ಅಸ್ಸಾಂ-ಮೇಘಾಲಯ ಗಡಿಯ ಬೊಕೊದಲ್ಲಿರುವ ಲ್ಯಾಂಪಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸುಮಾರು 7 ಲಕ್ಷ ರೂಪಾಯಿ ಮೌಲ್ಯದ ಬರ್ಮಾ ಅಡಿಕೆಯನ್ನು ಅಸ್ಸಾಂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ನಡೆಯುತ್ತಿದೆ.
ಅಸ್ಸಾಂ- ಮೇಘಾಲಯ ಗಡಿಯಲ್ಲಿರುವ ಲ್ಯಾಂಪಿ ಮಾರ್ಗದ ಮೂಲಕ ಮೇಘಾಲಯದಿಂದ ಅಸ್ಸಾಂ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ವಾಹನದಲ್ಲಿ ಬರ್ಮಾ ಮೂಲದ ಅಡಿಕೆ ತುಂಬಿಸಿ ಕಳ್ಳಸಾಗಣೆ ಮೂಲಕ ದೇಶಕ್ಕೆ ತರುವ ಪ್ರಯತ್ನ ನಡೆಯುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ. ಕಸ್ಟಮ್ಸ್ ಸುಂಕವನ್ನು ತಪ್ಪಿಸಲು ಗಡಿಗಳ ಮೂಲಕ ಕಳ್ಳಸಾಗಾಣಿಕೆಯಲ್ಲಿ ಸಾಗಾಟ ಮಾಡಲಾಗುತ್ತಿದೆ. ಕಳೆದ ಕೆಲವು ಸಮಯಗಳಿಂದ ಇಂತಹ ಘಟನೆ ನಡೆಯುತ್ತಲೇ ಇದೆ. ಅಡಿಕೆ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಸಣ್ಣ ಪ್ರಮಾಣದಲ್ಲೂ ಕಳ್ಳಸಾಗಾಣಿಕೆ ನಡೆಯುತ್ತಿರುವ ಬಗ್ಗೆ ಅನುಮಾನಗಳು ಇವೆ ಎಂದು ಹೇಳಿಕೆಯಲ್ಲಿ ಅಸ್ಸಾಂ ಪೊಲೀಸರು ಹೇಳಿದ್ದಾರೆ.
ಪ್ರತೀ ಬಾರಿಯೂ ಅಡಿಕೆ ಕಳ್ಳಸಾಗಾಣಿಕೆಯು ಬೃಹತ್ ಪ್ರಮಾಣದಲ್ಲಿ ಸಾಗಾಟವಾಗುವ ವೇಳೆ ದೇಶದಲ್ಲಿ ಅಡಿಕೆ ಧಾರಣೆಯಲ್ಲಿ ಏರಿಳಿತ ಕಂಡುಬರುತ್ತದೆ. ಅದು ಚಾಲಿ ಅಡಿಕೆ, ಕೆಂಪಡಿಕೆಯಲ್ಲಿ ಕೂಡಾ ಧಾರಣೆಯ ಏರಿಳಿತ ಕಂಡುಬರುತ್ತಿದೆ. ಧಾರಣೆ ಏರಿಕೆಯ ನಿರೀಕ್ಷೆ ಅಥವಾ ಧಾರಣೆ ಏರಿಕೆಯ ಸಾಧ್ಯತೆಯನ್ನು ಊಹಿಸುತ್ತಿರುವಾಗ ಕಳ್ಳಸಾಗಾಣಿಕೆಯ ಮೂಲಕ ಅಡಿಕೆ ದೇಶಕ್ಕೆ ಪ್ರವೇಶವಾದ ತಕ್ಷಣ ಧಾರಣೆ ಇಳಿಕೆ ಅಥವಾ ವ್ಯತ್ಯಾಸ ಕಂಡುಬರುತ್ತಿದೆ. ಕಳೆದ ಸುಮಾರು ಆರು ತಿಂಗಳ ವಿದ್ಯಮಾನಗಳನ್ನು ಗಮನಿಸಿದರೆ ಅಡಿಕೆ ಆಮದು ವಶಕ್ಕೆ ಪಡೆದ ಸುದ್ದಿಯ ಜೊತೆಗೇ ದೇಶದೊಳಗೆ ಅಡಿಕೆ ಮಾರುಕಟ್ಟೆಯಲ್ಲಿ ಏರಿಳಿತ ಕಂಡುಬಂದಿದೆ. ಅಕ್ರಮ ಸಾಗಾಟ ಪ್ರಕರಣದಲ್ಲಿಯೂ ಎಲ್ಲಾ ಸಾಗಾಟವು ಪತ್ತೆಯಾಗದೆ, ಒಂದೆರಡು ಸಾಗಾಟವು ಮಾತ್ರವೇ ಪತ್ತೆಯಾಗುವ ಬಗ್ಗೆಯೂ ಈ ಹಿಂದೆ ಗಡಿಭದ್ರತಾ ಪಡೆಯ ತನಿಖೆಯ ವೇಳೆ ತಿಳಿದಿತ್ತು. ಅಕ್ರಮ ಸಾಗಾಟದ ಸುಮಾರು 10 ವಾಹನಗಳ ರವಾನೆದಾರರು ಹಾಗೂ ಖರೀದಿದಾರರ ಪತ್ತೆಯೇ ಸಾಧ್ಯವಾಗಿರಲಿಲ್ಲ. ಈಚೆಗೆ ಇಂತಹದ್ದೇ ಪ್ರಕರಣದಲ್ಲಿ ರಾಜಕೀಯ ಮುಖಂಡನೊಬ್ಬನನ್ನು ಬಂಧಿಸಲಾಗಿತ್ತು.