Advertisement
MIRROR FOCUS

ಹವಾಮಾನ ಬದಲಾವಣೆ | ಈ ಬಾರಿ ಅಡಿಕೆ ಬೆಳೆಗಾರರಿಗೆ ಸವಾಲು | ವ್ಯಾಪಕವಾಗಿ ಬೆಳೆಯುತ್ತಿದೆ ಪೆಂಟಟೊಮಿಡ್ ತಿಗಣೆ | ಕಾಡಲಿದೆ ಈ ಬಾರಿ ಅಡಿಕೆ ನಳ್ಳಿ ಬೀಳುವ ಸಮಸ್ಯೆ |

Share

ಈ ಬಾರಿಯ ಹವಾಮಾನ ವೈಪರೀತ್ಯ ಅಡಿಕೆ ಬೆಳೆಗಾರರನ್ನು ಕಾಡಲಿದೆ. ಅಡಿಕೆ ಎಳೆ ನಳ್ಳಿ ಬೀಳುವ ಸಮಸ್ಯೆ ಸದ್ದಿಲ್ಲದೆ ಅಡಿಕೆ ತೋಟಗಳಲ್ಲಿ ವ್ಯಾಪಕವಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ರಸ ಹೀರುವ ಕೀಟ. ಈ ಬಾರಿ ಮಾರ್ಚ್‌ ತಿಂಗಳಿನಿಂದಲೇ ಈ ಕೀಟ ಸಂತಾನಾಭಿವೃದ್ಧಿ ಮಾಡಿಕೊಂಡಿದ್ದು ಮುಂದಿನ ಒಂದು ತಿಂಗಳಲ್ಲಿ ಈ ಕೀಟ ವ್ಯಾಪಕವಾಗಿ ಅಡಿಕೆಗೆ ಕಾಟ ನೀಡಲಿದೆ.

Advertisement
Advertisement
Advertisement

ಪ್ರತೀ ಬಾರಿ ಮೇ ತಿಂಗಳ ಆರಂಭದಲ್ಲಿ ರಸ ಹೀರುವ ಕೀಟಗಳು ಸಂತಾನಾಭಿವೃದ್ಧಿ ಮಾಡಿಕೊಂಡು ಎಳೆ ಅಡಿಕೆಯ ರಸ ಹೀರುತ್ತಿದ್ದವು. ಇದರ ಪರಿಣಾಮವಾಗಿ ಮೇ ಮಧ್ಯ ಭಾಗದಿಂದ ಎಳೆ ಅಡಿಕೆಗಳು ಬೀಳುತ್ತಿದ್ದವು. ಜೂನ್‌ ಮಧ್ಯ ಭಾಗದವರೆಗೆ ಕರಾವಳಿ, ಮಲೆನಾಡು ಭಾಗಗಳಲ್ಲಿ ಅಡಿಕೆ ನಳ್ಳಿ ಬೀಳುತ್ತಿದ್ದವು. ಆದರೆ ಈ ಬಾರಿ ವಾತಾವರಣದ ಅತಿಯಾದ ಉಷ್ಣತೆ ಹಾಗೂ ದಿಢೀರನೆ ಮಳೆ. ಇದೆರಡೂ ಕಾರಣಗಳಿಂದ ಈ ರಸ ಹೀರುವ ಕೀಟ  ಪೆಂಟಟೊಮಿಡ್ ತಿಗಣೆ (Halyomorpha picus, F.) ಈಗಾಗಲೇ ಸಂತಾನಾಭಿವೃದ್ಧಿ ಹೆಚ್ಚಿಸಿಕೊಂಡಿರುವುದು  ಬೆಳಕಿಗೆ ಬಂದಿದೆ.ಸಾಮಾನ್ಯವಾಗಿ ಏಪ್ರಿಲ್ ತಿಂಗಳ ನಂತರ ಇದರ ಬಾಧೆ ಕಂಡುಬರುತ್ತದೆ. ಜೂನ್ – ಜುಲೈ ತಿಂಗಳಲ್ಲಿ ಪೆಂತಿ ಕೀಟದ ಸಮಸ್ಯೆ ಹೆಚ್ಚು. ಆದರೆ, ಈ ವರ್ಷ ಸ್ವಲ್ಪ ಮುಂಚಿತವಾಗಿಯೇ (ಫೆಬ್ರವರಿ – ಮಾರ್ಚ್ ತಿಂಗಳಲ್ಲಿ) ಕಂಡು ಬಂದಿರುವುದು ಕಳವಳಕಾರಿಯಾದ ವಿಷಯ.

Advertisement

ಏನಿದು ಪೆಂಟಟೊಮಿಡ್ ತಿಗಣೆ ? : ಇದೊಂದು ಬಗೆಯ ಒಂದು ರಸಹೀರುವ ಕೀಟ. ಇದಕ್ಕೆ, ಉದ್ದನೆಯ ಚೂಪಾದ ಬಾಯಿಯ ಅಂಗವಿದ್ದು, ಎಳೆಅಡಿಕೆಗೆ ಬಾಯಿ ತೂರಿಸಿ ರಸ ಹೀರುತ್ತವೆ, ಮುಖ್ಯವಾಗಿ ತೊಟ್ಟಿನ ಕೆಳಭಾಗದಲ್ಲಿ. ಎಳೆ ಅಡಿಕೆ ಸಿಪ್ಪೆಗೆ ತನ್ನ ಬಾಯಿಯನ್ನು ತೂರಿಸಿ ರಸ ಹೀರುವ  ಈ ಕೀಟ. ಒಂದು ತಿಗಣೆಯು ಒಂದು ದಿನಕ್ಕೆ ಒಂದು ಎಳೆ ಅಡಿಕೆಯಿಂದ ಮಾತ್ರ ರಸ ಹೀರಬಲ್ಲದು ಮತ್ತು ಇದರಿಂದ ಕಾಯಿಯ ಟರ್ಗರ್ ಪ್ರೆಷರ್ ಕಡಿಮೆಯಾಗಿ ಎಳೆಅಡಿಕೆಯು 2-3 ದಿನಗಳಲ್ಲಿ ಉದುರುತ್ತದೆ. ಬಿದ್ದ ಅಡಿಕೆಯ ಗಾತ್ರ ಸಣ್ಣದಿರುವ ಕಾರಣ ಯಾವುದಕ್ಕೂ ಉಪಯೋಗವಾಗುವುದಿಲ್ಲ. ಸಾಮಾನ್ಯವಾಗಿ ಮಾರ್ಚ್ – ಆಗಸ್ಟ್ ತಿಂಗಳಲ್ಲಿ ಪೆಂಟಟೊಮಿಡ್ ತಿಗಣೆಯು ಹಾನಿ ಮಾಡುತ್ತದೆ. ಅದರಲ್ಲೂ, ಜೂನ್ – ಜುಲೈ ತಿಂಗಳಲ್ಲಿ ಇದರ ಕಾಟ ಹೆಚ್ಚು.

Advertisement

ಕೀಟಬಾಧೆಯ ಲಕ್ಷಣ: ಉದುರಿದ ಎಳೆಕಾಯಿಯ ತೊಟ್ಟಿನ ಕೆಳಭಾಗದಲ್ಲಿ ಸೂಜಿಯಿಂದ ಚುಚ್ಚಿದಂತಹ ಕಪ್ಪು ಚುಕ್ಕೆ ಈ ತಿಗಣೆಯ ಬಾಧೆಯನ್ನು ಸೂಚಿಸುವ ಲಕ್ಷಣ. ಇಂತಹ ಎಳೆಕಾಯಿಯನ್ನು ಕತ್ತರಿಸಿ ನೋಡಿದಾಗ ಕಪ್ಪು ಚುಕ್ಕೆಗೆ ಅನುಗುಣವಾಗಿ ಸಿಪ್ಪೆಯ ಒಳಬದಿಯಲ್ಲಿ ಮತ್ತು ಎಳೆಅಡಿಕೆಯಲ್ಲಿ ವರ್ಣ ಬದಲಾವಣೆ ಆಗಿರುವುದನ್ನು ಕಾಣಬಹುದು.

ಪೆಂಟಟೊಮಿಡ್ ತಿಗಣೆ ಅಲ್ಲಲ್ಲಿ ಕಂಡುಬಂದಿದೆ - ವಿಜ್ಞಾನಿಗಳು ಹೀಗೆ ಹೇಳುತ್ತಾರೆ
Advertisement

ಈ ಬಾರಿ ಹಲವು ತೋಟಗಳಲ್ಲಿ ಈಗಾಗಲೇ ಪೆಂಟಟೊಮಿಡ್ ತಿಗಣೆ ಪಸರಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಇದಕ್ಕಾಗಿ ಕೃಷಿಕರು ಅಧೀರರಾಗಬೇಕಾಗಿಲ್ಲ. ಈ ಕೀಟ ವ್ಯಾಪಕವಾಗಲು ವಿವಿಧ ಕಾರಣಗಳು ಇವೆ. ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿದರೆ ಉತ್ತಮ. ಮಳೆ ಹೆಚ್ಚಾದ ಬಳಿಕ ಈ ಕೀಟದ ಬಾಧೆ ಕಡಿಮೆಯಾಗುತ್ತದೆ. 

Advertisement

ಬಹುತೇಕ ಎಲ್ಲಾ ಕೀಟನಾಶಕಗಳಿಂದ ಅಡಿಕೆ ತೋಟದಲ್ಲಿ ಇರುವ ಜೇನು ಹುಳ ಹಾಗೂ ನೈಸರ್ಗಿಕ ಶತ್ರು ಕೀಟಗಳಿಗೆ(natural enemies) ತೊಂದರೆ ಇದೆ. ಅವುಗಳಿಗೆ ತೊಂದರೆಯಾದರೆ ಕೀಟಗಳು ನೈಸರ್ಗಿಕವಾಗಿ ಹತೋಟಿ ಆಗುವುದಿಲ್ಲ.ಹಾಗಾಗಿ, ಅನಿವಾರ್ಯ ಸನ್ನಿವೇಶದಲ್ಲಿ ಹೊರತುಪಡಿಸಿ, ಬೇರೆ ಸಂದರ್ಭಗಳಲ್ಲಿ ಕೀಟನಾಶಕ ಸಿಂಪಡಿಸಿದರೆ ಅದರಿಂದ ದೀರ್ಘಕಾಲದಲ್ಲಿ ತೊಂದರೆಯೇ ಹೆಚ್ಚು. ಬಳಸುವ ಕೀಟನಾಶಕದ ಪ್ರಮಾಣ ಹೆಚ್ಚಾಗಬಾರದು ಮತ್ತು ಸಿಂಪಡಣೆ ಮಾಡುವಾಗ ಅತ್ಯಂತ ಜಾಗರೂಕರಾಗಿರಬೇಕು. ಎತ್ತರಕ್ಕೆ ಔಷಧಿ ಸಿಂಪಡಣೆ ಮಾಡುವುದರಿಂದ ನಮ್ಮ ದೇಹ ಮತ್ತು ನೀರಿನ ಮೂಲಗಳ ಮೇಲೆ ಬೀಳುವ ಸಾಧ್ಯತೆ ಹೆಚ್ಚು. ಹಾಗಾಗಿ, ಜಾಗರೂಕರಾಗಿರಬೇಕು.

Advertisement

ಕಾರ್ಬನ್ ದೋಟಿ ಇದ್ದರೆ ಅನುಕೂಲ. ಬೇಗನೆ ಬೇರೆ ಮರಗಳಿಗೆ ಕೀಟ ಹರಡದ ಕಾರಣ, ನಳ್ಳಿ ಉದುರಿದ ಮರ ಮತ್ತು ಸುತ್ತಲಿನ ಮರಗಳಿಗೆ ಔಷಧಿ ಸಿಂಪಡಣೆ ಮಾಡಿದರೆ ಸಾಕು. ಇಡೀ ತೋಟಕ್ಕೆ ವಿಷ ಉಣಿಸಬೇಕಿಲ್ಲ.  – ಡಾ.ಭವಿಷ್ಯ , ವಿಜ್ಞಾನಿಗಳು , ಸಿಪಿಸಿಆರ್‌ಐ

ನಿರ್ವಹಣೆ ಹೇಗೆ? :  ಮುಂಗಾರು ಪೂರ್ವದಲ್ಲಿ ಮತ್ತು ಜೂನ್- ಜುಲೈ ತಿಂಗಳಲ್ಲಿ ಬಿದ್ದ ಕಾಯಿಗಳನ್ನು ಗಮನಿಸುತ್ತಿರುವುದು ಅತೀ ಮುಖ್ಯ. ಪೆಂತಿ ಕೀಟವು ಎಳೆಅಡಿಕೆಯಿಂದ ರಸಹೀರಿದ ಎರಡರಿಂದ ಮೂರು ದಿನಗಳಲ್ಲಿ ಎಳೆಅಡಿಕೆ ಉದುರಿ ನಷ್ಟವಾಗುವುದು ಖೇದಕರವಾದರೂ ಕೀಟವನ್ನು ನಿರ್ವಹಣೆ ಮಾಡಲು ಇದು ಪ್ರಮುಖ ಅಂಶ. ಬಿದ್ದ ಅಡಿಕೆಯ ತೊಟ್ಟನ್ನು ತೆಗೆದು ಸಣ್ಣ ಚುಕ್ಕೆ ಅಥವಾ ಮಚ್ಚೆ ಇದೆಯೇ ಎಂದು ಗಮನಿಸಿ. ಹಾಗೆಯೇ, ಅಡಿಕೆಯನ್ನು ಕತ್ತರಿಸಿ, ತಿರುಳನ್ನು ಬೇರ್ಪಡಿಸಿ ಸಿಪ್ಪೆಯ ಒಳಬದಿಯಲ್ಲಿ ಮತ್ತು ತಿರುಳಿನಲ್ಲಿ ಕಪ್ಪು ಮಚ್ಚೆಗೆ ಅನುಗುಣವಾಗಿ ವರ್ಣ ಬದಲಾವಣೆ ಆಗಿದೆಯೇ ಎಂದು ಗಮನಿಸಬೇಕು. ಒಂದು ಎಳೆ ಅಡಿಕೆಯಿಂದ ರಸಹೀರಲು ಕೀಟವು ಒಂದು ದಿನ ತೆಗೆದುಕೊಳ್ಳುವ ಕಾರಣ ಬೇಗನೆ ಬೇರೆ ಮರಗಳಿಗೆ ಹರಡುವ ಸಾಧ್ಯತೆ ಕಡಿಮೆ. ಹಾಗಾಗಿ, ಎಳೆಅಡಿಕೆ ಬಿದ್ದ ಮರ ಮತ್ತು ಸುತ್ತಮುತ್ತಲಿನ ಮರಗಳಿಗೆ ಸಿಂಪಡಣೆ ಮಾಡಿದರೆ ಪ್ರಾಥಮಿಕ ಹಂತದಲ್ಲಿಯೇ ಕೀಟವನ್ನು ಹತೋಟಿ ಮಾಡಬಹುದು. ಇದು ಬಹಳ ಮುಖ್ಯ, ಯಾಕೆಂದರೆ, ಎಳೆಅಡಿಕೆ ಬೀಳಲು ಹಲವು ಕಾರಣಗಳು ಇರುವುದರಿಂದ ಬಿದ್ದ ಅಡಿಕೆಯಲ್ಲಿನ ಲಕ್ಷಣಗಳನ್ನು ನೋಡಿ ಪೆಂತಿ ಕೀಟದ ನಿರ್ವಹಣೆ ಮಾಡಬೇಕು. ಪೆಂತಿ ಕೀಟ ಬಾಧೆಯ ಲಕ್ಷಣಗಳು ಇಲ್ಲದೆ ಇದ್ದರೆ, ರಾಸಾಯನಿಕ ಕೀಟನಾಶಕಗಳನ್ನು ಸಿಂಪರಣೆ ಮಾಡುವುದು ಒಳ್ಳೆಯದಲ್ಲ. ಅಡಿಕೆಗೆ ಬಾಧಿಸುವ ಕೀಟಗಳಿಗೆ ಸಾಕಷ್ಟು ನೈಸರ್ಗಿಕ ಶತ್ರುಕೀಟಗಳು / ಬೆಳೆಯ ಪರೋಪಕಾರಿ ಜೀವಿಗಳು ಅಡಿಕೆ ತೋಟದಲ್ಲಿ ಇರುವುದರಿಂದ ಲಕ್ಷಣ ನೋಡಿ, ಪೆಂತಿ ಕೀಟದ ಬಾಧೆಯನ್ನು ದೃಡಪಡಿಸಿ ನಂತರ ಸಿಂಪರಣೆ ಮಾಡುವುದು ಒಳ್ಳೆಯದು.

ನಾವು ಬೆಳೆಸುವ ಅಲಸಂಡೆ, ಬೆಂಡೆಕಾಯಿ, ಹಾಗಲಕಾಯಿ, ಕಾಯಿಮೆಣಸು, ತೊಂಡೆಕಾಯಿ, ಬೂದು ಕುಂಬಳಕಾಯಿ ಮುಂತಾದುವುಗಳಲ್ಲಿ ತಿಗಣೆಯು ಆಶ್ರಯ ಪಡೆಯುತ್ತವೆ. ಬೇಸಿಗೆಯಲ್ಲಿ ಮಾತ್ರವಲ್ಲದೆ ಅಡಿಕೆಗೆ ಬಾಧಿಸದ ಸಮಯವಾದ ಸೆಪ್ಟಂಬರ್ ತಿಂಗಳಿಂದ ಮಾರ್ಚ್ ತಿಂಗಳವರೆಗೆ ಪೆಂತಿ ಕೀಟವು ಇಂತಹ ಬೇರೆ ಬೇರೆ ಬೆಳೆಗಳಲ್ಲಿ ರಸಹೀರಿ ಬದುಕುತ್ತವೆ. ಹಾಗಾಗಿ, ಈ ತರಕಾರಿಗಳಲ್ಲಿ ತಿಗಣೆಯನ್ನು ನಿಯಂತ್ರಣ ಮಾಡಬೇಕು. ಹಿಡಿಯುವಾಗ ಕೈ ವಾಸನೆ ಬರುತ್ತದೆ. ಈ ಕಾರಣಕ್ಕೆ ಇಂಗ್ಲಿಷ್‌ ನಲ್ಲಿ  ಪೆಂತಿ ಕೀಟಕ್ಕೆ ಸ್ಟಿಂಕ್ ಬಗ್ ಎಂದು ಹೆಸರು. ಬೇಗನೆ ಹಾರಿ ಹೋಗದ ಕಾರಣ ಹಿಡಿಯುವುದು ಸುಲಭ. ಅಲ್ಲದೆ, ನಿಂಬಿಸಿಡಿನ್ (5 ಎಂ.ಎಲ್ ಒಂದು ಲೀಟರ್ ನೀರಿಗೆ) ಸಿಂಪರಣೆ ಮಾಡಿ ಕೀಟವನ್ನು ನಿಯಂತ್ರಣ ಮಾಡಬಹುದು.

Advertisement
ಕಡಿಮೆ ಹಾನಿ ಇದ್ದಲ್ಲಿ, ಬೇವಿನ ಎಣ್ಣೆ (5 ಎಂ.ಎಲ್. +ಸೋಪ್ ಒಂದು ಲೀಟರ್ ನೀರಿಗೆ) ಅಥವಾ ನಿಂಬಿಸಿಡಿನ್ (5 ಎಂ.ಎಲ್. ಒಂದು ಲೀಟರ್ ನೀರಿಗೆ) ಸಿಂಪರಣೆ ಮಾಡಬಹುದು. ಪೆಂತಿ ಕೀಟದ ಸಂತಾನೋತ್ಪತ್ತಿ ಅಡಿಕೆ ಗೋನೆಯಲ್ಲಿಯೇ ಆಗುವುದರಿಂದ ಗೊನೆ ಪೂರ್ತಿ ಒದ್ದೆ ಆಗುವ ಹಾಗೆ ಕೀಟನಾಶಕವನ್ನು ಸಿಂಪಡಿಸಬೇಕು.
ಕೀಟದ ಬಾಧೆ ಹೆಚ್ಚಿದ್ದರೆ, ಕ್ಲೋಥಯನಿಡಿನ್ (Clothianidin 50WDG)  ಅನ್ನು ಒಂದು ಲೀಟರ್ ನೀರಿಗೆ 0.25g ನಂತೆ ಹಾಕಿ ಸಿಂಪರಣೆ ಮಾಡಬೇಕು. ಆದರೆ, ರಾಸಾಯನಿಕ ಕೀಟನಾಶಕವನ್ನು ಅನಿವಾರ್ಯ ಸ್ಥಿತಿಯಲ್ಲಿ ಮಾತ್ರ ಸಿಂಪಡಣೆ ಮಾಡಬೇಕು. ಇದು ಜೇನಿಗೆ ಹಾನಿಕಾರಕ.
Advertisement

 ಕೀಟದ ಕೆಲವು ಕೌತುಕದ ವಿಷಯಗಳು : ತನ್ನ ಮೂತಿಯನ್ನು ಸಿಪ್ಪೆಯೊಳಗೆ ತೂರಿಸಿ ತಿರುಳಿನಿಂದ ರಸ ಹೀರುವ ಪೆಂತಿ. ಮೂತಿ ತೂರಿಸಲು 10-15 ನಿಮಿಷ ಬೇಕು. ನಂತರ 2-4 ಗಂಟೆಗಳ ಕಾಲ ಸತತವಾಗಿ ರಸ ಹೀರುತ್ತವೆ. ಹಾಯಾಗಿ ಇದ್ದು, ಪುನಃ ಅದೇ ಜಾಗಕ್ಕೆ ಮೂತಿ ತೂರಿಸಿ ರಸ ಹೀರುವ ಚಾಣಾಕ್ಷ ಈ ಪೆಂತಿ. ಸಾಮಾನ್ಯವಾಗಿ, ಒಂದು ಕೀಟ ಒಂದು ದಿನಕ್ಕೆ ಒಂದು ಎಳೆಅಡಿಕೆಯಿಂದ ರಸ ಹೀರುತ್ತದೆ. ಆ ಅಡಿಕೆ ಮೂರು ದಿನದ ನಂತರ ನೆಲಕ್ಕುದುರುತ್ತದೆ. ವಿಶೇಷವಾಗಿ, ಪೆಂತಿ ಗುಂಪಾಗಿ ಇರುತ್ತವೆ. ಹೆಣ್ಣು ಪೆಂತಿ 38 ದಿನ ಬದುಕಿದರೆ, ಗಂಡು ಪೆಂತಿ 35 ದಿನ ಬದುಕುತ್ತವೆ. ಅಲಸಂಡೆ, ಎಳೆಅಡಿಕೆಯೆಂದರೆ ಪೆಂತಿಗೆ ಬಲು ಇಷ್ಟ.

 

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಅಡಿಕೆ ಮೇಲೆ ಕ್ಯಾನ್ಸರ್‌ ತೂಗುಗತ್ತಿಯ ಭಯ ಏಕೆ ? | ಅಡಿಕೆಯ ಔಷಧೀಯ ಅಧ್ಯಯನ ಸಾಕಷ್ಟಿದೆ | ಈಗ ಸಂಘಟಿತ ಹೋರಾಟ ಅಗತ್ಯ |

ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…

3 hours ago

ಸಾವಯವ ಕೃಷಿ ಎಂದರೆ ಏನು..?

https://youtu.be/VwddfpkQ94Y?si=LMz9u08OYbG4B2il

10 hours ago

ನ.23 | ಗುತ್ತಿಗಾರು ಸಹಕಾರಿ ಸಂಘದ ಶತಮಾನೋತ್ಸವ | ಕೃಷಿ ವಿಚಾರಗೋಷ್ಠಿ | ಅಡಿಕೆ ರೋಗಗಳ ಬಗ್ಗೆ ಮಾಹಿತಿ ವಿನಿಮಯ |

ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…

10 hours ago

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ

ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…

1 day ago

ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ

ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…

1 day ago