ಇಂದಿನ ಹವಾಮಾನ ಬದಲಾವಣೆ, ಮಳೆ ಅನಿಶ್ಚಿತತೆ ಮತ್ತು ಕೃಷಿ ಸಂಕಷ್ಟ ಹೊಸದೇನಲ್ಲ. ಸಾವಿರಾರು ವರ್ಷಗಳ ಹಿಂದೆಯೂ ರೈತರು ಹವಾಮಾನ ಬದಲಾವಣೆಗೆ ತಕ್ಕಂತೆ ತಮ್ಮ ಕೃಷಿ ಪದ್ಧತಿಯನ್ನು ಬದಲಿಸಿಕೊಂಡಿದ್ದರು ಎಂಬುದನ್ನು ಬಿಹಾರದಲ್ಲಿ ಪತ್ತೆಯಾದ ಪುರಾತನ ಬೀಜಗಳು ತೋರಿಸಿವೆ. ಬಿಹಾರದ ಯುರೆನ್ ಎಂಬ ಪುರಾತತ್ವ ಸ್ಥಳದಲ್ಲಿ ಪತ್ತೆಯಾದ 5 ಲಕ್ಷಕ್ಕೂ ಹೆಚ್ಚು ಸುಟ್ಟ ಬೀಜಗಳ ಅಧ್ಯಯನದ ಮೂಲಕ ಪೂರ್ವ ಭಾರತದ ಸುಮಾರು 3,000 ವರ್ಷಗಳ ನಿರಂತರ ಕೃಷಿ ಇತಿಹಾಸವನ್ನು ಸಂಶೋಧಕರು ದಾಖಲಿಸಿದ್ದಾರೆ.
ಬಿರ್ಬಲ್ ಸಾಹ್ನಿ ಇನ್‌ಸ್ಟಿಟ್ಯೂಟ್ ಆಫ್ ಪ್ಯಾಲಿಯೋಸೈನ್ಸಸ್ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸಂಶೋಧಕರು ನಡೆಸಿದ ಅಧ್ಯಯನವು ಕ್ರಿ.ಪೂ. 1300ರ ಕಬ್ಬಿಣ ಯುಗದಿಂದ ಕ್ರಿ.ಶ. 1200ರ ಆರಂಭಿಕ ಮಧ್ಯಯುಗದವರೆಗೆ ಯುರೆನ್ ಪ್ರದೇಶದ ಕೃಷಿ ಬದಲಾವಣೆಗಳನ್ನು ಪತ್ತೆಹಚ್ಚಿದೆ.
ಬೆಂಕಿಯಲ್ಲಿ ಸುಟ್ಟ ಬೀಜಗಳು 3,000 ವರ್ಷಗಳ ಕೃಷಿ ಇತಿಹಾಸ : ಸಾಮಾನ್ಯವಾಗಿ ಬೆಂಕಿಯಲ್ಲಿ ಸುಟ್ಟು ಹೋದ ಬೀಜಗಳು ನಾಶವಾಗುತ್ತವೆ. ಆದರೆ ಸಂಪೂರ್ಣವಾಗಿ ಬೂದಿಯಾಗದೆ ಕಾರ್ಬನೀಕರಣಗೊಂಡ ಬೀಜಗಳು ಮಣ್ಣಿನಲ್ಲಿ ಸಾವಿರಾರು ವರ್ಷಗಳ ಕಾಲ ಉಳಿಯಬಲ್ಲವು. ಪುರಾತತ್ವ ತಾಣದಲ್ಲಿ ದೊರೆತ ಮಣ್ಣನ್ನು ನೀರಿನಲ್ಲಿ ತೇಲಿಸುವ ವಿಧಾನ ಬಳಸಿ ಈ ಸುಟ್ಟ ಬೀಜಗಳನ್ನು ಬೇರ್ಪಡಿಸಲಾಯಿತು. ನಂತರ ಅವುಗಳ ಆಕಾರ ಮತ್ತು ಗಾತ್ರವನ್ನು ಪರಿಶೀಲಿಸಿ ಯಾವುದು ಕಾಡು ಸಸ್ಯ, ಯಾವುದು ಬೆಳೆಸಿದ ಬೆಳೆ ಎಂಬುದನ್ನು ಗುರುತಿಸಲಾಯಿತು. ರೇಡಿಯೋಕಾರ್ಬನ್ ದಿನಾಂಕ ನಿರ್ಧಾರದಿಂದ ಅವು ಯಾವ ಕಾಲಕ್ಕೆ ಸೇರಿವೆ ಎಂಬುದನ್ನೂ ಪತ್ತೆಹಚ್ಚಲಾಯಿತು. ಹೀಗೆ ಸಿಕ್ಕ ಸಣ್ಣ ಸಣ್ಣ ಬೀಜಗಳು ಒಂದು ಪ್ರದೇಶದ ಕೃಷಿ ಹೇಗೆ ಬದಲಾಗುತ್ತಾ ಬಂದಿತು ಎಂಬ ದೊಡ್ಡ ಚಿತ್ರಣವನ್ನು ನೀಡಿವೆ.
ಆಗಲೂ ಬಹುಬೆಳೆ ಪದ್ಧತಿ ಇತ್ತು : ಸುಮಾರು 3,000 ವರ್ಷಗಳ ಹಿಂದಿನ ಯುರೆನ್ ಪ್ರದೇಶದ ರೈತರು ಒಂದೇ ಬೆಳೆಯ ಮೇಲೆ ಅವಲಂಬಿತರಾಗಿರಲಿಲ್ಲ. ಚಳಿಗಾಲದಲ್ಲಿ ಬಾರ್ಲಿ, ಗೋಧಿ ಮತ್ತು ಮಸೂರದಂತಹ ಬೆಳೆಗಳನ್ನು ಹಾಗೂ ಬೇಸಿಗೆಯಲ್ಲಿ ಅಕ್ಕಿ ಮತ್ತು ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದರು. ಅಂದರೆ ವರ್ಷದ ವಿವಿಧ ಋತುಗಳಿಗೆ ತಕ್ಕಂತೆ ವಿಭಿನ್ನ ಬೆಳೆಗಳನ್ನು ಬೆಳೆಸುವ ಬಹುಬೆಳೆ ಪದ್ಧತಿ ಅಲ್ಲಿ ಇತ್ತು.
ಆಹಾರ ಭದ್ರತೆಯ ಒಂದು ತಂತ್ರವಿತ್ತು: ಒಂದು ಬೆಳೆ ವಿಫಲವಾದರೂ ಮತ್ತೊಂದು ಬೆಳೆ ಕೈಹಿಡಿಯಬೇಕು. ನಂತರ ಅಕ್ಕಿ ಏಕಾಏಕಿ ಪ್ರಧಾನ ಬೆಳೆಯಾಯಿತು. ಕಾಲ ಕಳೆದಂತೆ ಕೃಷಿಯಲ್ಲಿ ದೊಡ್ಡ ಬದಲಾವಣೆ ಸಂಭವಿಸಿತು. ಅಂದರೆ ಸುಮಾರು ಕ್ರಿ.ಪೂ. 200ರ ಹೊತ್ತಿಗೆ, ಅಕ್ಕಿ ಪ್ರಮುಖ ಆಹಾರ ಬೆಳೆಯಾಗಿ ಬದಲಾಗಿತ್ತು. ಪುರಾತತ್ವ ಪದರಗಳಲ್ಲಿ ಪತ್ತೆಯಾದ ಬೀಜಗಳಲ್ಲಿ ಅಕ್ಕಿಯ ಪ್ರಮಾಣ ಬಹುಪಾಲು ಹೊಂದಿತ್ತು. ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ನಗರಗಳ ಆಹಾರ ಬೇಡಿಕೆಯನ್ನು ಪೂರೈಸಲು ಕೃಷಿಯನ್ನು ಹೆಚ್ಚು ತೀವ್ರಗೊಳಿಸುವ ಪ್ರಯತ್ನ ನಡೆದಿರಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕಾಗಿ ನೀರಾವರಿ ಮತ್ತು ಉತ್ತಮ ಕೃಷಿ ಉಪಕರಣಗಳಲ್ಲಿ ಹೂಡಿಕೆ ಮಾಡಲಾಗುತ್ತಿತ್ತು ಎಂಬುದಕ್ಕೂ ಪುರಾವೆಗಳು ಸಿಕ್ಕಿವೆ.
ಹವಾಮಾನ ಒಣಗಿದಾಗ ಕೃಷಿಯನ್ನೇ ಬದಲಿಸಿದರು : ಈ ಅಧ್ಯಯನದ ಅತ್ಯಂತ ಕುತೂಹಲಕಾರಿ ಅಂಶ ಇದೆ. ಸುಮಾರು 1,300 ವರ್ಷಗಳ ಹಿಂದೆ ಮಳೆಗಾಲ ದುರ್ಬಲಗೊಂಡು ಪ್ರದೇಶದ ಹವಾಮಾನ ಹೆಚ್ಚು ಒಣಗಿತ್ತು. ಆದರೆ ಆಗಿನ ಜನರು ಕೃಷಿಯನ್ನು ಕೈಬಿಡಲಿಲ್ಲ. ಬದಲಾಗಿ ಬೆಳೆ ಪದ್ಧತಿಯನ್ನು ಬದಲಿಸಿ, ಬರ ತಾಳುವ ವಿವಿಧ ಬೆಳೆಗಳ ಮೇಲೆ ಹೆಚ್ಚು ಅವಲಂಬಿತರಾದರು. ಬೇಸಿಗೆಯ ಅಕ್ಕಿ ಬೆಳೆಗಾಗಿ ನೀರನ್ನು ಸಂಗ್ರಹಿಸಲು ನೀರಾವರಿ ಕೆರೆಗಳು ಮತ್ತು ಜಲಾಶಯಗಳನ್ನು ನಿರ್ಮಿಸಿದರು. ಅಂದರೆ ಹವಾಮಾನ ಬದಲಾವಣೆಗೆ ಅವರು ಕೇವಲ ಕಾಯಲಿಲ್ಲ; ಕೃಷಿ ಪದ್ಧತಿಯನ್ನೇ ಬದಲಿಸಿಕೊಂಡರು.
3,000 ವರ್ಷಗಳ ಹಿಂದಿನ ಕೃಷಿ ಪಾಠ ಇಂದಿಗೂ ಪ್ರಸ್ತುತ : ಇಂದು ಮಳೆ ಯಾವಾಗ ಬರುತ್ತದೆ ಎಂಬುದು ಖಚಿತವಿಲ್ಲ. ಕೆಲವೊಮ್ಮೆ ಅತಿಮಳೆ, ಕೆಲವೊಮ್ಮೆ ಮಳೆ ಕೊರತೆ. ತಾಪಮಾನ ಏರಿಕೆ, ನೀರಿನ ಕೊರತೆ, ಹೊಸ ಕೀಟ–ರೋಗಗಳು ರೈತರ ಸವಾಲುಗಳನ್ನು ಹೆಚ್ಚಿಸುತ್ತಿವೆ. ಈ ಸಂದರ್ಭದಲ್ಲಿ ಯುರೆನ್‌ನ ಪುರಾತನ ಕೃಷಿ ಒಂದು ಪ್ರಮುಖ ಸಂದೇಶ ನೀಡುತ್ತದೆ. ಹವಾಮಾನ ಬದಲಾದಾಗ ಕೃಷಿಯೂ ಬದಲಾಗಬೇಕು. ಬಹುಬೆಳೆ ಪದ್ಧತಿ, ಸ್ಥಳೀಯವಾಗಿ ಹೊಂದಿಕೊಂಡ ಬೆಳೆಗಳು, ಬರ ತಾಳುವ ತಳಿಗಳು ಮತ್ತು ನೀರಿನ ಸಂಗ್ರಹಣೆ , ಇವು ಹೊಸ ಪರಿಕಲ್ಪನೆಗಳಲ್ಲ. ನಮ್ಮ ಹಿಂದಿನ ಕೃಷಿ ಸಮಾಜಗಳು ಅವುಗಳನ್ನು ತಮ್ಮ ಪರಿಸ್ಥಿತಿಗೆ ಅನುಗುಣವಾಗಿ ಬಳಸಿಕೊಂಡಿದ್ದವು.
ಇಂದಿನ ಕೃಷಿಗೆ ಬಹುಬೆಳೆ ಮತ್ತೆ ಬೇಕೇ? : ಒಂದೇ ಬೆಳೆಯ ಮೇಲೆ ಹೆಚ್ಚು ಅವಲಂಬನೆ ಮಾಡಿದಾಗ ಹವಾಮಾನ ಅಪಾಯ ಹೆಚ್ಚಾಗಬಹುದು. ಒಂದು ವರ್ಷ ಮಳೆ ಕೈಕೊಟ್ಟರೆ ಇಡೀ ಆದಾಯವೇ ಕುಸಿಯಬಹುದು. ಆದರೆ ಬೆಳೆ ವೈವಿಧ್ಯವಿದ್ದರೆ ಅಪಾಯವನ್ನು ಸಹಿಸಿಕೊಳ್ಳಬಹುದು. ಇದು ಪ್ರತಿಯೊಂದು ಪ್ರದೇಶಕ್ಕೂ ಒಂದೇ ಮಾದರಿ ಆಗಬೇಕಿಲ್ಲ. ಮಣ್ಣು, ಮಳೆ, ನೀರು ಮತ್ತು ಮಾರುಕಟ್ಟೆಗೆ ತಕ್ಕ ಬೆಳೆ ವೈವಿಧ್ಯ ರೂಪಿಸುವುದು ಮುಖ್ಯ.
ಹಳೆಯ ಬೀಜಗಳು ಭವಿಷ್ಯದ ಕೃಷಿಗೂ ಸುಳಿವು ನೀಡಬಹುದೇ? : ಪುರಾತನ ಬೀಜಗಳ ಅಧ್ಯಯನ ಕೇವಲ ಇತಿಹಾಸ ತಿಳಿಯಲು ಮಾತ್ರವಲ್ಲ. ಯಾವ ಪ್ರದೇಶದಲ್ಲಿ ಯಾವ ಬೆಳೆಗಳು ಸಾವಿರಾರು ವರ್ಷಗಳ ಹಿಂದೆ ಬೆಳೆಯುತ್ತಿದ್ದವು, ಯಾವ ಪರಿಸ್ಥಿತಿಯಲ್ಲಿ ಅವು ಉಳಿದವು, ಹವಾಮಾನ ಬದಲಾದಾಗ ಜನರು ಯಾವ ಬೆಳೆಗಳಿಗೆ ಬದಲಾದರು ಎಂಬ ಮಾಹಿತಿ ಭವಿಷ್ಯದ ಹವಾಮಾನ-ಸಹಿಷ್ಣು ಕೃಷಿ ಸಂಶೋಧನೆಗೂ ಉಪಯುಕ್ತವಾಗಬಹುದು. ಪುರಾತನ ಕೃಷಿಯಲ್ಲಿದ್ದ ಬೆಳೆ ವೈವಿಧ್ಯ ಮತ್ತು ಸ್ಥಳೀಯ ಹೊಂದಾಣಿಕೆಯ ಬಗ್ಗೆ ಅಧ್ಯಯನ ನಡೆಸುವುದು ಇಂದಿನ ಕೃಷಿ ಯೋಜನೆಗಳಿಗೂ ಹೊಸ ದೃಷ್ಟಿಕೋನ ನೀಡಬಹುದು. ಭಾರತದ ಪ್ರಾಚೀನ ಕೃಷಿ ಜಾಗತಿಕ ವ್ಯಾಪಾರಕ್ಕೂ ಸಂಪರ್ಕ ಹೊಂದಿತ್ತು.
ಯುರೆನ್‌ನ ಬೀಜಗಳು ಕೇವಲ ಸ್ಥಳೀಯ ಕೃಷಿಯ ಕಥೆಯನ್ನೇ ಹೇಳುವುದಿಲ್ಲ. ಸಂಶೋಧಕರು ಮಧ್ಯ ಏಷ್ಯಾದಿಂದ ಬಂದ ಬೆಳ್ಳುಳ್ಳಿ ಮತ್ತು ಆಫ್ರಿಕಾದಿಂದ ಬಂದ ಹುಣಸೆಯಂತಹ ಸಸ್ಯಗಳ ಸುಳಿವು ಕಂಡಿದ್ದಾರೆ. ಇದರಿಂದ ಆ ಕಾಲದ ಕೃಷಿ ಸಮುದಾಯಗಳು ದೂರದ ಪ್ರದೇಶಗಳೊಂದಿಗೆ ವ್ಯಾಪಾರ ಸಂಪರ್ಕ ಹೊಂದಿದ್ದವು ಎಂಬುದಕ್ಕೆ ಪುರಾವೆ ಸಿಗುತ್ತದೆ. ಅಂದರೆ ಕೃಷಿ, ವ್ಯಾಪಾರ ಮತ್ತು ಬೆಳೆಗಳ ವಿನಿಮಯ ಸಾವಿರಾರು ವರ್ಷಗಳ ಹಿಂದೆಯೇ ಪರಸ್ಪರ ಸಂಬಂಧ ಹೊಂದಿದ್ದವು. ಕೃಷಿ ಎಂದಿಗೂ ಸ್ಥಿರವಾಗಿರಲಿಲ್ಲ ಇಂದು ನಾವು ಕೃಷಿ ಪದ್ಧತಿ ಬದಲಾಗುತ್ತಿದೆ ಎಂದು ಹೇಳುತ್ತೇವೆ.
ಕೃಷಿ ಎಂದಿಗೂ ಸ್ಥಿರವಾಗಿರಲಿಲ್ಲ. ಹವಾಮಾನ ಬದಲಾದಾಗ ಬೆಳೆ ಬದಲಾಯಿತು. ಜನಸಂಖ್ಯೆ ಹೆಚ್ಚಾದಾಗ ಉತ್ಪಾದನಾ ಪದ್ಧತಿ ಬದಲಾಯಿತು. ನೀರಿನ ಕೊರತೆಯಾದಾಗ ಜಲಸಂಗ್ರಹಣೆ ಹೆಚ್ಚಾಯಿತು. ಹೊಸ ಸಸ್ಯಗಳು ಬಂದಾಗ ಆಹಾರ ಪದ್ಧತಿಯೂ ಬದಲಾಯಿತು. 3,000 ವರ್ಷಗಳ ಹಿಂದೆ ನಡೆದ ಈ ಬದಲಾವಣೆಗಳು ಇಂದಿನ ಕೃಷಿಗೂ ಒಂದು ದೊಡ್ಡ ಪಾಠ ನೀಡುತ್ತವೆ.
Archaeologists have uncovered more than half a million charred seeds at Uren in Bihar, providing an uninterrupted 3,000-year record of agriculture in eastern India, from around 1300 BCE to 1200 CE. The evidence shows that early farmers used diverse cropping systems, growing winter crops such as barley, wheat and lentils alongside summer rice and millets. Over time, rice became dominant, apparently alongside greater investment in irrigation and agricultural intensification. The study also shows that when the climate became significantly drier around 1,300 years ago, farmers adapted by diversifying into drought-tolerant crops and building water-storage structures. The findings highlight the long history of agricultural adaptation to climate change in India.


