1974ರಿಂದ ಆಚರಿಸಲ್ಪಡುತ್ತಿರುವ ವಿಶ್ವ ಪರಿಸರ ದಿನಕ್ಕೆ(World environment Day) ಈ ವರ್ಷ 50ರ ಹರೆಯ. LAND RESTORATION, DESERTIFICATION & DROUGHT RESILIENCE ಎಂಬ ಧ್ಯೇಯದ ಹಿನ್ನೆಲೆಯಲ್ಲಿ ನಮ್ಮ ಸಂಸ್ಕೃತಿಯ(Culture) ಆಧಾರದ ಮೇಲೆ ಕೈಗೊಳ್ಳಬಹುದಾದ ಒಂದಷ್ಟು ಗುಣಾತ್ಮಕ ವಿಚಾರಗಳನ್ನು ಗಮನಿಸೋಣ.
ದಕ್ಷಿಣಕನ್ನಡದ(Dakshina Kannda) ಊರುಗಳ, ಸ್ಥಳಗಳ ಹೆಸರುಗಳನ್ನು ಗಮನಿಸಿದಾಗ ಸಸ್ಯಗಳಿಗೂ ಆ ಪ್ರದೇಶಗಳಿಗೂ ಇರುವ ಅವಿನಾಭಾವ ಸಂಬಂಧ ತಿಳಿಯುತ್ತದೆ. ಪಜಿರಡ್ಕ (ಹುಲ್ಲುಗಾವಲಿನ ವಿಶಾಲ ಪ್ರದೇಶ), ಸೌತಡ್ಕ (ಸೌತೆ, ಕುಂಬಳ ಜಾತಿಯ ಸಸ್ಯಗಳು ಬೆಳೆಯುತ್ತಿದ್ದ ಗೋಮಾಳ ಪ್ರದೇಶ), ಪಿಲತ್ತಡ್ಕ (ಹಲಸು ಹುಲುಸಾಗಿದ್ದ ಪ್ರದೇಶ), ಮಂಜೋಳು ಪಲ್ಕೆ (ಅರಸಿನ), ಕುಂಟಾರು, ಕುಂಟಾಲಪಲ್ಕೆ (ಕುಂಟಾಲ ಮರ), ದರ್ಬೇತಡ್ಕ(ದರ್ಬೆ ಹುಲ್ಲು), ಪುಂಡಿಯಾಯಿ ಬನ (ಪಿಂಡಿಕಾಯಿ), ಮೈರೋಳ್ದಡ್ಕ (ನವಿಲಾಡಿ) ತುಂಬೇಜಾಲ ಗುತ್ತು(ತುಂಬೆ), ಬೊಳ್ದೊಟ್ಟು (ಬೆಳ್ಳಂಟೆ) ಹೀಗೆ…. ಎಳ್ಳು, ಹತ್ತಿ, ಬೋವು, ನೇರಳೆ ಮುಂತಾದ ಹಲವು ಸಸ್ಯಗಳೊಂದಿಗೆ ಸಂಬಂಧಿಸಿದ ಸ್ಥಳ, ಗ್ರಾಮನಾಮಗಳು ದೊರಕುತ್ತವೆ.
ಅದೇ ರೀತಿ ನಕ್ಷತ್ರ, ರಾಶಿ, ದೇವತೆಗಳಿಗನುಸಾರವಾಗಿ ಇರುವ ಸಸ್ಯಸಂಕುಲಗಳ ಪರಿಚಯವೂ ನಮಗಿದೆ. ಇನ್ನು ಪಾರಂಪರಿಕ ನಾಗಬನ, ಭೂತ/ದೈವದ ಕಟ್ಟೆ ಅಥವಾ ಕಲ್ಲು ಇವುಗಳ ಪರಿಸರದಲ್ಲಿ ಕಂಡುಬರುವ ಸಸ್ಯಸಂಕುಲಗಳು ಆ ಪ್ರದೇಶದ ನಿಜವಾದ ಸ್ವರೂಪದ ಪ್ರತಿನಿಧಿಗಳಾಗಿರುತ್ತವೆ. ಪರಶುರಾಮ ಸೃಷ್ಟಿಯ ಈ ಪ್ರದೇಶ ನಾಗ, ದೈವಗಳ ವ್ಯಾಪ್ತಿಗೆ ಬರುವಂತಹದ್ದು. ಇಲ್ಲಿನ ನಿವಾಸಿಗಳು ನಂಬಿಕೊಂಡು ಬಂದಿರುವ ಈ ಅತಿಮಾನುಷ ಶಕ್ತಿಗಳು ರಕ್ಷಣೆ ಮಾಡುತ್ತವೆ ಎಂಬುದು ಸ್ಪಷ್ಟ. ವೈಯಕ್ತಿಕವಾಗಿ ಭಿನ್ನ ನಿಲುವು, ಮತಾಚರಣೆಗಳನ್ನು ಮಾಡುವವರೂ ತಮ್ಮ ಜಾಗ, ಜಮೀನುಗಳ ವಿಚಾರಕ್ಕೆ ಬಂದಾಗ ರಕ್ಷಣೆ ಮಾಡುವುದು ಈ ಮೂಲ ಶಕ್ತಿಗಳೇ ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಆರ್ಥಿಕ ಅನುಕೂಲಗಳು ಈ ನಂಬಿಕೆಗಳ ಆಚರಣೆಗಳನ್ನು ವೈಭವೀಕರಿಸುತ್ತಿವೆ ಎಂಬುದೂ ಸುಳ್ಳಲ್ಲ. ಈ ನಂಬಿಕೆಗಳನ್ನು ಪರಿಸರದ ಹಿನ್ನೆಲೆಯಲ್ಲಿ, ಅತಿಮಾನುಷ ಶಕ್ತಿಗಳ ಪವಿತ್ರತೆಯ ಹಿನ್ನೆಲೆಯಲ್ಲಿ ಗಮನಿಸಿದಾಗ ನಮ್ಮ ಊರು, ಹತ್ತು ಸಮಸ್ತರಿಗೆ ಸೇರಿರುವ ದೈವಗಳು, ನಾಗಬನಗಳು, ದೇವಾಲಯಗಳಲ್ಲಿ ಆಯಾಯ ದೈವ, ದೇವ ಸಂಬಂಧೀ ವೃಕ್ಷ ತರುಲತೆಗಳನ್ನು ನೆಟ್ಟು, ಪಾಲನೆ ಪೋಷಣೆ ಮಾಡಿದರೆ ಆ ಶಕ್ತಿಗಳಿಗೆ ಅವುಗಳ ಪ್ರಕೃತಿಸಹಜ ವಾತಾವರಣವೂ ಸಿಗುತ್ತದೆ. ಆ ಜಾಗದ ಪಾವಿತ್ರತೆಯೂ ಬೆಳೆಯುತ್ತದೆ.
ಪಿಜ (ಹೆಬ್ಬಲಸು)ನ ಮರಗಳು ಹೇರಳ ಆಗಿದ್ದ ಜಾಗ, ಗುತ್ತಿನ ಮನೆ ಪಿಜತ್ಯಾರು ಬರ್ಕೆ, ತುಂಬೆ ಗಿಡಗಳಿಂದ ಆವೃತವಾಗಿದ್ದು ದೈವ ಸನ್ನಿಧಾನ ಹೊಂದಿದ್ದ ಮನೆ ತುಂಬೇಜಾಲ ಗುತ್ತು. ಹಾಲೆ ಮರದ ಅಡಿಯಲ್ಲಿ ದೈವ ಉಂಟಾದ ಕಾರಣ ಅದಕ್ಕೆ ಪಾಲೆಸ್ರಾವಲೆ ಹೀಗೆ ನಮ್ಮ ತುಳುನಾಡಿನ ಜೀವನದೊಂದಿಗೆ /ಇಲ್ಲಿಯ ದೈವಾರಾಧನೆ ಒಂದಿಗೆ ವೃಕ್ಷಗಳು ಹೇಗೆ ಹಾಸು ಹೊಕ್ಕಾಗಿವೆ ಎನ್ನುವುದಕ್ಕೆ ಉದಾಹರಣೆ.
ಹಾಗಾದರೆ ಇಂತಹ ಸಸ್ಯಗಳ ಮಾಹಿತಿ ಹೇಗೆ ಪಡೆಯಬಹುದು?: ನಮ್ಮ ಮನೆಗೆ, ಜಾಗಕ್ಕೆ, ಹತ್ತು ಸಮಸ್ತರಿಗೆ, ಗ್ರಾಮಕ್ಕೆ ಸಂಬಂಧಿಸಿದ ದೈವಗಳ ಹೆಸರುಗಳನ್ನು, ಅವುಗಳ ಸ್ಥಳ ವಿಶೇಷತೆಯನ್ನು, ಅವುಗಳ ಸಂದಿಗಳನ್ನು ಮನೆಯ ಹಿರಿಯರಿಂದ, ಆ ಪರಿಸರದ ದೈವನರ್ತಕರ ಹಿರಿಯ ತಲೆಮಾರಿನವರಲ್ಲಿ ಈ ಬಗ್ಗೆ ಮಾಹಿತಿ ಪಡೆಯಬೇಕಾಗುತ್ತದೆ. ಈ ಕೆಲಸ ಅತ್ಯಂತ ತಾಳ್ಮೆ, ಶ್ರಧ್ಧೆ ಮತ್ತು ಭಕ್ತಿಯಿಂದ ಮಾಡಬೇಕಾಗುತ್ತದೆ. ಯಾಕೆಂದರೆ ಪ್ರತಿಯೊಂದು ದೈವಕ್ಕೂ ಅದರದ್ದೇ ಆದ ಸ್ಥಳ, ಇತಿಹಾಸ, ಪದ್ಧತಿಗಳಿರುತ್ತವೆ. ಇವುಗಳನ್ನು ಸೂಕ್ಷ್ಮವಾಗಿ ನೋಡಬೇಕಷ್ಟೇ ಹೊರತು ಸಮಗ್ರವಾಗಿ ಒಪ್ಪಿಕೊಳ್ಳಲಾಗದು.
ಈ ಮಾಹಿತಿಗಳು ಸಾಮಾನ್ಯವಾಗಿ ಮೂಲಸ್ಥಾನ ವೃಕ್ಷ (ಗುಳಿಗ: ಕಾಸರಕ, ಶಾಂತಿ), ದೊಂಪ (ಚಪ್ಪರ) ತಯಾರಿ (ರಕ್ತೇಶ್ವರಿ: ವೀಳ್ಯದೆಲೆ, ಅಡಿಕೆ, ಲಾವಂಚ), ಮುದ್ರೆ ತಯಾರಿ (ಕಬ್ಬು, ಭತ್ತ), ಚಪ್ಪರದ ಒಳಗೆ ಬರಲಿಕ್ಕೆ ಇರುವ ಬಾಗಿಲು-ಗಿಡಿಕೆ (ತಾಳೆ ಅಥವಾ ಬೈನೆ, ತೆಂಗು, ಐರೋಳ್ ಕಂಡೆ), ಇಂಡಿ (16 ಬಗೆ), ಮುಖವರ್ಣಿಕೆ (ಅರ್ದಾಳ-ಹಳದಿ), ದೈವಕ್ಕೆ ಮುಖ್ಯ ಧಾನ್ಯ (ಮೈಸಂತಾಯ- ಕುಡು, ಪಂಜುರ್ಲಿ-ಭತ್ತ), ಪ್ರತಿ ಪರ್ವ, ಅಗೇಲು ಸೇವೆ, ಭೂತಾರಾಧನೆಗೆ ಬೇಕಾಗುವ ವಸ್ತುಗಳು, ದೀವಟಿಗೆ ತಯಾರಿಯಲ್ಲಿ ಉಪಯೋಗಿಸುವ ವಸ್ತುಗಳು ( ತೆಂಗು, ಹತ್ತಿ), ತೋರಣ ಮಾಡಲು (ಪೊಂಗಾರೆ, ಪಾಲೆ), ದೈವಸ್ಥಾನಗಳ ತಯಾರಿಯಲ್ಲಿ ಉಪಯೋಗವಾಗುವ ವೃಕ್ಷಗಳು (ಮೈರೋಳು, ಹಲಸು, ಸಂಪಿಗೆ, ನೇರಳೆ), ಉಜ್ಜಲ್ ಮಂಚವು ಮತ್ತು ಮೂಜಿ ಕಾರ್ತಾ ಮುಂಡ್ಯೆ ತಯಾರಿಗೆ (ಮೈರೋಳು, ಹಲಸು), ಪಾನಕಕ್ಕೆ ನಿಂಬೆ, ಕರಿಮೆಣಸು, ಕುರಿ- ಅರಸಿನ, ಸುಣ್ಣ, ಸುಣ್ಣ ಮಾಡಲು ಕರಿಮತ್ತಿ, ಅರಾಧನೆಗೆ ಬಳಸುವ ಹೂವುಗಳಾಗಿ ಕಾಡಕೇಪುಳ, ಮಲ್ಲಿಗೆ, ಹಿಂಗಾರ, ರಕ್ತೇಶ್ವರಿಯ ನಾಗಮುಡಿಗೆ ಒಲಿ, ನಾಗಬನದಲ್ಲಿ ಬೆಳೆಸಬಹುದಾದ ಗಿಡಗಳು ಮುಂತಾದುವುಗಳನ್ನು ಒಳಗೊಂಡಿರುತ್ತವೆ. ಏನಿಲ್ಲವೆಂದರೂ ಸುಮಾರು 25-30 ವಿವಿಧ ಸಸ್ಯಗಳ ಉಪಯೋಗ ಇಲ್ಲಿ ದೊರಕುತ್ತದೆ.
ದೈವಗಳಿಗೆ ಸಂಬಂಧಿಸಿದ ಸಸ್ಯಗಳ ಪ್ರಾಥಮಿಕ ಮಾಹಿತಿ: ಒಂದು ಪ್ರಾಥಮಿಕ ಅಧ್ಯಯನದ ಆಧಾರದ ಮೇಲೆ ಸುಮಾರು ನಲ್ವತ್ತರಷ್ಟು ಗಿಡಗಳ ಲಭ್ಯ ಮಾಹಿತಿ ಇದೆ. ಈ ಪಟ್ಟಿ ಇನ್ನಷ್ಟು ಬೆಳೆಯುತ್ತಿರುತ್ತದೆ. ಅಡಿಕೆ, ಅರಸಿನ, ಅರ್ದಾಳ, ಅಶೋಕ, ಅಶ್ವಥ್ಥ, ಬೈನೆ, ಎಡಮುರಿ, ಎಳ್ಳು, ಐರೋಳ್ ಕಂಡೆ, ಕಬ್ಬು, ಕಾಡುಕೇಪುಳ, ಕಾಸರಕ, ಕಾಳುಮೆಣಸು, ಕಿನ್ನಿಗೋಳಿ, ಕುಂಟಾಲ, ಕುಂಬಳಕಾಯಿ, ಕೇದಗೆ, ಕೊಂದೆ, ಜಂಗಮೆ, ತಾಳೆ, ತೆಂಗು, ನಾಗರಬೆತ್ತ, ನೆಕ್ಕಿ, ನೆಲ್ಲಿ, ನೇರಳೆ, ಪೊಂಗಾರೆ, ಬಣ್ಪು, ಬಾಳೆ, ಬಿದಿರು, ಭತ್ತ, ಮಲ್ಲಿಗೆ, ಮಾವು, ಲಾವಂಚ, ಮೈರೋಳ್, ರೆಂಜೆ, ವೀಳ್ಯದೆಲೆ, ಶಾಂತಿ, ಶ್ರೀಗಂಧ, ಸಂಪಿಗೆ, ಸುರಗೆ, ಹತ್ತಿ, ಹಲಸು, ಹಾಲೆ, ಗೋಸಂಪಿಗೆ, ಸರೋಳಿಗಳ ಲಭ್ಯ ಮಾಹಿತಿ ಇದೆ.
ಸಸ್ಯಗಳ ಸಂಚಯನ ಮಾರ್ಗೋಪಾಯಗಳು ; ದೈವಜಾಗೃತಿ ವನ ನಿರ್ಮಾಣವು ಪರಮ ಪವಿತ್ರ ಕಾರ್ಯವಾಗಿರುವುದರಿಂದ ಸ್ವಕ್ಷೇತ್ರಗಳಲ್ಲೇ ಈ ಗಿಡಗಳನ್ನು ಸಂಗ್ರಹಿಸಿ, ಪೋಷಿಸಿದರೆ ಉತ್ತಮ. ಸಾಧ್ಯವಿಲ್ಲದಿದ್ದಲ್ಲಿ ಸಸ್ಯಕ್ಷೇತ್ರಗಳಿಂದ ಪಡೆಯಬಹುದು. ಈ ಕಾರ್ಯಗಳನ್ನು ಗ್ರಾಮ ದೈವ ದೇವರಿಗೆ ಮಾಡುವುದಿದ್ದರೆ ಸಾರ್ವಜನಿಕರ ಒಳಗೊಳ್ಳುವಿಕೆಯಿಂದ ಮಾಡುವುದು ಒಳ್ಳೆಯದು. ಎಲ್ಲರ ಪಾಲ್ಗೊಳ್ಳುವಿಕೆಯೊಂದಿಗೆ ಪರಿಸರ ಜಾಗೃತಿಯೂ ಬೆಳೆಯುತ್ತದೆ. ಗ್ರಾಮದ ಜನರಿಗೆ ತಮ್ಮ ಮನೆಯಲ್ಲೂ ಅಂತಹ ವನ ನಿರ್ಮಾಣಗಳಿಗೆ ಪ್ರೇರಣೆ ನೀಡುತ್ತದೆ. ತನ್ನ ಒಟ್ಟು ಹಿಡುವಳಿಯ 0.5% ಆದರೂ ಈ ಉದ್ದೇಶಕ್ಕೆ ವಿನಿಯೋಗವಾದರೆ ಸಂಸ್ಕೃತಿ ಪ್ರಕೃತಿಗಳೆರಡೂ ನಮಗೆ ಸನ್ಮಂಗಳವನ್ನುಂಟುಮಾಡುತ್ತವೆ.
ಅರಣ್ಯದ ಪರಿಕಲ್ಪನೆಯ ಸಾಧಕತೆ ; ಸಸ್ಯಗಳು ಸಂಘಜೀವಿಗಳು. ಅವುಗಳ ವೈವಿಧ್ಯತೆಯನ್ನಾಧರಿಸಿ ಆ ಪ್ರದೇಶದ ಇತರ ಜೀವಿಗಳ ವರ್ಗಗಳು ನಿರ್ಧರಿಸಲ್ಪಡುತ್ತವೆ. ಜೊತೆಗೆ ಅರಣ್ಯದ ರೀತಿಯಲ್ಲಿ ಬೆಳೆದಾಗ ಅವುಗಳ ಇಂಗಾಲ ಸ್ಥಿರೀಕರಣ ಸಾಮರ್ಥ್ಯ, ಅಂತರ್ಜಲ ವೃಧ್ಧಿಸುವ ಕ್ಷಮತೆ, ಸಣ್ಣ ಜಾಗದಲ್ಲಿ ಬಹುಸ್ತರೀಯ ಸಸ್ಯಗಳ ಬೆಳಬಣಿಗೆ, ಸೂರ್ಯನ ಬಿಸಿಲಿನ ಸದ್ಬಳಕೆಗಳು ಸಮರ್ಪಕವಾಗುತ್ತದೆ ಮಾತ್ರವಲ್ಲ ಪೋಷಕಾಂಶಗಳ ಚಕ್ರೀಯ ವ್ಯವಸ್ಥೆಗಳೂ ಸಕ್ರಿಯವಾಗುತ್ತವೆ.
ಈ ಅರಣ್ಯಗಳ ಸ್ಥೂಲಮಾದರಿಯ ಸ್ವರೂಪ ; ನಮ್ಮ ಪಾರಂಪರಿಕ ಕಾಡುಗಳಲ್ಲಿ ಸ್ವಾಭಾವಿಕವಾಗಿ ಕಂಡುಬರುವ ಬಹುಸ್ತರೀಯ, ಸಾಂದ್ರವೃಕ್ಷಾರೋಪಣವೇ ಈ ಮಾದರಿಯ ಮೂಲವಾಗಿದ್ದು, ಸಸ್ಯಗಳ ಸ್ವಾಭಾವಿಕ ಗುಣಲಕ್ಷಣಗಳಾದ, ಗಿಡ, ಮರ, ಪೊದೆ, ಬಳ್ಳಿಗಳೆಂಬ ಭೌತಿಕ ರೂಪ, ಸಸ್ಯವರ್ಗೀಕರಣ ಶಾಸ್ತ್ರದ ಪ್ರಕಾರ ಅವುಗಳ ಕುಟುಂಬ, ಏಕದಳ, ದ್ವಿದಳಗಳೆಂಬ ಸ್ವರೂಪ, ಸಸ್ಯಗಳು ಸೂರ್ಯನ ಬಿಸಿಲಿಗೆ ಸ್ಪಂದಿಸುವ ರೀತಿ, ಅದರ ಫಲಿತಾಂಶವಾಗಿ ಅವುಗಳು ತಳೆಯಬಹುದಾದ ಎತ್ತರ, ನೀರು ಬೇಕಾಗುವ ಪ್ರಮಾಣ, ಸಸ್ಯ ಪೋಷಕಾಂಶಗಳ ನಿರ್ವಹಣೆಯಲ್ಲಿನ ಪಾತ್ರ (ಇಂಗಾಲ, ಸಾರಜನಕ ಸ್ಥಿರೀಕರಣ, ರಂಜಕ, ಝಿಂಕಿನ ರವಾನೆ) ಗಳನ್ನೇ ಗಮನದಲ್ಲಿಟ್ಟು, ಲಭ್ಯ ಸ್ಥಳೀಯ ಸಾವಯವ ಸಾಮಗ್ರಿಗಳ ಸಹಾಯದಿಂದ ಇವುಗಳನ್ನು ನಿರ್ಮಾಣ ಮಾಡಬಹುದು. ಇದಕ್ಕೆ ಸಿದ್ಧಮಾದರಿಯಾಗಿ ಚಿತ್ಪಾವನ ಸಂಸ್ಕೃತಿಯಲ್ಲಿ ಉಪಯೋಗಿಸಲ್ಪಡುವ ಸಸ್ಯಗಳನ್ನು ರಕ್ಷಿಸುವ (ಚಿತ್-ಅರಿವು, ಪಾ-ರಕ್ಷಣೆ, ವನ-ಅರಣ್ಯ) ವನವೊಂದನ್ನು ಈಗಾಗಲೇ ಮಾಡಲಾಗಿದೆ. ಇಲ್ಲಿ ಸುಮಾರು 75 ಜಾತಿಯ ಸಸ್ಯಗಳು 5 ರಿಂದ 50 ಮೀಟರ್ ಎತ್ತರ ಬೆಳೆಯಬಲ್ಲ ವೃಕ್ಷಗಳಾಗಿದ್ದು, ಅವುಗಳ ಬೆಳವಣಿಗೆಯ ಸ್ವಭಾವಾನುಸಾರ ನಾಲ್ಕು (ಮೇಲಾವರಣ, ಹಿರಿಮರ, ಕಿರಿಮರ ಹಾಗೂ ಭೂಸಮಾನ) ಸ್ತರದಲ್ಲಿ ವಿಂಗಡಿಸಲಾಗಿದೆ. ಈ ಸಸ್ಯಗಳನ್ನು ಸಾಂದ್ರವೃಕ್ಷಾರೋಪಣ (High density planting) ಮಾದರಿಯನ್ನು ಅನುಸರಿಸಿ ಅಂದಾಜು 650 ಗಿಡಗಳನ್ನು ಹತ್ತು ಸೆಂಟ್ಸ್ ಜಾಗದಲ್ಲಿ ನೆಡಲಾಗಿದೆ.
ಈ ಮಾದರಿಯಲ್ಲಿ ಸುಮಾರು ಹತ್ತು ಸೆಂಟ್ಸ್ ನಿಂದ ಅರ್ಧ ಎಕ್ರೆ ಸ್ಥಳಾವಕಾಶ ಮೀಸಲಾಗಿಡಬಹುದಾದ ದೈವಸ್ಥಾನ, ದೇವಸ್ಥಾನ ಮತ್ತು ಭಜನಾ ಮಂದಿರಗಳ ಬಳಿ ಇಂತಹ ವನಗಳನ್ನು ಸಂಸ್ಕೃತಿ ಮತ್ತು ಪವಿತ್ರತೆಯ ಭಾಗವಾಗಿ ಬೆಳೆಸುವ ಪ್ರಯತ್ನ ಮಾಡಬಹುದು. ಪ್ರಥಮ ವರ್ಷ ಸಸ್ಯ ಸಂಚಯನ ಮತ್ತು ವಂಶಾಭಿವೃದ್ಧಿಯನ್ನು ಮಾಡಿ, ಎರಡನೇಯ ವರ್ಷ ಭೂಮಿಯ ಸಿದ್ದತೆ ಹಾಗೂ ವೃಕ್ಷಾರೋಪಣವನ್ನು ನಡೆಸಬಹುದು. ಜೊತೆಗೆ ಸೊಪ್ಪು, ತರಗೆಲೆಗಳು, ಮಲ್ಚ್ ಮಾಡಲು ಯೋಗ್ಯವಾಗಿರುವ ಒಣಹುಲ್ಲು, ಮರದಹುಡಿ, ಉಮಿಕರಿಗಳನ್ನು ಲಭ್ಯತೆ ಮತ್ತು ಅವಶ್ಯಕತೆಗನುಗುಣವಾಗಿ ಶೇಖರಿಸಬೇಕು. ಗಿಡಗಳ ಸಂಗ್ರಹಣೆಯನ್ನು ವರ್ಷದುದ್ದಕ್ಕೂ ಮಾಡಬೇಕಾಗಿರುವುದರಿಂದ ಅವುಗಳ ನಿರ್ವಹಣೆಯನ್ನು ತಂಡಗಳ ಮಟ್ಟದಲ್ಲಿ ಮಾಡಿಕೊಳ್ಳಬಹುದು. ಸ್ಥಳೀಯ ಶಾಲಾ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಿ, ತೊಡಗಿಸಿಕೊಳ್ಳಬಹುದು.
ಪರಿಸರ ಸಂರಕ್ಷಣೆಯು ನಮಗೆ ಪ್ರಕೃತಿ ನೀಡುವ ಅವಕಾಶವೇ ಹೊರತು ನಾವು ಅದಕ್ಕೆ ಮಾಡುವ ಉಪಕಾರವಲ್ಲ. ನಾವು ನಮ್ಮ ಅನುಕೂಲಕ್ಕಾಗಿ ನಿರ್ಮಿಸಿಕೊಂಡಿರುವ ವ್ಯವಸ್ಥೆಗಳು ಪ್ರಕೃತಿತತ್ವಗಳಿಗೆ ವಿರುಧ್ಧವಾಗಿರದೆ ಅದರೊಂದಿಗೆ ಸೇರಿಕೊಳ್ಳುವ ತತ್ವಗಳಾದಾಗ ಬದುಕು ಹಸನಾಗುತ್ತದೆ. ನಮ್ಮ ಆಚಾರ ವಿಚಾರಗಳ ಆಯಾಮಗಳು ಸುಸ್ಥಿರವಾಗಿರುತ್ತವೆ. ಈ ಬಗ್ಗೆ ಚಿಂತನೆ, ಸಾಧ್ಯತೆಗಳನ್ನು ಅನುಷ್ಠಾನ ಮಾಡಬಹುದಲ್ಲವೇ?
(ಮಾಹಿತಿ ಕೃಪೆ: ಗಣೇಶ್ ಪಟವರ್ಧನ್ ಕಲ್ಲಾರಿ, ಚಂದ್ರಕಾಂತ ಗೋರೆ, ತಿಮ್ಮಪ್ಪ ಪರವ)