Advertisement
ಸುದ್ದಿಗಳು

ಕೆಲವು ಸಂಬಂಧಗಳನ್ನು ಉಳಿಸುವುದು ಮೌನವೇ..

Share

ಅವನು ಪರಮಾಪ್ತ. ಮೊಬೈಲ್‌ನಲ್ಲಿ ಸಾಕಷ್ಟು ಹೊತ್ತು ಮಾತನಾಡುತ್ತಿದ್ದ. ವ್ಯಾಟ್ಸಪ್‌ನಲ್ಲಿ ನಿರಂತರವಾಗಿ ಚಾಟಿಂಗ್‌ ನಡೆಸುತ್ತಿದ್ದ. ಒಂದು ದಿನ ಮಾತನಾಡದೇ ಇದ್ದರೂ ಏನೋ ಕಳೆದುಕೊಂಡಂತಾಗುತ್ತಿತ್ತು. ಅಷ್ಟು ಹತ್ತಿರವಾಗಿದ್ದ ಸಂಬಂಧ ಅದು. ಆದರೆ ಕೆಲವು ದಿನಗಳ ಬಳಿಕ ಮಾತು ಕಡಿಮೆಯಾಯಿತು. ನಂತರ ಸಂದೇಶಗಳು ಕಡಿಮೆಯಾದವು. ಒಂದು ಹಂತದಲ್ಲಿ ಸಂಬಂಧವೇ ದೂರವಾಯಿತು.

ಕಾರಣ ದೊಡ್ಡದೇನೂ ಅಲ್ಲ. ಯಾವುದೋ ಒಂದು ಸಂದರ್ಭದಲ್ಲಿ ಆಡಿದ ಮಾತಿಗೆ ಬಂದ ಪ್ರತಿಕ್ರಿಯೆಯಲ್ಲಿನ ಸಣ್ಣ ವ್ಯತ್ಯಾಸ. ಒಂದು ಕಡೆ ಇದ್ದ ಪರಿಸ್ಥಿತಿ ಮತ್ತೊಂದು ಕಡೆಗೆ ಗೊತ್ತಿರುವುದಿಲ್ಲ, ಗೊತ್ತಾಗಲು ಸಾಧ್ಯವೂ ಇಲ್ಲ. ಮಾತಿನ ಅರ್ಥ ಒಂದೇ ಆಗಿದ್ದರೂ, ಅದನ್ನು ಸ್ವೀಕರಿಸುವ ಮನಸ್ಸಿನ ಸ್ಥಿತಿ ಬೇರೆ ಆಗಿತ್ತು ಅಷ್ಟೇ. ಆದರೆ ಆ ಸಣ್ಣ ವ್ಯತ್ಯಾಸವೇ ನಿಧಾನವಾಗಿ ಅಸಮಾಧಾನವಾಗಿ, ನಂತರ ಮನಸ್ತಾಪವಾಗಿ, ಕೊನೆಗೆ ಸಂಬಂಧದಲ್ಲಿ ಬಿರುಕು ಮೂಡಿಸಿತು.

ನಮ್ಮ ಬದುಕಿನಲ್ಲಿ ಕೂಡಾ ಇಂತಹ ಘಟನೆಗಳು ಬಹಳ ಸಾಮಾನ್ಯ.

ನಾವು ಯಾರೊಂದಿಗಾದರೂ ಮಾತನಾಡುವಾಗ, “ಅವರೂ ನಮ್ಮಂತೆಯೇ ಇದ್ದಾರೆ” ಎಂದುಕೊಂಡು ಮಾತನಾಡುತ್ತೇವೆ. ನಾವು ಸಂತೋಷದಲ್ಲಿದ್ದರೆ ಅವರೂ ಸಂತೋಷದಲ್ಲಿರಬಹುದು ಎಂದು ಅಂದುಕೊಳ್ಳುತ್ತೇವೆ. ನಾವು ಬಿಡುವಿನಲ್ಲಿದ್ದರೆ ಅವರಿಗೂ ಸಮಯ ಇರಬಹುದು ಎಂದು ಭಾವಿಸುತ್ತೇವೆ. ನಮ್ಮ ಮನಸ್ಸು ಹೇಗಿದೆಯೋ ಅದೇ ಸ್ಥಿತಿಯಲ್ಲಿ ಅವರು ನಮ್ಮ ಮಾತನ್ನು ಕೇಳುತ್ತಿದ್ದಾರೆ ಎಂದು ಭಾವಿಸುತ್ತೇವೆ.

ಆದರೆ, ನಿಜವಾದ ಬದುಕು ಹಾಗಿಲ್ಲ. ಹಾಗಿರುವುದೂ ಇಲ್ಲ. ಅವರು ಆ ಕ್ಷಣದಲ್ಲಿ ಯಾವುದೋ ಒತ್ತಡದಲ್ಲಿರಬಹುದು. ಮನೆಯ ಸಮಸ್ಯೆಯಲ್ಲಿರಬಹುದು. ಕೆಲಸದ ಚಿಂತೆಯಲ್ಲಿರಬಹುದು. ಆರೋಗ್ಯದ ಸಮಸ್ಯೆ ಇರಬಹುದು. ಯಾರದೋ ಮಾತಿನಿಂದ ಬೇಸರಗೊಂಡಿರಬಹುದು, ಯಾರಾದರೂ ಅತಿಥಿಗಳೊಂದಿಗೆ ಮಾತನಾಡುತ್ತಿರಬಹುದು ಅಥವಾ ಸುಮ್ಮನೆ ಮೌನವಾಗಿರಬೇಕೆಂದು ಬಯಸುತ್ತಿರಬಹುದು. ನಮಗೆ ಅದು ಗೊತ್ತಿರುವುದಿಲ್ಲ.

ಅದಕ್ಕಾಗಿಯೇ ಮುಖಾಮುಖಿ ಮಾತನಾಡುವುದಕ್ಕೂ, ದೂರವಾಣಿಯಲ್ಲಿ ಮಾತನಾಡುವುದಕ್ಕೂ, ವ್ಯಾಟ್ಸಪ್‌ನಲ್ಲಿ ಸಂದೇಶ ಕಳುಹಿಸುವುದಕ್ಕೂ ದೊಡ್ಡ ವ್ಯತ್ಯಾಸವಿದೆ. ಮುಖಾಮುಖಿಯಾಗಿ ಮಾತನಾಡುವಾಗ ಮಾತಿನ ಜೊತೆಗೆ ಮುಖದ ಭಾವನೆ ಕಾಣುತ್ತದೆ. ಕಣ್ಣಿನ ನೋಟ ಗೊತ್ತಾಗುತ್ತದೆ. ಧ್ವನಿಯ ಏರಿಳಿತ ಅರ್ಥವಾಗುತ್ತದೆ. ಒಂದು ಕ್ಷಣ ಮೌನವಾದರೂ ಅದರ ಹಿಂದಿನ ಭಾವನೆ ಅರಿವಾಗುತ್ತದೆ. ಕೆಲವೊಮ್ಮೆ ಮಾತಿಗಿಂತ ಕಣ್ಣೇ ಹೆಚ್ಚು ಹೇಳುತ್ತದೆ.

ಆದರೆ ದೂರವಾಣಿಯಲ್ಲಿ ಧ್ವನಿ ಮಾತ್ರ ಇರುತ್ತದೆ. ಧ್ವನಿಯ ಏರಿಳಿತ ಆ ಕಡೆಗೆ ಇನ್ನೊಂದು ಭಾವವಾಗಿ ತಲಪುಲೂಬಹುದು. ವ್ಯಾಟ್ಸಪ್‌ನಲ್ಲಿ ಅದೂ ಇರುವುದಿಲ್ಲ. ಕೆಲವು ಪದಗಳು, ಕೆಲವು ಅಕ್ಷರಗಳು, ಕೆಲವೊಮ್ಮೆ ಒಂದು ಎಮೋಜಿ ಮಾತ್ರ…! . ನಾವು ಕಳುಹಿಸಿದ ಒಂದು ಸಾಮಾನ್ಯ ಸಂದೇಶವನ್ನು ಅವರು ಬೇರೆ ಅರ್ಥದಲ್ಲಿ ಓದಬಹುದು. ಅವರು ಕಳುಹಿಸಿದ ಒಂದು ಸಣ್ಣ ಉತ್ತರವನ್ನು ನಾವು ನಿರ್ಲಕ್ಷ್ಯವೆಂದು ಭಾವಿಸಬಹುದು. ಅವರು ತಡವಾಗಿ ಪ್ರತಿಕ್ರಿಯಿಸಿದರೆ, “ನನ್ನ ಬಗ್ಗೆ ಆಸಕ್ತಿ ಇಲ್ಲ” ಎಂದುಕೊಳ್ಳಬಹುದು. ಆದರೆ ನಿಜವಾಗಿ ಅವರು ಆ ಕ್ಷಣದಲ್ಲಿ ಬೇರೆ ಯಾವುದೋ ಬದುಕಿನ ಸಂಕಟದಲ್ಲಿ ಇರಬಹುದು. ಈ ಅರಿವಿಲ್ಲದ ಊಹೆಗಳು ಸಂಬಂಧಗಳನ್ನು ಹೆಚ್ಚು ನೋಯಿಸುತ್ತವೆ.

ಹೀಗಾಗಿ ಪ್ರತಿಯೊಂದು ಮಾತನ್ನೂ ದೂರವಾಣಿಯಲ್ಲೇ ಮುಗಿಸಬೇಕೆಂಬ ಅಗತ್ಯವಿಲ್ಲ. ತುರ್ತು ಕೂಡಾ ಇಲ್ಲ. ಪ್ರತಿಯೊಂದು ಭಾವನೆಯನ್ನೂ ವ್ಯಾಟ್ಸಪ್‌ನಲ್ಲಿ ವಿವರಿಸಬೇಕೆಂಬ ಅನಿವಾರ್ಯತೆಯೂ ಇಲ್ಲ. ಎಷ್ಟು ಬೇಕೋ ಅಷ್ಟು ಮಾತನಾಡಿ. ಹೇಳಬೇಕಾದುದನ್ನು ಸರಳವಾಗಿ ಹೇಳಿ. ಉಳಿದುದನ್ನು ಸಾಧ್ಯವಾದರೆ ಮುಖಾಮುಖಿಯಾಗಿ ಮಾತನಾಡಿದರೇ ಹೆಚ್ಚು ಚೆನ್ನ.

ಏಕೆಂದರೆ ಕೆಲವು ಮಾತುಗಳನ್ನು ಸಂದೇಶದಲ್ಲಿ ಹೇಳಲಾಗುವುದಿಲ್ಲ. ಕೆಲವು ನೋವುಗಳನ್ನು ಧ್ವನಿಯಲ್ಲಿ ಹೇಳಲಾಗುವುದಿಲ್ಲ. ಕೆಲವು ಸಂಬಂಧಗಳನ್ನು ಅಕ್ಷರಗಳಿಂದ ಉಳಿಸಲಾಗುವುದಿಲ್ಲ. ಅವುಗಳಿಗೆ ಒಂದು ಭೇಟಿಯೇ ಬೇಕಾಗುತ್ತದೆ. ಕೆಲವೊಮ್ಮೆ ಪಕ್ಕದಲ್ಲಿ ಸುಮ್ಮನೆ ಕುಳಿತುಕೊಳ್ಳುವುದೂ ಸಾಕಾಗುತ್ತದೆ. ಹೀಗಾಗಿ ಮಾತು ಬಹಳ ಎಚ್ಚರಿಕೆಯ ವಿಷಯ.

ಆದರೆ, ಇದೆಲ್ಲಕ್ಕಿಂತಲೂ ದೊಡ್ಡದಾದ ಭಾಷೆ ಮತ್ತೊಂದಿದೆ ಮೌನ. ನಿನ್ನೆಯಷ್ಟೇ ಯಾವುದೋ ಸಂದರ್ಶನ ಕೇಳುತ್ತಿದೆ. “ಈ ಜಗತ್ತಿನ ಅತ್ಯಂತ ಸಮೃದ್ಧ ಭಾಷೆ, ಮೌನ. ಎಂತಹ ಅದ್ಭುತ ಅಲ್ಲಾ..!” ಎನ್ನುವುದು ಕೇಳಿದೆ. ಮೌನವೆಂದರೆ ಮಾತಿಲ್ಲದಿರುವುದು ಅಲ್ಲ. ಮೌನವೆಂದರೆ ಮಾತಿಗೆ ಸಿಗದ ಭಾವನೆ. ಎಲ್ಲವನ್ನೂ ತಿಳಿದಿದ್ದರೂ ಪ್ರತಿಯೊಂದಕ್ಕೂ ಪ್ರತಿಕ್ರಿಯಿಸಬೇಕೆಂಬ ಹಠವನ್ನು ಬಿಟ್ಟುಬಿಡುವುದು. ನೋವಾದರೂ ತಕ್ಷಣ ಉತ್ತರಿಸದೆ ಸ್ವಲ್ಪ ಸಮಯ ಕಾಯುವುದು. ಕೋಪ ಬಂದರೂ ಮತ್ತೊಂದು ಮಾತಿನಿಂದ ಸಮಸ್ಯೆಯನ್ನು ದೊಡ್ಡದಾಗಿಸದೆ ಹಿಂದೆ ಸರಿಯುವುದು. ಹಾಗೆಂದು ಮೌನ ಎಂದರೆ ಮಾತನಾಡದೇ ಇರುವುದಲ್ಲ..!.

ಕೆಲವೊಮ್ಮೆ ಸಂಬಂಧವನ್ನು ಉಳಿಸುವುದು ನಾವು ಹೇಳಿದ ಮಾತಲ್ಲ; ಹೇಳದೆ ಉಳಿಸಿಕೊಂಡ ಮಾತುಗಳು. ನಮ್ಮ ಜೀವನದಲ್ಲಿಯೂ ಇಂತಹ ಅನೇಕ ಸಂದರ್ಭಗಳು ಬಂದಿರುತ್ತವೆ. ಯಾರೋ ಒಂದು ಮಾತು ಹೇಳಿರುತ್ತಾರೆ. ಅದಕ್ಕೆ ತಕ್ಷಣ ಉತ್ತರಿಸಬೇಕೆನಿಸಿರುತ್ತದೆ. ಮನಸ್ಸಿನಲ್ಲಿ ನೂರು ಮಾತುಗಳು ಹುಟ್ಟಿರುತ್ತವೆ. ಆದರೆ ನಾವು ಸುಮ್ಮನಾಗಿರುತ್ತೇವೆ. ಕೆಲವು ಗಂಟೆಗಳ ನಂತರ, ಕೆಲವು ದಿನಗಳ ನಂತರ ನೋಡಿದಾಗ “ಅಂದು ನಾನು ಉತ್ತರಿಸದೇ ಇದ್ದದ್ದು ಒಳ್ಳೆಯದೇ ಆಯಿತು” ಎನ್ನಿಸುತ್ತದೆ. ಯಾಕೆಂದರೆ ಕೋಪದಲ್ಲಿ ಮಾತನಾಡಿದ ಮಾತಿಗೆ ಹಿಂದಿರುಗುವ ದಾರಿ ಇರುವುದಿಲ್ಲ. ಆದರೆ ಮೌನಕ್ಕೆ ಯಾವಾಗ ಬೇಕಾದರೂ ಅರ್ಥ ನೀಡಬಹುದು. ಹೊಸ ದಾರಿ ಹುಡುಕಬಹುದು, ಮತ್ತೆ ಹಳೆ ದಾರಿಯೂ ಕಾಣಬಹುದು.

ಅತಿಯಾದ ಮಾತು ಮನಸ್ಸನ್ನೂ ದಣಿಸುತ್ತದೆ. ಸಂಬಂಧವನ್ನೂ ದಣಿಸುತ್ತದೆ. ಪ್ರತಿಯೊಂದು ವಿಷಯಕ್ಕೂ ಪ್ರತಿಕ್ರಿಯಿಸುವ ಅಭ್ಯಾಸ ನಮ್ಮೊಳಗಿನ ನೆಮ್ಮದಿಯನ್ನು ನಿಧಾನವಾಗಿ ಕಸಿದುಕೊಳ್ಳುತ್ತದೆ. ಎಲ್ಲವನ್ನೂ ವಿವರಿಸಬೇಕು, ಎಲ್ಲವನ್ನೂ ಸಾಬೀತುಪಡಿಸಬೇಕು, ಎಲ್ಲರಿಗೂ ನಮ್ಮ ಮಾತು ಅರ್ಥವಾಗಬೇಕು ಎಂಬ ಹಠವೇ ಕೆಲವೊಮ್ಮೆ ಬದುಕನ್ನು ಕಷ್ಟಗೊಳಿಸುತ್ತದೆ. ಕೆಲವು ವಿಷಯಗಳನ್ನು ಹಾಗೆಯೇ ಬಿಡಬೇಕು. ಕೆಲವು ಪ್ರಶ್ನೆಗಳಿಗೆ ಉತ್ತರ ಕೊಡಬಾರದು. ಕೆಲವು ಮಾತುಗಳನ್ನು ಕೇಳಿಯೂ ಕೇಳದಂತೆ ಇರಬೇಕು. ಕೆಲವು ಸಂಬಂಧಗಳಲ್ಲಿ ಸ್ವಲ್ಪ ದೂರವೇ ಆದರೆ ಅದರ ಉಳಿವಿಗೂ ಕಾರಣವಾಗಬಹುದು.

ಮೌನವಾಗಿರುವುದು ಎಂದರೆ ಸೋಲಲ್ಲ. ಎಲ್ಲವನ್ನೂ ಸಹಿಸಿಕೊಂಡು ಸುಮ್ಮನಿರುವುದೂ ಅಲ್ಲ. ಯಾವ ಮಾತು ಅಗತ್ಯ, ಯಾವ ಮಾತು ಅನಗತ್ಯ ಎಂಬುದನ್ನು ಅರಿತುಕೊಳ್ಳುವ ಪ್ರೌಢಿಮೆಯೇ ಮೌನ. ಮೌನದಲ್ಲಿ ಯೋಚಿಸಿದಾಗ ಮನಸ್ಸಿಗೆ ಉತ್ತರಗಳು ಸಿಗುತ್ತವೆ. ನಿನ್ನೆ ದೊಡ್ಡ ಸಮಸ್ಯೆಯಾಗಿ ಕಂಡದ್ದು ಇಂದು ಪರಿಹಾರವಾಗಿ ಕಾಣಬಹುದು. ಯಾರ ಮೇಲೋ ಇದ್ದ ಕೋಪ ಕಡಿಮೆಯಾಗಬಹುದು. ನಮ್ಮದೇ ತಪ್ಪು ನಮಗೆ ಕಾಣಬಹುದು. ಇನ್ನೊಬ್ಬರ ಪರಿಸ್ಥಿತಿಯನ್ನೂ ಅರ್ಥಮಾಡಿಕೊಳ್ಳಲೂ ಸಾಧ್ಯವಾಗಬಹುದು.

ಮಾತು ಕೆಲವೊಮ್ಮೆ ಸಮಸ್ಯೆಯನ್ನು ಮತ್ತಷ್ಟು ದೂರಕ್ಕೆ ಕೊಂಡೊಯ್ಯುತ್ತದೆ. ಮೌನ ಮಾತ್ರ ಸಮಸ್ಯೆಯ ಮಧ್ಯದಲ್ಲಿ ನಿಂತು ಅದನ್ನು ನೋಡುವ ಅವಕಾಶ ಕೊಡುತ್ತದೆ. ಆದ್ದರಿಂದ ಬದುಕಿನಲ್ಲಿ ಪ್ರತಿಯೊಂದು ಕ್ಷಣವೂ ಮಾತನಾಡಬೇಕಿಲ್ಲ. ಎಷ್ಟು ಬೇಕೋ ಅಷ್ಟು ಮಾತನಾಡಿ, ಅಗತ್ಯವಿದ್ದಾಗ ಮನಸ್ಸು ತೆರೆದು ಮಾತನಾಡಬೇಕು. ಸಂಬಂಧ ಉಳಿಸಬೇಕಾದಾಗ ಮುಖಾಮುಖಿಯಾಗಿ ಮಾತನಾಡಬೇಕು. ಆದರೆ ಎಲ್ಲವೂ ಮುಗಿದ ನಂತರ, ಎಲ್ಲವನ್ನೂ ಹೇಳಿದ ನಂತರ, ಇನ್ನೇನೂ ಹೇಳಬೇಕಿಲ್ಲವೆನಿಸಿದಾಗ ಮೌನವಾಗಿರಬೇಕು ಅಷ್ಟೇ. ಆ ಮೌನದಲ್ಲಿ ನಮಗೆ ಕಳೆದುಕೊಂಡ ಸಂಬಂಧದ ಅರ್ಥ ಸಿಗಬಹುದು. ಉಳಿಸಿಕೊಳ್ಳಬೇಕಾದ ಸಂಬಂಧದ ಮೌಲ್ಯ ಸಿಗಬಹುದು. ಅಲ್ಲಿ ಕ್ಷಮಿಸುವ, ಸ್ವೀಕರಿಸುವ ಶಕ್ತಿ ಸಿಗಬಹುದು. ಬಹುಶಃ ಅಲ್ಲಿ ನಮ್ಮದೇ ತಪ್ಪು ಕಾಣಬಹುದು.

ಮಾತು ಸಂಬಂಧವನ್ನು ಆರಂಭಿಸಬಹುದು. ಅದೇ ಮಾತು ಸಂಬಂಧವನ್ನು ಬೆಳೆಸಬಹುದು. ಕೆಲವು ಸಂಬಂಧಗಳನ್ನು ದೀರ್ಘವಾಗಿ ಉಳಿಸಬೇಕಾದರೆ ಮೌನವೂ ಬೇಕು. ಮೌನದಲ್ಲಿ ನೆಮ್ಮದಿಯಿದೆ. ಮೌನದಲ್ಲಿ ಆತ್ಮಾವಲೋಕನ ಇದೆ. ಮೌನದಲ್ಲಿ ಮಾನಸಿಕ ಶಕ್ತಿಯಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಮೌನಕ್ಕೆ ಅನಗತ್ಯವಾದುದನ್ನು ಬಿಟ್ಟು ಅಗತ್ಯವಾದುದನ್ನು ಉಳಿಸಿಕೊಳ್ಳುವ ವಿವೇಕವಿದೆ. ಈ ಅರಿವು ನಮ್ಮೊಳಗೆ ಮೂಡುವ ದಿನವೇ ಬದುಕಿನಲ್ಲಿ ಒಂದು ಸಣ್ಣ ತಿರುವು ಆರಂಭವಾಗುತ್ತದೆ. ಆ ದಿನದಿಂದ ಮಾತುಗಳು ಕಡಿಮೆಯಾಗಬಹುದು. ಮಾತಿನ ಅರ್ಥಗಳು ಹೆಚ್ಚಾಗುತ್ತವೆ. ಸಂಬಂಧಗಳು ಕಡಿಮೆಯಾಗುವುದಿಲ್ಲ, ಬದಲಾಗಿ, ಉಳಿಯಬೇಕಾದ ಸಂಬಂಧಗಳು ಇನ್ನಷ್ಟು ಗಟ್ಟಿಯಾಗುತ್ತವೆ. ಮತ್ತು ಮನಸ್ಸು ಸ್ವಲ್ಪ ಹೆಚ್ಚು ನೆಮ್ಮದಿಯಿಂದ ಇರುತ್ತದೆ…

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಹವಾಮಾನ ವರದಿ | 30-09-2026 | ಅರಬ್ಬಿ ಸಮುದ್ರದ ಗಾಳಿ ದುರ್ಬಲ… ಕರ್ನಾಟಕದ ಮಳೆಯ ಸ್ವರೂಪ ಬದಲಾಗುತ್ತಾ?

ಅಕ್ಟೋಬರ್ 1ರಿಂದ ಅರಬ್ಬಿ ಸಮುದ್ರದ ಗಾಳಿ ದುರ್ಬಲಗೊಳ್ಳುವ ಸಾಧ್ಯತೆ ಇರುವುದರಿಂದ ಕರ್ನಾಟಕದಲ್ಲಿ ಮಳೆಯ…

10 minutes ago

ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಯ ಭಯದಲ್ಲಿ ಕೇರಳದ ರಬ್ಬರ್ ರೈತರು – ತೋಟಗಾರಿಕೆಗೆ ಮುಂದೆ ಏನು?

ಪಶ್ಚಿಮ ಘಟ್ಟದ ESA ಪ್ರಸ್ತಾವನೆ ಮತ್ತೆ ಕೇರಳದ ರಬ್ಬರ್ ಹಾಗೂ ಇತರ ತೋಟಗಾರಿಕಾ…

13 hours ago

ಫ್ಲೈಓವರ್ ಬಳಿಕ ಕಲ್ಲಡ್ಕದಲ್ಲಿ ಏನು ಬದಲಾವಣೆಯಾಗಿದೆ..?

ಕಲ್ಲಡ್ಕದ 2.1 ಕಿ.ಮೀ. ಉದ್ದದ ಫ್ಲೈಓವರ್ ಸಂಚಾರಕ್ಕೆ ಮುಕ್ತವಾದ ಬಳಿಕ ಪೇಟೆಯೊಳಗಿನ ವಾಹನ…

21 hours ago

ಹಲಸಿನಂತೆಯೇ ಕಾಣುವ ಈ ಹಣ್ಣು ನಿಮಗೆ ಗೊತ್ತೇ?

ಹಲಸಿನ ಹಣ್ಣಿನಂತೆ ಕಾಣುವ ಚೆಂಪೆಡಕ್ ಹಣ್ಣು ರುಚಿ ಮತ್ತು ಸುವಾಸನೆಯ ಜತೆಗೆ ವಿಟಮಿನ್‌…

22 hours ago

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಹಿಳೆಯರ ಓಟಕ್ಕೆ ಚಿನ್ನದ ಹೊಳಪು – 4×400 ಮೀ. ರಿಲೇಯಲ್ಲಿ ಭರ್ಜರಿ ಗೆಲುವು

ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಭಾರತ 3:29.69 ಸಮಯದೊಂದಿಗೆ ಚಿನ್ನ…

23 hours ago

ಕಾಳುಮೆಣಸು ಮಾರುಕಟ್ಟೆಯಲ್ಲಿ ಏನಾಗುತ್ತಿದೆ?

ಆಗಮನ ಕಡಿಮೆಯಾಗಿದ್ದರೂ ದೇಶದ ಕಾಳುಮೆಣಸು ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ದಾಸ್ತಾನು ಮತ್ತು ಬೇಡಿಕೆ…

1 day ago