ಸುಳ್ಯ: ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಜ್ವರದ ಬಾಧೆ ವ್ಯಾಪಕವಾಗುತ್ತಿದೆ. ಕಡಬದಲ್ಲಿ ಡೆಂಘೆ ಭೀತಿ ಹೆಚ್ಚಾದರೆ ಇದೀಗ ಸುಳ್ಯದಲ್ಲೂ ಜ್ವರ ಪೀಡಿತರ ಸಂಖ್ಯೆ ಹೆಚ್ಚಾಗಿದೆ. ಜನರಿಗೆ ಭೀತಿ ಆವರಿಸಿದೆ. ಇದುವರೆಗೆ ಡೆಂಘೆ ಲಕ್ಷಣಗಳು ಕಾಣಿಸಿಲ್ಲ. ಕೇವಲ ವೈರಲ್ ಜ್ವರವಷ್ಟೇ ಕಂಡಿದೆ. ಆತಂಕ ಬೇಡವೆಂದು ಆರೋಗ್ಯ ಇಲಾಖೆ ಹೇಳುತ್ತಿದೆ. ಹೀಗಿದ್ದರೂ ಜನರ ಆತಂಕ ದೂರವಾಗಿಲ್ಲ.
ಸುಳ್ಯ ತಾಲೂಕಿನಲ್ಲಿ ಮಳೆಯ ಕಣ್ಣಾ ಮುಚ್ಚಾಲೆ ಮತ್ತು ಹವಾಮಾನ ವೈಪರೀತ್ಯ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ತಲೆ ನೋವು, ಮೈ ಕೈ ನೋವು, ಶೀತ, ಜ್ವರಹೀಗೆ ಹತ್ತು ಹಲವು ಸಮಸ್ಯೆಗಳು ಜನರನ್ನು ಕಾಡುತಿದೆ. ಸುಳ್ಯ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮತ್ತು ಗಡಿ ಗ್ರಾಮಗಳಲ್ಲಿ ಜ್ವರದಿಂದ ಬಳಲುತ್ತಿರುವವರ ಸಂಖ್ಯೆಯೂ ಹೆಚ್ಚುತಿದೆ. ಸುಳ್ಯ ತಾಲೂಕಿನ ವಿವಿಧ ಆಸ್ಪತ್ರೆಯಲ್ಲಿ ಜ್ವರ ಬಾಧಿಸಿ ಚಿಕಿತ್ಸೆಗಾಗಿ ಆಗಮಿಸುತ್ತಿರುವವರ ಸಂಖ್ಯೆಯೂ ದ್ವಿಗುಣವಾಗುತ್ತಿದೆ.
ಆಸ್ಪತ್ರೆಗಳಲ್ಲಿ ಬೆಳಿಗ್ಗಿನಿಂದಲೂ ಉದ್ದನೆಯ ಸರತಿ ಸಾಲು ಕಂಡು ಬರುತಿದೆ. ಕಳೆದ 15 ದಿನಗಳಿಂದ ಜ್ವರ ಬಾಧಿಸಿ ಚಿಕಿತ್ಸೆಗೆ ಬರುತ್ತಿರುವವರ ಸಂಖ್ಯೆ ಹೆಚ್ಚು ಕಂಡು ಬರುತ್ತಿದ್ದು ಕಳೆದ ಕೆಲವು ದಿನಗಳಿಂದ ವಿಪರೀತ ಹೆಚ್ಚಳವಾಗಿದೆ. ಈಗ ಸುಳ್ಯ ತಾಲೂಕು ಆಸ್ಪತ್ರೆಯೊಂದರಲ್ಲೇ ಹೊರ ರೋಗಿ ವಿಭಾಗದಲ್ಲಿ ಪ್ರತಿ ದಿನ 350 ರಿಂದ 400 ಮಂದಿ ಚಿಕಿತ್ಸೆಗಾಗಿ ಆಗಮಿಸುತ್ತಿದ್ದು ಬಹುತೇಕ ಮಂದಿ ಜ್ವರ ಬಾಧೆಯಿಂದ ಬಳಲಿ ಚಿಕಿತ್ಸೆಗೆ ಬರುತ್ತಿದ್ದಾರೆ. 100 ಬೆಡ್‍ನ ಆಸ್ಪತ್ರೆ ಬಹುತೇಕ ಫುಲ್ ಆಗಿದ್ದು ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಬಹುತೇಕ ಜ್ವರ ಪೀಡಿತರೇ ಇದ್ದಾರೆ.
ಶೀತ ಜ್ವರದಿಂದ ಬಹುತೇಕ ಮಂದಿ ಚಿಕಿತ್ಸೆಗಾಗಿ ಆಗಮಿಸುತ್ತಿರುವುದಾಗಿ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಸುಳ್ಯ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಖಾಸಗೀ ಆಸ್ಪತ್ರೆಗಳಲ್ಲಿಯೂ ಜ್ವರ ಪೀಡಿತರ ಸಂಖ್ಯೆ ಹೆಚ್ಚಾಗಿದ್ದು ಉದ್ದನೆಯ ಸರತಿ ಸಾಲು ಕಂಡು ಬರುತಿದೆ.
ಆರು ತಿಂಗಳಲ್ಲಿ 7 ಖಚಿತ ಡೆಂಘೆ ಪ್ರಕರಣ:
ಸುಳ್ಯ ತಾಲೂಕಿನ ಕೆಲವು ಭಾಗಗಳಲ್ಲಿ ಡೆಂಘೆ ಜ್ವರದ ಲಕ್ಷಣಗಳು ಕೂಡ ಕಂಡು ಬಂದಿದೆ. ಶಂಕಿತ ಡೆಂಡೆ ಜ್ವರದ ಲಕ್ಷಣಗಳು ಕಂಡು ಬಂದರೆ ಅದನ್ನು ಅದನ್ನು ಹೆಚ್ಚಿನ ಪರೀಕ್ಷೆಗಾಗಿ ಕಳುಹಿಸಲಾಗುತ್ತದೆ. ಈ ವರ್ಷ ಜನವರಿಯಿಂದ ಇದುವರೆಗೆ ಒಟ್ಟು ಏಳು ಡೆಂಘೆ ಖಚಿತ ಪ್ರಕರಣಗಳು ಕಂಡು ಬಂದಿದೆ ಎನ್ನುತ್ತಾರೆ ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಡಾ.ಸುಬ್ರಹ್ಮಣ್ಯ. ಡೆಂಘೆ ಲಕ್ಷಣಗಳು ಕಂಡು ಬಂದರೆ ವಿಶೇಷ ನಿಗಾ ವಹಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಕೈಕೊಟ್ಟ ಮಳೆ-ಕೆಡುತ್ತಿರುವ ಆರೋಗ್ಯ:
ಜೂನ್ ತಿಂಗಳು ಮುಗಿದರೂ ಸರಿಯಾಗಿ ಮಳೆ ಸುರಿಯದೆ ಇರುವ ಕಾರಣ ಮಲೆನಾಡಾದ ಸುಳ್ಯದಲ್ಲಿ ಜ್ವರ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗುತ್ತಿದೆ. ಹವಾಮಾನ ವೈಪರೀತ್ಯದಿಂದ ಕೂಡಿದ್ದು ಸರಿಯಾಗಿ ಮಳೆ ಸುರಿದು ನೀರು ಹರಿದಿಲ್ಲ ಬಿಸಿಲು ಮತ್ತು ಸೆಕೆಯ ವಾತಾವರಣ ಜನರ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರಿದೆ. ನೀರು ಸರಿಯಾಗಿ ಹರಿದು ಹೋಗದ ಕಾರಣ ರೋಗ ವಾಹಕಗಳಾದ ಸೊಳ್ಳೆಗಳು ಹರಡುತಿದೆ.
ಎಚ್ಚೆತ್ತುಗೊಂಡಿರುವ ಆರೋಗ್ಯ ಇಲಾಖೆ:
ಜ್ವರ ಮತ್ತು ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ ವಿವಿಧ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ಆಶಾ ಕಾರ್ಯಕರ್ತರು ಮತ್ತು ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಮೂಲಕ ಮನೆ ಮನೆ ಭೇಟಿ ನೀಡಿ ಜ್ವರ ಸಮೀಕ್ಷೆ ನಡೆಸಲಾಗುತ್ತಿದ್ದು ಜನರಿಗೆ ಆರೋಗ್ಯ ಮಾಹಿತಿ ನೀಡಿ, ಜ್ವರ ಕಂಡು ಬಂದರೆ ಆಸ್ಪತ್ರೆಗೆ ಸೇರುವಂತೆ ಜಾಗೃತಿ ಮೂಡಿಸಲಾಗುತ್ತದೆ. ಗ್ರಾಮ ಪಂಚಾಯತ್‍ಗಳೊಂದಿಗೆ ಕೈ ಜೋಡಿಸಿ ಸೊಳ್ಳೆ ನಾಶಪಡಿಸಲು ಫಾಗಿಂಗ್ ಮತ್ತಿತರ ಕ್ರಮಗಳನ್ನು ಕೈಗೊಳ್ಳಲಾಗುತಿದೆ. ಎಲ್ಲೆಡೆ ಸೊಳ್ಳೆ ನಾಶಕ್ಕೆ ಕ್ರಮ ಜರುಗಿಸಲಾಗುತಿದೆ. ತೀವ್ರ ಜ್ವರ ಬಾಧಿಸಿದ ರೋಗಿಗೆ ಚಿಕಿತ್ಸೆ ನೀಡಲು ಮತ್ತು ಆಸ್ಪತ್ರೆಗೆ ಕರೆದೊಯ್ಯಲು ಮೊಬೈಲ್ ಕ್ಲೀನಿಕ್‍ಗಳನ್ನು ತೆರೆಯಲಾಗಿದೆ. ತಾಲೂಕು ಆಸ್ಪತ್ರೆಗಳಲ್ಲಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಾಕಷ್ಟು ಔಷಧಿ ಮತ್ತು ಇತರ ವ್ಯವಸ್ಥೆ ಇದೆ. ಜ್ವರ ಬಾಧೆ ಕಂಡು ಬಂದಲ್ಲಿ ಆಸ್ಪತ್ರೆಗೆ ತೆರಳಿ ಕೂಡಲೇ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಡಾ.ಸುಬ್ರಹ್ಮಣ್ಯ ಹೇಳಿದ್ದಾರೆ.