ರಾಜ್ಯದಲ್ಲಿ ಮಳೆ ಕೊರತೆ ಮತ್ತು ಜಲವಿದ್ಯುತ್ ಉತ್ಪಾದನೆಯಲ್ಲಿನ ಇಳಿಕೆಯಿಂದ ವಿದ್ಯುತ್ ಪೂರೈಕೆಯ ಮೇಲೆ ಒತ್ತಡ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ನೀಡುತ್ತಿದ್ದ ವಿದ್ಯುತ್ ಪೂರೈಕೆಯಲ್ಲಿ ತಾತ್ಕಾಲಿಕವಾಗಿ ಒಂದು ಗಂಟೆ ಕಡಿತ ಮಾಡಲಾಗಿದೆ. ಈ ಹಿಂದೆ ದಿನಕ್ಕೆ 7 ಗಂಟೆ ವಿದ್ಯುತ್ ಪೂರೈಸಲಾಗುತ್ತಿದ್ದು, ಸದ್ಯ 6 ಗಂಟೆಗೆ ಇಳಿಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ವಿಧಾನ ಪರಿಷತ್ತಿನಲ್ಲಿ ತಿಳಿಸಿದ್ದಾರೆ.
ರಾಜ್ಯದ ವಿದ್ಯುತ್ ಬೇಡಿಕೆ 20 ಸಾವಿರ ಮೆಗಾವ್ಯಾಟ್ ದಾಟಿದ್ದು, ಅದಕ್ಕೆ ಅನುಗುಣವಾಗಿ ವಿದ್ಯುತ್ ಲಭ್ಯತೆ ಇಲ್ಲದ ಹಿನ್ನೆಲೆಯಲ್ಲಿ ಈ ಕಡಿತ ಅನಿವಾರ್ಯವಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಹೊರರಾಜ್ಯಗಳಿಂದ ಒಪ್ಪಂದದ ಆಧಾರದಲ್ಲಿ ವಿದ್ಯುತ್ ಪಡೆಯಲಾಗುತ್ತಿದ್ದು, ಸೆಪ್ಟೆಂಬರ್ ಅಂತ್ಯದ ವೇಳೆಗೆ ಕೆಲವು ವಿದ್ಯುತ್ ವಿನಿಮಯ ಒಪ್ಪಂದಗಳು ಪೂರ್ಣಗೊಳ್ಳಲಿವೆ ಎಂದು ಅವರು ಹೇಳಿದ್ದಾರೆ.
ಮತ್ತೆ 7 ಗಂಟೆ ವಿದ್ಯುತ್ ಪೂರೈಕೆ? : ಕೃಷಿ ಪಂಪ್‌ಸೆಟ್‌ಗಳಿಗೆ ಸದ್ಯ 6 ಗಂಟೆ ಪೂರೈಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಎದುರಾಗಿರುವ ಸಮಸ್ಯೆ ಕುರಿತು ಚರ್ಚೆ ನಡೆದಿದ್ದು, ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಮತ್ತೆ 7 ಗಂಟೆ ವಿದ್ಯುತ್ ಪೂರೈಸುವ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಜಾರ್ಜ್ ಸೆಪ್ಟೆಂಬರ್ 24ರಂದು ತಿಳಿಸಿದ್ದಾರೆ ಎಂದು ಇನ್ನೊಂದು ವರದಿ ತಿಳಿಸಿದೆ.
ಆದರೆ ವಿವಿಧ ಪ್ರದೇಶಗಳಲ್ಲಿ ನಿಗದಿತ ಸಮಯಕ್ಕಿಂತ ಕಡಿಮೆ ಮತ್ತು ಅನಿಯಮಿತ ವಿದ್ಯುತ್ ಪೂರೈಕೆಯಾಗುತ್ತಿದೆ ಎಂಬ ರೈತರ ದೂರುಗಳೂ ವರದಿಯಾಗಿವೆ. ಚಿಕ್ಕಮಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ರೈತರು ನಿಯಮಿತ ಮೂರು ಹಂತದ ವಿದ್ಯುತ್ ಪೂರೈಕೆಗೆ ಒತ್ತಾಯಿಸಿರುವುದು ವರದಿಯಾಗಿದೆ.
ವಿದ್ಯುತ್ ಬೇಡಿಕೆ 20 ಸಾವಿರ ಮೆಗಾವ್ಯಾಟ್ ದಾಟಿದೆ : ಸೆಪ್ಟೆಂಬರ್ 11ರಂದು ಕರ್ನಾಟಕದ ಗರಿಷ್ಠ ವಿದ್ಯುತ್ ಬೇಡಿಕೆ 20,094 ಮೆಗಾವ್ಯಾಟ್ ತಲುಪಿತ್ತು. ಸೆಪ್ಟೆಂಬರ್‌ನಲ್ಲಿ ತಾಪಮಾನ ಏರಿಕೆ, ಮಳೆ ಕೊರತೆ ಮತ್ತು ಹೆಚ್ಚಿದ ಬಳಕೆಯಿಂದ ವಿದ್ಯುತ್ ಬೇಡಿಕೆ ಗಮನಾರ್ಹವಾಗಿ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಳೆ ಕೊರತೆಯಿಂದ ಜಲವಿದ್ಯುತ್ ಉತ್ಪಾದನೆಯ ಮೇಲೂ ಪರಿಣಾಮ ಬೀರಿದ್ದು, ಸೌರ ಮತ್ತು ಪವನ ವಿದ್ಯುತ್ ಉತ್ಪಾದನೆ ಹೆಚ್ಚಿದ್ದರೂ ವಿದ್ಯುತ್ ಸಂಗ್ರಹಣೆಯ ಮಿತಿಗಳು ಪೂರೈಕೆ ನಿರ್ವಹಣೆಗೆ ಸವಾಲಾಗಿವೆ ಎಂದು ವರದಿಯಾಗಿದೆ.
ಸಕ್ರಮಗೊಳಿಸದ ಪಂಪ್‌ಸೆಟ್‌ಗಳಿಗೆ ಸಂಪರ್ಕ ಕಡಿತದ ಎಚ್ಚರಿಕೆ : ಅಕ್ರಮ-ಸಕ್ರಮ ಯೋಜನೆಯಡಿ 4.50 ಲಕ್ಷ ಕೃಷಿ ಪಂಪ್‌ಸೆಟ್‌ಗಳ ಪೈಕಿ 3.50 ಲಕ್ಷ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ನಿಗದಿತ ಠೇವಣಿ ಪಾವತಿಸದ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಹಾಗೂ ಅನಧಿಕೃತ ಸಂಪರ್ಕಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದ್ದಾರೆ.
ಪರ್ಯಾಯ ಶಕ್ತಿಯ ಬಗ್ಗೆ ಯೋಚಿಸಲು ಸಕಾಲ : ಈ ವಿದ್ಯುತ್ ಸಮಸ್ಯೆಯನ್ನು ಕೇವಲ ಒಂದು ಗಂಟೆ ಕಡಿತ ಎಂದಷ್ಟೇ ಅಲ್ಲ. ಸದ್ಯ ಒಂದು ಗಂಟೆ ಕಡಿತ. ಮಳೆ ಕೊರತೆ–ಜಲಾಶಯಗಳ ಸ್ಥಿತಿ–ಜಲವಿದ್ಯುತ್ ಉತ್ಪಾದನೆ–ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆ ಇವೆಲ್ಲ ಪರಸ್ಪರ ಸಂಬಂಧ ಹೊಂದಿರುವ ಪರಿಸ್ಥಿತಿಯಾಗಿದೆ. ಸೆಪ್ಟೆಂಬರ್‌ನಲ್ಲೇ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆಯ ಮೇಲೆ ಒತ್ತಡ ಬಂದಿರುವುದು ರೈತರಿಗೆ ಒಂದು ಮುನ್ನೆಚ್ಚರಿಕೆಯ ಸಂಕೇತ. ಮುಂದಿನ ದಿನಗಳಲ್ಲಿ ಮಳೆ ಮತ್ತು ವಿದ್ಯುತ್ ಲಭ್ಯತೆಯಲ್ಲಿ ವ್ಯತ್ಯಯವಾದರೆ ಕೃಷಿ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಪರ್ಯಾಯ ಶಕ್ತಿಯ ಕಡೆಗೆ ಗಮನಹರಿಸಲು ಇದು ಸಕಾಲವಾಗಿದೆ.
ರೈತರು ಈಗ ಏನು ಮಾಡಬಹುದು? : ಪಂಪ್‌ಸೆಟ್‌ಗೆ ವಿದ್ಯುತ್ ಸಿಗುವ ಸಮಯ ಕಡಿಮೆಯಾದರೆ, ನೀರಾವರಿ ದಕ್ಷತೆ ಹೆಚ್ಚಿಸುವುದು ಮುಖ್ಯವಾಗುತ್ತದೆ. ಕಡಿಮೆ ಅವಧಿಯಲ್ಲಿ ಹೆಚ್ಚು ಪ್ರದೇಶಗಳಿಗೆ ನೀರುಣಿಸುವ ಅಗತ್ಯ ಮಾರ್ಗಗಳತ್ತ ಗಮಹರಿಸಬೇಕಾಗಿದೆ. ಉದಾಹರಣೆಗೆ ಹನಿ ನೀರಾವರಿ ವ್ಯವಸ್ಥೆ ಮಾಡಿಕೊಳ್ಳಬೇಕು. ಬೆಳೆ ಮತ್ತು ಮಣ್ಣಿನ ತೇವಾಂಶಕ್ಕೆ ಅನುಗುಣವಾಗಿ ನೀರಾವರಿ ಅಂತರವನ್ನು ಹೆಚ್ಚಿಸಿಕೊಳ್ಳುವುದು ಮುಖ್ಯ. ವಿದ್ಯುತ್ ಹಾಗೂ ನೀರು ಎರಡನ್ನೂ ಉಳಿಸಬಹುದು.
ನೀರಾವರಿ ನಿರಂತರವಾಗಿ ವಿದ್ಯುತ್ ಮೇಲೆ ಅವಲಂಬಿತವಾಗಿರುವ ರೈತರು, ತಮ್ಮ ಪರಿಸ್ಥಿತಿಗೆ ಹೊಂದಿಕೆಯಾಗುವುದಾದರೆ ಸೌರ ಕೃಷಿ ಪಂಪ್ ಮತ್ತು PM-KUSUM ನಂತಹ ಯೋಜನೆಗಳನ್ನು ಗಮನಿಸಬಹುದು.
ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
Karnataka has temporarily reduced power supply to agricultural pump sets from seven hours to six hours amid high electricity demand, deficient rainfall and lower hydropower generation. Energy Minister K.J. George said the reduction was necessary due to the shortage in available power, while later reports said the government plans to restore seven hours of supply within a few days. The situation highlights the need for farmers to improve irrigation efficiency, conserve water and explore suitable solar irrigation options.


