ಪಚ್ಚೆಕದಿರು ಎಂಬ ಹೆಸರುಳ್ಳ ತುಳಸಿ ಜಾತಿಗೆ ಸೇರಿದ ಈ ಗಿಡವನ್ನು ಪಚ್ಚೆತೆನೆ ಎಂದೂ ಕರೆಯುತ್ತಾರೆ. ಕದಿರು ಎಂದರೆ ತೆನೆ ಎನ್ನುವುದಿದೆ. ಇನ್ನು, ಸ್ಥಳೀಯ ತುಳು ಭಾಷೆಯಲ್ಲಿ ಪಚ್ಚೆ ಎಂದರೆ ಹಸುರು ಎಂದು ಅರ್ಥವಿದೆ. ಇದರಲ್ಲಿ ಮೂಡುವ ಹೂವು ಭತ್ತದ ತೆನೆಯಂತೆ ಇರುವುದರಿಂದ ಇದಕ್ಕೆ ಪಚ್ಚೆಕದಿರು ಎಂಬ ಹೆಸರು ಬಂದಿರಬೇಕು.

ಪಚ್ಚೆಕದಿರಿನ ಎಲೆಗಳು ಮೇಲ್ನೋಟಕ್ಕೆ ದಾಸವಾಳದ ಎಲೆಗಳನ್ನು ಹೋಲುತ್ತವೆ. ಆದರೆ ದಾಸವಾಳದ ಎಲೆಗಳನ್ನು ಹಿಸುಕಿದಾಗ ಲೋಳೆ ಬರುವಂತೆ ಪಚ್ಚೆಕದಿರಿನ ಎಲೆಗಳಿಂದ ಲೋಳೆ ಬರುವುದಿಲ್ಲ. ದಾಸವಾಳದ ಎಲೆಗಳ ಬದಿಯಲ್ಲಿ ತುಂಬಾ ಕತ್ತರಿ ಕತ್ತರಿ ಇರುವಂತೆ ಪಚ್ಚೆಕದಿರಿನ ಎಲೆಗಳು ತುಂಬಾ ಕತ್ತರಿ ಆಕಾರದಲ್ಲಿ ಇಲ್ಲ. ಈ ಗಿಡದ ಸಸ್ಯ ಶಾಸ್ತ್ರೀಯ ಹೆಸರು pogastemon cablin ಎಂದು. ಇದರ ಎಲೆಗಳು ವಿಶಿಷ್ಟ ಪರಿಮಳ ಹೊಂದಿರುತ್ತವೆ. ಅಂಗೈಯಲ್ಲಿ ಇದರ ಎಲೆಗಳನ್ನು ಹಿಸುಕಿದಾಗ ಒಳ್ಳೆಯ ಸುಗಂಧ ಹೊರಸೂಸುತ್ತದೆ. ಈ ವಿಶಿಷ್ಟ ರೀತಿಯ ಸುಗಂಧದಿಂದಾಗಿ ಇದು ಎಲ್ಲರಿಗೂ ಇಷ್ಟವಾಗುತ್ತದೆ. ಅರೋಮಾ ಚಿಕಿತ್ಸೆಯಲ್ಲಿ ಇದರ ಸೊಪ್ಪನ್ನು ಸುಗಂಧಕಾರಕವಾಗಿ ಬಳಸುತ್ತಾರೆ. ಕೂದಲಿನ ಆರೋಗ್ಯಕ್ಕೆ ಎಣ್ಣೆ ತಯಾರಿಸಲು ಗರ್ಗ, ತುಳಸಿ, ದಾಸವಾಳದ ಎಲೆ, ನೆಲ್ಲಿ ಎಲೆಗಳ ಜತೆ ಈ ಸೊಪ್ಪನ್ನು ವಿಶೇಷವಾಗಿ ಬಳಸಲಾಗುತ್ತದೆ. ಅಲ್ಲದೆ ಚರ್ಮದ ಆರೋಗ್ಯ ಕಾಪಾಡುವಲ್ಲಿಯೂ ಪಚ್ಚೆಕದಿರಿನ ಸೊಪ್ಪಿನ ರಸವನ್ನು ಉಪಯೋಗಿಸುವ ಕ್ರಮ ಇದೆ. ಇದರ ಎಣ್ಣೆಯನ್ನು ಮೈ ಕೈಗಳಿಗೆ ಸವರಿಕೊಂಡರೆ ಸೊಳ್ಳೆಗಳು ದೂರ ಹೋಗುತ್ತವೆ.
ಈ ಗಿಡವು ಔಷಧೀಯ ಗಿಡವೂ ಹೌದು. ಇದರ ಎಲೆಗಳನ್ನು ಅಸ್ತಮಾ, ಕೆಮ್ಮು, ಕಫ ಮುಂತಾದ ಶ್ವಾಸಕೋಶದ ಕಾಯಿಲೆಗಳಿಗೆ ಕಷಾಯ ರೂಪದಲ್ಲಿ ಸೇವಿಸುವ ಕ್ರಮವಿದೆ. ಅಲ್ಲದೆ ಜ್ವರ, ತಲೆನೋವು ಮುಂತಾಗಿ ಕಾಯಿಲೆಗಳನ್ನು ಹಾಗೂ ಮೂತ್ರಕೋಶದ ಕಲ್ಲುಗಳ ಸಮಸ್ಯೆಯನ್ನು ಈ ಕಷಾಯ ಸೇವನೆಯು ನಿವಾರಿಸುತ್ತದೆ. ಹೊಟ್ಟೆನೋವು, diarrhea, constipation ನಂತಹ ಜಠರ ಸಂಬಂಧಿ ರೋಗಗಳು ಬಾರದಂತೆ ಈ ಸೊಪ್ಪಿನ ಕಷಾಯವನ್ನು ಬಳಸುತ್ತೇವೆ. ಈ ಸೊಪ್ಪಿನ ರಸವು Vitamin ಮತ್ತು zinc ಸತ್ವವನ್ನು ಹೊಂದಿರುವ ಕಾರಣ ಇದರ ಸೇವನೆಯಿಂದ ದೇಹದ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ.
ದೇವರ ಪೂಜೆಗೆ ಪಚ್ಚೆಕದಿರಿನ ಹೂಗಳನ್ನು ಬಳಸಲಾಗುತ್ತದೆ. ಹಿಂದಿನ ಕಾಲದಲ್ಲಿ ಇದರ ಎಲೆಗಳನ್ನು ಉರಿಸಿ ವಾತಾವರಣವನ್ನು ಶುದ್ಧಿಗೊಳಿಸಿ ವಿದ್ಯಾರ್ಥಿಗಳ ಏಕಾಗ್ರತೆಯನ್ನು ಹೆಚ್ಚಿಸಲಾಗುತ್ತಿತ್ತು ಎಂಬ ಮಾಹಿತಿ ಗೂಗಲ್‍ನಲ್ಲಿ ಇದೆ.
ಪಚ್ಚೆಕದಿರಿನ ಗಿಡಗಳನ್ನು ಬೆಳೆಸುವುದು ಕಷ್ಟವಲ್ಲ. ಚಿಕ್ಕ ಗೆಲ್ಲುಗಳನ್ನು ನೆಟ್ಟು ಹೊಸ ಗಿಡಗಳನ್ನು ಮಾಡಬಹುದಾಗಿದೆ. ನಗರಗಳ ಟೆರೇಸ್‍ಗಳಲ್ಲಿ ಸಣ್ಣ ಪಾಟ್‍ಗಳಲ್ಲಿ ಇವುಗಳನ್ನು ಸುಪುಷ್ಟವಾಗಿ ಬೆಳೆಸಬಹುದು. ಗಿಡವು ಚಿಗುರಿ ಮೂರು ತಿಂಗಳಲ್ಲಿ ಪುಟ್ಟ ಪುಟ್ಟ ಬಿಳಿ ಹೂಗಳನ್ನು ಕದಿರಿನಾಕಾರದಲ್ಲಿ ಅರಳಿಸುತ್ತದೆ. ಹೂವಿನ ಸೌಂದರ್ಯ ಮತ್ತು ಎಲೆಗಳ ಸುಗಂಧವು ಒಟ್ಟಾಗಿ ಪಚ್ಚೆಕದಿರಿನ ಮೌಲ್ಯ ಹೆಚ್ಚಿಸಿವೆ. ಪಚ್ಚೆ ಕದಿರಿನ ಗಿಡಗಳನ್ನು ಮನೆಯ ಸುತ್ತಮುತ್ತಲಲ್ಲಿ ಬೆಳೆಸಿ ಸ್ವಚ್ಛ, ಶುದ್ಧ, ಆಮ್ಲಜನಕಯುಕ್ತ ಗಾಳಿಯ ಮೂಲಕ ನಮ್ಮ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ..


