ಕರ್ನಾಟಕದ ವಿವಿಧ ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಕಂಡುಬರುತ್ತಿರುವ ಮಳೆಯ ವಾತಾವರಣ ನಿಧಾನವಾಗಿ ಕಡಿಮೆಯಾಗುವ ಸೂಚನೆಗಳಿವೆ. ನವೆಂಬರ್ 28ರಂದು ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸಂಜೆ ಮತ್ತು ರಾತ್ರಿ ಮಳೆಯಾಗುವ ಸಾಧ್ಯತೆಯಿದೆ. ಆದರೆ ಉತ್ತರ ಒಳನಾಡಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುತ್ತಿದ್ದು, ನವೆಂಬರ್ 29ರಿಂದ ಒಣ ಹವೆ ಆವರಿಸುವ ಲಕ್ಷಣಗಳಿವೆ.
ಕರಾವಳಿ: ದಕ್ಷಿಣ ಕನ್ನಡ, ಉಡುಪಿಯಲ್ಲಿ ಗುಡುಗು ಸಹಿತ ಮಳೆ : ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಸಂಜೆ ಮತ್ತು ರಾತ್ರಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಉತ್ತರ ಕನ್ನಡ ಜಿಲ್ಲೆಯ ಒಂದೆರಡು ಕಡೆ ಸಾಮಾನ್ಯ ಮಳೆಯಾಗುವ ಸಾಧ್ಯತೆಯಿದೆ. ಪ್ರಸ್ತುತ ಮುನ್ಸೂಚನೆಯಂತೆ ಕರಾವಳಿ ಜಿಲ್ಲೆಗಳಲ್ಲಿ ನವೆಂಬರ್ 28ರವರೆಗೆ ಮಳೆ ಮುಂದುವರಿಯುವ ಲಕ್ಷಣಗಳಿವೆ. ನಂತರ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ.
ಮಲೆನಾಡು: ಕೊಡಗು, ಚಿಕ್ಕಮಗಳೂರಿನಲ್ಲಿ ಮಳೆ : ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಸಂಜೆ ಹಾಗೂ ರಾತ್ರಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಶಿವಮೊಗ್ಗ ಜಿಲ್ಲೆಯ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಮಲೆನಾಡಿನ ಜಿಲ್ಲೆಗಳಲ್ಲಿ ನವೆಂಬರ್ 28ರಿಂದ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ.
ಉತ್ತರ ಒಳನಾಡು: ನ.29ರಿಂದ ಒಣ ಹವೆ : ಉತ್ತರ ಒಳನಾಡಿನ ಬೀದರ್ ಮತ್ತು ಯಾದಗಿರಿ ಜಿಲ್ಲೆಗಳ ಒಂದೆರಡು ಕಡೆ ಸಾಮಾನ್ಯ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಜಿಲ್ಲೆಗಳಲ್ಲಿ ಬಿಸಿಲಿನೊಂದಿಗೆ ಅಲ್ಲಲ್ಲಿ ಮೋಡದ ವಾತಾವರಣ ಕಂಡುಬರಬಹುದು. ನವೆಂಬರ್ 28ರಿಂದ ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಮೋಡದ ವಾತಾವರಣ ಇರಬಹುದು. ನವೆಂಬರ್ 29ರಿಂದ ಒಣ ಹವೆ ಆವರಿಸುವ ಲಕ್ಷಣಗಳಿವೆ.
ದಕ್ಷಿಣ ಒಳನಾಡು: ಹಲವು ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆ : ಹಾಸನ, ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.
ತುಮಕೂರು, ಚಿತ್ರದುರ್ಗ, ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣ ಇರಬಹುದು. ಪ್ರಸ್ತುತ ಮುನ್ಸೂಚನೆಯಂತೆ ನವೆಂಬರ್ 28ರಿಂದ ದಕ್ಷಿಣ ಒಳನಾಡಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಲಿದ್ದು, ಮುಂದಿನ ಒಂದೆರಡು ದಿನಗಳ ಕಾಲ ಅಲ್ಲಲ್ಲಿ ಸಣ್ಣ ಪ್ರಮಾಣದ ಮೋಡದ ವಾತಾವರಣ ಮುಂದುವರಿಯಬಹುದು.
ದಕ್ಷಿಣ ಅಂಡಮಾನಿನಲ್ಲಿ ಮತ್ತೊಂದು ಹವಾಮಾನ ವ್ಯವಸ್ಥೆ? : ನವೆಂಬರ್ 29 ಅಥವಾ 30ರಂದು ದಕ್ಷಿಣ ಅಂಡಮಾನ್ ಕರಾವಳಿ ಸಮೀಪ ವಾಯುಭಾರ ಕುಸಿತಕ್ಕೆ ಅನುಕೂಲಕರವಾದ ಹವಾಮಾನ ತಿರುವಿಕೆ ರೂಪುಗೊಳ್ಳುವ ಲಕ್ಷಣಗಳಿವೆ. ಆದರೆ ಈ ವ್ಯವಸ್ಥೆ ಮುಂದಿನ ಹಂತದಲ್ಲಿ ವಾಯುಭಾರ ಕುಸಿತವಾಗಿ ಬಲಗೊಳ್ಳುತ್ತದೆಯೇ, ಯಾವ ದಿಕ್ಕಿನಲ್ಲಿ ಚಲಿಸುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಹೀಗಾಗಿ ಇದರ ಮುಂದಿನ ಬೆಳವಣಿಗೆ ಮತ್ತು ಪಥವನ್ನು ಕಾದು ನೋಡಬೇಕಾಗಿದೆ. ಈ ವ್ಯವಸ್ಥೆಯಿಂದ ಕರ್ನಾಟಕದಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆಯ ಬಗ್ಗೆ ಈಗಲೇ ಖಚಿತವಾಗಿ ಹೇಳಲು ಸಾಧ್ಯವಿಲ್ಲ.
ರೈತರು ಗಮನಿಸಬೇಕಾದ ಅಂಶ : ಮಳೆಯ ಪ್ರಮಾಣ ಕಡಿಮೆಯಾಗುವ ಸೂಚನೆ ಇರುವುದರಿಂದ ರೈತರು ಸ್ಥಳೀಯ ಹವಾಮಾನಕ್ಕೆ ಅನುಗುಣವಾಗಿ ಕೃಷಿ ಕೆಲಸ ಯೋಜಿಸಬಹುದು. ದಕ್ಷಿಣ ಅಂಡಮಾನ್ ಸಮುದ್ರದ ಹೊಸ ಹವಾಮಾನ ವ್ಯವಸ್ಥೆಯ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳ ಮುನ್ಸೂಚನೆಯನ್ನು ಪರಿಶೀಲಿಸುವುದು ಸೂಕ್ತ.
ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ


