ಹವಾಮಾನ ಬದಲಾವಣೆಯಿಂದ ಹಾಗೂ ತಾಪಮಾನದ ದಿಢೀರ್ ಬದಲಾವಣೆಗಳು ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಪ್ರಕರಣ ಹೆಚ್ಚಾಗುತ್ತಿದೆ ಮಾತ್ರವಲ್ಲ ಮನುಷ್ಯನ ನಿದ್ರೆಯ ಮೇಲೂ ಪರಿಣಾಮ ಬೀರುತ್ತಿದೆ ಎಂದು ನೇಚರ್ ಕಮ್ಯುನಿಕೇಷನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನದ ವರದಿಯಲ್ಲಿ ತಿಳಿಸಲಾಗಿದೆ.
ಈ ಅಧ್ಯಯನವು ಹಲವಾರು ದೇಶಗಳ 1,15,000 ಕ್ಕೂ ಹೆಚ್ಚು ಜನರನ್ನು ಎರಡು ವರ್ಷಗಳವರೆಗೆ ಗಮನಿಸಿದೆ ಹಾಗೂ ಡಾಟಾಗಳನ್ನು ಸಂಗ್ರಹಿಸಿದ ಆಧಾರದಲ್ಲಿ ಈ ಮಾಹಿತಿಯನ್ನು ತಿಳಿಸಿದೆ. ಹಾಸಿಗೆಯ ಕೆಳಗೆ ನಿದ್ರೆಯ ಮಾನಿಟರ್‌ಗಳೊಂದಿಗೆ ಅವರ ನಿದ್ರೆಯ ಗುಣಮಟ್ಟವನ್ನು ಅಳೆಯಲಾಗಿತ್ತು. ನಂತರ ತಾಪಮಾನ ಮತ್ತು ನಿದ್ರೆಯ ನಡುವಿನ ಸಂಬಂಧವನ್ನು ಮೌಲ್ಯಮಾಪನ ಮಾಡಲು ಹವಾಮಾನದ ಡಾಟಾಗಳೊಂದಿಗೆ ಈ ಮಾಹಿತಿಯನ್ನು ತಾಳೆ ಮಾಡಿ ಅಧ್ಯಯನ ನಡೆಸಿದ ವರದಿಯಾಗಿದೆ.
26 ಡಿಗ್ರಿಯ ವಾತಾವರಣದಲ್ಲಿ 40 ರ ದಶಕಗಳ ಹಿಂದಿನ ದಿನಗಳಿಗೆ ಹೋಲಿಸಿದಾಗ, ನಿದ್ರೆಯ ಗುಣಮಟ್ಟ ಅಥವಾ ನಿದ್ರೆಯ ಸಮಯ 40 ರಿಂದ 45% ಹೆಚ್ಚಳ ಅಂದು ಕಂಡುಬಂದಿದೆ. ಈಗಿನ ದಿನಗಳಲ್ಲಿ ಅತಿಯಾದ ಉಷ್ಣತೆಯು ನಿದ್ರೆಯನ್ನು ಕೆಡಿಸುವ ಮೂಲಕ ನಿದ್ರೆ ಮಾಡುವುದನ್ನು ಕಷ್ಟಕರವಾಗಿಸುತ್ತದೆ ಎಂದು ಅಧ್ಯಯನವು ಗಮನಿಸಿದೆ. ಹೆಚ್ಚಿನ ತಾಪಮಾನವು ರಾತ್ರಿಯ ಸಮಯದಲ್ಲಿ ದೇಹವು ತಣ್ಣಗಾಗುವ ಸಾಮರ್ಥ್ಯಕ್ಕೆ ಅಡ್ಡಿಪಡಿಸುತ್ತದೆ, ಇದು ನೈಸರ್ಗಿಕ ನಿದ್ರೆಯ ಚಕ್ರಕ್ಕೆ ಅಡ್ಡಿಪಡಿಸುತ್ತದೆ. ಇದರಿಂದ ಆಗಾಗ್ಗೆ ಎಚ್ಚರಗೊಳ್ಳುವಿಕೆ, ದೀರ್ಘವಾದ ನಿದ್ರೆ ಮತ್ತು ಉಸಿರಾಟದ ಅಸ್ಥಿರತೆಗೆ ಕಾರಣವಾಗುತ್ತದೆ, ಇದರ ಪರಿಣಾಮವಾಗಿ ಹೆಚ್ಚಿನ ಉಸಿರುಕಟ್ಟುವಿಕೆ ಘಟನೆಗಳು ನಡೆಯುತ್ತಿದೆ ಎಂದು ವರದಿ ಹೇಳಿದೆ.
ಹೀಗೇ ನಿದ್ರೆಯ ಸಮಸ್ಯೆ ಹಾಗೂ ಹವಾಮಾನ ಬದಲಾವಣೆಯು ಜಾಗತಿಕವಾಗಿ ಸುಮಾರು 1 ಬಿಲಿಯನ್ ಜನರ ಮೇಲೆ ಪರಿಣಾಮ ಬೀರುತ್ತಿದೆ ಮತ್ತು 80% ಜನರಿಗೆ ಈ ಬಗ್ಗೆ ತಿಳಿದಿಲ್ಲ , ಚಿಕಿತ್ಸೆಯೂ ಇಲ್ಲ. ಈ ಕಾರಣದಿಂದ ಇಂದು ಹೃದ್ರೋಗ, ಪಾರ್ಶ್ವವಾಯು, ಬುದ್ಧಿಮಾಂದ್ಯತೆ, ಮಧುಮೇಹ ಮತ್ತು ಖಿನ್ನತೆಯ ಅಪಾಯವನ್ನು ಹೆಚ್ಚಿಸಿದೆ ಎಂದು ಅಧ್ಯಯನ ವರದಿ ಹೇಳಿದೆ.
ಹೀಗಾಗಿ ಇಂದು ಹವಾಮಾನ ಬದಲಾವಣೆ, ತಾಪಮಾನ ಏರಿಕೆ ಕೃಷಿಗೆ ಮಾತ್ರವಲ್ಲ ಪರಿಸರದ ಜೀವಿಗಳ ಮೇಲೂ ಪರಿಣಾಮ ಬೀರುವುದು ಈಗಾಗಲೇ ವರದಿಯಾಗಿದೆ. ಇದೀಗ ಮನುಷ್ಯದ ಮೇಲೂ ಪರಿಣಾಮ ಬೀರುವುದು ಗಮನಕ್ಕೆ ಬರುತ್ತಿದೆ. ಇದೀಗ ಈ ಅಧ್ಯಯನ ವರದಿಯನ್ನೂ ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯ ಇದೆ.