ಕೃಷಿಕ ಈಗ ಏನು ಮಾಡಬೇಕು | ಆರ್ಥಿಕ ಚಟುವಟಿಕೆಗಳನ್ನು ಹೇಗೆ ನಿಯಂತ್ರಿಸಿಕೊಳ್ಳಬಹುದು |

March 24, 2020
7:58 PM

ಮಾರನಂ ದಂಡಿಸಿರೆ ಗೌರಿಯಿಂ ಭಯವೇನು…
ಮೀರೆ ಮೋಹವನು ಸಂಸಾರದಿಂ ಭಯವೇನು..

Advertisement

ದಾರ್ಶನಿಕ ಡಿವಿಜಿಯವರ ಕಗ್ಗದ ಸಾಲುಗಳು ಎಷ್ಟು ಸತ್ಯ ಎಂಬುದು ಇಂದು ಅನಿಸುತ್ತಿದೆ.

ಹೌದು ಕಣ್ಣಿಗೆ ಕಾಣದ ಸೂಕ್ಷ್ಮಾಣು ಇಡೀ ಮನುಕುಲವನ್ನೇ ಹೈರಾಣಾಗಿಸಿ ರುದ್ರ ನರ್ತನ ಮಾಡುತ್ತಿರುವಾಗ ನಮಗೆಲ್ಲ ಅವ್ಯಕ್ತ ಭಯ ಆವರಿಸಿ ರಕ್ಷಣೆಗಾಗಿ ಕಾಣದ ಶಕ್ತಿಯ ನೆನಪಾಗುತ್ತಿದೆಯಲ್ಲಾ.

ಡಿವಿಜಿಯವರ ಕಗ್ಗದ ಚಾಟಿಯೇಟು ಅರ್ಥವಾಗುತ್ತಿದೆಯಲ್ಲಾ..ಮಾರನಂ ಅಂದರೆ ನಮ್ಮ ಕಾಮನೆಗಳನ್ನು ಜಯಿಸಿದರೆ , ಮೋಹವನ್ನು ತ್ಯಜಿಸಿದರೆ ನಾವ್ಯಾರಿಗೆ ಭಯಪಡಬೇಕಿದೆ.

ಭಾಗವತದಲ್ಲಿ ಬರುವ ಪೃಥು ಮಹಾರಾಜನ ನೂರು ಅಶ್ವಮೇಧ ಯಜ್ಞಗಳ ಮಹತ್ತನ್ನು ಸಹಿಸದ ಇಂದ್ರನ ಕುಟಿಲತೆಯಿಂದ ಕ್ಷುದ್ರನಾದ ಪೃಥು ಪುತ್ರ ವಿಜಿತಾಶ್ವನ ಪ್ರತಾಪಕ್ಕೆ ಸೋತ ಇಂದ್ರ ತನ್ನ “ಪಾಖಂಡ”(ಪಾಪದ ಖಂಡ) ರೂಪಗಳನ್ನು ಕಳಚಿ ಓಡಿದನಂತೆ.ಆದರೆ ಸಾಮಾನ್ಯ ಜನರಿಗೆ ಹೊರನೋಟಕ್ಕೆ ರಂಗು ರಂಗಾದ ವಿಚಾರಗಳು ಆಪ್ಯಾಯಮಾನವಾಗಿ ಅದೇ ಪಾಖಂಡ ವಿಚಾರಗಳೇ ಸತ್ಯ ಎಂಬ ಭ್ರಾಂತಿಯಿಂದ ಆ ಅಸತ್ಯದೆಡೆಗೆ ಆಸಕ್ತರಾದರಂತೆ.ಇದರಿಂದ ಕುಪಿತನಾದ ಪೃಥು ಮಹಾರಾಜನ ಪರಾಕ್ರಮೀ ರೂಪವನ್ನು ಕಂಡ ಯಾಜಕರು ಇಂದ್ರನನ್ನೇ ಅಗ್ನಿಗೆ ಆಹುತಿ ಕೊಡುವ ಸಮಯ ಬಂದಾಗ ಬ್ರಹ್ಮದೇವನ ಸಂಧಾನದಂತೆ ಪೃಥು ಇಂದ್ರರ ಪೈಪೋಟಿ ಕೊನೆಗೊಂಡಿತಂತೆ.

ಅಂದರೆ….ಈ ಲೌಕಿಕ ಯಜ್ಞದಲ್ಲಿ ಮಾನವರೆಲ್ಲರೂ ಪಾಖಂಡ ವಿಚಾರಗಳ ಸುತ್ತ ಸುಳಿಯುತ್ತಿರುವಾಗ ವೈರಸ್ ರೂಪದಲ್ಲಿ ಮನುಕುಲದ ಆಹುತಿಗೆ ಪ್ರಕೃತಿ ತಯಾರಾದಾಗ ನಾವೆಲ್ಲ ನಮ್ಮ ಜೀವನ/ಕೃಷಿ/ವ್ಯವಹಾರ ಮುಂತಾದವುಗಳಲ್ಲಿ ಎಲ್ಲಿ ದಾರಿ ಬಿಟ್ಟಿದ್ದೇವೆ ಎಂಬುದನ್ನು ಒಂದು ಕ್ಷಣ ಆಲೋಚಿಸಬೇಕಾದ ಸಮಯ ಬಂದಿದೆ.

ಹೌದಲ್ಲವೇ ಜ್ಞಾನೋದಯದ ಕ್ಷಣಗಳು ನಮ್ಮ ಮುಂದಿದೆ.ಕಳೆದ ದಿನಗಳು ಕಳೆಯಿತಲ್ಲಾ ,ಮುಂದೆ ಹೇಗೇ ಎತ್ತ ಎಂದು ಆಲೋಚಿಸಬೇಕಲ್ಲವೇ. ಹುಮ್….ಹೇಳಿ ಕೇಳಿ ಹೆಚ್ಚಿನವರು ನಾವು ಕೃಷಿಕರು…ಉಳಿದಂತೆ ಎಲ್ಲರೂ ಮನುಕುಲ ವರ್ಧನೆಗೆ ಶ್ರಮಿಸುವವರೇ ಸರಿ.ಈ ದುರಂತಮಯ ಸನ್ನಿವೇಶದಲ್ಲಿ ಸಾಮಾನ್ಯನ ಪಾಡೇನು,ನಾವೇನು ಮಾಡಬಹುದು ಎಂದೂ ಆಲೋಚಿಸಬೇಡವೇ. ನಿಜ…. ಉಳ್ಳವನಿಗೂ ಇರದವನಿಗೂ ಮುಂದಿನ ದಾರಿ ಕಠಿಣ, ಈ ನಿಟ್ಟಿನಲ್ಲಿ ಎಲ್ಲರೂ ಸಮಾನರೇ ಸರಿ.ಆದರೂ ” some are more equal in democracy” ಎಂದಂತೆ ಕೆಲವರು ಈ ಪರಿಸ್ಥಿತಿಯನ್ನು ಒಂದೆರಡು ತಿಂಗಳು ನಿಭಾಯಿಸಬಹುದಾದರೆ ಮತ್ತೆ ಕೆಲವರು ಒಂದೆರಡು ವಾರಗಳೋ ದಿನಗಳೋ ನಿಭಾಯಿಸಲು ಶಕ್ತರಿರಬಹುದು.ವೈಯಕ್ತಿಕವಾಗಿ ಕಠಿಣ ಆರ್ಥಿಕ ನಡೆಗಳ ತುರ್ತು ಅವಶ್ಯಕತೆ ಖಂಡಿತಾ ಇದೆ.ಆರ್ಥಿಕ, ಸಾಮಾಜಿಕ ವಿಪ್ಲವಗಳಿಗೆ ತಯಾರಾಗಬೇಕಿದೆ.

‌‌ ಕೃಷಿಕನಾದವ ಖಂಡಿತಾ ತನ್ನ ಆರ್ಥಿಕ ಚಟುವಟಿಕೆಗಳನ್ನು ನಿಯಂತ್ರಿಸಿಕೊಳ್ಳಬಹುದು.ಈ ಪರಿಸ್ಥಿತಿ ಒಂಥರಾ ಇಂಗ್ಲಿಷ್ ನಲ್ಲಿ “ಹೈಬರ್ನೇಷನ್” ಎನ್ನಬಹುದು. ಅಂದರೆ ಹೊರ ಪ್ರಪಂಚದೆಡೆಗೆ ನೊಡದೆ ಮುಸುಕೆಳೆದು ಚಿಪ್ಪಿನೊಳಗೆ ಕುಳಿತು ಅನುಕೂಲಕರ ಸಮಯ ಬಂದಾಗ ಹೊರ ಬಂದು ಕಾರ್ಯೋನ್ಮುಖವಾಗುವುದು.ಕೃಷಿಕರ ಜರೂರತಿನ ಕೃಷಿ ಚಟುವಟಿಕೆ ಇನ್ನು ಮಳೆ ಬಂದಾಗ…..ನೋಡೋಣ ಇನ್ನೆರಡು ಮೂರು ತಿಂಗಳ ಸಮಯವಿದೆ. ಪರಿಸ್ಥಿತಿ ತಿಳಿಯಾದರೆ ಮುಂದುವರಿಯೋಣ ಇಲ್ಲಾಂದ್ರೆ ಮುಸುಕೇ….ದೇವರ ತೀರ್ಮಾನ……ಇರಲಿ.

ಹಾಗಿದ್ದರೆ ಪಾಪ,ಕೃಷಿ ಚಟುವಟಿಕೆಗೆ ಮೂಲಾಧಾರವಾದ,ಜನಮಾನಸದ ಪಾಡೇನು. ಯಸ್ ಇಲ್ಲೇ ನಾವು ತ್ಯಾಗ ಮಾಡಬೇಕಾಗುವುದು.ಕಗ್ಗದ ಸಾಲೆಂದಂತೆ ಸಂಸಾರ ಮೋಹವ ಮೀರಿ ಅವರೂ ನಮ್ಮ ಸಂಸಾರದ ಒಂದು ಭಾಗ ಎಂದು ಅವರನ್ನೂ ಬಿಗಿದಪ್ಪಿ ,ಸಿಹಿಯೋ ಖಾರವೋ,ಉಪ್ಪೋ ಹುಳಿಯೋ, ಹಂಚಿಕೊಳಬೇಕಲ್ಲವೇ…ಆರ್ಥಿಕ ಹೊಡೆತದ ಗಾಯದ ರಕ್ತ ಸಾಮಾಜಿಕ ಜೀವನದಲ್ಲಿ ಒಸರದಂತೆ ನಾವೆಲ್ಲರೂ ಕೂಡಿಬಾಳಬೇಕಲ್ಲವೇ.ಅವರೂ ನಮ್ಮಂತೆಯೇ ಎಂಬ ಭಾವದಿಂದ ಅವರ ಮತ್ತು ಅವರ ಅವಲಂಬಿತರಿಗೆ ಕೈಲಾದ ಸಹಾಯ ಮಾಡುವ ಜವಾಬ್ದಾರಿ ನಮ್ಮದು.

ಈ ಲೇಖನ ಬರೆಯುತ್ತಿರಬೇಕಾದರೆ ಗದಗದ ಲಕ್ಷ್ಮೇಶ್ವರದಲ್ಲಿ ಜಠರಾಗ್ನಿಯ ಉರಿಗೆ ಕಸದ ತೊಟ್ಟಿಯಲ್ಲಿ ಇಣುಕಾಡುತಿದ್ದ ವೃದ್ಧನ ಸ್ಥಿತಿ ದಿನದ ಕಠಿಣತೆಗೆ ಹಿಡಿದ ಕನ್ನಡಿಯಲ್ಲವೇ. ಈ ನಿಟ್ಟಿನಲ್ಲಿ ನಾವು ಪರಸ್ಪರ ಸಹಕರಿಸುವುದರೊಂದಿಗೆ ಕಠಿಣ ದಿನಚರಿಗಳನ್ನೂ ಅಳವಡಿಸಿಕೊಳ್ಳಬೇಕಿದೆ.ಕನಿಷ್ಠ ಎರಡು ಮೂರು ತಿಂಗಳು ಸಂಚಾರವನ್ನು ಕಟ್ಟುನಿಟ್ಟಾಗಿ ನಿರ್ಭಂಧಿಸಿಕೊಳ್ಳೋಣ.ಸಂಚಾರ ನಿರ್ಭಂದಿಸಿಕೊಂಡರೆ ತನ್ನಿಂದ ತಾನೇ ಎಲ್ಲಾ ಖರ್ಚು, ಆರೋಗ್ಯ, ಪೈಪೋಟಿ ಹಿಡಿತಕ್ಕೆ ಬರುತ್ತದೆ.
ನಮ್ಮ ಹೆಚ್ಚಿನ ಖರ್ಚು ಗಳೇ ಪ್ರಯಾಣ ಮತ್ತು ಫೋನ್.

1.ಮನೆಯಲ್ಲಿರುವ ಪೋನ್ ಸಂಖ್ಯೆ ಕಡಿಮೆಗೊಳಿಸೋಣ.
2.ಮನೆಯಲ್ಲಿರುವ ವಾಹನಗಳ ಸಂಖ್ಯೆ ಕಡಿಮೆ ಮಾಡೋಣ.
3.ಬಾಯಿಚಪಲದ ಆಹಾರಗಳನ್ನು ಕೈಬಿಡೋಣ.
4.ಅನಾವಶ್ಯಕ ಪೈಪೋಟಿ ಬಿಟ್ಟು ಬಿಡೋಣ.
5.ಸಂಜೆ ಮನೆಯವರೆಲ್ಲ ಒಟ್ಟಾಗಿ ಕುಳಿತು ಸತ್ಸಂಗ ನಡೆಸೋಣ.
6. ಅವಶ್ಯಕವಾಗಿ ನಮ್ಮನ್ನವಲಂಬಿಸಿದವರಿಗೆ ಸೂಕ್ತ ಮಾಹಿತಿ ಕೊಟ್ಟು ಮಾನಸಿಕ ಧೈರ್ಯ ತುಂಬೋಣ.
7.ವಿಷಮುಕ್ತ ಬದುಕಿನ ಚಟುವಟಿಕೆಗಳತ್ತ ಗಮನಹರಿಸೋಣ.
8.ಸ್ವಸ್ಥ, ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ತಯಾರಾಗೋಣ.

ಅಂದರೆ ನಾವೆಲ್ಲರೂ, ಹಣದ ಸುತ್ತ ಗಿರಕಿ ಹೊಡೆಯುವ ನಮ್ಮ ಈಗಿನ ಜೀವನ ಪದ್ದತಿಗಳನ್ನು ತಿದ್ದಿಕೊಳ್ಳುವ ಸಮಯ ಬಂದಿದೆ.ಈಗಲಾದರೂ ಎಚ್ಚೆತ್ತರೆ ಶುಭ್ರವಾದ,ತಿಳಿಯಾದ ನೀಲಾಕಾಶದ ಮುಂದಿನ ದಿನಗಳು ನಮಗುಳಿದೀತು.

ನಾನಿಷ್ಟು ಬರೆಯುತ್ತಿರಬೇಕಾದರೆ ಹತ್ತಿರ ಕುಳಿತು ನನ್ನನ್ನೇ ನೋಡುತ್ತಾ,ಮೊಬೈಲ್ ಮೇಲೆ ಕೈಯಾಡಿಸುತ್ತಾ ಇದ್ದ ನನ್ನವಳ ಮೊಬೈಲ್ ನಲ್ಲಿ ಈ ಹಾಡು ಅದರಷ್ಟಕ್ಕೇ…. ಬೇಕಾದರೆ ಕೇಳು ಸರಳ ಜೀವನ ಸೂತ್ರ ಎಂಬಂತೆ ಕಿವಿಗೆ ಬೀಳುತ್ತಿತ್ತು.

ತುತ್ತು ಅನ್ನಾ ತಿನ್ನೋಕೇ
ಬೊಗಸೇ ನೀರು ಕುಡಿಯೋಕೇ
ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೇ….
ದುಡಿಯೋದಕ್ಕೆ ಮೈಯಾ ತುಂಬಾ ಶಕ್ತಿ ತುಂಬೈತೇ…
ಅಡ್ಡಾದಾರಿ ಹಿಡಿಯೋದ್ ತಪ್ಪು ಅಂತಾ ಗೊತ್ತೈತೇ…
ಕಷ್ಟಾ ಒಂದೇ ಬರದೂ
ಸುಖವೂ ಬರದೇ ಇರದೂ
ರಾತ್ರೇ ಮುಗಿದ ಮೇಲೆ ಹಗಲು ಬಂದೇ ಬರ್ತೈತೇ…
ತುತ್ತು ಅನ್ನಾ ತಿನ್ನೋಕೇ..
ಬೊಗಸೇ ನೀರು ಕುಡಿಯೋಕೇ…

ಹುಮ್….ಇಷ್ಟೇ ಅಲ್ವಾ ಬದುಕೂ…

 

  • ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ. ಕಲ್ಮಡ್ಕ.

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

‌ ಪ್ರಗತಿಪರ ಕೃಷಿಕ, ಬರಹಗಾರ

ಇದನ್ನೂ ಓದಿ

ಪುಟ್ಟ ಕಿಂಡಿಯಿಂದ ದೊಡ್ಡ ಕಿಟಕಿಯತ್ತ
April 3, 2025
8:30 AM
by: ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ
“ಅಮ್ಮ” ಒಳಗೇನು ಮಾಡುತ್ತಿದ್ದಾರೆ…? ನೋಡಿದ್ದೀರಾ..?
April 3, 2025
8:00 AM
by: ಮಹೇಶ್ ಪುಚ್ಚಪ್ಪಾಡಿ
ರಕ್ಷಣೆಗೂ ಭಕ್ಷಣೆಗೂ ಒಂದೇ ಕಾನೂನು
April 2, 2025
8:34 PM
by: ಡಾ.ಚಂದ್ರಶೇಖರ ದಾಮ್ಲೆ
ಹೊಸರುಚಿ | ಗುಜ್ಜೆ ಬೋಂಡಾ
April 2, 2025
8:00 AM
by: ದಿವ್ಯ ಮಹೇಶ್

You cannot copy content of this page - Copyright -The Rural Mirror

Join Our Group