನ್ನಲ್ಲೂ ಸ್ವಲ್ಪ ಮಟ್ಟಿನ ಅಹಂಕಾರವಿತ್ತು.ನನ್ನ ಮನಸ್ಸು ಎಂದೂ ನನ್ನ ಕೈ ಜಾರುವುದಿಲ್ಲವೆಂದು. ನನ್ನಮ್ಮ ನಿಶ್ಕಲ್ಮಶ ಮನಸ್ಸಿನಿಂದ ಪ್ರೀತಿಸುವುದನ್ನು ಹೇಳಿ ಕೊಟ್ಟಿದ್ದಳು.ಅಂತೆಯೇ ಈ ಪ್ರಪಂಚದ ಕುರಿತಾಗಿ ಎಚ್ಚರಿಕೆಯ ನುಡಿಗಳನ್ನು ನುಡಿದಿದ್ದಳು.ಎಲ್ಲವೂ ಮನದಲ್ಲಿ ಅಚ್ಚೊತ್ತಿ ಕುಳಿತಿರುವಾಗ ಯಾವ ತಪ್ಪು ನನ್ನಿಂದಾಗದು ಎಂಬ ದೃಢ ವಿಶ್ವಾಸ ನನಗೆ ನನ್ನ ಮೇಲೆ.

Advertisement

ಆದರೆ ಈಗೇನಾಯಿತು..? ಅವನು ಯಾಕೆ ಹೀಗೆ ನನ್ನ ಮನಸ್ಸನ್ನು‌ ಕಾಡುತ್ತಿದ್ದಾನೆ. ಅವನ ಮಾತುಗಳು ತುಂಟ ನಗು, ಜೋಪಾನ ಮಾಡುವ ರೀತಿ ಯಾವುದೋ ಹೊಸದಾದ ಪ್ರಪಂಚದ ಪರಿಚಯವನ್ನೀಯುತ್ತಿದ್ದಾನೆ .ಅಪ್ಪ ಅಮ್ಮ ಈಗ ಮೊದಲಿನಂತಿಲ್ಲ. ಅವರಿಗೆ ನನ್ನ ಮೇಲೆ ಪ್ರೀತಿಯೇ ಇಲ್ಲ .ಇವನಾದರೋ ನನ್ನೆಲ್ಲಾ ಮನದ ಭಾವಗಳಿಗೆ ಸ್ಪಂದಿಸುತ್ತಿದ್ದಾನೆ. ಇವನಿಗಾದರೂ ನನ್ನ ಮನಸ್ಸು ಅರಿವಾಗುತ್ತಿದೆಯಲ್ಲಾ… ಅಪ್ಪ ಅಮ್ಮನ ಕಣ್ತಪ್ಪಿಸಿ ಸಾಗುತ್ತಿತ್ತು ಒಡನಾಟ ಮಾತೃ ವಾತ್ಸಲ್ಯಕ್ಕಿಂತ ಪ್ರೀತಿಯ ಒಡನಾಟ ಹೆಚ್ಚೆನಿಸಿತು.ಎಲ್ಲವನ್ನು ದಿಕ್ಕರಿಸಿ ಹೊರಟು ನಿಂತೆ,ಅವನ ಹಿಂದೆ. ಮನಸ್ಸನ್ನು ಅರ್ಥೈಸಿಕೊಳ್ಳುವ ಹೃದಯವೊಂದು ಬೇಕಿತ್ತು,ಅದು ಅವನಲ್ಲಿದೆ.ಮನಕೆ ಬೇಕಿದ್ದಿದು ನಿಶ್ಕಲ್ಮಶ ಪ್ರೇಮವೊಂದೇ , ಅದು ಅವನು ಕೊಡುತ್ತಾನೆಂಬ ನಂಬಿಕೆ.ಅವನ ಹೆಜ್ಜೆಯ ಹಿಂದೆಯೇ ಹೆಜ್ಜೆಯಿಟ್ಟು ನಡೆದೆ.

ಪ್ರೀತಿಯ ಅಮಲಿನಲ್ಲಿ ಮೋಹದ ಜಾಲದ ಅರಿವಾದರೂ ಹೇಗಾಗಬೇಕು? ಅವನಿಗಿದ್ದಿದು ಪ್ರೀತಿಯಲ್ಲ.ಬರಿಯ ಮೋಹ. ಅವನನ್ನು ಆಕರ್ಷಿಸಿದ್ದು ನನ್ನ ಮನದ ಭಾವವಲ್ಲ.ನನ್ನ ದೇಹದ ಸೌಂದರ್ಯ. ಇದು ಅರಿವಾಗು ಹೊತ್ತಿಗೆ ನಾನು ಎಲ್ಲವನ್ನೂ ಕಳೆದುಕೊಂಡವಳಾಗಿದ್ದೆ…!

Advertisement

ಪ್ರೀತಿಯಲ್ಲಿ ನಂಬಿಕೆಯಿಟ್ಟು ಅವನ ಹೆಜ್ಜೆಯ ಮೇಲೆ ಹೆಜ್ಜೆಯಿನ್ನಿಟ್ಟೆ. ವನವಾಸಕ್ಕೆ ಹೊರಟ ಶ್ರೀರಾಮನ ಹಿಂದೆ ಸೀತಾಮಾತೆ ಹೊರಟ ಹಾಗೆ ಆದರೆ ಅವನು ಶ್ರೀರಾಮ ಚಂದ್ರನಲ್ಲ. ನಾನು ಸೀತೆಯಾಗಿ ಉಳಿದಿಲ್ಲ. ಕೈ ಹಿಡಿದು ಯಾವುದೋ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಇದೇ ನಮ್ಮ ಪ್ರಪಂಚವೆಂದ.ಅರಿವಾಗಲಿಲ್ಲ. ಅವನ ಕಣ್ಣಲ್ಲಿ ಕಣ್ಣಿಟ್ಟು ಕೇಳುವ ಹೊತ್ತಿಗೆ ಮೃಗದಂತೆ ಮೈಮೇಲರಗಿದ. ಕಿರುಚಿಕೊಂಡೆ ಹಸಿದ ಮೃಗಕ್ಕೆ ನನ್ನ ಕೂಗು ಕೇಳಿಸಲೇ ಇಲ್ಲ. ಅಲ್ಲಾರೂ ಕಾಣಿಸಲೂ ಇಲ್ಲ. ನನ್ನ ಮನಸ್ಸು ಕೂಗಿ ಹೇಳಿತು ” ನನ್ನ ಕಣ್ಣುಗಳನ್ನೊಮ್ಮೆ‌ ನೋಡು ನಿನ್ನ ತಾಯಿಯ ಮಮತೆ ಕಾಣಿಸುವುದು.ಒಳಗಣ್ಣು ತೆರೆದು ನೋಡು, ನಿನ್ನ ಅಸಹಾಯಕ ತಂಗಿಯ ಮೊಗವಾದರೂ ಕಾಣಬಹುದು “ಎಂದು. ಅವನಿಗೆ ಇದಾವುದೂ ಕೇಳಲೇ ಇಲ್ಲ. ಒಂದೇ ಸಮನೆ ಮೃಗದಂತೆ ಮೇಲೆರಗುತ್ತಿದ್ದ. ಆ‌ ಕ್ಷಣ ಇವನಿಗಿಂತ ಹುಲಿ ಸಿಂಹದ ಬಾಯಿಗೆ ಸಿಲುಕಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು ಎನಿಸುತ್ತಿತ್ತು.

ಅವನೆದ್ದು ಕುಳಿತ! ನಾನು ಅಸಹಾಯಕಳಾಗಿದ್ದೆ. ಯಾರೋಂದಿಗೋ ಫೋನ್ ನಲ್ಲಿ ಮಾತನಾಡಲಾರಂಬಿಸಿದ್ದ.ನಾನಂದುಕೊಂಡೆ ಬಹುಶಃ ತಪ್ಪಿನ ಅರಿವಾಗಿರಬೇಕು. ಈಗಲಾದರೂ ನನ್ನನ್ನು ಅವನ ಮನೆಗೆ ಕರೆದುಕೊಂಡು ಹೋಗಬಹುದೆಂದುಕೊಂಡೆ.ಆದರೆ ಹಾಗಾಗಲಿಲ್ಲ… ನಾವಿದ್ದಲ್ಲಿಗೆ ನಾಲ್ಕಾರು ಜನ ಬರುತ್ತಿರುವುದು ಕಾಣಿಸಿತು.ಬಹುಶಃ ಆ ದೇವರಿಗಾದರೂ ನನ್ನ ಕೂಗು ಕೇಳಿಸಿತ್ತಲ್ಲಾ ಎಂದುಕೊಂಡೆ.ಅಣ್ಣಾ….. ಎಂದು ಕಿರುಚಿದೆ.ನನ್ನನು ಕಾಪಾಡಿ ಎಂದು ಗೋಗರೆದೆ.ಅವರು ಒಬ್ಬರನ್ನೊಬ್ಬರು ನೋಡಿ‌ ನಗಲಾರಂಭಿಸಿದರು. ಯಾಕೆ ಹೀಗೆ..? ಎಂದು ಆಲೋಚಿಸುವಷ್ಟರಲ್ಲಿ ಅವರು ನನ್ನ ಮೇಲೆರಗಿದರು.ಹಸಿದ ಮೃಗಗಳಂತೆ! ಅವರನ್ನು ಹೆತ್ತಿದ್ದು ಹೆಣ್ಣಲ್ಲವಿರಬೇಕು. ಅಕ್ಕ ತಂಗಿಯರು ಇಲ್ಲದವರಿರಬೇಕು.ಒಂದು ಹೆಣ್ಣಿನ ಅಂತರಂಗವ ಅರಿತವರಾಗಿದ್ದರೆ ಇಂತಹ ನೀಚ ವರ್ತನೆ ತೋರುತ್ತಿರಲಿಲ್ಲ.

Advertisement

ಅವರ ಕಾಮದ ತೃಷೆ ಇಳಿದಿರಬೇಕು.ಅವರಾಸೆಗೆ ಬಲಿಯಾದವಳ ಮೇಲೆ ಕಿಂಚಿತ್ತೂ ಕರುಣೆ ತೋರದೆ ಅಲ್ಲಿಯ ಕಾಡು ಮೃಗಗಳಿಗೆ ಆಹಾರವಾಗಲೆಂದು ಬಿಟ್ಟು ಹೋದರು. ಎದ್ದೇಳಲು ಆಗದ ಸ್ಥಿತಿ;ಆದರೂ ಎದ್ದು ಕುಳಿತೆ. ನನ್ನೊಂದಿಗೆ ಆಡಿ ಬೆಳೆದ ಸ್ನೇಹಿತೆಯರಿಗೆ , ನನ್ನೆಲ್ಲಾ ಹಿರಿಕಿರಿಯ ಸಹೋದರಿಯರಿಗೆ ಎಚ್ಚರಿಕೆಯ ನುಡಿಯೊಂದನ್ನು ಹೇಳಬೇಕಾಗಿತ್ತು.” ಹಸಿವನ್ನು ನೀಗಿಸಿಕೊಳ್ಳಲು ಹೊಂಚು ಹಾಕುತ್ತಿರುವ ನರಪಿಶಾಚಿಗಳು ನಿಮ್ಮ ಸುತ್ತಲಿವೆ ಎಚ್ಚರ!!!. “ಎಂದು.

ನನ್ನ ಮಾತುಗಳನ್ನು ಕೇಳಿಸಿಕೊಳ್ಳುವವರು ಯಾರು..? ಸಮಾಜದ ಎದುರಲ್ಲಿ ನಾನು ದಾರಿ ತಪ್ಪಿದವಳು.ನನ್ನನ್ನು ಸಮಾಜದೊಳಕ್ಕೆ ಸೇರಿಸಿಕೊಳ್ಳುವರೆ…? ಇಲ್ಲ! ನ್ಯಾಯಕ್ಕಾಗಿ ನ್ಯಾಯ ದೇವತೆಯ ಮುಂದೆ ನಿಲ್ಲಲೇ…? ಅಲ್ಲಿ ನನಗೆ ನ್ಯಾಯ ಕೊಡಿಸುವರಾದರೂ ಯಾರು..? ಇಲ್ಲ; ಕನಸುಗಳು ನುಚ್ಚು ನೂರಾದ ಮೇಲೆ ಬದುಕಿದ್ದಾದರೂ ಏನು ಪ್ರಯೋಜನ. ಹೆತ್ತವರ ಮುಂದೆ ನಿಂತರೆ ನನ್ನ ಕಂಡು ಅವರು ಬದುಕಿ ಉಳಿಯುವರೇ..?ಇಲ್ಲ. ಈ ಸಮಾಜ ಅವರನ್ನು ಬದುಕಿದ್ದಷ್ಟೂ ದಿನ ಚುಚ್ಚಿ ಚುಚ್ಚಿ ಸಾಯಿಸಬಹುದು. ನನ್ನ ತಪ್ಪಿಗೆ ಕ್ಷಮೆಯೇ ಇಲ್ಲವೆಂದು ಕತ್ತಿಗೆ ಕುಣಿಕೆ ಬಿಗಿದೆ.

Advertisement

ನ್ಯಾಯಕ್ಕಾಗಿ ಹೋರಾಡಬೇಕೆಂದುಕೊಂಡರೂ ಹೋರಾಡಲಾಗಲಿಲ್ಲ. ನನ್ನ ಸಾವಾದರೂ ಪಾಠವಾಗಬಹುದೆಂದುಕೊಂಡೆ.ನನ್ನ ಸಹೋದರಿಯರಿಗೆ ಎಚ್ಚರಿಕೆಯ ಕರೆಘಂಟೆಯಾಗಬಹುದು, ಒಂದೆರಡು ಮೃಗೀಯ ಮನಸ್ಸುಗಳು ಕರಗಬಹುದು,ನಾನು ಹುಟ್ಟಿದ ಮಣ್ಣಿನಲ್ಲಿ ನನ್ನ ಸಾವಿಗೆ ನ್ಯಾಯ ಸಿಗಬಹುದು.ಅಪರಾಧಿಗಳು ಶಿಕ್ಷೆ ಅನುಭವಿಸಬಹುದು ಎಂದು ಭಾವಿಸಿದ್ದೆ.

ಎಲ್ಲವೂ ನನ್ನ ಭ್ರಮೆ.ನನ್ನ ಸಾವಿನ ಕಾರಣಗಳು ನಿತ್ಯ ಬರುವ ಧಾರಾವಾಹಿಗಳಂತೆ ದಿನಕ್ಕೊಂದು ನಾಟಕೀಯ ತಿರುವುಗಳನ್ನು ಪಡೆದುಕೊಂಡಿತ್ತು.ಕೊನೆಗೆ ನನ್ನ ಸಾವಿನ ಹೊಣೆಯನ್ನು ನನ್ನ ಮೇಲೆಯೇ ಹಾಕಿ ಸುಮ್ಮನಾಗಿ ಬಿಟ್ಟರು. ನನ್ನ ಬೆನ್ನ ಹಿಂದೆಯೇ ಅದೆಷ್ಟೋ ಸಹೋದರಿಯರು ಇಲ್ಲಿಗೆ ಬಂದು ಬಿಟ್ಟರು. ಅದೆಷ್ಟೋ ನರರಾಕ್ಷಸರು ನ್ಯಾಯ ದೇವತೆಯ ಕಣ್ಣು ಮುಚ್ಚಿ ತಮ್ಮ ಅಟ್ಟ ಹಾಸವ ಮೆರೆದರು.

Advertisement

ಇಂದೂ ನನ್ನ ಆತ್ಮ ಕಣ್ಣೀರಿಡುತ್ತಿದೆ.ನಾನು‌ಮಾಡಿದ ತಪ್ಪಿಗಾಗಿ.. ಇನ್ನೂ ಬದಲಾಗದ ಈ ಸಮಾಜದ ಸ್ಥಿತಿಗಾಗಿ, ದಿನಕ್ಕೊಂದು ಹೆಣ್ಣು ನರರಾಕ್ಷಸರಿಗೆ ಆಹಾರವಾದರೂ ಸಿಗದೇ ಇರುವ ನ್ಯಾಯ ಕ್ಕಾಗಿ, ಇಷ್ಟಾದರೂ ಇನ್ನು ಇಂತಹ ನರರಾಕ್ಷಸರನ್ನು ಮುಗ್ಧವಾಗಿ ನಂಬುತ್ತಿರುವ ನನ್ನ ಸಹೋದರಿಯರ ಮನಸ್ಥಿತಿಗಾಗಿ…, ಅಂದು ಜೀವಂತವಾಗಿದ್ದಾಗ ಕೇಳಿಸದ ನನ್ನ ಕೂಗು ಈಗ ಕೇಳಿಸಿತೇ…? ನನ್ನೊಂದಿಗೆ ಸೇರಿಕೊಂಡಿರುವ ಆತ್ಮಗಳ ಸಂಖ್ಯೆ ಹೆಚ್ಚಿರಬಹುದು ಆದರೆ ಎಲ್ಲರದೂ ಮೂಕ ರೋಧನೆಯಲ್ಲವೇ…?

ಬರಹ: ಅಪೂರ್ವ ಕೊಲ್ಯ

Advertisement

                                       

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement
ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

ಸ್ವಲ್ಪ ಜಾಗೃತರಾಗಿ.. | ಐಪಿಎಲ್ ಹಬ್ಬವೋ – ತಿಥಿಯೋ – ಶಾಪವೋ… | ಕ್ರಿಕೆಟ್ ಆಟ – ಬೆಟ್ಟಿಂಗ್ ದಂಧೆ – ಜೂಜಿನ ಮಜಾ ಪ್ರಾರಂಭ…..
March 26, 2024
1:12 PM
by: ವಿವೇಕಾನಂದ ಎಚ್‌ ಕೆ
ಪ್ರಜಾಪ್ರಭುತ್ವದ ದೊಡ್ಡ ಹಬ್ಬ ಚುನಾವಣೆ | ಈ ಬಾರಿಯೂ ಕೋವಿ ಠೇವಣಾತಿ ಗೊಂದಲ | ಕೃಷಿಕರಿಗೆ ತಪ್ಪದ ಬವಣೆ | ಮೂರು ವರ್ಷಗಳಿಂದಲೂ ರೈತರ ಬೇಡಿಕೆಗೆ ಸಿಗದ ಮಾನ್ಯತೆ |
March 20, 2024
10:42 PM
by: ಮಹೇಶ್ ಪುಚ್ಚಪ್ಪಾಡಿ
ಜ್ಞಾನದ ಮರುಪೂರಣ ಅಗತ್ಯ…… ಮರು ಭರ್ತಿ ಮಾಡದಿದ್ರೆ ನಮ್ಮ ವ್ಯಕ್ತಿತ್ವ ಕುಬ್ಜವಾಗುತ್ತಾ ಹೋಗುತ್ತದೆ
March 15, 2024
3:05 PM
by: ವಿವೇಕಾನಂದ ಎಚ್‌ ಕೆ
ಹಾಲು ಮಾಂಸಾಹಾರವೇ…? ಹಾಲಿಗೆ ತನ್ನದೇ ಆದ ಶ್ರೇಷ್ಠತೆ ಇದೆ..
March 15, 2024
2:06 PM
by: ಪ್ರಬಂಧ ಅಂಬುತೀರ್ಥ

You cannot copy content of this page - Copyright -The Rural Mirror