ನಮ್ಮ ಬೇಡಿಕೆ, ಹಾರೈಕೆ ನಿರೀಕ್ಷೆಗಳು ಸುಳ್ಳಾಗಿವೆ. ಬದಲಾಗ ಬಹುದು ಎಂಬ ನಂಬಿಕೆ ನಿಜವಾಗಲಿಲ್ಲ. ಮತ್ತೆ ಎಂದಿನ ಬದುಕು, ಜೀವನ ಶೈಲಿಗಿನ್ನೂ ಮರಳಲಿಲ್ಲ. ಈ ಬಾರಿಯೂ ಪ್ರತಿ ವರ್ಷದಂತಿಲ್ಲ. ನಮ್ಮ ಜೀವನದಲ್ಲಿ ಹಲವು ಅನಿವಾರ್ಯ ಬದಲಾವಣೆಗಳಾಗಿವೆ. ಕೊರೊನಾ ಮಹಾಮಾರಿಯಿಂದಾಗಿ ನಮ್ಮ ಜೀವನ ರೀತಿಯೇ ಬದಲಾಗಿದೆ. ಎಂದಿನಂತೆ ಕೆಲಸಕಾರ್ಯಗಳು ನಡೆಯದೆ ಕುಂಟುತ್ತಾ ಸಾಗಿವೆ. .ಯಕ್ಷಗಾನ, ನಾಟಕ, ಸಿನೆಮಾ, ನೃತ್ಯ, ಸಂಗೀತವನ್ನೇ ಜೀವನೋಪಾಯಕ್ಕಾಗಿ ನಂಬಿದವರು ಆಕಾಶ ನೋಡುತ್ತಾ ಇರುವ ಪರಿಸ್ಥಿತಿ. ಕಲಾವಿದರು ಗೆಜ್ಜೆ ಕಟ್ಟದೆ ತಿಂಗಳಾಯಿತು. ಪೆಬ್ರವರಿ, ಮಾರ್ಚ್, ಏಪ್ರಿಲ್ ತಿಂಗಳುಗಳೆಂದರೆ ಕಲಾವಿದರ, ಭೂತ ನರ್ತಕರ ದೈವ ಪಾತ್ರಿಗಳ ದುಡಿಮೆಯ ಕಾಲ. ಕೊರೊನಾ ಭಯವಿದ್ದರೂ ಕೆಲವೆಡೆ ಹಲವು ಕಾರ್ಯಕ್ರಮಗಳು ನಡೆದವು. ನಿರೀಕ್ಷೆಗೂ ಮೀರಿ ಜನ ಸೇರಿದರು. ಜನ ಕೊರೊನಾ ವೈರಾಣು ಮರೆತರು. ಆದರೆ ವೈರಾಣು ತನ್ನ ಪ್ರಭಾವ ಬೀರುವುದರಲ್ಲಿ ಹಿಮ್ಮೆಟ್ಟಲಿಲ್ಲ. ಹಳ್ಳಿ ಪಟ್ಟಣಗಳೆನ್ನದೆ ತನ್ನ ಕಬಂಧಬಾಹುವನ್ನು ಚಾಚುವುದರಲ್ಲಿ ಯಶಸ್ವಿಯಾಯಿತು. ಜನರ ಮೈಮರೆವು ಅಜಾಗರೂಕತೆಯಿಂದ ಕೊರೊನಾ ಎಲ್ಲೆಡೆ ಹರಡಲಾರಂಭಿಸಿದೆ. ಮತ್ತೀಗ ಅದೇ ಲಾಕ್ ಡೌನ್ ಅನಿವಾರ್ಯ.
