ಮುಜಂಟಿ ಜೇನನ್ನು(stingless bee) ಮಿಸಿರಿ ಜೇನು, ಮಸರು ಜೇನು, ರಾಳ ಜೇನು, ಮೂಲಿ ಜೇನು ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಇದರ ವೈಜ್ಞಾನಿಕ ಹೆಸರು ಟ್ರೈಗೋನ ಇರಿಡಿಪೆನ್ನಿಸ್ (Trigona irridipennis). ಮುಜಂಟಿ ಜೇನು ಹುಳಗಳು(Honey bee) ಗಾತ್ರದಲ್ಲಿ ತುಂಬಾ ಸಣ್ಣದಿರುವುದರಿಂದ ಎಲ್ಲಾ ತರಹದ ಸಣ್ಣ ಪುಟ್ಟ ಹೂವುಗಳಿಂದಲೂ ಮಕರಂದ(Nectar) ಸಂಗ್ರಹಿಸುತ್ತವೆ. ಈ ಜೇನು ಹುಳಗಳು ತೆಂಗು(Coconut), ಅಡಿಕೆ(Areca nut), ಕಾಫಿ(Coffee) ಹಾಗೂ ಇಕ್ಸೋರ ಹೂಗಳಿಂದಲೂ ಮಕರಂದ ಸಂಗ್ರಹಿಸುವುದರಿಂದ ಕೃಷಿಗೂ ಇದು ಪೂರಕ.
ಮುಜಂಟಿ ಜೇನು ಗಲಾಟೆ ಇಲ್ಲದೇ ಶಾಂತಿಯಿಂದ ಬದುಕುವ ಕೀಟಗಳು. ತಮ್ಮ ಗೂಡನ್ನು ಮೇಣದಿಂದ ಮುಚ್ಚಿ ಎಲ್ಲಿಯೂ ಬೆಳಕು ಗಾಳಿ ಬರದಂತೆ ಕತ್ತಲೆ ಕೋಣೆಯಲ್ಲಿ ಜೀವನ ಮಾಡುತ್ತವೆ. ಕೇವಲ ಒಳ ಹೊರಗೆ ಓಡಾಡುವುದಕ್ಕೆ ಸಣ್ಣ ರಂಧ್ರ ಮಾಡಿಕೊಂಡಿರುತ್ತವೆ. ಮನುಷ್ಯ ಹತ್ತಿರ ಹೋದಲ್ಲಿ ತಲೆ ಕೂದಲು ರೋಮಗಳಿಗೆ ಅಂಟಿಕೊಳ್ಳುತ್ತವೆ. ತಮ್ಮ ಗೂಡಿನಲ್ಲಿ ದ್ರಾಕ್ಷಿ ಗೊಂಚಲಿನಂಥ ಗೂಡುಗಳಲ್ಲಿ ಜೇನು, ಮೊಟ್ಟೆ, ಮರಿಗಳನ್ನು ಹಾಗೂ ಪರಾಗವನ್ನು ಸಹ ಸಂಗ್ರಹಿಸಿಕೊಳ್ಳುತ್ತವೆ. ಜೇನು ತೆಗೆದ ನಂತರ ಮೊಟ್ಟೆ ಮರಿಗಳ ಗೂಡುಗಳ ಸಮೇತ ಸ್ವಲ್ಪ ಹುಳುಗಳನ್ನು ತೆಗೆದುಕೊಂಡು ಬೇರೆ ಗೂಡುಗಳಲ್ಲಿ ಹೊಸ ಕುಟುಂಬವನ್ನಾಗಿ ಸಾಕಬಹುದು.
ಹವ್ಯಾಸವಾಗಿ ಇದರ ಸಾಕಾಣಿಕೆ ಮಾಡುವವರು ತಮ್ಮ ಮನೆಯ ಸುತ್ತಲೂ ಎಲ್ಲಿಯಾದರೂ ಮುಜಂಟಿ ಜೇನಿನ ಗೂಡನ್ನು ಕಂಡಲ್ಲಿ ಬಹಳ ಸೂಕ್ಷ್ಮವಾಗಿ ಅವುಗಳ ಮೊಟ್ಟೆ ಮತ್ತು ಮರಿ ಹುಳುಗಳು ಇರುವ ಅರಿಯನ್ನು ಕತ್ತರಿಸಿ ಸ್ವಲ್ಪ ಜೇನು ಹುಳುಗಳ ಜೊತೆ ಬಿದಿರಿನ ಬೊಂಬುಗಳಲ್ಲಿ ಅಥವಾ ಮರದ ಸಣ್ಣ ಪೆಟ್ಟಿಗೆಗಳಲ್ಲಿ ಸೇರಿಸಿ ಮನೆಯ ಮಾಡಿನಲ್ಲಿ ನೇತು ಹಾಕಿಕೊಳ್ಳಬಹುದು. ವರ್ಷಕ್ಕೊಮ್ಮೆ ಏಪ್ರಿಲ್ ತಿಂಗಳಿನಲ್ಲಿ ಸಾಮಾನ್ಯವಾಗಿ ಗೂಡಿನಿಂದ ಜೇನು ತುಪ್ಪ ತೆಗೆಯಬಹುದಾಗಿದೆ.
ಹಿಂದೆಲ್ಲ ಮುಜಂಟಿ ಜೇನಿನ ತುಪ್ಪವನ್ನು ಯಾರೂ ತಿನ್ನಲು ಬಳಸುತ್ತಿರಲಿಲ್ಲ. ಅದರ ಬಳಕೆ ಔಷಧೀಯ ಉದ್ದೇಶಕ್ಕೆ ಸೀಮಿತವಾಗಿತ್ತು. ಆದ್ದರಿಂದ ಒಮ್ಮೆ ತೆಗೆದ ಜೇನು ಬಾಟಲಿಯಲ್ಲಿ ಅನೇಕ ವರ್ಷಗಳವರೆಗೆ ಉಳಿಯುತ್ತಿತ್ತು. ಜೇನುಕುಟುಂಬವೂ ಗೂಡಿನಲ್ಲಿ ತನ್ನ ನೆಲೆ ಭದ್ರಹಡಿಸಿಕೊಂಡು ಹಲವು ವರ್ಷ ಹಾಗೆಯೇ ಇರುತ್ತಿತ್ತು. ಮುಟ್ಟಹೋದವರಿಗೆ ಇವು ಕಚ್ಚುವುದಿಲ್ಲ. ಗೂಡಿನಿಂದ ರಪರಪನೆ ಹೊರಬಂದು ಮೈಮೇಲೆಲ್ಲ ದಾಳಿ ನಡೆಸಿ ತಲೆಗೂದಲಿಗೆ ಅಂಟಿಕೊಂಡು ರೇಜಿಗೆ ಹುಟ್ಟಿಸುತ್ತವೆ. ಹಾಗಾಗಿ ಯಾರೂ ಅವುಗಳ ಗೋಜಿಗೆ ಹೋಗುತ್ತಿರಲಿಲ್ಲ. ಆದರೆ ಇತ್ತೀಚೆಗೆ ಅವುಗಳನ್ನು ಔಷಧೀಯ ಉಪಯೋಗದ ಜತೆಗೆ ತಿನ್ನುವುದಕ್ಕೂ ಬಳಸುತ್ತಿದ್ದಾರೆ. ಹಾಗಾಗಿ ಕೆಲವರು ಅದರ ವ್ಯಾಪಾರ ಆರಂಭಿಸಿದ್ದಾರೆ. ಮೊನ್ನೆಮೊನ್ನೆಯ ವರೆಗೂ ಮಣ್ಣಿನ ಗೋಡೆಗಳ ಸಂದುಗಳಲ್ಲೋ, ಮರದ ದಿಮ್ಮಿ-ಬಿದಿರ ಮೆಳೆಗಳಲ್ಲೋ, ವಿದ್ಯುತ್ ಮೀಟರ್ ಬಾಕ್ಸಿನೊಳಗೋ ಅವಿತಿರುತ್ತಿದ್ದ ಈ ಕಚ್ಚದ ಜೇನ್ನೊಣಗಳಿಗಾಗಿ ಈಗ ವ್ಯವಸ್ಥಿತ ಗೂಡುಗಳು ಅವತರಿಸಿವೆ. ಐವತ್ತು-ನೂರರಿಂದ ಹಿಡಿದು ಸಾವಿರಕ್ಕೂ ಮಿಕ್ಕಿ ಮುಜಂಟಿ ಜೇನುಕುಟುಂಬಗಳನ್ನಿಟ್ಟು ಶಾಸ್ತ್ರೀಯವಾಗಿ ಸಾಕಣೆ ಮಾಡುತ್ತಿರುವವರ ಸಂಖ್ಯೆ ಬೆಳೆಯುತ್ತಿದೆ.
ಕೇರಳದಲ್ಲಿ ಕ್ರಾಂತಿ: ಕಳೆದೊಂದು ದಶಕದಿಂದ ಕೇರಳದಲ್ಲಂತೂ ಮುಜಂಟಿ ಸಾಕಣೆಯಲ್ಲಿ ಒಂದು ಕ್ರಾಂತಿಯೇ ಆಗಿದೆ. ಸಾವಿರ ಸಾವಿರ ಸಂಖ್ಯೆಯಲ್ಲಿ ಈ ಗೂಡುಗಳನ್ನಿಟ್ಟು ವೈಜ್ಞಾನಿಕ ರೀತಿಯಲ್ಲಿ ಪೋಷಣೆ ಮಾಡುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ‘ಮನೆಗೊಂದು ಮುಜಂಟಿ ಗೂಡು’ ಆ ರಾಜ್ಯದಲ್ಲಿ ಒಂದು ಅಭಿಯಾನದ ರೂಪ ಪಡೆದಿದೆ. ಕರ್ನಾಟಕದಲ್ಲೂ ಅಲ್ಲಲ್ಲಿ ಇದನ್ನು ಸಾಕಣೆ ಮಾಡುವವರಿದ್ದಾರೆ.
Source : Digital Media ಸಂಗ್ರಹ