ವಿವಾಹ ಸಮಾರಂಭ ಒಂದರಲ್ಲಿ ಭಾಗವಹಿಸಲು ಶ್ರೀ ರಾಮಚಂದ್ರಾಪುರ ಮಠದ ( ಮಾಣಿ ಮಠ) ಜನಭವನಕ್ಕೆ ಹೋಗಿದ್ದೆ. ಅನೇಕ ದಿನಗಳಿಂದ ಮಾಣಿ ಮಠದ ಗರ್ಭಗುಡಿಯ ಚಿತ್ರಗಳನ್ನು ವಾಟ್ಸಪ್ ಗುಂಪುಗಳಲ್ಲಿ ನೋಡುತ್ತಾ ನೋಡುತ್ತಾ ಇದ್ದ ನನಗೆ ಕಣ್ಣಾರೆ ನೋಡುವ ಕುತೂಹಲವೂ ಜಾಸ್ತಿ ಇತ್ತು. ಆ ಕಾರಣದಿಂದ ಮಠದ ಅಂಗಣ ಪ್ರವೇಶಿಸುತ್ತಿದ್ದಂತೆ, ನನ್ನನ್ನು ಸೆಳೆದದ್ದು ಇನ್ನೇನು ಪ್ರತಿಷ್ಠಾಪನೆಗೆ ತಯಾರಾಗಿ ಎದ್ದು ನಿಂತ ನೂತನ ರಾಮಾಲಯ.
ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲ ಈ ಗುಡಿಯು ಕಲೆಯ ಬಲೆಯು ಎಂಬ ಕವಿಮಾತು ಇಲ್ಲಿಗೂ ಅನ್ವಯಿಸುತ್ತದೆ. ಗುಡಿಯೊಳಗೆ ರಾಮಭದ್ರ ಪ್ರತಿಷ್ಠಾಪನೆಯಾಗದಿದ್ದರೂ, ಕಲಾವಿದನ ಕಲ್ಪನೆಯ ಮೂಸೆಯೊಳಗೆ ಚಿತ್ರಿತವಾಗಿ ಶಿಲಾಮಯಗೊಂಡ ದೇಗುಲವನ್ನು ನೋಡಿ ಕೈ ಮುಗಿದೇ ಹೋಗಿತ್ತು . ಅದ್ಭುತವಾದ ರಚನೆ, ಸುಂದರವಾಗಿ ರೂಪುಗೊಂಡ ಶಿಲೆಯ ಏರಿಳಿತಗಳು, ಉಬ್ಬು ತಗ್ಗುಗಳು, ಎದ್ದು ನಿಂತ ಸಿಂಹ ರೂಪಗಳು, ಅದರ ಕಾಲಿನ ಸೂಕ್ಷ್ಮ ನಖಗಳು, ಹೂವಿನ ಅಲಂಕಾರಗಳು ಹೀಗೆ ಒಂದೊಂದೂ ವಿಶಿಷ್ಟ ಮತ್ತು ಸುಂದರ . ಮೊದಲ ಗುಡಿಯ ಎರಡು ಪಟ್ಟಿನಷ್ಟು ಎತ್ತರ ಎಲ್ಲರನ್ನು ತನ್ನತ್ತ ಸೆಳೆಯುವ ಭವ್ಯತೆ ಭಕ್ತರ ಕಣ್ಮನಗಳನ್ನು ತಣಿಸುದಕ್ಕೆ ಸಾಕ್ಷಿಯಾಗುವುದರಲ್ಲಿ ಸಂಶಯವಿಲ್ಲ.
ಮಠ ಸ್ಥಾಪನೆಯಾಗಿ 48 ವರ್ಷಗಳ ಒಂದು ಮಂಡಲ ಪೂರ್ಣಗೊಂಡಾಗ ಜೀರ್ಣಾವಸ್ಥೆಯತ್ತ ಸಾಗುತ್ತಿರುವ ಗರ್ಭಗುಡಿಯನ್ನು ನೂತನ ಶಿಲಾಮಯದೊಂದಿಗೆ ಪುನ:ಸ್ಥಾಪಿಸಿ ಎಂದು ಶ್ರೀಗಳಿಂದ ಆದೇಶ ಹೊರಬಂತು. ಖಾಲಿ ಕೈಯಲ್ಲಿರುವ ಮಠದ ಆಡಳಿತ ಕಮಿಟಿಗೆ ಸದ್ಯದ ಪರಿಸ್ಥಿತಿಯಲ್ಲಿ ಇದು ಎಂತು ಸಾಧ್ಯ? ಎಂದು ಪ್ರಶ್ನಾರ್ಥಕ ನೋಟ ಇತ್ತು. ಧೈರ್ಯದಿಂದ ಹೊರಡಿ ಎಲ್ಲವೂ ಸುಸೂತ್ರವಾಗಿ ನಡೆದೇ ನಡೆಯುತ್ತದೆ ಎಂಬ ಗುರುವಿನ ಅಭಯ ಹಸ್ತ. ಶ್ರೀರಾಮ ಮತ್ತು ಗುರು ಆಶೀರ್ವಾದ ಭಲದ ಧೈರ್ಯದೊಂದಿಗೆ, 2022ನೇ ಆಗಸ್ಟ್ 28 ರಂದು ಶ್ರೀ ರಾಮನ ಬಾಲಾಲಯ ಸ್ಥಾಪನೆ ಮತ್ತು 2023 ಜನವರಿ 23ರಂದು ಪುನರ್ ಪ್ರತಿಷ್ಠೆ ಎಂಬ ಸಂಕಲ್ಪದೊಂದಿಗೆ ಆಡಳಿತ ಸಮಿತಿ ಕಾರ್ಯೋನ್ಮುಖವಾಯಿತು. ಸಣ್ಣ ಸಮಯದ ಅವಧಿಯಲ್ಲಿ ಖಾಲಿ ಕೈಯಲ್ಲಿ ಇಷ್ಟು ದೊಡ್ಡ ವ್ಯವಸ್ಥೆಗೆ ಹೊರಟುಕೊಂಡರೆ ಹುಂಬತನವಾದೀತು ಎಂದು ಹಲವರ ಎಚ್ಚರಿಕೆಯೂ ಬಂದಿತ್ತು. ಆಡಳಿತ ಸಮಿತಿಯ ವ್ಯವಸ್ಥಿತ ಯೋಜನೆ, ಯೋಚನೆಗೆ ಹೆಗಲು ಕೊಟ್ಟ ನೂರಾರು ಕಾರ್ಯಕರ್ತರು, ಅದಕ್ಕೆ ಸ್ಪಂದಿಸಿ ಧನಸಹಾಯವನ್ನಿತ್ತ ಸಾವಿರಾರು ಸಮಾಜ ಬಾಂಧವರ ಕಾರಣದಿಂದಾಗಿ ಕೇವಲ 110 ದಿನಗಳಲ್ಲಿ ಭವ್ಯ ದಿವ್ಯ ಶಿಲಾಮಯ ರಾಮ ಮಂದಿರ ರೂಪುಗೊಂಡಿದೆ.
ಕಾಲಮಿತಿಯನ್ನು ಸ್ವಯಂ ವಿಧಿಸಿಕೊಂಡು, ಅದಕ್ಕೆ ಬದ್ಧನಾಗಿ ದೇವಸ್ಥಾನದ ಕೆಲಸ ನಿರ್ವಹಿಸಿದ ಉದಾಹರಣೆ ಮತ್ತೊಂದು ಇರಲಾರದು. ನಿರ್ಮಿಸುವ ಹಂತದಲ್ಲಿ ಒಡೆದ ಸುತ್ತುಪೌಳಿ ಮತ್ತೆ ಗೊತ್ತೇ ಆಗದಂತೆ ಪೂರ್ವ ಸ್ಥಿತಿಗೆ ಬಂದಿದೆ. ಪಕ್ಕದ ಹಳೆಯ ಸಭಾಭವನ ಪುನರ್ ನಿರ್ಮಿತಗೊಂಡು ಸಣ್ಣ ಕಾರ್ಯಕ್ರಮಗಳಿಗಾಗಿ ತೆರೆದುಕೊಂಡಿದೆ. ದೇವಸ್ಥಾನಗಳು ಮಠ ಎಂದಾದಾಗ ಯಾಗಗಳು ಅನಿವಾರ್ಯ. ಜನರ ಉತ್ಸಾಹದ ಸ್ಪಂದನೆಯ ಸ್ಪೂರ್ತಿಯಿಂದಾಗಿ ಸುಸಜ್ಜಿತ ಯಾಗಮಂದಿರ ಒಂದು ನಿರ್ಮಿತಗೊಂಡಿದೆ. ಸುತ್ತಿನ ಅಂಗಣ ಮತ್ತೆ ವಿಶಾಲಗೊಂಡು ಪುನರ್ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಸಜ್ಜುಗೊಂಡಿದೆ. ಎಲ್ಲೆಲ್ಲೂ ವ್ಯವಸ್ಥೆ, ಅಚ್ಚು ಕಟ್ಟುತನ ಎದ್ದು ಕಾಣುವಂತಿದೆ. ಮಾಣಿ ಮಠ ಸರ್ವಜನರನ್ನೂ ಪುನರ್ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಕೈಬೀಸಿ ಕರೆಯುತ್ತಿದೆ.
ಬಾಲಾಲಯದಲ್ಲಿ ಪೂಜೆಗೊಳ್ಳುತ್ತಿರುವ ಶ್ರೀರಾಮಚಂದ್ರಮೂರ್ತಿ ಸಪರಿವಾರ ದೇವರುಗಳು, ಶಿಲಾಲಯ ಪ್ರವೇಶಕ್ಕೆ ಸಜ್ಜುಗೊಂಡಿದ್ದಾರೆ. ನೂತನ ರಾಮಾಲಯವನ್ನು ವೀಕ್ಷಿಸಲು, ಪ್ರತಿಷ್ಠಾಪನಾ ಕಾರ್ಯದಲ್ಲಿ ಕಿಂಚಿತ್ತು ಸೇವೆ ಸಲ್ಲಿಸಲು, ಶತಮಾನದ ಪುಣ್ಯ ನಮ್ಮದಾಗಿಸಿಕೊಳ್ಳಲು ಎಲ್ಲರೂ ಹೊರಡಲೇ ಬೇಕಾಗಿದೆ.
ಕೆಲವೊಂದು ಘಟನೆಗಳು ಶತಮಾನಕ್ಕೊಮ್ಮೆ ನಡೆಯುವುದಂತೆ. ಶಿಲಾಮಯ ರಾಮಮಂದಿರದ ರಚನೆಯ ಭಾಗ್ಯ ಮುಂದಿನ ಕೆಲವು ಶತಮಾನಗಳಿಗೆ ಲಭ್ಯವಾಗಲಾರದು. ಹಿಂದಿನ ತಲೆ ಮಾರಿಗೂ ಲಭ್ಯವಾಗದ , ಮುಂದಿನ ಕೆಲವು ತಲೆಮಾರುಗಳಿಗೂ ಅಲಭ್ಯವಾಗುವ ಕಾರ್ಯಕ್ರಮಗಳಿಗೆ ನಾವೆಲ್ಲ ಸಾಕ್ಷಿಯಾಗೋಣ.