ಪತ್ತನಾಜೆಯಾದರೂ ಈ ಬಾರಿ ಮಾಮೂಲು ದಿನಗಳಂತೆ. ಗೆಜ್ಜೆ ಬಿಚ್ಚುವ ಸಂಭ್ರಮವಿಲ್ಲ. ಆದರೂ ಪತ್ತನಾಜೆ ಬಂತೆಂದರೆ ಮನರಂಜನೆಯಿಂದ ಮುಕ್ತಿ, ಚುರುಕುಗೊಳ್ಳುವ ಕೃಷಿ ಚಟುವಟಿಕೆಗಳು. ಇಂದು ಪತ್ತನಾಜೆ. ತುಳು ತಿಂಗಳ( ಬೇಷ) ಹತ್ತನೇಯ ದಿನ.(ಮೇ 24) ಇಂದಿನಿಂದ ಮಳೆಗಾಲ ಆರಂಭ ಎಂಬುದು ಇಲ್ಲಿನವರ ನಂಬಿಕೆ. ಹಾಗಾಗಿ ಭೂತ ಕೋಲ, ನೇಮ, ತಂಬಿಲ, ಯಕ್ಷಗಾನ, ಜಾತ್ರೆಗಳಿಗೆಲ್ಲ ಇನ್ನೂ ವಿರಾಮ. ಗದ್ದೆ ಬೇಸಾಯದ ಕೆಲಸಗಳೆಲ್ಲ ಆರಂಭಿಸಲು ಸಕಾಲ. ಪತ್ತನಾಜೆಯಾದ ಮೇಲೆ ದೈವ ಬೂತಗಳೆಲ್ಲಾ ಘಟ್ಟ ಹತ್ತುತ್ತವೆ ಎಂಬುದು ಜನಸಾಮಾನ್ಯರ ನಂಬಿಕೆ. ಪತ್ತತನಾಜೆಯಂದು ದೈವ ಬೂತ
ದೀಪೋತ್ಸವ ಕ್ಕೆ ಶುರು ಆಗುವ ಮೇಳಗಳ ತಿರುಗಾಟಕ್ಕೆ ಪತ್ತನಾಜೆಯಿಂದ ವಿಶ್ರಾಂತಿ. ಊರಿಂದ ಊರಿಗೆ ತಿರುಗಾಡಿ ಸುಸ್ತಾದ ಕಲಾವಿದರ ಪಯಣಕ್ಕೆ ತಾತ್ಕಾಲಿಕ ವಿರಾಮ. ಬೇಸಾಯ ,ತೋಟದ ಕೆಲಸಗಳಲ್ಲಿ ತೊಡಗುವುದರಿಂದ ಮನೆಯವರಿಗೂ ನೆಮ್ಮದಿ. ಅಡಿಕೆ ತೋಟಗಳಲ್ಲಿ ಮದ್ದು ಬಿಡುವ ಕಾರ್ಯ ಗಳಿಗೆ ಚಾಲನೆ.
ಪತ್ತನಾಜೆಯು ದಕ್ಷಿಣ ಕನ್ನಡ , ಉಡುಪಿ ಕಾಸರಗೋಡುಗಳಲ್ಲಿ ಆಚರಣೆಲ್ಲಿದೆ. ಹಿಂದೆ ಆರು ತಿಂಗಳು ಸತತ ಮಳೆಯಾಗುತ್ತಿದ್ದದ್ದರಿಂದ ಜಾತ್ರೆ, ನೇಮಗಳು, ಯಕ್ಷಗಾನಗಳನ್ನು ಈ ತಿಂಗಳುಗಳಲ್ಲಿ ನಡೆಸುವುದು ಕಷ್ಟ ಸಾಧ್ಯ ವಾದುದರಿಂದ ಪತ್ತನಾಜೆಯನ್ನು ಒಂದು ಗಡುವೆಂದು ಜನರು ಪರಿಗಣಿಸಿರುವ ಸಾಧ್ಯತೆ ಇದೆ. ಆದರೆ ಇಲ್ಲಿನ ಜನರು ಈ ಪದ್ಧತಿ ಯನ್ನು ಬಹು ಶ್ರದ್ಧೆ ಯಿಂದ ಇಂದಿಗೂ ಪಾಲಿಸಿಕೊಂಡು ಬಂದಿದ್ದಾರೆ.
ಪತ್ತನಾಜೆಯಂದು ದೈವ ಬೂತ, ನಾಗನ ಕಟ್ಟೆಗಳಲ್ಲಿ ದೀಪ ಬೆಳಗಿ ನಮಸ್ಕರಿಸಿ ಪ್ರಾರ್ಥಿಸುವ ಕಾರ್ಯಕ್ಕೆ ಯಾವುದೂ ಅಡ್ಡಿಯಾಗಲಾರದಲ್ಲವೇ? ಮನತುಂಬಿ ಶರಣಾದಾಗ ಒಲಿಯಲಾರರೇ ದೇವರು , ದೈವಗಳು?.
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