ಭಾರತದ ರಬ್ಬರ್ ಮಾರುಕಟ್ಟೆಯಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಮೊದಲ ಬಾರಿಗೆ ನೈಸರ್ಗಿಕ ರಬ್ಬರ್ ಬೆಲೆ ಪ್ರತಿ ಕೆ.ಜಿ.ಗೆ ₹300 ರ ಗಡಿ ತಲುಪಿದ್ದು, ರಬ್ಬರ್ ಬೆಳೆಗಾರರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
ಕೇರಳದ ಕೊಟ್ಟಾಯಂ ಮಾರುಕಟ್ಟೆಯಲ್ಲಿ ಶುಕ್ರವಾರ (ಅಕ್ಟೋಬರ್ 30) ಆರ್ಎಸ್ಎಸ್–4 (RSS-4) ದರ್ಜೆಯ ಶೀಟ್ ರಬ್ಬರ್ ಪ್ರತಿ ಕೆ.ಜಿ.ಗೆ ₹300ರಂತೆ ವಹಿವಾಟು ನಡೆಸಿದೆ. ಇದೇ ವೇಳೆ ರಬ್ಬರ್ ಮಂಡಳಿಯ ಅಧಿಕೃತ ದರ ಪ್ರತಿ ಕೆ.ಜಿ.ಗೆ ₹298 ದಾಖಲಾಗಿದೆ.
ಈ ವರ್ಷದ ಜನವರಿಯಲ್ಲಿ ಆರ್ಎಸ್ಎಸ್–4 ರಬ್ಬರ್ನ ಸರಾಸರಿ ಬೆಲೆ ಪ್ರತಿ ಕೆ.ಜಿ.ಗೆ ₹192 ಇತ್ತು. ಕೇವಲ ಒಂಬತ್ತು ತಿಂಗಳ ಅವಧಿಯಲ್ಲಿ ಸುಮಾರು ₹108 ಏರಿಕೆಯಾಗಿರುವುದು ಗಮನಾರ್ಹ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶುಕ್ರವಾರ ರಬ್ಬರ್ ಬೆಲೆ ಪ್ರತಿ ಕೆ.ಜಿ.ಗೆ ₹268.63ರಷ್ಟಿತ್ತು.
ಬೆಲೆ ಏರಿಕೆಗೆ ಕಾರಣವೇನು? : ದೇಶೀಯ ಉತ್ಪಾದನೆಯ ಕುಸಿತ ಮತ್ತು ಬೇಡಿಕೆಗೆ ಅನುಗುಣವಾಗಿ ರಬ್ಬರ್ ಪೂರೈಕೆಯಾಗದಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣಗಳಾಗಿವೆ.
ರಬ್ಬರ್ ಮಂಡಳಿಯ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಸುಮಾರು 5.22 ಲಕ್ಷ ಮೆಟ್ರಿಕ್ ಟನ್ ರಬ್ಬರ್ ಕೊರತೆಯಿದೆ. ದೇಶದ ಸುಮಾರು 1.76 ಲಕ್ಷ ಹೆಕ್ಟೇರ್ ರಬ್ಬರ್ ತೋಟಗಳಲ್ಲಿ ಟ್ಯಾಪಿಂಗ್ ನಡೆಯುತ್ತಿಲ್ಲ. ಇದರಿಂದ ಮಾರುಕಟ್ಟೆಗೆ ಬರುವ ರಬ್ಬರ್ ಪ್ರಮಾಣ ಕಡಿಮೆಯಾಗಿದೆ.
ಭಾರತ ಮಾತ್ರವಲ್ಲದೆ ಮಲೇಷ್ಯಾ, ಥಾಯ್ಲೆಂಡ್ ಮತ್ತು ಇಂಡೋನೇಷ್ಯಾದಂತಹ ಪ್ರಮುಖ ರಬ್ಬರ್ ಉತ್ಪಾದಕ ರಾಷ್ಟ್ರಗಳಲ್ಲಿಯೂ ಹವಾಮಾನ ವೈಪರೀತ್ಯ ಸೇರಿದಂತೆ ವಿವಿಧ ಕಾರಣಗಳಿಂದ ಉತ್ಪಾದನೆ ಕುಸಿದಿದೆ. ಜಾಗತಿಕ ಮಟ್ಟದಲ್ಲಿ ಪೂರೈಕೆಯ ಮೇಲೂ ಇದರ ಪರಿಣಾಮ ಉಂಟಾಗಿದೆ.
ಇದರೊಂದಿಗೆ ಪಶ್ಚಿಮ ಏಷ್ಯಾದ ಸಂಘರ್ಷದಿಂದ ಹಡಗು ಸಾಗಣೆ ಮತ್ತು ಸರಕು ಸಾಗಣೆ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಿದೆ. ಆಮದು ವೆಚ್ಚ ಹೆಚ್ಚಿರುವುದೂ ದೇಶೀಯ ಮಾರುಕಟ್ಟೆಯಲ್ಲಿ ರಬ್ಬರ್ ಬೆಲೆ ಏರಿಕೆಗೆ ಪೂರಕವಾಗಿದೆ. ಕಚ್ಚಾ ತೈಲದ ಬೆಲೆ ಏರಿಕೆಯಿಂದ ಕೃತಕ ರಬ್ಬರ್ ಉತ್ಪಾದನಾ ವೆಚ್ಚವೂ ಹೆಚ್ಚಾಗಿದೆ. ಇದರಿಂದ ಕೈಗಾರಿಕೆಗಳು ನೈಸರ್ಗಿಕ ರಬ್ಬರ್ನತ್ತ ಹೆಚ್ಚಿನ ಆಸಕ್ತಿ ತೋರಿಸುತ್ತಿರುವುದು ಬೇಡಿಕೆಯನ್ನು ಹೆಚ್ಚಿಸಿದೆ.
ಬೆಳೆಗಾರರಲ್ಲಿ ಹೊಸ ನಿರೀಕ್ಷೆ : ದೀರ್ಘಕಾಲದಿಂದ ಬೆಲೆ ಕುಸಿತ ಮತ್ತು ಉತ್ಪಾದನಾ ವೆಚ್ಚದ ಒತ್ತಡದಿಂದ ಸಂಕಷ್ಟ ಅನುಭವಿಸುತ್ತಿದ್ದ ರಬ್ಬರ್ ಬೆಳೆಗಾರರಿಗೆ ಈಗಿನ ಬೆಲೆ ಏರಿಕೆ ಆಶಾದಾಯಕ ಬೆಳವಣಿಗೆಯಾಗಿದೆ. ಮಾರುಕಟ್ಟೆಯಲ್ಲಿ ಬೆಲೆ ಮತ್ತಷ್ಟು ಏರಿಕೆಯಾಗಬಹುದು ಎಂಬ ನಿರೀಕ್ಷೆಯೂ ಬೆಳೆಗಾರರು ಮತ್ತು ವ್ಯಾಪಾರಿಗಳಲ್ಲಿ ಮೂಡಿದೆ.
ಆದರೆ ಬೆಲೆ ಏರಿಕೆಯ ಲಾಭ ಸಂಪೂರ್ಣವಾಗಿ ಬೆಳೆಗಾರರಿಗೆ ತಲುಪಬೇಕಾದರೆ ಉತ್ಪಾದನೆ ಮತ್ತು ಮಾರಾಟದ ಪ್ರಮಾಣವೂ ಹೆಚ್ಚಾಗಬೇಕು. ಟ್ಯಾಪಿಂಗ್ ಸ್ಥಗಿತಗೊಂಡಿರುವ ತೋಟಗಳು ಮತ್ತೆ ಉತ್ಪಾದನೆಗೆ ಮರಳುವುದು ಹಾಗೂ ಕಾರ್ಮಿಕರ ಲಭ್ಯತೆ ಸುಧಾರಿಸುವುದು ರಬ್ಬರ್ ವಲಯದ ಮುಂದಿನ ಬೆಳವಣಿಗೆಯಲ್ಲಿ ಪ್ರಮುಖವಾಗಲಿದೆ.
ರಬ್ಬರ್ ಮಾರುಕಟ್ಟೆಯಲ್ಲಿ ದಾಖಲೆ ಬೆಲೆ ಸೃಷ್ಟಿಯಾಗಿರುವುದು ಬೆಳೆಗಾರರಿಗೆ ಸಕಾರಾತ್ಮಕ ಬೆಳವಣಿಗೆಯಾದರೂ, ಈ ಬೆಲೆ ಎಷ್ಟು ಕಾಲ ಮುಂವರಿಯಲಿದೆ ಎಂಬುದು ಮುಂದಿನ ದಿನಗಳಲ್ಲಿ ಗಮನಿಸಬೇಕಾದ ಅಂಶವಾಗಿದೆ.
Natural rubber prices in India have touched a historic ₹300 per kg for the first time, with RSS-4 grade sheet rubber reaching this level in Kerala’s Kottayam market on October 30. The surge is driven by domestic supply shortages, declining production, rising demand, higher import costs and increasing synthetic rubber prices. India is reportedly facing a rubber shortage of 5.22 lakh metric tonnes, while tapping has stopped across 1.76 lakh hectares. The record price has brought fresh hope to rubber farmers, although the sustainability of the rally remains uncertain.


