Advertisement
ಅನುಕ್ರಮ

ಮಹಾಮಾಯೆಯ ಜಾಗೃತ ಸ್ಥಿತಿಯ ವಿಶೇಷ ದಿನ “ಅಂಗಾರೆ ಪೂಜೆ” |

Share

ಏಕೋಹಂ ಬಹುಸ್ಯಾಮಃ… ಸೃಷ್ಟಿಯ ಆದಿಯಲ್ಲಿ ದೇವನೊಬ್ಬನೇ, ಆದರೆ ತನ್ನ ಸಂಕಲ್ಪದಂತೆ ಬಹುವಾಗಿ ಪ್ರಕಟನಾದನಂತೆ,ಮತ್ತೆ ತಾನೇ ಶ್ರದ್ಧೆ, ಭಕ್ತಿ, ನಂಬಿಕೆ,ಆಚಾರ ಉತ್ಸವಗಳೆಂಬ ಸೂತ್ರದಾರದಲ್ಲಿ ಬಹುತ್ವವನ್ನು ಏಕತೆಯಲ್ಲಿ ಪೋಣಿಸಿದನಂತೆ.ಸರಳವಲ್ಲವೇ… ದೇವನೇ ಹಲವನಾದ ಮೇಲೆ ಈ ಹುಲುಮಾನವನೇನು. ತಾನೂ ತನ್ನತನದ ಅಹಂ ತ್ಯಜಿಸಿ ಸಮಾಜಪುರುಷನ ಮುಂದೆ ಲೀನವಾಗಬೇಕಲ್ಲವೇ…ಹೌದು…ಅದಕ್ಕ್ಕಾಗಿಯೇ ಆಚರಣೆಗಳು, ಹಬ್ಬ ಹರಿದಿನಗಳು, ಪೂಜೆ ಪುರಸ್ಕಾರಗಳು. ಅಂತೆಯೇ…

ಅದೊಂದು ದಿನ, ಮಂಗಳವಾರದ ಮಹತೋ ದಿನ. ಬಾನಂಗಳ ರವಿ ದಾಟಿ ಬರಿದಾಯಿತೋ ಎಂದಾಗ ಶಶಿ ರಥವೇರಿ ತಾ ಮುಂದೆ ನಿಂದೇ ಬಿಟ್ಟ. ಆಹಾ….ಶುಭ್ರ ಬಾನು,ಚುಮು ಚುಮು ತಿಂಗಳನ ಬೆಳ್ಗೊಡೆಯ ಪ್ರಭಾವಳಿ, ನಕ್ಷತ್ರಗಳ ತೋರಣದೋಕುಳಿ….ಶುಕ್ರವಾರದಂತೆಯೇ,ಮಂಗಳವಾರದ ಶುಭ ಮಂಗಳ ಪ್ರಭಾವಲಯದ ಶುಭ ರಾತ್ರಿ. ಆದಿಮಾಯೆ,ಮಹಾಮಾಯೆಯ ಜಾಗೃತ ಸ್ಥಿತಿಯ ವಿಶೇಷ ದಿನ. ನಮ್ಮೂರು ಕಲ್ಮಡ್ಕದ ಕಾಚಿಲ ವೆಂಕಪ್ಪ ನಾಯ್ಕರ ಮನೆಯ ಆವಾರದಲ್ಲಿ ಆದಿಮಾಯೆಯ ಪ್ರೀತ್ಯರ್ಥ “ಅಂಗಾರೆ ಪೂಜೆ” ಯ ಭಕ್ತಿಪುರಸ್ಸರ ಶುಭಾವಸರ, ಮನೆಯವರ ಕುಟುಂಬಸ್ಥರ ,ಬಂಧು ಬಳಗದ ಕೂಡುವಿಕೆಯ ಸಡಗರ,ಸಂಭ್ರಮ. ನಮಗೂ ಕರೆಯಿತ್ತು. ಹೋಗಿದ್ದೆವು,ಎಲ್ಲೊರೊಂದಿಗಿದ್ದು ಹಲವರಾಗುವ ಪ್ರಯತ್ನ ಮಾಡಿದ್ದೆವು.

ಪ್ರೀತಿಯ ಸ್ವಾಗತ ಕೋರಿದ ಮನೆಮಂದಿ , ಭಾವಪೂರಿತರಾಗಿ, ನಿರ್ಮಲ ಮನದೊಂದಿಗೆ ಅಮ್ಮನ ಸೇವೆಯಲ್ಲಿ ನಿರತರಾಗಿದ್ದರು. ಸರಳವಾದ ವ್ಯವಸ್ಥೆಗಳು. ಭಕ್ತಿ ,ಪೂಜೆಗಳಿಗಷ್ಟೇ ಮೊದಲ ಸ್ಥಾನ. ಮನೆಯೊಳಗಣ ದೇವರ ಕೋಣೆಯಲ್ಲಿ ಮನೆ ಯಜಮಾನ ,ಹಿರಿಯರು, ಪೂಜಾರಿಗಳ ಉಪಸ್ಥಿತಿ. ಅಲಂಕಾರ ಪ್ರಿಯಳಾಗಿ ಗದ್ದಿಗೆಯೇರಿದ ಅಮ್ಮನಿಗೆ ತಮ್ಮದೇ ಆಚರಣಾ ಪದ್ದತಿಗಳಂತೆ ಅಲಂಕಾರ, ಚಿತ್ತಾರ ಹಾಗೂ ನೈವೇದ್ಯ ಪ್ರಸಾದಗಳ ಸಮರ್ಪಣೆ. ಆಹಾ ಏನು ವೈವಿಧ್ಯಮಯ ಆಚರಣೆಗಳು. ಅಮ್ಮನಿಗೆ, ಗುರುಸ್ಥಾನಕ್ಕೆ,ಪಿತೃಗಳಿಗೆ, ದೇವದೂತ ಸಾನ್ನಿಧ್ಯಗಳಿಗೆ,ವಿಶೇಷವಾಗಿ ,ಪದ್ದತಿಯಂತೆ ನೈವೇದ್ಯ, ಪ್ರಸಾದಗಳು.ಹೊರಗೆ ಭಜನಾ ಸೇವೆ.

ಭಜನಾ ಸೇವೆ ಎಂದಾಗ ಕಂಡುಬಂದದ್ದು ಭಜಕರ ತನ್ಮಯತೆ ಹಾಗೂ ಶುದ್ಧ ಚಿತ್ತ. ಭಕ್ತಿ, ಭಾವಗಳನ್ನೊಳಗೊಂಡ ಇಂಪಾದ, ಮನಕ್ಕೊಪ್ಪುವ ಶುದ್ಧ ಭಜನೆ. ಭಜಕರೆಲ್ಲರೂ ಒಬ್ಬರಿಗಿಂತ ಒಬ್ಬರು ಮಿಗಿಲು. ಕೆಲವು ಮರಾಠಿ ಅಭಂಗ್ ಭಜನೆಗಳಂತೂ ಮನದ ಪರದೆಯಲ್ಲಿ ಅವ್ಯಕ್ತವಾಗಿ ದೇವ ಸಾನ್ನಿಧ್ಯ ಮೂಡಿಸಿತು. ಭಜನೆಯ ನಂತರ ಪದ್ದತಿಯಂತೆ ದೀವಟಿಗೆ ಬೆಳಗಿ ಅಂಗಳಕ್ಕಿಳಿದ ಯುವಕರು ಅಂಗಳಕ್ಕಿಳಿದು ವಿವಿಧ ಪ್ರಾಕಾರಗಳಲ್ಲಿ ಕುಣಿತ ಸೇವೆ ಮಾಡಿದರು. ಇದಕ್ಕೆಲ್ಲ ಹಿಮ್ಮೇಳದಂತೆ ಸಾಂಪ್ರದಾಯಿಕ ಕೊಳಲು ವಾದನ ಮತ್ತು ವಾದ್ಯಗಳ ನಾದ ಆಕಾಶದ ಅವಕಾಶಗಳೆಡೆಯಲ್ಲಿ ಎತ್ತರೆತ್ತರಕ್ಕೇರಿ ನಂಬುಗೆಯ ಇಂಬಿತ್ತವರಿಗೆ ಸಮರ್ಪಣೆಯಾಗುತಿತ್ತು. ಇದೆಲ್ಲಾ ನಡೆಯುತ್ತಿದ್ದಂತೆ ಮಹಾಮಾಯೆ ಆವಾಹನೆಯಾದ ಪೂಜಾರಿ ಅಲಂಕೃತರಾಗಿ ದರುಷನ ರೂಪದಲ್ಲಿ ಹೊರ ಬಂದು ಕುಣಿಯುತ್ತಿದ್ದ ಯುವಕರಿಂದ ದೀವಟಿಗೆಗಳನ್ನು ಸೆಳೆದು ಅವ್ಯಕ್ತವಾಗಿ ಪೂಜಾರಿಯ ಮೇಲೆ ಪ್ರಕಟವಾಗಿ ಮನೆಯವರಿಗೆ, ಕೂಡು ಕಟ್ಟಿನವರಿಗೆ ಅಭಯವಿತ್ತು, ಸದಾ ಇಂಬನೀವ,ರಕ್ಷಣೆಯನ್ನೀಡುವ ನುಡಿಗಳನ್ನಾಡಿದಾಗ ಸೇವೆ ಕೊಟ್ಟ ಮನೆಯವರ ಕೃಥಾರ್ಥ ಭಾವ ಪರಮೋಚ್ಚವಾಗಿತ್ತು, ಅಮ್ಮನ ಚರಣಗಳಲ್ಲಿ ಒಂದರೆ ಕ್ಷಣ ಒಂದಾದಂತೆ ಕಂಡುಬರುತ್ತಿತ್ತು. ಪದ್ದತಿಯಂತೆ ಕರೆದು ಪ್ರಸಾದ ನೀಡಿದಂತೆ ನಾವೂ ಪ್ರಸಾದ ಪಡೆದು ಮನೆಯವರಲ್ಲಿ ಸಂತಸ ವ್ಯಕ್ತಪಡಿಸಿ ಹೊರಬಂದಾಗ ಆಕಾಶದೆತ್ತರದಲ್ಲಿ ಚಂದಿರ ತನ್ನ ಬೆಳ್ಗೊಡೆಯ ರಥದಲ್ಲಿ ಆದಿಮಾಯೆಯನ್ನು ಕುಳ್ಳಿರಿಸಿ ಅನತಿದೂರದಲ್ಲಿ ಕೇಳಿ ಬರುತ್ತಿದ್ದ ಚೆಂಡೆ ತಾಸೆ ಪೆಟ್ಟುಗಳ ನಾದದತ್ತ, ಮುಂದೆ ಮುಂದೆ ನಡೆಸುತ್ತಿದ್ದನೋ ಎಂಬಂತೆ,ನಕ್ಷತ್ರಗಳ ತೋರಣ ದೂರದ ಊರಿನ ಯಾವುದೋ ಮನೆಯವರ ಸೇವೆಯನ್ನು ಪಡೆಯಲೋಸುಗ ದಿಕ್ಪಥ ದರ್ಶಿಸುತ್ತವೋ ಎಂಬಂತೆ ಅನಿಸಿತು. ಮಧ್ಯರಾತ್ರಿಯ ತನಕ ಕುಳಿತು ಸರಳ ಸಜ್ಜನ ಸೇವಾ ಪ್ರಾಕಾರದಲ್ಲಿ ಭಾಗಿಗಳಾದ ಹಿತಾನುಬವ ಮನವ ತುಂಬಿತ್ತು.
ಇದೆಲ್ಲದರ ಹಿನ್ನೆಲೆಯಲ್ಲಿ ಕುಳಿತು‌ ಮನದ ಮೆಲುಕು ನಡೆದಾಗ ಕತೆಯೊಂದರ ರಾಜನ ಮನದಲ್ಲಿ ಮೂಡಿ ಬಂದ ಪ್ರಶ್ನೋತ್ತರಕ್ಕೆ ಸಾಕ್ಷಾತ್ ಉತ್ತರ ಕಂಡುಕೊಂಡ ಅನುಭವವಾಯಿತು.
ಪ್ರಶ್ನೆ 1. ದೇವರು ಎಲ್ಲಿ ನೋಡುವನು.
ದೀವಟಿಗೆಯ ಬೆಳಕು ಎಲ್ಲೆಲ್ಲ ವ್ಯಾಪಿಸಬಲ್ಲುದೋ ಅಲ್ಲೆಲ್ಲ ದೇವ ನೋಡಬಲ್ಲ.
ಪ್ರಶ್ನೆ 2.ದೇವರು ಎಲ್ಲಿದ್ದಾನೆ.
ಹಾಲನ್ನು ಕಡೆದಾಗ ಅವ್ಯಕ್ತವಾಗಿದ್ದ ಬೆಣ್ಣೆ ಹೇಗೆ ವ್ಯಕ್ತವಾಯಿತೋ ಅಂತೆಯೇ ನಿರ್ಮಲ ಮನವ ಕಡೆದಾಗ ಮೂಡುವ ಶುದ್ಧ ಭಾವದಲ್ಲಿ ದೇವನಿದ್ದಾನೆ.
ಪ್ರಶ್ನೆ 3.ದೇವನು ಏನು ಮಾಡಬಲ್ಲ.
ದೇವನು ಹಗಲನ್ನು ಇರುಳು ಮಾಡಬಲ್ಲ, ಇರುಳನ್ನು ಹಗಲೂ ಮಾಡಬಲ್ಲ, ಈಗ ಇದೆ ಎನ್ನುವುದು ಇರದಂತೆಯೂ, ಇರದಿರುವಂತಹದ್ದನು ಇರುವಂತೆಯೂ ಮಾಡಬಲ್ಲ.

ಕವಿ ಡಿವಿಜಿಯವರ ಕಗ್ಗದ ಸಾಲುಗಳು ಈ ಸತ್ಯ ದೇವ ದರ್ಶನ ಮಾಡಬಲ್ಲುದಲ್ಲವೇ..

“ಇಂದೆದ್ದ ತೆರೆ ನಾಳೆ ಬೀಳುವುದು, ಮರುವಗಲು, ಮುಂದೆ ತಾನೇಳುವುದು ಬೇರೆ ಗಾತ್ರದಲಿ ಇಂದು ನಾಳೆಗಳೆಲ್ಲವ ಕೂಡಿ ನೋಡಿದೊಡೆ ಮುಂದಹುದು ಬೆರಗೊಂದೆ ಮಂಕುತಿಮ್ಮ.”
ಬರಹ :
ಟಿ ಆರ್‌ ಸುರೇಶ್ಚಂದ್ರ‌ ತೊಟ್ಟೆತ್ತೋಡಿ, ಕಲ್ಮಡ್ಕ

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

‌ ಪ್ರಗತಿಪರ ಕೃಷಿಕ, ಬರಹಗಾರ

Published by
ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

Recent Posts

ಖ್ಯಾತಿ-ಪ್ರಚಾರವಲ್ಲ, ಸಮಾಜ ಪರಿವರ್ತನೆಯೇ ಚಾತುರ್ಮಾಸ್ಯದ ಗುರಿ

‘ಅನ್ನಂ ಬ್ರಹ್ಮ’ ಚಾತುರ್ಮಾಸ್ಯದ ಉದ್ದೇಶ ಖ್ಯಾತಿ ಅಥವಾ ಪ್ರಚಾರವಲ್ಲ, ಸಮಾಜ ಪರಿವರ್ತನೆ ಎಂದು…

2 hours ago

ಮೇಘಾಲಯದ ಅಡಿಕೆಗೆ ಜಿಐ ಟ್ಯಾಗ್‌ ಪ್ರಕ್ರಿಯೆ..! ಮಲೆನಾಡು ಅಡಿಕೆಗೂ ಏಕೆ ಪ್ರಯತ್ನಿಸಬಾರದು..?

ಮೇಘಾಲಯ ಅಡಿಕೆಗೆ ಜಿಐ ಟ್ಯಾಗ್‌ ಪಡೆಯಲು ಅರ್ಜಿ ಸಲ್ಲಿಸಿರುವ ಬೆಳವಣಿಗೆ ಅಡಿಕೆಯ ಭೌಗೋಳಿಕ…

4 hours ago

ಹವಾಮಾನ ವರದಿ | 27-09-2026 | ಕರ್ನಾಟಕದಲ್ಲಿ ಸದ್ಯ ಒಣಹವೆ ; ಸೆ.28ರಿಂದ ಮತ್ತೆ ಮಳೆ ಸಾಧ್ಯತೆ..!

ಕರ್ನಾಟಕದಾದ್ಯಂತ ಸೆ.28ರಂದು ಒಣಹವೆ ಆವರಿಸುವ ಸಾಧ್ಯತೆ ಇದ್ದರೂ ಕೊಡಗು ಹಾಗೂ ಚಿಕ್ಕಮಗಳೂರಿನ ಕೆಲವು…

10 hours ago

ಮಲೆನಾಡಿನಲ್ಲಿ ಅಡಿಕೆ ಕಷ್ಟ…!, ಬಯಲುಸೀಮೆಯಲ್ಲಿ ಅಡಿಕೆ ಇಷ್ಟು ಸುಲಭವೇ? ಕಾರಣ ತಿಳಿದರೆ ಅಚ್ಚರಿಯಾಗುತ್ತೆ!

ಬಯಲುಸೀಮೆಯಲ್ಲಿ ಅಡಿಕೆ ಬೆಳೆ ವಿಸ್ತರಣೆಗೆ ನೀರಾವರಿ, ಕಡಿಮೆ ನಿರ್ವಹಣಾ ವೆಚ್ಚ ಮತ್ತು ಉತ್ತಮ…

14 hours ago

ಹಾಲಿನ ದರ ಏರಿಕೆ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ – ಡಿ.ಕೆ.ಶಿವಕುಮಾರ್

ಹಾಲಿನ ದರವನ್ನು ₹12 ಹೆಚ್ಚಿಸುವಂತೆ ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಮನವಿ ಮಾಡಿದ್ದಾರೆ.…

16 hours ago

ದೇಶಿ ಗೋವಿನ ಹಾಲು, ತುಪ್ಪದ ಮಹತ್ವದ ಪ್ರತಿಪಾದನೆ – ಪಾರಂಪರಿಕ ಆಹಾರ ಪದ್ಧತಿಗೆ ಒತ್ತು

ಗೋಕರ್ಣದಲ್ಲಿ ನಡೆದ ಅನ್ನಬ್ರಹ್ಮ ಚಾತುರ್ಮಾಸ್ಯದ ಸಮಾರೋಪದಲ್ಲಿ ದೇಶಿ ಗೋವಿನ ಹಾಲು, ತುಪ್ಪ ಹಾಗೂ…

1 day ago