” ನೆನೆವುದೆನ್ನ ಮನಂ ಮಲೆನಾಡ .. ಮಳೆನಾಡ ವೈಭವಂ “
ಇನ್ನೇನು ಮಳೆಗಾಲ ಬಂದೇ ಬಿಡ್ತು ಅನ್ನುವಷ್ಟು ಹತ್ತಿರದಲ್ಲಿದೆ ಮಾನ್ಸೂನ್. ಸಾಮಾನ್ಯವಾಗಿ ಜೂನ್ 6 ನೈರುತ್ಯ ಮುಂಗಾರು ಕರ್ನಾಟಕ ಕರಾವಳಿ ಪ್ರವೇಶಿಸುವ ವಾಡಿಕೆ ದಿನ. ಕಳೆದ 1976 ರಿಂದ ಅಂದರೆ ಕಳೆದ 46 ವರ್ಷಗಳಲ್ಲಿ ಮೇ ತಿಂಗಳಲ್ಲಿಯೇ ಮಳೆಗಾಲ ಆರಂಭವಾಗಿರುವುದು ಹತ್ತು ಬಾರಿ.. ಈ ಎಲ್ಲ ವರ್ಷಗಳಲ್ಲಿ ಅರಬ್ಬೀಸಮುದ್ರ ದಲ್ಲಿ ಕಂಡು ಬಂದ ಚಂಡಮಾರುತಗಳು ಮುಂಗಾರು ಮಾರುತದ ಮೇಲೆ ಪ್ರಭಾವ ಬೀರಿವೆ. ಈ ಬಾರಿ ಮೇ 09/10 ರ ಸುಮಾರಿಗೆ ಬಂಗಾಳಕೊಲ್ಲಿಯಲ್ಲಿ ಕಾಣಿಸಿಕೊಳ್ಳಬಹುದಾದ ಚಂಡಮಾರುತದ ಪ್ರಭಾವ ದಿಂದ 12 ಯಾ 13 ರ ಸುಮಾರಿಗೆ ಮುಂಗಾರು ಮಾರುತಗಳು ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹವನ್ನು ಪ್ರವೇಶಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಾಮಾನ್ಯವಾಗಿ ಅಂಡಮಾನ್ ಪ್ರವೇಶಿಸಿದ ಮುಂಗಾರು ಇತ್ತ ಕೇರಳ ಪ್ರವೇಶಿಸಲು ಮತ್ತೆ ಹದಿನೈದು ದಿನಗಳ ಕಾಲ ಬೇಕಾಗುತ್ತದೆ. ಎಲ್ಲವೂ ಗಾಳಿಯ ಚಲನೆ, ಬಂಗಾಳಕೊಲ್ಲಿಯ ಚಂಡಮಾರುತ ಅರಬ್ಬೀಸಮುದ್ರ ಪ್ರವೇಶಿಸುವ ಸಾಧ್ಯತೆಯನ್ನು ಹೊಂದಿಕೊಂಡು ವ್ಯತ್ಯಯ ಆಗಬಹುದು. ಮುಂದಿನ ವಾರ ಸ್ಪಷ್ಟ ಚಿತ್ರಣ ಸಿಗಬಹುದು. ಕಳೆದ ಕೆಲದಿನಗಳಿಂದ ಉತ್ತರ ಭಾರತದಲ್ಲಿನ ತಾಪಮಾನ ಸಾಮಾನ್ಯಕ್ಕಿಂತ ಅಧಿಕವಾಗಿರುವುದು ಕೂಡಾ ತಮಿಳುನಾಡು, ಕೇರಳ, ಕರ್ನಾಟಕದ ಅನೇಕ ಕಡೆ ಮಳೆ ಸುರಿಯಲು ಕಾರಣವಾಗಿದೆ. ಮೇ ತಿಂಗಳ ಮಧ್ಯಭಾಗದ ನಂತರ ಉತ್ತರಭಾರತದಲ್ಲಿ ತಾಪಮಾನ ಗರಿಷ್ಟ ಪ್ರಮಾಣ ತಲುಪಿ ಮುಂಗಾರು ಭಾರತೀಯ ಉಪಖಂಡ ಪ್ರವೇಶಿಸಲು ಅನುಕೂಲಕರ ವಾತಾವರಣ ನಿರ್ಮಾಣವಾಗುವುದು ಸರ್ವೇಸಾಮಾನ್ಯ.
ಆದರೆ ಚಂಡಮಾರುತಗಳು ಮುಂಗಾರು ಪ್ರವೇಶದ ಲೆಕ್ಕಾಚಾರ ಅಡಿಮೇಲು ಮಾಡಿದ ಪ್ರಸಂಗಗಳು ಹಲವಾರು ಇವೆ. ಮುಂಗಾರು ಅವಧಿಪೂರ್ವ ಆರಂಭವಾಗಿ ದುರ್ಬಲವಾಗಿಯೇ ಸಾಗಿದ ಉದಾಹರಣೆಗಳೂ ಇವೆ. ಯಾವುದಕ್ಕೂ ಕೆಲ ದಿನ ಕಾದು ನೋಡೋಣ…ಅಂದ ಹಾಗೆ 1999 ರಲ್ಲಿ ಅತಿ ಬೇಗನೆ ಮೇ 20 ರಂದೇ ಮುಂಗಾರು ದ.ಕ ಪ್ರವೇಶಿಸಿತ್ತು. (1976 ರಿಂದ ಈಚೆಗೆ ಅವಧಿಪೂರ್ವ ಮಳೆಗಾಲ ಆರಂಭವಾದ ದಿನ ಹಾಗೂ ಆ ವರ್ಷ ಬಾಳಿಲದಲ್ಲಿ ದಾಖಲಾದ ಮಳೆಯ ವಿವರವನ್ನು ಕೋಷ್ಟಕದಲ್ಲಿ ಕಾಣಬಹುದು)
# ಪಿ ಜಿ ಎಸ್ ಎನ್ ಪ್ರಸಾದ್ , ಬಾಳಿಲ