ಸರ್ಕಾರದ ಹತ್ತಾರು ಕೆಲಸಗಳ ಜೊತೆಗೆ ಮಕ್ಕಳ ಲಾಲನೆ ಪಾಲನೆ | ಕೇಳುವವರಿಲ್ಲ ಈ ಅಂಗನವಾಡಿ ಮಾತೆಯರ ಬದುಕು ಬವಣೆ |

June 27, 2024
2:32 PM

“ಬಾ ಬಾ ಗೊಂಬೆ , ಬಣ್ಣದ ಗೊಂಬೆ
ಬೆಣ್ಣೆ ಬಿಸ್ಕೆಟ್ ತಿನ್ನೋಣ,
ಕುದುರೆ ಗಾಡಿ ಹತ್ತೊಣ,
ಜುಮ್ ಜುಮ್ ಕುಣಿಯೋಣ..”
ವೇರಿಗುಡ್ ಆರತಿ, ನೋಡ್ರಿ ಮಕ್ಕಳಾ(Children) ನೀವು ನಾಳೆಯಿಂದ ಎಲ್ಲಾರೂ ಹೇಳಬೇಕು….“ಬರ್ರೀ ವೈನಿ ನಿಮ್ಮ ಆಕಾಶ್ ಯಾಕೋ ಭಾಳ ಅಳಾತಾನ್ರೀ ಚಾಕಲೇಟ್ ಕೊಡ್ತೀವ್ ಅಂದ್ರ ಇಲ್ಲ, ಬಿಸ್ಕೆಟ್ ಕೊಡ್ತೀವ್ ಅಂದ್ರೂ ಇಲ್ಲ, ಇನ್ನೊಂದ ತಾಸಲೇ ಮನಿಗಿ ಹೋಗಕೆ ಅಂದ್ರೂ ಇಲ್ಲ ಏ ಅಳಬ್ಯಾಡೋ ಹೋಗು ನಾಳಿ ಬಾ ಮತ್ ಟಾ…ಟಾ..”

Advertisement
Advertisement

“ಯಾಕ್ರೀ ಭಾಬಿ ಈ ತಿಂಗಳ ರೇಷನ್ ವಯ್ಯಲಿಲ್ಲ ಅಲ್ರೀ” ಅನ್ನುತ್ತ ಅಂಗನವಾಡಿಗೆ(Anganavadi) ಬರುವ ಪುಟಾಣಿ ಮಕ್ಕಳ ಗಲ್ಲ ನೀವಿ ತಲೆ ನೇವರಿಸಿ ಒಳಗೆ ಕರೆದೊಯ್ಯುತ್ತ ಅವರ ತಾಯಂದಿರ ಜೊತೆಗೆ ಅಷ್ಟೇ ಕಾಳಜಿಯಿಂದ ಮಾತನಾಡುವ ಅಂಗನವಾಡಿ ಕಾರ್ಯಕರ್ತೆ(Worker) ಮತ್ತು ಸಹಾಯಕಿಯರನ್ನೊಮ್ಮೆ(Helper) ನೋಡಿ. “ನನ್ನ ಪಾಟಿ ಕರೀದು, ಸುತ್ತ ಮುತ್ತ ಕಟ್ಟಿದ್ದು, ರ ಠ ಈ ಕ ಬರೆದೆನು, ಅಮ್ಮನ ಮುಂದೆ ಹಿಡಿದೆನು, ಅಮ್ಮ ನೋಡಿ ಹಿಗ್ಗಿದಳು ತಿನ್ನಲು ಉಂಡೆ ಕೊಟ್ಟಳು, ಗಪಾ-ಗಪಾ ತಿಂದೇನು, ಥಕಾ-ಥಕಾ ಕುಣಿದೇನು” ಅಂತ ಅವರೊಂದಿಗೆ ಹೆಜ್ಜೆ ಹಾಕುತ್ತಲೇ “ ಈಗ ಎಲ್ಲಾ ಮಕ್ಕಳು ಪಾಟಿ ತಗೀರಿ” ಅನ್ನುತ್ತ ಸ್ಲೇಟು ತೆಗೆಸಿ ಬಳಪ ಹಿಡಿಸಿ ಕೈ ಹಿಡಿದು ತೀಡಿಸುವ ಆ ತಾಯಂದಿರ ಬದುಕಿನ ಬವಣೆಗಳ ಬಗ್ಗೆ ನಿಮಗೂ ಒಂದಷ್ಟು ತಿಳಿಯಬೇಕಿದೆ.

Advertisement

ಚುನಾವಣೆಯ ಬಿ ಎಲ್ ಓ ಕೆಲಸ, ಜನಗಣತಿ, ಮಕ್ಕಳ ಗಣತಿ, ಮನೆ ಗಣತಿ,ಪೋಲಿಯೋ ಡ್ಯೂಟಿ, ಸೇರಿದಂತೆ ಸರ್ಕಾರಿ ಆಸ್ಪತ್ರೆಯ ಸಹಭಾಗಿತ್ವದ ಹತ್ತಾರು ಕೆಲಸಗಳಲ್ಲಿ ಕೈ ಜೋಡಿಸುವ, ಇಂತಹ ಹೆಣ್ಣುಮಕ್ಕಳ ಬದುಕು ಸರ್ಕಾರ ಕೊಡುವ ಕನಿಷ್ಠ ಗೌರವ ಧನದೊಂದಿಗೆ ಜೀವನ ಭದ್ರತೆಯೂ ಇಲ್ಲದೆ ಕೊರಗುತ್ತಲೇ ಸಾಗಿದೆ. ಒಂದು ಕಡೆ ರಾಜ್ಯ ಸರ್ಕಾರ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಎಲ್ ಕೆ ಜಿ, ಯೂ ಕೆ ಜಿ ಆರಂಭಿಸಲು ಮುಂದಾಗಿದ್ದು ಈ ಮೊದಲು ಖಾಸಗಿ ಶಾಲೆಗಳ ಭರಾಟೆಯಿಂದ ಅರೆ ಜೀವವಾಗಿದ್ದ ಅಂಗನವಾಡಿಗಳು ಸದ್ಯ ಕುಟುಕು ಜೀವ ಹಿಡಿದು ಕುಂಟುತ್ತ ಸಾಗಿರುವಾಗಲೇ ಹಳೆಯ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ.

“ಮಾತೃಪೂರ್ಣ ಯೋಜನೆ” ಅಡಿಯಲ್ಲಿ ಗರ್ಭಿಣಿ ಮಹಿಳೆಯರನ್ನು ಗುರಿತಿಸಿ ಅವರಿಗೆ ಪೌಷ್ಟಿಕ ಆಹಾರ ಕೊಡುವ, ಮತ್ತು ಅಪೌಷ್ಟಿಕತೆಯಿಂದ ಬಳಲುವ ಮಕ್ಕಳನ್ನು ಗುರುತಿಸಿ ಕ್ಯಾಲ್ಸಿಯಂ, ಐರನ್ ಮಾತ್ರೆ, ಅಥವಾ ಔಷಧಿ ಕೊಡುವ ಕೆಲಸ ಮಾಡುವ ಅದೆಷ್ಟೋ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರು ತಾಯಿ ಮಮತೆಯ ಹೆಣ್ಣು ಜೀವಗಳಾಗಿದ್ದು ಬಡ ಕುಟುಂಬಗಳ ಗರ್ಭಿಣಿ ಬಾಣಂತಿಯರಿಗೆ ಕೆಲವೊಮ್ಮೆ ತಮ್ಮ ಸಂಬಳದಲ್ಲೇ ಸೀಮಂತ ಮಾಡುವ ಮೂಲಕವೋ, ಅಥವಾ ಬೀಳುವ ಸ್ಥಿತಿಯಲ್ಲಿ ಇರುವ ಹಳೆಯ ಅಂಗನವಾಡಿಯ ದುರಸ್ತಿಗೋ ಹಣ ವ್ಯಯಿಸಿ ನಿಸ್ವಾರ್ಥದ ಸೇವೆ ಸಲ್ಲಿಸಿ ಹಣ್ಣಾಗಿರುತ್ತಾರೆ.

Advertisement

ಕೆಲವು ವರ್ಷಗಳ ಹಿಂದೆ ಬೇಳೆ, ಕಾಳು, ರವೆ, ಎಣ್ಣೆ ಹೀಗೆ ಪಡಿತರ ಬರುತ್ತಿದ್ದ ದಿನಗಳಲ್ಲಿ ಮನೆಗೆ ಹೋಗಿ ಮತ್ತೆ ಅಡುಗೆ ಮಾಡಬೇಕು ಅನ್ನುವ ಬೇಜಾರಿನಿಂದಲೋ, ಯಾವುದೋ ಸರ್ವೆ ಕಾರ್ಯ ಮುಗಿಸಿ ಮನೆಗೆ ಹೊರಡುವಾಗ ತಡವಾಯಿತು ಅಂತಲೋ, ಮಕ್ಕಳಿಗೆ ಹಂಚಿ ಉಳಿದ ಉಪ್ಪಿಟ್ಟು ಅಥವಾ ಕೆಲವು ಮಕ್ಕಳು ಬೇಡ ಅಂತ ಹಠ ಮಾಡಿದಾಗ ಉಳಿದ ಕುದಿಸಿದ ಮೊಟ್ಟೆ ಕೆಟ್ಟು ಹೋಗುತ್ತದೆ ಅಂತಲೋ ಮನೆಗೆ ತೆಗೆದುಕೊಂಡು ಹೋಗುವಾಗ ಅರ್ಧ ದಾರಿಯಲ್ಲಿ ಹೊಂಚಿ ಹಾಕಿ ಕುಳಿತು ಚಂಗನೆ ನೆಗೆದು ಅವರ ಕೈಯ್ಯಲ್ಲಿನ ಚೀಲ ಕಸಿದು ಏನೈತ್ರಿ ಇದರಾಗ, ಅನ್ನುತ್ತ ಅಲ್ಲೇ ರಸ್ತೆಯ ಮೇಲೆ ಸುರಿದು ಅಂಗನವಾಡಿ ಆಹಾರ ಕದ್ದ ಕಳ್ಳಿ ಅನ್ನುತ್ತ ಮೊಬೈಲ್‌ ಹಿಡಿದು ಕೇಕೆ ಹಾಕುತ್ತಿದ್ದ ಪಟಾಲಮ್ಮುಗಳ ಎದುರು, ಮರ್ಯಾದೆಗೆ ಹೆದರಿ ನಡುಗುತ್ತ, ಆದ ಅವಮಾನಕ್ಕೆ ದುಖಃ ಉಕ್ಕಿ ಬಂದು ಕಣ್ಣೀರು ಸುರಿಸುತ್ತ ನಿಲ್ಲುತ್ತಿದ್ದ ಕೆಲವು ಅಸಹಾಯಕ ಹೆಣ್ಣುಮಕ್ಕಳನ್ನು ಕಂಡಾಗ ಅಯ್ಯೋ ಪಾಪ ಅನ್ನಿಸಿದ್ದೂ ಇದೆ.

ಈಗ ಎಮ್ ಎಸ್ ಪಿ ಎಸ್ ಗಳಿಂದ “ರೆಡಿ ಟೂ ಯೀಟ್” ಅಂತಹದ್ದೆ ರೆಡಿಮೇಡ್ ಪ್ಯಾಕೆಟ್ ಬರುತ್ತಿದ್ದು ಅಡುಗೆ ಮಾಡುವ ಅಷ್ಟೇನೂ ಜಂಝಾಟ ಇಲ್ಲದೆ ಇದ್ದರೂ ಸದ್ಯ ರಾಜ್ಯದ ಹಲವಾರು ಅಂಗನವಾಡಿಗಳು ಮಕ್ಕಳ ಹಾಜರಾತಿ ಕೊರತೆಯಿಂದ ಬಳಲುತ್ತಿವೆ. ಹತ್ತಾರು ವರ್ಷಗಳ ಕಾಲ ಸರ್ಕಾರಿ ನೌಕರರಿಗೆ ಕಡಿಮೆ ಇಲ್ಲದಂತೆ ತಮಗೆ ಬರುವ ಪುಡಿಗಾಸು ಗೌರವ ಧನದಲ್ಲೇ ನಿಸ್ವಾರ್ಥದ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಹೋಗುವಾಗ ಇಡುಗಂಟು ಸಿಗುವ ನಿರೀಕ್ಷೆ ಹೊತ್ತ ಅದೆಷ್ಟೋ ಕಾರ್ಯಕರ್ತೆಯರು ವಯೋ ಸಹಜ ಕಾಯಿಲೆಗಳಿಂದ ಬಳಲುವಾಗಲೂ ಹತ್ತಿಪ್ಪತ್ತು ಸಾವಿರದ ಇಡುಗಂಟು ಪಡೆಯಲು ಅಲೆದಾಡಿದ ಕಥೆಗಳು ಕೂಡ ಅಲ್ಲಲ್ಲಿ ಕೇಳಿ ಬರುತ್ತವೆ.

Advertisement

ದಿನಗಳು ಬದಲಾದಂತೆಲ್ಲ ಅಭಿವೃದ್ಧಿ ಆಗಬೇಕಿದ್ದ ಅಂಗನವಾಡಿಗಳು, ಸುಧಾರಣೆ ಆಗದೆ, ನಮ್ಮ ಮಕ್ಕಳು ಪಪ್ಪಾ ಮಮ್ಮಿ ಅನ್ನೋದೆ ಚಂದ ಅನ್ನುವ ಆಸೆ ಹೊತ್ತು “ರೇನ್ ರೇನ್ ಗೋ ಅವೆ” ಅನ್ನುವ ಕಿಂಡರ್ ಗಾರ್ಡನ್,ಮತ್ತು ಕಾನ್ವೆಂಟ್ ಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಹವಣಿಸುತ್ತಿರುವ ಪೋಷಕರ ನಡುವೆ ಆರು ಸಾವಿರ ಚಿಲ್ಲರೆ ಪಡೆಯುವ ಸಹಾಯಕಿಯರು ಮತ್ತು ಹತ್ತರಿಂದ ಹನ್ನೆರಡು ಸಾವಿರ ಗೌರವ ಧನ ಪಡೆಯುವ ಹೆಣ್ಣುಮಕ್ಕಳ ಹೊಟ್ಟೆಗೆ ತಣ್ಣೀರ ಬಟ್ಟೆಯೇ ಗತಿ ಅನ್ನುವ ದಿನಗಳು ದೂರವೇನೂ ಇಲ್ಲ.

ಒಂದು ಕಡೆ ಎಂಟನೆಯ ತರಗತಿ ಅಥವಾ ಹತ್ತನೆಯ ತರಗತಿ ಓದಿ ಅನುಭವದ ಆಧಾರದಲ್ಲಿ ಅಂಗನವಾಡಿ ಮಕ್ಕಳಲ್ಲಿ ಅಕ್ಷರದ ಜ್ಞಾನ ಮೂಡಿಸುತ್ತ…ಬೆಳಗಿನ ಪ್ರಾರ್ಥನೆ, ರಾಷ್ಟ್ರಗೀತೆ,ರಾಷ್ಟ್ರೀಯ ಚಿಹ್ನೆ,ರಾಷ್ಟ್ರೀಯ ಪಕ್ಷಿ,ರಾಷ್ಟ್ರೀಯ ಲಾಂಛನ ಅನ್ನುವ ಅರಿವು ಮೂಡಿಸುತ್ತ ನೀತಿ ಕಥೆಗಳನ್ನು ಹೇಳಿ ಸುಸಂಸ್ಕೃತ ರನ್ನಾಗಿ ಮಾಡುತ್ತಿದ್ದ ಮತ್ತು ಉಪಹಾರ ಸೇವನೆಗೂ ಮೊದಲು ಎಲ್ಲರ  ಕೈ ತೊಳೆಸಿ “ಓಂ ಅಸತೋಮಾ ಸದ್ಗಮಯ ತಮಸೋಮಾ ಜ್ಯೋತಿರ್ಗಮಯ” ಅನ್ನುವ ಪ್ರಾರ್ಥನೆ ಕಲಿಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಪರ್ಯಾಯವಾಗಿ ತೊಟ್ಟಿಲು ಮನೆ ಅನ್ನುವ ನೆಪದಲ್ಲಿ ಡಿಗ್ರಿ ಕಲಿತವರಿಗೆ ಆಧ್ಯತೆ ಕೊಡುವ ಮೂಲಕ ಮತ್ತು ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣದ ಪೂರ್ವ ಶಿಕ್ಷಣ ಕ್ರಮದ ಹೆಸರಿನಲ್ಲಿ ಎಲ್ ಕೆ ಜಿ ,ಯೂ ಕೆ ಜಿ ಆರಂಭಿಸಲು ಮುಂದಾಗಿರುವ ಸರ್ಕಾರ ಸದ್ಯ ಅಂಗನವಾಡಿಗಳ ಪರಿಸ್ಥಿತಿಯನ್ನು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾಡುತ್ತಿದೆ

Advertisement

ರಾಜ್ಯಾದ್ಯಂತ ಪ್ರಸ್ತುತ 63,030 ಅಂಗನವಾಡಿ ಹಾಗೂ 3,331 ಮಿನಿ ಅಂಗನವಾಡಿ ಕೇಂದ್ರಗಳ ಪೈಕಿ 41,508 ಅಂಗನವಾಡಿ ಕೇಂದ್ರಗಳು ಮಾತ್ರ ಸ್ವಂತ ಕಟ್ಟಡಗಳನ್ನು ಹೊಂದಿದ್ದು, 1,527 ಅಂಗನವಾಡಿ ಕೇಂದ್ರಗಳು ಪಂಚಾಯತ್ ಕಟ್ಟಡಗಳಲ್ಲಿ, 3,537 ಅಂಗನವಾಡಿ ಕೇಂದ್ರಗಳು ಸಮುದಾಯದ ಕಟ್ಟಡಗಳಲ್ಲಿ, 152 ಅಂಗನವಾಡಿ ಕೇಂದ್ರಗಳು ಯುವಕ ಮಂಡಳಿ ಮತ್ತು 94 ಮಹಿಳಾ ಮಂಡಳಿ ಕಟ್ಟಡಗಳಲ್ಲಿ, 4,266 ಅಂಗನವಾಡಿ ಕೇಂದ್ರಗಳು ಶಾಲಾ ಕಟ್ಟಡಗಳಲ್ಲಿ 11,956 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ಹಾಗೂ 2,765 ತಾತ್ಕಾಲಿಕ ವ್ಯವಸ್ಥೆಯಡಿ ಕಾರ್ಯ ನಿರ್ವಹಿಸುತ್ತಿವೆ ಅನ್ನುವ ಮಾಹಿತಿ ಇದ್ದು ನಾವೆಲ್ಲ ಚಿಕ್ಕವರಾಗಿದ್ದಾಗ ಮೊದಲ ಅಕ್ಷರ ಅಭ್ಯಾಸ ಕಲಿಸಿದ್ದ ಮತ್ತು ತೊದಲು ನುಡಿಗಳಿಗೆ ಪದ್ಯಪಾಠ ಮಾಡಿಸಿದ್ದ ಅಂಗನವಾಡಿ ಕೇಂದ್ರ ಗಳ ಸ್ಥಿತಿ ಈಗ ಅಧೋಗತೀಯತ್ತ ಸಾಗುತ್ತಿರುವದು ವಿಪರ್ಯಾಸವೇ ಸರಿ.

ಸೇವಾ ಭದ್ರತೆ, ಖಾಯಮ್ಮಾತಿ ಮತ್ತು ಗೌರವ ಧನದ ಹೆಚ್ಚಳ, ಅನಿವಾರ್ಯ ರಜೆಗೆ ಗೌರವ ಧನ ಕಡಿತ ಮಾಡದಂತೆ ಆಗ್ರಹಿಸಿ, ಇಂತಹದ್ದೇ ಬೇಡಿಕೆಗಳನ್ನು ಇಟ್ಟುಕೊಂಡು ಹೋರಾಟದ ಹೆಸರಲ್ಲಿ ರಾಜಧಾನಿಯ ರಸ್ತೆಗೆ ಇಳಿಯುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ವರ್ಷಕ್ಕೆರಡು ಸೀರೆ, ಮೇ ತಿಂಗಳಲ್ಲಿ ಹದಿನೈದು ದಿನಗಳ ರಜೆ ಹೊರತು ಪಡಿಸಿ ಹೆಚ್ಚಿನ ಯಾವ ಸೌಲಭ್ಯಗಳು ಇಲ್ಲ ಅನ್ನುವ ಅರಿವು ಬಹಳಷ್ಟು ಜನರಿಗೆ ಇಲ್ಲದೆ ಇರುವದು ಮತ್ತು ಸರ್ಕಾರ ಅಂಗನವಾಡಿಗಳ ಬಾಗಿಲು ಮುಚ್ಚುವ ಹವಣಿಕೆಯಲ್ಲಿ ಪರ್ಯಾಯ ಯೋಜನೆಗಳನ್ನು ಜಾರಿಗೆ ತರುತ್ತಿರುವದು ಸದ್ಯ ರಾಜ್ಯದ 225 ತಾಲೂಕುಗಳ ಸಾವಿರಾರು ಅಂಗನವಾಡಿ ಸಿಬ್ಬಂದಿಯ ಅನ್ನ ಕಸಿಯುವ ಹುನ್ನಾರದಂತೆ ಭಾಸವಾಗುತ್ತಿದೆ.

Advertisement

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚೀವೆ ಹೆಬ್ಬಾಳಕರ ಅವರ ಭರವಸೆಯನ್ನು ನಂಬಿ ಪ್ರೀಢಂ ಪಾರ್ಕ್ ನಲ್ಲಿ ನಡೆಯುತ್ತಿದ್ದ ಹೋರಾಟವನ್ನು ತಾತ್ಕಾಲಿಕವಾಗಿ ಮೊಟಕು ಗೊಳಿಸಿದರೂ ಕೂಡ ವಿವಿಧ ಬೇಡಿಕೆಗಳು ಈಡೇರುವದರ ಮೂಲಕ ಅಂಗನವಾಡಿ ಸಿಬ್ಬಂದಿಯ ಬದುಕು ಹಸನಾಗುವದು ಯಾವಾಗ ಅನ್ನುವ ಪ್ರಶ್ನೆ ಮಾತ್ರ ಯಕ್ಷ ಪ್ರಶ್ನೆ ಆಗಿಯೇ ಉಳಿದು ಕೊಂಡಿದೆ.

ಬರಹ :
ದೀಪಕ ಶಿಂಧೇ 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಒನಕೆ ಎಂಬ ಉಕ್ಕಿನ ಆಯುಧ…!!! ಬಲು ಅಪರೂಪದ ಒಂದು ಮಾಹಿತಿ
June 29, 2024
2:15 PM
by: The Rural Mirror ಸುದ್ದಿಜಾಲ
ಹೀಗೊಂದು ಕನಸಿನ ದರ್ಶನ.. | ದರ್ಶನ್ ಮತ್ತು ಅಂಗುಲಿಮಾಲ.. ಈ ಘಟನೆಯಿಂದ ಕಲಿಯಬಹುದಾದ ಕೆಲವು ಒಳ್ಳೆಯ ಪಾಠಗಳು
June 28, 2024
1:46 PM
by: ವಿವೇಕಾನಂದ ಎಚ್‌ ಕೆ
ಪಶ್ಚಿಮ ಘಟ್ಟ ಇರುವುದು ಅಲ್ಲಿನ ಜೀವ ಸಂಕುಲಗಳಿಗಾಗಿ… ಮಾನವ ತಿರುಗಾಟಕ್ಕೆ ಅಲ್ಲ
June 28, 2024
12:43 PM
by: The Rural Mirror ಸುದ್ದಿಜಾಲ
ಕಾಲಿಟ್ಟಲ್ಲೆಲ್ಲಾ ಕಸ ಕಸ ಕಸ…… ಇದಕ್ಕೆ ನಾವೇನು ಮಾಡಬಹುದು? | ನಮ್ಮ ಜವಾಬ್ದಾರಿ ಏನು..? |
June 27, 2024
12:57 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror