ಅಡಿಕೆ ಹಳದಿ ಎಲೆ ರೋಗ ಹರಡುತ್ತಿದೆ. ವಿವಿಧ ಪ್ರಯತ್ನವಾದರೂ ಯಾವುದೇ ಪ್ರಯತ್ನ ಯಶಸ್ಸು ಕಾಣಲಿಲ್ಲ. ಆದರೆ ಈಗ ಜಗತ್ತಿನಾದ್ಯಂತ ಪ್ರಯತ್ನ ಮಾಡುತ್ತಿರುವಂತೆಯೇ ಅಡಿಕೆ ಹಳದಿ ಎಲೆ ರೋಗ ನಿರೋಧಕ ತಳಿ ಅಭಿವೃದ್ಧಿಯ ಬಗ್ಗೆ ಹೊಸ ಹೆಜ್ಜೆಯನ್ನು ಇಡಲಾಗುತ್ತಿದೆ. ಅಡಿಕೆ ಬೆಳೆಗಾರರಿಗೆ ಇದೊಂದು ಆಶಾವಾದ ಮೂಡಿಸುತ್ತಿದೆ.
ವಿಡಿಯೋ ವರದಿ :
#ಅಡಿಕೆ ರೋಗ ನಿರೋಧಕ ತಳಿ ಅಭಿವೃದ್ಧಿ ಪಡಿಸಲು ಬೆಳೆಗಾರರಿಂದ ಮನವಿ.
Request from #Arecanut grower , to develop Arecanut Yellow Leaf Disease resistant breed. pic.twitter.com/25uxVJljmH— theruralmirror (@ruralmirror) October 5, 2021
Advertisement
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ, ಅರಂತೋಡು , ಮರ್ಕಂಜ ಪ್ರದೇಶದಲ್ಲಿ ಈಗ ಹಳದಿ ಎಲೆ ರೋಗ ಹೆಚ್ಚು ಹರಡಿದೆ. ಜಿಲ್ಲೆಯ ವಿವಿದೆಡೆಗೆ ಹರಡುತ್ತಿದೆ. ಅಡಿಕೆ ತೋಟದಲ್ಲಿ ಹಳದಿ ಎಲೆ ರೋಗಕ್ಕೆ ಫೈಟೋಪ್ಲಾಸ್ಮಾ ಎಂಬ ವೈರಸ್ ಕಾರಣ ಹಾಗೂ ಹರಡುವಿಕೆಗೆ ಜಿಗಿ ಹುಳ ಕಾರಣ ಎಂದು ಗುರುತಿಸಲಾಗಿದ್ದರೂ ಇದುವರೆಗೂ ಸೂಕ್ತವಾದ ಔಷಧಿ ಕಂಡುಹಿಡಿಯಲು ಆಗಿಲ್ಲ. ಹೀಗಾಗಿ ಈಗ ಅಡಿಕೆ ಬೆಳೆಗಾರರ ಶೇ.90 ರಷ್ಟು ಅಡಿಕೆ ತೋಟಗಳು ನಾಶವಾಗಿದೆ. ಪರ್ಯಾಯ ದಾರಿಗಳು ಇಲ್ಲವಾಗಿದೆ. ಇಡೀ ರಾಜ್ಯದಲ್ಲಿ ಸುಮಾರ 14,೦೦೦ ಪ್ರದೇಶದಲ್ಲಿ ಹಳದಿ ಎಲೆ ರೋಗ ಹರಡಿದೆ ಎನ್ನುವುದು ದಾಖಲೆಗಳು ಹೇಳುತ್ತವೆ. ದಕ ಜಿಲ್ಲೆಯಲ್ಲಿಯೇ 1700 ಹೆಕ್ಟೇರ್ ಪ್ರದೇಶದಲ್ಲಿ ಹಳದಿ ಎಲೆ ರೋಗ ಹರಡಿದೆ ಎನ್ನುವುದು ಈಗಿನ ಲೆಕ್ಕಾಚಾರ.
ಸಂಪಾಜೆಯಲ್ಲಿ 2013 ರ ವೇಳೆಗೆ ಸುಮಾರು 750 ಕ್ವಿಂಟಾಲ್ ಅಡಿಕೆ ಕ್ಯಾಂಪ್ಕೋ ಶಾಖೆಗೆ ಅಡಿಕೆ ಬರುತ್ತಿದ್ದ ದಾಖಲೆಗಳು ಇದೆ. ಆದರೆ ಈಚೆಗೆ 350 ಕ್ವಿಂಟಾಲ್ ಗೆ ತಲುಪಿದೆ ಎನ್ನುವುದು ಹಳದಿ ಎಲೆ ರೋಗ ಭೀಕರತೆ ಹಾಗೂ ವಿಸ್ತರಣೆಯ ಪ್ರಭಾವವನ್ನು ತಿಳಿಸುತ್ತದೆ. ಈ ನಡುವೆ ಇಲ್ಲಿ ಸಹಕಾರಿ ಸಂಘಗಳು ಅಡಿಕೆ ಬೆಳೆಗಾರರ ಭವಿಷ್ಯವನ್ನು ರೂಪಿಸಿರುವುದು ತಿಳಿಯುತ್ತದೆ. ಸದ್ಯ ಅಡಿಕೆಯನ್ನು ಕೂಡಾ ಸಂಪಾಜೆ, ಅರಂತೋಡು ಪ್ರದೇಶದಲ್ಲಿ ಬೆಳೆಯುತ್ತಾರೆ.
ಅಡಿಕೆಗೆ ಪರ್ಯಾಯವಾಗಿ ಕೆಲವರು ರಬ್ಬರ್, ತಾಳೆ ಹಾಕಿದ್ದರೂ ಆದಾಯದ ದೃಷ್ಟಿಯಿಂದ ಅಡಿಕೆ ಮಾತ್ರವೇ ಇಲ್ಲಿ ಹೆಚ್ಚು ಸೂಕ್ತವಾಗಿದೆ. ಈ ಕಾರಣದಿಂದ ಹಳದಿ ಎಲೆ ರೋಗ ಇದ್ದರೂ ಮತ್ತೆ ಆದಾಯದ ಕಾರಣದಿಂದಲೇ ಅಡಿಕೆಯನ್ನು ಮತ್ತೆ ನಾಟಿ ಮಾಡುತ್ತಾರೆ, ಎಡೆ ಸಸಿಯಾಗಿಯೂ ಅಡಿಕೆಯೇ ಅನಿವಾರ್ಯವಾಗಿದೆ. ಇದು ಕೂಡಾ ಐದಾರು ವರ್ಷದಲ್ಲಿ ಮತ್ತೆ ಹಳದಿ ಎಲೆರೋಗದಿಂದ ಬಾಧಿತವಾಗುತ್ತದೆ. ಇಂತಹ ಮರದಲ್ಲಿನ ಅಡಿಕೆಯೂ ಗುಣಮಟ್ಟದಿಂದ ಕೂಡಿರುವುದಿಲ್ಲ.
ಅಡಿಕೆ ಹಳದಿ ಎಲೆ ರೋಗ ನಿರೋಧಕ ತಳಿ ಅಭಿವೃದ್ಧಿ ಬಗ್ಗೆ ಮಾಹಿತಿ ಹಾಗೂ ಅಡಿಕೆ ಬೆಳೆಗಾರರ ಸಭೆ ಸಂಪಾಜೆಯಲ್ಲಿ ನಡೆಯಿತು. ಬಳಿಕ ಸಿಪಿಸಿಆರ್‌ಐ ವಿಜ್ಞಾನಿಗಳು ಕೃಷಿಕರ #ಅಡಿಕೆ ತೋಟಕ್ಕೆ ಭೇಟಿ ನೀಡಿದರು. @AIAGAssociation @icarindia pic.twitter.com/xvsWpYG1QN
Advertisement— theruralmirror (@ruralmirror) October 5, 2021
ಇದೀಗ ಇನ್ನೊಂದು ಆಶಾವಾದ ಹುಟ್ಟಿಕೊಂಡಿದೆ. ಜಗತ್ತಿನ ವಿವಿದೆಡೆ ರೋಗ ಇರುವ ತಳಿಗಳಿಗೆ ರೋಗನಿರೋಧಕ ತಳಿಗಳನ್ನು ಅಭಿವೃದ್ಧಿ ಮಾಡಲಾಗಿದೆ.ಈಚೆಗೆ ದೇಶದಲ್ಲೂ ಅದೇ ಪ್ರಯತ್ನವಾಗುತ್ತಿದೆ. ಬೆಂಡೆ ಸೇರಿದಂತೆ ವಿವಿಧ ಬೆಳೆಗಳಿಗೆ ಈ ಪ್ರಯತ್ನವಾಗಿದೆ. ಇತ್ತೀಚೆಗೆ ಅದೇ ಮಾದರಿಯ 35 ತಳಿಗಳನ್ನು ಬಿಡುಗಡೆ ಕೂಡಾ ಮಾಡಲಾಗಿದೆ. ಹೀಗಾಗಿ ಅಡಿಕೆ ಹಳದಿ ಎಲೆ ರೋಗಕ್ಕೂ ಅದೇ ಮಾದರಿಯಲ್ಲಿ ರೋಗ ನಿರೋಧಕ ತಳಿ ಅಭಿವೃದ್ಧಿ ಏಕೆ ಸಾಧ್ಯವಿಲ್ಲ ಎನ್ನುವುದು ಅಡಿಕೆ ಬೆಳೆಗಾರರ ಪ್ರಶ್ನೆಯಾಗಿತ್ತು.
ಈ ಬಗ್ಗೆ ವಿಜ್ಞಾನಿಗಳಲ್ಲಿ ಚರ್ಚೆ ಮಾಡಿದಾಗಲೂ ಅಂತಹದ್ದೇ ರೋಗ ನಿರೋಧಕ ತಳಿ ಅಭಿವೃದ್ಧಿ ಮಾಡಲು ಸಾಧ್ಯವಿದೆ ಎನ್ನುವ ಅಭಿಪ್ರಾಯ ಲಭ್ಯವಾದ ಹಿನ್ನೆಲೆಯಲ್ಲಿ ಸಿಪಿಸಿಆರ್‌ಐ ವಿಜ್ಞಾನಿಗಳೂ ಈ ಬಗ್ಗೆ ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ಇಂತಹ ಪ್ರಯತ್ನ ಮಾಡಲು ಮುಂದೆ ಬಂದಿದ್ದಾರೆ. ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ವತಿಯಿಂದ ಈಗಾಗಲೇ ವಿವಿಧ ಇಲಾಖೆಗಳಿಗೆ, ಜಿಲ್ಲೆಯ ಜನಪ್ರತಿನಿಧಿಗಳಿಗೆ ಮನವಿ ಮಾಡಲಾಗಿದೆ. ಸುಳ್ಯ ತಾಲೂಕಿನ ಸಹಕಾರಿ ಸಂಸ್ಥೆಗಳು, ಕ್ಯಾಂಪ್ಕೋದಂತಹ ಸಂಸ್ಥೆಗಳು ಕೈಜೋಡಿಸಿದರೆ ಈ ಯೋಜನೆ ಯಶಸ್ಸಾಗಬಹುದು. ಈ ನಿಟ್ಟಿನಲ್ಲಿ ಪ್ರಯತ್ನಗಳು ಸಾಗುತ್ತಿವೆ.
ಸಂಪಾಜೆ ಪ್ರದೇಶವು ಅಡಿಕೆ ಹಳದಿ ಎಲೆ ರೋಗ ಪೀಡಿತ ಹಾಟ್ ಸ್ಫಾಟ್ ಎಂದು ಗುರುತಿಸಲಾಗಿದೆ. ಅನೇಕ ವರ್ಷಗಳಿಂದ ಇಲ್ಲಿ ಅಡಿಕೆ ಹಳದಿ ರೋಗ ಕಂಡುಬಂದಿತ್ತು. ಕನಿಷ್ಟ 25 ವರ್ಷಗಳಿಂದ ಮೇಲ್ಪಟ್ಟು ವರ್ಷಗಳಿಂದ ಅಡಿಕೆ ಹಳದಿ ಎಲೆ ರೋಗ ಕಂಡುಬಂದಿದ್ದ ತೋಟವನ್ನು ಪತ್ತೆ ಮಾಡಿ ಅಷ್ಟು ವರ್ಷಗಳಿಂದಲೂ ಅಡಿಕೆ ಹಳದಿ ರೋಗ ಬಾಧಿತವಾಗಿ ಇನ್ನೂ ಹಸಿರಾಗಿಯೇ ಇರುವ ಅಡಿಕೆ ಮರಗಳನ್ನು ಹುಡುಕಿ ವಿಜ್ಞಾನಿಗಳ ಮೂಲಕ ಈ ಮರದಲ್ಲಿ ರೋಗದ ಪ್ರಭಾವದ ಬಗ್ಗೆ ಸ್ಯಾಂಪಲ್ ಮೂಲಕ ಪರಿಶೀಲನೆ ಮಾಡಿದ ಬಳಿಕ ಅಡಿಕೆ ಮರಗಳನ್ನು ಗುರುತಿಸಿ, ಮುಂದೆ ಹಿಂಗಾರ ಬರುವ ಸಮಯದಲ್ಲಿ ಅಂತಹದ್ದೇ ಮರಗಳಿಂದ ಪಾಲಿನೇಶನ್ ಮಾಡಿಸಿ ಅಡಿಕೆಯನ್ನು ಪಡೆದು ಅದರಲ್ಲಿ ಗುಣಮಟ್ಟದ ಅಡಿಕೆಯನ್ನು ಗಿಡ ಮಾಡಿ ನಾಟಿ ಮಾಡುವ ಮೂಲಕ ರೋಗ ನಿರೋಧಕ ತಳಿ ಅಭಿವೃದ್ಧಿ ಸಾಧ್ಯವಿದೆ ಎನ್ನುವುದು ಇಲ್ಲಿನ ಆಶಾವಾದ. ಈ ಹಿಂದೆ ಇಂತಹ ಪ್ರಯತ್ನ ಒಮ್ಮೆ ನಡೆದಿದ್ದೂ ಬಳಿಕ ಆ ಯೋಜನೆ ಮುಂದುವರಿಯಲಿಲ್ಲ. ಅಡಿಕೆ ಮರ ಏರುವುದು ಹಾಗೂ ಇನ್ನಿತರ ತಾಂತ್ರಿಕ ಕಾರಣದಿಂದ ಹಿನ್ನಡೆಯಾಗಲು ಕಾರಣವಾಗಿತ್ತು ಎನ್ನುವುದು ಸದ್ಯದ ಮಾಹಿತಿ.