ಭಾರತದ ಹಸಿರು ಯೋಜನೆಗಳಿಗೆ ಜಪಾನ್‌ನ ಕಾರ್ಬನ್ ಕ್ರೆಡಿಟ್ ಅವಕಾಶ – ರೈತರೂ ಪಡೆಯಬಹುದೇ ಇದರ ಲಾಭ?

September 6, 2026
12:28 PM
ಭಾರತ–ಜಪಾನ್ JCM ಮೂಲಕ ಭಾರತದಲ್ಲಿ ಕಡಿಮೆ-ಇಂಗಾಲ ಯೋಜನೆಗಳಿಗೆ ಜಪಾನ್ ಹೂಡಿಕೆ ಮತ್ತು ತಂತ್ರಜ್ಞಾನ ವರ್ಗಾವಣೆಗೆ ಹೊಸ ವ್ಯವಸ್ಥೆ ರೂಪುಗೊಂಡಿದೆ. ಕೃಷಿ ತ್ಯಾಜ್ಯ, ಬಯೋಗ್ಯಾಸ್, ಸೌರಶಕ್ತಿ, ಕೃಷಿ-ಅರಣ್ಯ ಮತ್ತು ಮಣ್ಣಿನ ಕಾರ್ಬನ್‌ನಂತಹ ಕ್ಷೇತ್ರಗಳಲ್ಲಿ ಭವಿಷ್ಯದಲ್ಲಿ ರೈತರಿಗೆ ಅವಕಾಶ ಸೃಷ್ಟಿಯಾಗಬಹುದಾದರೂ, ಕಾರ್ಬನ್ ಕ್ರೆಡಿಟ್ ಪಡೆಯಲು ನಿರ್ದಿಷ್ಟ ಮಾನದಂಡ ಮತ್ತು ಪರಿಶೀಲನಾ ಪ್ರಕ್ರಿಯೆ ಅಗತ್ಯ.

ಇದುವರೆಗೆ ಕಾರ್ಬನ್ ಕ್ರೆಡಿಟ್ ಎಂಬುದು ದೊಡ್ಡ ಕೈಗಾರಿಕೆಗಳು, ಸೌರ ವಿದ್ಯುತ್ ಯೋಜನೆಗಳು ಅಥವಾ ಅರಣ್ಯ ಯೋಜನೆಗಳಿಗೆ ಮಾತ್ರ ಸಂಬಂಧಿಸಿದ ವಿಷಯವೆಂದು ಕಾಣುತ್ತಿತ್ತು. ಆದರೆ ಭಾರತ–ಜಪಾನ್ ನಡುವಿನ ಹೊಸ ಸಹಕಾರದಿಂದ ಭಾರತದ ವಿವಿಧ ಕಡಿಮೆ-ಕಾರ್ಬನ್ ಮತ್ತು ಹಸಿರು ಯೋಜನೆಗಳಿಗೆ ಅಂತಾರಾಷ್ಟ್ರೀಯ ಕಾರ್ಬನ್ ಕ್ರೆಡಿಟ್ ಮಾರುಕಟ್ಟೆಯ ಬಾಗಿಲು ತೆರೆದಿದೆ.

Advertisement

ಪ್ಯಾರಿಸ್ ಹವಾಮಾನ ಒಪ್ಪಂದದ Article 6.2 ಅಡಿಯಲ್ಲಿ ಭಾರತ ಮತ್ತು ಜಪಾನ್ Joint Crediting Mechanism (JCM) ಅನುಷ್ಠಾನ ನಿಯಮಗಳನ್ನು ಅಳವಡಿಸಿಕೊಂಡಿವೆ. 2026ರ ಜೂನ್ 8ರಂದು ಈ ನಿಯಮಗಳನ್ನು ಎರಡೂ ದೇಶಗಳು ಅಂಗೀಕರಿಸಿದ್ದು, ಇದರ ಮೂಲಕ ಭಾರತದಲ್ಲಿ ಹಸಿರು ಹಾಗೂ ಕಡಿಮೆ-ಇಂಗಾಲ ತಂತ್ರಜ್ಞಾನ ಆಧಾರಿತ ಯೋಜನೆಗಳಿಗೆ ಜಪಾನ್‌ನ ಹೂಡಿಕೆ, ತಂತ್ರಜ್ಞಾನ ಮತ್ತು ಸಾಮರ್ಥ್ಯವರ್ಧನೆಗೆ ಅವಕಾಶ ಸೃಷ್ಟಿಯಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.  ಇದರ ಉದ್ದೇಶ ಕೇವಲ ಕಾರ್ಬನ್ ಕ್ರೆಡಿಟ್ ವ್ಯಾಪಾರವಲ್ಲ. ಜಪಾನ್‌ನ ಹೂಡಿಕೆ, ತಂತ್ರಜ್ಞಾನ ಮತ್ತು ಸಾಮರ್ಥ್ಯವನ್ನು ಭಾರತದಲ್ಲಿನ ಕಡಿಮೆ-ಕಾರ್ಬನ್ ಯೋಜನೆಗಳಿಗೆ ತರುವುದು ಕೂಡ ಇದರ ಪ್ರಮುಖ ಗುರಿಯಾಗಿದೆ.

ಕಳೆದ ವರ್ಷ ಭಾರತ ಮತ್ತು ಜಪಾನ್ Joint Crediting Mechanism ಗೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಿದ್ದವು. ಹಸಿರುಮನೆ ಅನಿಲ ಹೊರಸೂಸುವಿಕೆ ಕಡಿತ ಅಥವಾ ಇಂಗಾಲ ಹೀರಿಕೊಳ್ಳುವಿಕೆಯಂತಹ ಫಲಿತಾಂಶ ನೀಡುವ ಯೋಜನೆಗಳನ್ನು ಎರಡೂ ದೇಶಗಳ ಸುಸ್ಥಿರ ಅಭಿವೃದ್ಧಿ ಮತ್ತು ರಾಷ್ಟ್ರೀಯ ಹವಾಮಾನ ಗುರಿಗಳಿಗೆ ಸಂಪರ್ಕಿಸುವುದು ಇದರ ಉದ್ದೇಶವಾಗಿದೆ.

ಕಾರ್ಬನ್ ಕ್ರೆಡಿಟ್ ಹೇಗೆ ಕಾರ್ಯನಿರ್ವಹಿಸಲಿದೆ? : JCM ಅಡಿಯಲ್ಲಿ ಕೈಗೊಳ್ಳುವ ಯೋಜನೆಗಳಿಗೆ ಸ್ಪಷ್ಟ ಅನುಮೋದನಾ ವ್ಯವಸ್ಥೆ ಇರಲಿದೆ. ಭಾರತ ಮತ್ತು ಜಪಾನ್ ಪ್ರತಿನಿಧಿಗಳಿರುವ ಸಮಿತಿ, ಯೋಜನೆಗಳ ಅನುಮೋದನೆ, ಮೂರನೇ ವ್ಯಕ್ತಿಯಿಂದ ಪರಿಶೀಲನೆ ಮತ್ತು ದೃಢೀಕರಣ, ಸುಸ್ಥಿರ ಅಭಿವೃದ್ಧಿ ಸುರಕ್ಷತಾ ಕ್ರಮಗಳು ಹಾಗೂ ಕಾರ್ಬನ್ ಕ್ರೆಡಿಟ್‌ಗಳ ವಿತರಣೆ ಮತ್ತು ವರ್ಗಾವಣೆಯನ್ನು ದಾಖಲಿಸುವ ರಾಷ್ಟ್ರೀಯ ನೋಂದಣಿ ವ್ಯವಸ್ಥೆ ಇರಲಿದೆ.  ಅಂದರೆ, ಕೇವಲ “ಕಾರ್ಬನ್ ಕಡಿಮೆ ಮಾಡಿದೆ” ಎಂದು ಹೇಳುವುದರಿಂದ ಕ್ರೆಡಿಟ್ ಸಿಗುವುದಿಲ್ಲ. ಯೋಜನೆ ನಿರ್ದಿಷ್ಟ ಮಾನದಂಡಗಳನ್ನು ಪೂರೈಸಬೇಕು, ಅದರ ಫಲಿತಾಂಶವನ್ನು ಅಳೆಯಬೇಕು ಮತ್ತು ಮೂರನೇ ವ್ಯಕ್ತಿಯಿಂದ ಪರಿಶೀಲನೆಗೊಳಪಡಬೇಕು.

ಕೃಷಿ ಮತ್ತು ರೈತರಿಗೆ ಏನು ಅವಕಾಶ? :  ಕೇಂದ್ರದ ಪ್ರಕಟಣೆಯಲ್ಲಿ ನಿರ್ದಿಷ್ಟವಾಗಿ ರೈತರ ಅಥವಾ ಕೃಷಿ ಕಾರ್ಬನ್ ಕ್ರೆಡಿಟ್ ಯೋಜನೆಗಳ ಪಟ್ಟಿಯನ್ನು ನೀಡಿಲ್ಲ. ಆದರೆ JCM ಕಡಿಮೆ-ಇಂಗಾಲ ತಂತ್ರಜ್ಞಾನ, ಹವಾಮಾನ ತಗ್ಗಿಸುವಿಕೆ ಮತ್ತು ಸುಸ್ಥಿರ ಅಭಿವೃದ್ಧಿ ಯೋಜನೆಗಳಿಗೆ ಹೂಡಿಕೆ ಹಾಗೂ ತಂತ್ರಜ್ಞಾನ ವರ್ಗಾವಣೆಗೆ ಅವಕಾಶ ಕಲ್ಪಿಸುವುದರಿಂದ, ಭವಿಷ್ಯದಲ್ಲಿ ಕೃಷಿ ತ್ಯಾಜ್ಯ ನಿರ್ವಹಣೆ, ಬಯೋಗ್ಯಾಸ್, ಸೌರಶಕ್ತಿ ಆಧಾರಿತ ಕೃಷಿ, ಇಂಧನ ದಕ್ಷತೆ, ಮಣ್ಣಿನ ಕಾರ್ಬನ್ ಮತ್ತು ಕೃಷಿ-ಅರಣ್ಯ ಪದ್ಧತಿಗಳಂತಹ ಕ್ಷೇತ್ರಗಳು ಯೋಜನೆಗಳ ಭಾಗವಾಗುವ ಸಾಧ್ಯತೆ ಇದೆ.

ಇದು ರೈತರಿಗೆ ನೇರವಾಗಿ “ಪ್ರತಿ ಮರಕ್ಕೆ ಅಥವಾ ಪ್ರತಿ ಎಕರೆಗೆ ಇಷ್ಟು ಕಾರ್ಬನ್ ಕ್ರೆಡಿಟ್” ಎಂಬ ಹೊಸ ಆದಾಯ ಯೋಜನೆ ಆರಂಭವಾಗಿದೆ ಎಂದರ್ಥವಲ್ಲ. JCM ಅಡಿಯಲ್ಲಿ ಯೋಜನೆಗೆ ಅರ್ಹತೆ, ಹೆಚ್ಚುವರಿ ಇಂಗಾಲ ಕಡಿತ , ಅಳತೆ–ವರದಿ–ಪರಿಶೀಲನೆ ಮತ್ತು ಅಧಿಕೃತ ನೋಂದಣಿ ಮುಂತಾದ ಪ್ರಕ್ರಿಯೆಗಳು ಅಗತ್ಯವಾಗಬಹುದು.

ಅಡಿಕೆ, ತೆಂಗು, ಕೃಷಿ-ಅರಣ್ಯಕ್ಕೂ ಅವಕಾಶ? :  ಪಶ್ಚಿಮ ಘಟ್ಟ ಮತ್ತು ಕರಾವಳಿ ಕರ್ನಾಟಕದಂತಹ ಪ್ರದೇಶಗಳಲ್ಲಿ ಅಡಿಕೆ, ತೆಂಗು, ಕಾಳುಮೆಣಸು ಸೇರಿದಂತೆ ಬಹುಬೆಳೆ ಪದ್ಧತಿಗಳು ಸಾಮಾನ್ಯವಾಗಿವೆ. ಇಂತಹ ಕೃಷಿ ವ್ಯವಸ್ಥೆಗಳಲ್ಲಿ ಕಾರ್ಬನ್ ಸಂಗ್ರಹಣೆ, ಜೈವಿಕ ತ್ಯಾಜ್ಯ ಬಳಕೆ, ಸೌರಶಕ್ತಿ, ನೀರು–ಇಂಧನ ದಕ್ಷತೆ ಮುಂತಾದ ಅಂಶಗಳನ್ನು ಒಳಗೊಂಡ ಸಮಗ್ರ ಯೋಜನೆಗಳನ್ನು ರೂಪಿಸುವ ಸಾಧ್ಯತೆ ಇದೆ.

ಆದರೆ ತೋಟದಲ್ಲಿ ಮರಗಳಿವೆ ಎಂಬ ಒಂದೇ ಕಾರಣಕ್ಕೆ ರೈತರಿಗೆ JCM ಕಾರ್ಬನ್ ಕ್ರೆಡಿಟ್ ಸಿಗುತ್ತದೆ ಎಂದು ಭಾವಿಸಬಾರದು. ಯೋಜನೆಯ ಮಾನದಂಡಗಳು, ಬೇಸ್‌ಲೈನ್, ಕಾರ್ಬನ್ ಅಳತೆ, ಪರಿಶೀಲನೆ, ಕ್ರೆಡಿಟ್ ಮಾಲೀಕತ್ವ ಮತ್ತು ಆದಾಯ ಹಂಚಿಕೆ ಸ್ಪಷ್ಟವಾಗಿರಬೇಕು.

ರೈತರು ಎಚ್ಚರಿಕೆಯಿಂದ ಇರಬೇಕಾದ ಅಂಶ : ಕಾರ್ಬನ್ ಕ್ರೆಡಿಟ್ ಮಾರುಕಟ್ಟೆ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ರೈತರಿಂದ ಭೂಮಿ, ಮರಗಳು ಅಥವಾ ಕಾರ್ಬನ್ ಹಕ್ಕುಗಳಿಗೆ ಸಂಬಂಧಿಸಿದ ಒಪ್ಪಂದಗಳನ್ನು ಮಾಡಿಸಿಕೊಳ್ಳುವ ಖಾಸಗಿ ಸಂಸ್ಥೆಗಳು ಹೆಚ್ಚಾಗಬಹುದು. ಆದ್ದರಿಂದ ಯಾವುದೇ ಯೋಜನೆಗೆ ಸೇರುವ ಮೊದಲು ಕಾರ್ಬನ್ ಕ್ರೆಡಿಟ್‌ನ ಮಾಲೀಕತ್ವ ಯಾರಿಗೆ?, ರೈತನಿಗೆ ಎಷ್ಟು ಆದಾಯ?, ಎಷ್ಟು ವರ್ಷಗಳ ಒಪ್ಪಂದ?, ಮರಗಳನ್ನು ಕಡಿದುಹಾಕಲು ಅಥವಾ ಬೆಳೆ ಪದ್ಧತಿ ಬದಲಿಸಲು ನಿರ್ಬಂಧವಿದೆಯೇ?, ಕಾರ್ಬನ್ ಕ್ರೆಡಿಟ್ ಮಾರಾಟದಿಂದ ಬರುವ ಹಣವನ್ನು ಹೇಗೆ ಹಂಚಿಕೊಳ್ಳಲಾಗುತ್ತದೆ?, ಯೋಜನೆ ಯಾವ ಅಧಿಕೃತ ವ್ಯವಸ್ಥೆಯಲ್ಲಿ ನೋಂದಾಯಿತವಾಗಿದೆ? ಎಂಬುದನ್ನು ಸ್ಪಷ್ಟಪಡಿಸಿಕೊಳ್ಳುವುದು ಅಗತ್ಯ.

ಇದು ಮುಂದಿನ ಹಂತದಲ್ಲಿ ಈ ವ್ಯವಸ್ಥೆ ಕೃಷಿ ಮತ್ತು ಗ್ರಾಮೀಣ ಪ್ರದೇಶಗಳವರೆಗೆ ಪರಿಣಾಮಕಾರಿಯಾಗಿ ತಲುಪಿದರೆ, ಕೃಷಿ ಉತ್ಪಾದನೆಯ ಜೊತೆಗೆ ಕಾರ್ಬನ್ ನಿರ್ವಹಣೆಯೂ ರೈತರ ಆದಾಯದ ಒಂದು ಭಾಗವಾಗುವ ಸಾಧ್ಯತೆ ಇದೆ. ಆದರೆ ಅದಕ್ಕಾಗಿ ರೈತರು ಮಾತ್ರವಲ್ಲದೆ FPOಗಳು, ಸಹಕಾರ ಸಂಘಗಳು, ಕೃಷಿ ಇಲಾಖೆ ಮತ್ತು ಸಂಶೋಧನಾ ಸಂಸ್ಥೆಗಳು ಸೇರಿ ನಂಬಿಕಾರ್ಹ ಯೋಜನೆಗಳನ್ನು ರೂಪಿಸಬೇಕಾಗುತ್ತದೆ.

ಜಪಾನ್ ಹಣ ಹಾಕುವುದು, ಭಾರತದಲ್ಲಿ ಯೋಜನೆ? : ಹೌದು, ಇದೇ ಇದರ ಪ್ರಮುಖ ಸಾಧ್ಯತೆ. ಜಪಾನ್‌ನ ಕಂಪನಿಗಳು ಅಥವಾ ಸಂಸ್ಥೆಗಳು ಭಾರತದಲ್ಲಿನ ಕಡಿಮೆ-ಕಾರ್ಬನ್ ತಂತ್ರಜ್ಞಾನ ಯೋಜನೆಗಳಿಗೆ ತಂತ್ರಜ್ಞಾನ ಅಥವಾ ಹಣಕಾಸು ನೆರವು ನೀಡಬಹುದು. ಉದಾಹರಣೆಗೆ ಸೌರ ವಿದ್ಯುತ್, ಕಡಿಮೆ-ಕಾರ್ಬನ್ ತಂತ್ರಜ್ಞಾನ, ನವೀಕರಿಸಬಹುದಾದ ಇಂಧನ, ಕಡಿಮೆ-ಹೊರಸೂಸುವಿಕೆಯ ಮೂಲಸೌಕರ್ಯ, ಕೈಗಾರಿಕಾ ಡಿಕಾರ್ಬನೈಸೇಶನ್, ಇತರ ಹಸಿರು ಯೋಜನೆಗಳು. ಇವುಗಳಿಂದ ಉಂಟಾಗುವ GHG ಹೊರಸೂಸುವಿಕೆ ಕಡಿತವನ್ನು ಅಳೆಯಲಾಗುತ್ತದೆ. ಅದರಿಂದ ಉತ್ಪತ್ತಿಯಾಗುವ ಕ್ರೆಡಿಟ್‌ಗಳನ್ನು ಯೋಜನೆಯಲ್ಲಿ ಎರಡೂ ದೇಶಗಳ ಕೊಡುಗೆಗೆ ಅನುಗುಣವಾಗಿ ಹಂಚಿಕೊಳ್ಳಬಹುದು.

India and Japan have operationalised their Joint Crediting Mechanism (JCM) under Article 6.2 of the Paris Agreement. The mechanism can facilitate Japanese investment, technology transfer and capacity building for low-carbon projects in India, with verified greenhouse-gas emission reductions or removals generating credits that can be allocated between the two countries. India and Japan adopted the JCM implementation rules on June 8, 2026, including project approval, third-party validation and verification, safeguards and national registries

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹಿಮಾಲಯದಲ್ಲಿ ಮತ್ತೊಂದು ಅಪಾಯದ ಎಚ್ಚರಿಕೆ..!
September 6, 2026
11:11 AM
by: ದ ರೂರಲ್ ಮಿರರ್.ಕಾಂ
ಎಲ್ ನಿನೊ ಮತ್ತಷ್ಟು ಬಲಗೊಳ್ಳುವ ಮುನ್ಸೂಚನೆ..!
September 6, 2026
10:01 AM
by: ದ ರೂರಲ್ ಮಿರರ್.ಕಾಂ
ಈಶಾನ್ಯದಿಂದ ಜಾರ್ಖಂಡ್‌ವರೆಗೆ ರಬ್ಬರ್‌ ಕೃಷಿಯ ವಿಸ್ತರಣೆ | ಹೊಸ ಪ್ರದೇಶಗಳಲ್ಲಿ ರಬ್ಬರ್‌ ಕೃಷಿ ವಿಸ್ತರಣೆ – ಅಪಾಯವೇ..? ಅವಕಾಶವೇ..?
September 5, 2026
10:11 PM
by: ದ ರೂರಲ್ ಮಿರರ್.ಕಾಂ
ದಾವಣಗೆರೆಯಲ್ಲಿ ಮಳೆ ಕೊರತೆ – ಮೆಕ್ಕೆಜೋಳ, ರಾಗಿ ಬೆಳೆ ಶೇ.50 ಹಾನಿ ಭೀತಿ
September 5, 2026
7:20 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror