ತಲೆಮಾರುಗಳ ಕಂದಕವನ್ನು ಮನೆಪಾಠದಿಂದ ಮುಚ್ಚಬಹುದು

July 26, 2024
10:22 AM
ಆಧುನಿಕ ಜಗತ್ತಿನಲ್ಲಿ Generation gap ಎಂಬುದು ಜೀವನದ ಪರಿಸ್ಥಿತಿಗಳ ಪ್ರಭಾವದಿಂದ ಉಂಟಾಗುತ್ತದೆ. ಭಾರತದಲ್ಲಿ ಈಗ ಬಹುತೇಕ ಕುಟುಂಬಗಳಲ್ಲಿ ಮಕ್ಕಳ ಭವಿಷ್ಯವನ್ನು ಭಾಷೆ ಮತ್ತು ದೇಶದ ಪರಿಧಿಗಿಂತ ಹೊರಗೆ ರೂಪಿಸಿಕೊಳ್ಳಲು ಬಯಸುತ್ತಾರೆ.
ಆಧುನಿಕತೆಯ  ನೆರಳಿನಲ್ಲಿ ಉದಿಸಿ ಬಂದ ಒಂದು ಸಮಸ್ಯೆಯೆಂದರೆ ಅದು ತಲೆಮಾರುಗಳ ಅಂತರ. Generation Gap ಎಂತ ತಿಳಿಯಲಾಗಿರುವ ಈ ಸಮಸ್ಯೆಯ ಪರಿಹಾರವು ಮನೆಪಾಠ ಮಾಡುವುದರಲ್ಲಿದೆ. ಅದು ಎಳೆಯ ಮಕ್ಕಳಿರುವ ತರುಣ ಪೋಷಕರ ಕೈಯಲ್ಲಿದೆ. ಅಂದರೆ ತಮ್ಮ ಮಕ್ಕಳು ಎಳೆಯವರಿದ್ದಾಗಲೇ ಅವರ ಹೃದಯವನ್ನು ತಟ್ಟುವಂತಹ ಕೊಡುಗೆಗಳನ್ನು ನೀಡಬೇಕು. ಆ ಹಂತದಲ್ಲಿ ಮಕ್ಕಳಿಗೆ ತಮ್ಮ ಅಪ್ಪ-ಅಮ್ಮ ಜ್ಞಾನ ಸಂಪನ್ಮೂಲ ವ್ಯಕ್ತಿಗಳೆಂದು ಅನ್ನಿಸಬೇಕು. ಅದು ಜೀವಮಾನವಿಡೀ ಉಳಿಯುವ ಅವಲಂಬನೆಯ ಬಳ್ಳಿಯಾಗಿ ಬೆಸೆಯುತ್ತದೆ.

ಅದಕ್ಕೊಂದು ಉದಾಹರಣೆಯು ಇತ್ತೀಚೆಗೆ ಖ್ಯಾತ ಅಂಕಣಕಾರ ಶ್ರೀವತ್ಸ ಜೋಶಿಯವರ ತಿಳಿರು-ತೋರಣ ಅಂಕಣದಲ್ಲಿ (ಜುಲೈ 14, 2024 ವಿಶ್ವವಾಣಿ ಪತ್ರಿಕೆ) ಸಿಕ್ಕಿತು. ಅದರಲ್ಲಿ ಅವರು ಒಬ್ಬ ಹಿರಿಯ ವಿದ್ವಾಂಸ ರಾಮಶೇಷ ಶರ್ಮರ ಬದುಕಿನ ಚಿತ್ರಣ ನೀಡಿದ್ದಾರೆ. ಶರ್ಮರು ಸ್ವಭಾವತಃ ಒಬ್ಬ ಜ್ಞಾನ ಪಿಪಾಸು. ಯಾರಿಂದಲೇ ಆಗಲಿ, ತಿಳಿಯುವ ವಿಚಾರಗಳಿದ್ದರೆ ಕಲಿತುಕೊಳ್ಳುವ ಆಸಕ್ತಿ ಇರುವವರು. ಅವರಿಗೆ ಮೂವರು ಹೆಣ್ಣು ಮಕ್ಕಳು. ಬಾಲ್ಯದಲ್ಲೇ ಮಗಳಂದಿರಿಗೆ ಭಾರತೀಯ ಚಿಂತನಧಾರೆಯನ್ನು ಕಥೆ ಮತ್ತು ಪ್ರವಚನಗಳ ಮೂಲಕ ಉಣಿಸಿದ್ದ ಶರ್ಮರು ತಮ್ಮ ವೃದ್ಧಾಪ್ಯದಲ್ಲೂ ಮತ್ತೆ ಪ್ರವಚನಕಾರರಾಗಿ ಮಕ್ಕಳಿಗೆ ಬೇಕಾಗಿದ್ದಾರೆ. ಅವರ ಮಗಳಂದಿರು ವಿವಾಹಿತರಾಗಿ ಭಾರತ ಮತ್ತು ಅಮೇರಿಕಾದ ಬೇರೆ ಬೇರೆ ಊರುಗಳಲ್ಲಿದ್ದರೂ ತಂದೆಯಿಂದ Zoom ಅಂತರ್ಜಾಲದಲ್ಲಿ ಪಾಠ ಕಲಿಯುವುದನ್ನು ಬಿಟ್ಟಿರಲಿಲ್ಲ. ಕೊರೊನಾ ವ್ಯಾಧಿಯು ಬಾಧಿಸಿದ ಸಂದರ್ಭದಲ್ಲಿ ದಿನಾಲೂ ರಾಮಾಯಣ, ಮಹಾಭಾರತ ಹಾಗೂ ದೇವುಡುರವರ ಕೃತಿಗಳ ವಿಮರ್ಶೆಗೆ ಆ ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು ಕಿವಿಯಾಗುತ್ತಿದ್ದರು. ಪತ್ನಿ ವಿಯೋಗದಿಂದ ಶರ್ಮರು ಏಕಾಂಗಿಯಾಗಿದ್ದರೂ ಅವರನ್ನು ಪ್ರೀತ್ಯಾದರದಿಂದ ನೋಡಿಕೊಳ್ಳುವ ಮಗಳಂದಿರಿದ್ದಾರೆ. ಏಕೆಂದರೆ ತಲೆಮಾರುಗಳ ನಡುವಿನ ಅಂತರವನ್ನು ಅಳಿಸುವಂತಹ ಜ್ಞಾನತಂತುವನ್ನು ಶರ್ಮರು ತಮ್ಮ ತಾರುಣ್ಯದಲ್ಲೇ ನೇಯ್ದಿಟ್ಟಿದ್ದರು. ಅದೀಗ ವೃದ್ಧಾಪ್ಯದಲ್ಲೂ ಫಲ ನೀಡುತ್ತಿದೆ. ಅಂದರೆ ಅವರಿಗೆ ಮಕ್ಕಳ ಮತ್ತು ಮೊಮ್ಮಕ್ಕಳ ಸಾಮೀಪ್ಯ ಭಾವನಾತ್ಮಕವಾಗಿಯೂ ಭೌತಿಕವಾಗಿಯೂ ತಪ್ಪಿ ಹೋಗಿಲ್ಲ.………ಮುಂದೆ ಓದಿ……..

Advertisement
Advertisement
ಆಧುನಿಕ ಜಗತ್ತಿನಲ್ಲಿ Generation gap ಎಂಬುದು ಜೀವನದ ಪರಿಸ್ಥಿತಿಗಳ ಪ್ರಭಾವದಿಂದ ಉಂಟಾಗುತ್ತದೆ. ಭಾರತದಲ್ಲಿ ಈಗ ಬಹುತೇಕ ಕುಟುಂಬಗಳಲ್ಲಿ ಮಕ್ಕಳ ಭವಿಷ್ಯವನ್ನು ಭಾಷೆ ಮತ್ತು ದೇಶದ ಪರಿಧಿಗಿಂತ ಹೊರಗೆ ರೂಪಿಸಿಕೊಳ್ಳಲು ಬಯಸುತ್ತಾರೆ. ಆಧುನಿಕ ಶಿಕ್ಷಣ ಮತ್ತು ಉದ್ಯೋಗಗಳ ಆಕರ್ಷಣೆಯು ಎಷ್ಟಿದೆಯೆಂದರೆ  ಅದಕ್ಕಾಗಿ ಪಟ್ಟ ಶ್ರಮ ಹಾಗೂ ಭರಿಸಿದ ವೆಚ್ಚಗಳ ಲೆಕ್ಕವನ್ನಾಗಲೀ ಋಣಭಾರಗಳನ್ನಾಗಲೀ ಸ್ಮರಣೆಯಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಜೀವನ ಸಾಧನೆಯ ಈ ಪಯಣದಲ್ಲಿ ಹೆತ್ತವರಿಗೂ ಮಕ್ಕಳಿಗೂ ದೊಡ್ಡ ಪದವಿ ಮತ್ತು ಭಾರೀ ಸಂಪಾದನೆಯ ಹುದ್ದೆಯ ಎತ್ತರಕ್ಕೆ ತಲುಪುವ ಗುರಿಯತ್ತವೇ ಚಿತ್ತ್ರವಿರುತ್ತದೆ. ಈ ಭ್ರಮೆಯಲ್ಲಿ ತಾವೇನು ಕಳಕೊಳ್ಳುತ್ತೇವೆಂಬುದು ಗೌಣವಾಗಿ ಬಿಡುತ್ತದೆ. ಈ ಕಳಕೊಳ್ಳುವ ಅಂದರೆ ಕಾಣದಾಗುವ ಕಾರ್ಯದ (missing Function) ನಷ್ಟವೆಷ್ಟೆಂದು ತಿಳಿಯುವಾಗ ತರುಣ ಹೆತ್ತವರು ವೃದ್ಧರಾಗಿರುತ್ತಾರೆ. ಮತ್ತೆ ಅದಕ್ಕೆ ಪರಿತಪಿಸುವುದರ ಹೊರತು ಬೇರೆ ಪರಿಹಾರವಿಲ್ಲ.
“ಕಾಣದಾಗುವ ಕಾರ್ಯ”ವೆಂದರೆ ಪೋಷಕರು ನಿರ್ವಹಿಸಬೇಕಾದ ಹೊಣೆಗಾರಿಕೆಯನ್ನು ನಿರ್ವಹಿಸದಿರುವುದು. ಇದಕ್ಕೆ  ಕಾರಣವೇನೆಂದರೆ ಶಾಲಾ ಶಿಕ್ಷಣವನ್ನು ಪೋಷಕರು ಅತಿಯಾಗಿ ಗೌರವಿಸುವುದು. ಅದರ ಅಂಗವಾಗಿ ಕೈ ಕೆಸರಾಗುವ ಕೆಲಸಗಳಿಂದ ಮಕ್ಕಳನ್ನು ದೂರವಿಡುವುದು. ಅಂದರೆ ದೇಹಶ್ರಮದ ಕೆಲಸಗಳಿಂದ ವಿನಾಯಿತಿ ನೀಡುವುದು. ಮನೆಯ ಸ್ವಚ್ಛತೆಯಂತಹ ಸುಲಭ ಕೆಲಸಗಳನ್ನೂ ಮಕ್ಕಳಿಗೆ ವಹಿಸದೆ ಅಪ್ಪ ಅಮ್ಮನೇ ಮಾಡುವುದು. ಇದು ಕೃಷಿಯಾಧಾರಿತ ಆರ್ಥಿಕತೆಯನ್ನು ಅವಲಂಬಿಸಿದ ಕುಟುಂಬಗಳಲ್ಲಿಯೂ ಕಂಡು ಬರುತ್ತದೆ. ಮಗುವೇನಾದರೂ ಕೆಲಸದಲ್ಲಿ ಆಸಕ್ತಿ ತೋರಿದರೂ ಅದನ್ನು ನಿರಸನಗೊಳಿಸಿ “ನೀನು ಹೋಗು, ಓದು” ಎನ್ನುವುದು.
ಅಮ್ಮನ ಕೆಲಸಕ್ಕೆ ಮಗಳು ಸಹಕರಿಸಿ ಅಡುಗೆ ಮಾಡುವುದನ್ನು ಕಲಿಯಲು ಬಂದರೆ “ಈಗ ನೀನು ಇದನ್ನೆಲ್ಲ ಕಲಿಯುವುದು ಬೇಡ. ಮದುವೆಯಾದ ಬಳಿಕ ಹೇಗೂ ಇದ್ದದ್ದೇ. ಈಗ ನೀನು ಓದು” ಎನ್ನುತ್ತಾರೆ ಅಮ್ಮ. ಹೀಗೆ ಎಡೆಬಿಡದೆ ಓದಿ ಅಂಕಗಳನ್ನು ಗಳಿಸುವುದಕ್ಕಿಂತ ದೊಡ್ಡ ಸಾಧನೆ ಬೇರಿಲ್ಲವೆಂಬ ಮನೋಧರ್ಮವನ್ನು ರೂಪಿಸಿರುತ್ತಾರೆ. ಪೋಷಕರಲ್ಲೂ ಮಕ್ಕಳಲ್ಲೂ ಇರುವ ಅಂಕಗಳ ಗೀಳಿನಿಂದಾಗಿ ಮನೆಯಲ್ಲಿ ಕಲಿಸಬೇಕಾದ ಸಾಮಾಜಿಕ ಮೌಲ್ಯಗಳ ಮತ್ತು ವರ್ತನೆಗಳ ಕಲಿಕೆ ತಪ್ಪಿ ಹೋಗುತ್ತದೆ. ಮನೆ ಪಾಠದ ಅಭ್ಯಾಸ ಈಗ ಕಳೆದು ಹೋಗಿದೆ. ಒಂದು ತಲೆಮಾರೇ ಅದನ್ನು ಕಳೆದುಕೊಂಡಿದೆ ಎನ್ನಬಹುದು. ಎಷ್ಟೋ ಮಾತಾಪಿತೃಗಳಿಗೆ ರಾಮಾಯಣ, ಮಹಾಭಾರತ ಮತ್ತು ಇತರ ಭಾರತಿಯ ಪುರಾಣ ಕಾವ್ಯಗಳ ಗಂಧವೇ ಇಲ್ಲ. ಕಲೆ ಸಾಹಿತ್ಯಗಳ ಉಪಯುಕ್ತತೆ ಗೊತ್ತೇ ಇಲ್ಲ. ಇಲ್ಲಿ ಕಾವ್ಯಕ್ಕಿಂತ ಹೆಚ್ಚಾಗಿ ಮೌಲ್ಯಗಳ ಪ್ರಜ್ಞೆ ಬೆಳೆಯುವುದೇ ಮುಖ್ಯ. ಸಹನೆ, ಸಹಾನುಭೂತಿ, ಸಾಮರಸ್ಯ, ಸಹಕಾರ, ಸತ್ಯ, ಸ್ವಪ್ರಯತ್ನ, ಸ್ವಾಭಿಮಾನ, ಅಹಿಂಸೆ, ಅಪರಿಗ್ರಹ, ಒಗ್ಗಟ್ಟು, ಮುಂತಾದ ಮೌಲ್ಯಗಳು ವ್ಯಕ್ತಿತ್ವಗಳಲ್ಲಿ ನೆಲೆಗೊಳ್ಳುವುದು ಅಗತ್ಯ. ಈ ದೃಷ್ಟಿಯಿಂದ ಮನೆಪಾಠದ ಉಪಯುಕ್ತತೆ ಖಂಡಿತ ಇದೆ.
 ಮಕ್ಕಳಿಗೆ ಗುಣ ನಡತೆಗಳ ಪಾಠ, ಮೌಲ್ಯಗಳ ಶಿಕ್ಷಣ, ಭಾರತೀಯ ಪುರಾಣಗಳ ಅರಿವು, ದೇಹಶ್ರಮದ ಕೆಲಸಗಳ ಬಗ್ಗೆ ಅಭಿಮಾನ, ಸ್ವಾವಲಂಬನೆಯ ಆಸಕ್ತಿ, ಸಹಪಾಠಿಗಳ ಸಾಧನೆಯ ಪ್ರಶಂಸೆ, ಶಿಕ್ಷಕರ ಹಾಗೂ ತಂದೆ ತಾಯಿಯ ಬಗ್ಗೆ ಪೂಜ್ಯತಾ ಭಾವ, ಸಮಯ ಪಾಲನೆ, ಸ್ವಚ್ಛತೆ ಮುಂತಾಗಿ ಅನೇಕ ಸದ್ಗುಣಗಳ ಅಂತರ್ಗತೀಕರಣ ಆಗಬೇಕು. ಬದಲಾಗಿ ಕೋಪ, ದ್ವೇಷ, ಅಹಂಕಾರ, ಮತ್ಸರ, ಮುಂತಾದ ದುರ್ಗುಣಗಳು ಬೆಳೆದಿರುತ್ತವೆ. ಅವುಗಳ ದೂರೀಕರಣ ಆಗಬೇಕು. ಇದೇ ನಮ್ಮ ಪಾರಂಪರಿಕ ಮನೆಗಳಲ್ಲಿದ್ದ ವ್ಯಕ್ತಿತ್ವ ವಿಕಸನದ ಪಠ್ಯವಾಗಿತ್ತು. ಈಗ ಅದರ ಶಿಕ್ಷಣವು ಬದಿಗೆ ಸರಿದಿದೆ. ಹೀಗಾಗುವುದರಲ್ಲಿ ಮಕ್ಕಳಷ್ಟೇ ಪೋಷಕರ ಪಾತ್ರವೂ ಇದೆ. ಇದೇ “ಕಾಣದಾಗುವ ಕಾರ್ಯಕ್ಕೆ” ಹೇತುವಾಗಿದೆ. ಮಕ್ಕಳಿಗೆ ಬರೇ ಹಣ ಹಾಗೂ ಸೌಲಭ್ಯಗಳನ್ನು ನೀಡಿದಲ್ಲಿಗೆ ತಮ್ಮ ಹೊಣೆ ನಿರ್ವಹಣೆ ಆಯ್ತೆಂದು ತಿಳಿಯುವ ಹೆತ್ತವರಿಗೇ ಈ Generation gap   ನ ಸಮಸ್ಯೆ ಕಾಡುತ್ತದೆ.
ಇಂದಿನ ದಿನಗಳಲ್ಲಿ ಪುರಾಣ, ಶ್ಲೋಕ ಪಠಣ, ಭಜನೆ ಇತ್ಯಾದಿಗಳು ತರುಣ ಪೋಷಕರಿಗೆ ತಿಳಿದಿಲ್ಲದಿರಬಹುದು. ಆದರೆ ಅವರು ದಿನಾಲೂ ಶಿಸ್ತುಬದ್ಧವಾಗಿ ನಿರ್ದಿಷ್ಟ ಜ್ಞಾನ ಸಂಗ್ರಹವನ್ನು ಮಕ್ಕಳಿಗೆ ದಾಟಿಸಬಹುದು. ಅದುGeneral knowledge, Geography, ವೇದಗಣಿತ, ಸಂಗೀತ, ವಾದ್ಯಗಳು, ಚಿತ್ರರಚನೆ, ಅಥವಾ ಚಾರಣ, ಪರಿಸರ ದರ್ಶನ, ಕೃಷಿ ದರ್ಶನ, ಕುಶಲ ಕಲೆಗಳ ಕಲಿಕೆ, Speed reading, speed writing, ಶುದ್ಧಬರಹ, ಸ್ಪಷ್ಟ ಉಚ್ಚಾರ, ಲೇಖನ ಕಲೆ, ಗಾದೆ ಮಾತುಗಳು ಮತ್ತು ಒಗಟುಗಳು, ಪಂಚತಂತ್ರ ಅಥವಾ ಸಣ್ಣಕತೆಗಳ ಓದು ಮತ್ತು ಚರ್ಚೆ, ಸೃಜನಶೀಲ ಸಂಭಾಷಣೆ, ಭಾಷಣ ಕಲೆ ಹೀಗೆ ಶಾಲೆಗಳಲ್ಲಿ ಕಲಿಸದ ಅನೇಕ ಜ್ಞಾನ ತಂತುಗಳಿವೆ. ಇವುಗಳಲ್ಲಿ ಕೆಲವನ್ನು ಜಂಟಿಯಾಗಿ ಅಭ್ಯಸಿಸಬಹುದು.
ಆದರೆ ಈ ಅಭ್ಯಾಸದ ಆರಂಭದಲ್ಲಿ ಮಗುವಿನ ತಂದೆ ಅಥವಾ ತಾಯಿ ಸ್ವತಃ ಭಾಗವಹಿಸಬೇಕು. ಇದರಿಂದಾಗಿ ಮಗುವಿಗೆ ತಾನು ಕಲಿತದ್ದರ ಸೃಷ್ಟೀಕರಣಕ್ಕೆ ಅವಕಾಶವಾಗುತ್ತದೆ. ಅಂದರೆ ಮಗುವಿನಲ್ಲಿ ಅನೇಕ ಪ್ರಶ್ನೆಗಳು ಮೂಡುತ್ತವೆ. ಇವುಗಳಿಗೆ ಉತ್ತರಗಳನ್ನು ತಕ್ಷಣವೇ ಕೊಡಬೇಕು. ಈ ಪ್ರಕ್ರಿಯೆಯ ಲಾಭ ಇಬ್ಬರಿಗೂ ಇರುತ್ತದೆ. ಈ ಸತ್ಯವನ್ನು ತಿಳಿಯದೆ  ಹೆತ್ತವರಿಗೆ ಇವೆಲ್ಲ ಮಕ್ಕಳಿಗೆ ಶಾಲೆಯ ಅಂಕಗಳ ಮುಂದೆ ನಿರರ್ಥಕ  ಹೊರೆಯೆಂದು ಅನಿಸಿದರೆ ಆಗ ನಿರ್ವಹಿಸಬೇಕಾದ ಕಾರ್ಯ ಬಾಕಿಯಾಗುತ್ತದೆ. ತಲೆಮಾರಿನ ಕಂದಕ ತೆರೆದುಕೊಳ್ಳುತ್ತದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

ಇದನ್ನೂ ಓದಿ

ವಿಶ್ವಗುರುವಾಗುವತ್ತ ಭಾರತ | ಶಿಕ್ಷಣ ಮತ್ತು ಕೃಷಿಕ್ಷೇತ್ರಗಳು ಅಸ್ಥಿರವಾಗುತ್ತಿರುವುದು ಗಮನದಲ್ಲಿದೆಯೆ?
September 4, 2024
9:29 PM
by: ಡಾ.ಚಂದ್ರಶೇಖರ ದಾಮ್ಲೆ
ಅಡಿಕೆಗೆ ಹಳದಿ ರೋಗ ಬಂದಿದೆ….! | ಕೃಷಿಕರು ಭೂಮಿಯನ್ನು ಯಾಕೆ ಮಾರುತ್ತಿದ್ದಾರೆ..?
August 28, 2024
9:52 PM
by: ಡಾ.ಚಂದ್ರಶೇಖರ ದಾಮ್ಲೆ
ಬಾಳೆ ಕೊನೆ ದಿಂಡಿನ ಉಪ್ಪಿನಕಾಯಿ ಬೇಕಾ? | ಆರೋಗ್ಯ ದೃಷ್ಟಿಯಿಂದ ಇಂತಹ ಹೊಸ ರುಚಿ ಸಹವಾಸ ಬೇಡ |
August 24, 2024
5:09 PM
by: ಪ್ರಬಂಧ ಅಂಬುತೀರ್ಥ
ನಗುನಗುತಾ ನಲಿ ನಲಿ ಏನೇ ಆಗಲಿ….. ಆದರೆ ನಿರ್ಗತಿಕರ, ಕೂಲಿ ಕಾರ್ಮಿಕರ ಬಗ್ಗೆ ಕೊಂಚ ಮನ ಮಿಡಿಯಲಿ
August 23, 2024
8:32 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror