Advertisement
ಅನುಕ್ರಮ

ಮಕ್ಕಳಲ್ಲಿ ಗುಣ ಬೆಳೆಸುವ ಹೊಣೆ ಶಾಲೆಗಳಿಗಿಲ್ಲವೆ?

Share
ನಿಮ್ಮ ಮಕ್ಕಳು ಪರೋಪಕಾರಿಗಳಾಗಬೇಕೆಂಬ ಅಪೇಕ್ಷೆ ಪೋಷಕರಲ್ಲಿದೆಯೆ? ಬಸ್ಸಿನಲ್ಲಿ ವೃದ್ಧರೊಬ್ಬರು  ಬಂದು ಸೀಟಿಲ್ಲದೆ ನಿಂತುಕೊಂಡಿದ್ದರೆ ಕುಳಿತಿದ್ದ ನಿಮ್ಮ ಮಗು ಎದ್ದು ಸೀಟು ಬಿಟ್ಟು ಕೊಡುವುದು ಒಳ್ಳೆಯ ಗುಣ ಎಂದು ನಿಮ್ಮ ಮನಸ್ಸಿನಲ್ಲಿದೆಯೆ? ಹುಷಾರಿಲ್ಲದವರು ಹಾಗೂ ಮಗುವನ್ನೆತ್ತಿಕೊಂಡ ತಾಯಂದಿರು ಹತ್ತಿರದಲ್ಲಿ ಬಂದು ನಿಂತರೆ ತಕ್ಷಣ ಎದ್ದು ನಿಮ್ಮ ಮಗು ಸೀಟು ಬಿಟ್ಟು ಕೊಟ್ಟರೆ ಅದು ಒಳ್ಳೆಯ ಗುಣ ಎಂದು ನಿಮ್ಮ ಮನಸ್ಸಿನಲ್ಲಿದೆಯೆ? ತೀವ್ರ ಬಾಯಾರಿಕೆ ಆದವರಿಗೆ ನಿಮ್ಮ ಮಗು ತನ್ನ ಬಾಟಲಿಯಿಂದ ನೀರು ಕೊಟ್ಟು ಉಪಕರಿಸುವುದು ಒಳ್ಳೆಯ ಗುಣವೆಂದು ನಿಮ್ಮ ಮನಸ್ಸಿನಲ್ಲಿದೆಯೆ? ವಾಹನಗಳ ಭರಾಟೆಯಲ್ಲಿ ರಸ್ತೆ ದಾಟಲು ಪಾಡು ಪಡುತ್ತಿರುವ ಎಳೆಯ ಮಕ್ಕಳು, ಮಹಿಳೆಯರು, ವೃದ್ಧರು ಮುಂತಾದವರಿಗೆ ಕೈ ನೀಡಿ ಬನ್ನಿ ಎಂದು ವಾಹನಗಳನ್ನು ಅತ್ತ ಇತ್ತ ತಡೆ ಮಾಡಿ ದಾಟಿಸುವ ಕೆಲಸ ಮಾಡಿದರೆ ಅದು ಒಳ್ಳೆಯ ಗುಣವೆಂದು ನಿಮ್ಮ ಮನಸ್ಸಿಲ್ಲಿದೆಯೆ? ಸಹಪಾಠಿ ಮಕ್ಕಳು ನಡೆಯುತ್ತಿದ್ದಾಗ ಅಥವಾ ಬಸ್ಸಲ್ಲಿ ಕುಳಿತಿದ್ದಾಗ ಬಿಸ್ಕೆಟ್ ತಿಂದು ಅದರ ರೇಪರನ್ನು ರಸ್ತೆಯಲ್ಲಿ ಬಿಸಾಡಿದರೆ ಆಗ ಅಂತಹ ಮಕ್ಕಳನ್ನು ಕಸ ಹಾಕಿದ್ದರ ಬಗ್ಗೆ ಎಚ್ಚರ ನೀಡಿ ಆ ಕಸವನ್ನು ಹಾಕಿದವರೇ ಎತ್ತಿ ತಮ್ಮ ಕಿಸೆಯಲ್ಲಿ ಅಥವಾ ಚೀಲದಲ್ಲಿ ಇಟ್ಟುಕೊಳ್ಳುವಂತೆ ನಿಮ್ಮ ಮಗು ಧೈರ್ಯ ವಹಿಸಿ ಮಾಡಿದರೆ ಅದು ಒಳ್ಳೆಯ ಗುಣವೆಂದು ನಿಮ್ಮ ಮನಸ್ಸಿನಲ್ಲಿದೆಯೆ? ಶಿಕ್ಷಕರು, ಗಣ್ಯ ವ್ಯಕ್ತಿಗಳು, ಹಾಗೂ ಸ್ವಂತ ಹೆತ್ತವರನ್ನೇ ಹೀಯಾಳಿಸುವ ಸಹಪಾಠಿಗಳಿಗೆ ಬುದ್ಧಿ ಹೇಳಿ ಸರಿದಾರಿಗೆ ತರುವ ಪ್ರಯತ್ನವನ್ನು ನಿಮ್ಮ ಮಗು ಮಾಡಿದರೆ ಅದು ಒಳ್ಳೆಯ ಗುಣವೆಂದು ನಿಮ್ಮ ಮನಸ್ಸಿನಲ್ಲಿದೆಯೆ? ಸಹಪಾಠಿಯು ತಂದಿರುವ ಬೆಲೆ ಬಾಳುವ ಪೆನ್ನು ಅಥವಾ ಯಾವುದೇ ಉಪಯುಕ್ತ ವಸ್ತುವನ್ನು ಇತರ ಸಹಪಾಠಿಗಳು ಕದ್ದು ಅಡಗಿಸಿಡುವುದು, ಹಾಳು ಮಾಡುವುದು ಇತ್ಯಾದಿ ಮಾಡಿದರೆ ಹಾಗೆ ಮಾಡದಂತೆ ನಿಮ್ಮ ಮಗು ಮನವೊಲಿಸಿ ತಡೆದರೆ ಅದು ಒಳ್ಳೆಯ ಕೆಲಸವೆಂದು ನಿಮ್ಮ ಮನಸ್ಸಿನಲ್ಲಿದೆಯೆ?
ಹೀಗೆ ಒಳ್ಳೆಯ ಕೆಲಸಗಳ ಉದಾಹರಣೆಗಳನ್ನು  ಅದೆಷ್ಟೋ ಹೇಳಬಹುದು. ಆದರೆ  ಈ ಸದ್ಗುಣಗಳನ್ನು ಯಾರು ಬೆಳೆಸಬೇಕು? ಶಾಲೆಯೆ? ಅಥವಾ ಮನೆಯೇ? ಮಕ್ಕಳು ಏನು ಬೇಕಾದರೂ ಆಗಲಿ, ಪಾಠ ಮುಗಿಸುವುದಷ್ಟೇ ನಮ್ಮ ಕೆಲಸವೆಂದು ಶಿಕ್ಷಕರು ಮಕ್ಕಳ ಗುಣನಡತೆಯ ಬಗ್ಗೆ ಗಮನವನ್ನೇ ಹರಿಸದಿದ್ದರೆ ಅದು ಸರಿಯೆ? ನಮ್ಮ ಮಗು ಸುರಕ್ಷಿತವಾಗಿದ್ದರೆ ಸಾಕು, ಉಳಿದ ಮಕ್ಕಳ ಉಸಾಬರಿ ನಮಗೇಕೆ ಎಂದು ತಮ್ಮ ಮಗುವಿನ ಅವಗುಣಗಳ ಬಗ್ಗೆ ಪೆÇೀಷಕರು ನಿರ್ಲಕ್ಷ್ಯ ತಾಳಿದರೆ ಅದು ಸರಿಯೇ?
ಇದೆರಡೂ ಸರಿ ಅಲ್ಲವೆಂದು ಎಲ್ಲರಿಗೂ ತಿಳಿದಿದೆ. ಸರಿಪಡಿಸುವ ಹೊಣೆ ಶಿಕ್ಷಕರಿಗೂ ಇದೆ, ಪೋಷಕರಿಗೂ ಇದೆ ಎಂದು ತಿಳಿದುಕೊಂಡು ಪ್ರವರ್ತಿಸುವ ಪ್ರಯತ್ನಗಳು ತೀರಾ ಕಡಿಮೆ ಆಗಿವೆ. ಸರಕಾರಿ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣ ಮಾಡುವ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಿರಿಯ ನಾಗರಿಕರಿಗೆ, ಮಗುವನ್ನೆತ್ತಿಕೊಂಡು ನಿಂತ ಮಹಿಳೆಗೆ,  ಕಾಲಿಗೆ ಬೇಂಡೇಜ್ ಕಟ್ಟಿಕೊಂಡು ನಿಂತಿರುವ ಗಾಯಾಳುವಿಗೆ ತಮ್ಮ ಸೀಟು ಬಿಟ್ಟು ಕೊಟ್ಟು ಉಪಕರಿಸುವ ಗುಣವನ್ನು ಬೆಳೆಸಿಕೊಂಡಿಲ್ಲದಿರುವುದು ದಿನಾಲೂ ಸಾರ್ವಜನಿಕರ ಅನುಭವಕ್ಕೆ ಬರುತ್ತಿದೆ. ಈ ಸದ್ಗುಣ ತೋರುವವರು ಕಡಿಮೆಯಾಗುತ್ತಿದ್ದಾರೆಂಬುದೇ ಇಂದಿನ ಆತಂಕ. ಒಂದು ವೇಳೆ ಒಬ್ಬರು ಸದ್ಗುಣ ತೋರಿದರೆ ಉಳಿದವರಿಂದ ಲೇವಡಿಗೆ ಒಳಗಾಗುತ್ತಿದ್ದಾರೆಂಬುದೂ ಒಂದು ಸಮಸ್ಯೆಯಾಗಿದೆ. ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣದ ಹಕ್ಕು ಇದೆ. ಆದರೆ ಎಲ್ಲ ಪ್ರಯಾಣಿಕರೂ ಸಾಧ್ಯವಾದಷ್ಟು ಸುಖವಾಗಿ ಪ್ರಯಾಣಿಸಲು ಸಹಕರಿಸುವ ಹೊಣೆಗಾರಿಕೆಯೂ ಇದೆ. ಹೀಗೆ ಹಕ್ಕು ಮತ್ತು ಹೊಣೆಗಾರಿಕೆಗಳ ಬಂಧವು ಗಟ್ಟಿಯಾಗದೆ ಸಡಿಲವಾಗಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ ಎನ್ನಬಹುದು.
ಇದಿಷ್ಟು ಚರ್ಚೆ ಯಾಕೆಂದರೆ ಇತ್ತೀಚೆಗೆ ಉತ್ತರ ಕರ್ನಾಟಕದ ಒಂದು ಸರಕಾರಿ ಶಾಲೆಯಲ್ಲಿ ಶಿಕ್ಷಕರು ಬುದ್ಧಿ ಹೇಳಿದ್ದಕ್ಕಾಗಿ ವಿದ್ಯಾರ್ಥಿಯೊಬ್ಬ ಶಾಲೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಅಲ್ಲದೆ ಆ ಶಾಲೆಯ ಆರೂ ಮಂದಿ ಶಿಕ್ಷಕರ ಮೇಲೆ ಎಫ್.ಐ.ಆರ್. ಆಗಿದೆಯಂತೆ. ಅಂದರೆ ಪೊಲೀಸರು ಘಟನೆಯನ್ನು ಆಧರಿಸಿ ಆತ್ಮಹತ್ಯೆಯ ಕೇಸಿನಲ್ಲಿ ಅಪರಾಧಿಗಳನ್ನಾಗಿ ಶಿಕ್ಷಕರನ್ನು ನಮೂದಿಸಿದ್ದಾರೆ. ಇಂತಹ ಪ್ರಕರಣಗಳು ಶಿಕ್ಷಕರ ಎದೆಗುಂದಿಸುತ್ತಿವೆ. ಏಕೆಂದರೆ ಪೋಷಕರು ಮಗನ ಸಾವಿಗೆ ಶಿಕ್ಷಕರು ಅಪಮಾನಿಸಿದ್ದೇ ಕಾರಣ ಎಂಬುದಾಗಿ ಹೇಳಿಕೆ ನೀಡಿದರೆ ಪೊಲೀಸರಿಗೂ ಎಫ್.ಐ.ಆರ್. ಹಾಕದೆ ನಿರ್ವಾಹವಿಲ್ಲ. ಈ ಪ್ರಕರಣದಲ್ಲಿ ಶಿಕ್ಷಕರು ವಿದ್ಯಾರ್ಥಿಗೆ ಬುದ್ಧಿ ಹೇಳಿದ್ದಷ್ಟೇ ಆತನ ಆತ್ಮಹತ್ಯೆಗೆ ಕಾರಣವಾಗಿದ್ದರೆ ಇದು ಏಕಕಾಲದಲ್ಲಿ ಮನೋವೈಜ್ಞಾನಿಕ ಹಾಗೂ ಸಾಮಾಜಿಕ ವೈಕಲ್ಯದ ಸಮಸ್ಯೆಯಾಗಿದೆ. ಆದರೆ ಇನ್ನು ಇದಕ್ಕೆ ಪ್ರತಿಕ್ರಿಯೆಯಾಗಿ ಬೇರೆ ಶಾಲೆಗಳ ಶಿಕ್ಷಕರೂ “ತಮ್ಮ ಕೆಲಸ ಪಾಠ ಮಾಡುವುದಷ್ಟೇ ಎಂದು ಸೀಮಿತ” ಗೊಳಿಸಿದರೆ ಮಕ್ಕಳಲ್ಲಿ ಗುಣನಡತೆ ಬೆಳೆಸುವ (character building) ಕೆಲಸ ಶಾಲೆಗಳಿಗೆ  ಇದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಎದುರಾಗುತ್ತದೆ. ಏಕೆಂದರೆ ಗುಣವನ್ನು ಬೆಳೆಸಲು ಶಿಕ್ಷಕರು ಸಭ್ಯ ಭಾಷೆಯಲ್ಲಿ ಮನವೊಲಿಸುವ ಮಾರ್ಗವಷ್ಟೇ ಸಾಕಾಗುವುದಿಲ್ಲ. ಒಂದಿಷ್ಟು ಭಯದ ಡೋಸ್ ಕೂಡಾ ಬೇಕು. ಸಾಮಾನ್ಯವಾಗಿ ಹೆತ್ತವರು ಹಾಗೂ ಶಿಕ್ಷಕರು ಗದರಿಸುವ ಮೂಲಕ ಭಯ ಹುಟ್ಟಿಸುತ್ತಾರೆ. ಹಿಂದೆಲ್ಲಾ ನಮ್ಮ ಬಾಲ್ಯದಲ್ಲಿ ರಾತ್ರೆ ಊಟ ಬಡಿಸುವುದಿಲ್ಲ ಎಂದು ಗದರಿಸಿ ಭಯ ಹುಟ್ಟಿಸುತ್ತಿದ್ದರು. ಸರಿದಾರಿಗೆ ಬರಲು ಕೆಲವು ಮಕ್ಕಳಿಗೆ ಇಷ್ಟೇ ಸಾಕಾಗುತ್ತದೆ. ಆದರೆ ಅದು ಸಾಕಾಗದಿದ್ದಾಗ ಬೆತ್ತದ ಪ್ರಯೋಗ ಬೇಕಾಗುತ್ತದೆ. ಸುಮಾರಾಗಿ ಅಷ್ಟು ಸಾಕಾಗುತ್ತದೆ. ಅಸಾಧ್ಯ ಕೋಪವಿರುವ ಅಪ್ಪನ ಹತ್ತಿರ ಬೆತ್ತ ಕಾಣಸಿಗದಂತೆ ಅಮ್ಮಂದಿರು ಅಡಗಿಸಿಡುತ್ತಾರೆ. ಏಕೆಂದರೆ ಅಂತಹ ಕೋಪಿಷ್ಟರು ಬಾರಿಸಿದ ಬಳಿಕ ಮಕ್ಕಳ ಬೆನ್ನಿನಲ್ಲಿ ಕಾಣುವ ಬಾಸುಂಡೆಗಳು ಅಮ್ಮನ ಹೃದಯ ಕರಗಿಸುತ್ತದೆ. ಆಗ ಅಮ್ಮಂದಿರು “ಯಾಕೆ ಮಗಾ, ಅಪ್ಪನಿಂದ ಪೆಟ್ಟು ತಿನ್ನುವಂತಹ ತಪ್ಪು ಮಾಡ್ತೀ? ನಿನಗೆ ಅವ್ರು ಹೊಡೆಯುವುದನ್ನು ನೋಡುವುದಕ್ಕಾಗುವುದಿಲ್ಲ” ಎಂದು ದುಃಖಿಸಿದ್ದು ಮಗುವಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಹೀಗೆ  ಮಕ್ಕಳು ಸರಿದಾರಿಗೆ ಬರುತ್ತಾರೆ. ಶಾಲೆಯಲ್ಲಾದರೆ ಇತರ ಮಕ್ಕಳ ಎದುರು ಬೆತ್ತದ ರುಚಿ ನೋಡುವುದು ಅವಮಾನಕರವಾಗಿ ಮಕ್ಕಳು ಸರಿದಾರಿಗೆ ಬರುವುದುಂಟು. ಇಂತಹ ಪ್ರಕ್ರಿಯೆ ಬಹಳ ಕಾಲದಿಂದಲೂ ಇದ್ದದ್ದು ಈಗ ಬದಲಾಗಿದೆ.
ಆಧುನಿಕ ದೃಷ್ಠಿಕೋನಕ್ಕೆ ಹೊರಳಿರುವ ನಮ್ಮ ಆಲೋಚನೆಗಳ ಪ್ರಕಾರ ಶಿಸ್ತಿನ ಕಾರಣಕ್ಕಾಗಿ ಮಕ್ಕಳಿಗೆ ಹೊಡೆಯುವುದು ಮಕ್ಕಳ ಶೋಷಣೆಯಾಗುತ್ತದೆ. ಅಮೇರಿಕಾ ಹಾಗೂ ಯುರೋಪಿನ ಮುಂದುವರಿದ  ದೇಶಗಳಲ್ಲಿ ಮನೆಯಲ್ಲಿ ಮಕ್ಕಳಿಗೆ ಹೆತ್ತವರು ಏಟು ಕೊಡುವುದೂ ಅಪರಾಧವಾಗುತ್ತದೆ. ಮಗು ದೂರು ನೀಡಿದರೆ  ಪೆÇೀಲಿಸರು ಮನೆಗೇ ಬರುತ್ತಾರೆ. ಇನ್ನು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಹೊಡೆಯಲು ಸಾಧ್ಯವೇ ಇಲ್ಲ. ಅದು ದೊಡ್ಡ ಪ್ರಚಾರ ಪಡೆದು ಶಾಲೆಗೆ ಕೆಟ್ಟ ಹೆಸರು ಬರುವುದಲ್ಲದೆ ಶಿಕ್ಷಕರೂ ಕಂಬಿ ಎಣಿಸಬೇಕಾಗಬಹುದು. “ಮಕ್ಕಳ ಮೇಲೆ ದೌರ್ಜನ್ಯ ಮಾಡಿದರೆ ಅವರು ಹಿಂಸೆಯನ್ನು ಕಲಿಯುತ್ತಾರೆ”, “ಸಜ್ಜನ ಸಮಾಜವನ್ನು ನಿರ್ಮಿಸಲು ಸಜ್ಜನಿಕೆಯೇ ವಿಧಾನವಾಗಬೇಕು”. “ತಪ್ಪಿನ ಅರಿವು ಮೂಡಿಸಿ ಮಕ್ಕಳನ್ನು ತಿದ್ದಲು ಅವರ ಮನಸ್ಸನ್ನು ಪರಿವರ್ತಿಸಬೇಕು”, ಇಂತಹ ಚಿಂತನೆಯೇ  ಈಗ ವಿಶ್ವಾದ್ಯಂತ ಪಸರಿಸಿರುವುದು ಭಾರತದಲ್ಲಿಯೂ ಬದಲಾವಣೆಯ ಗಾಳಿಯನ್ನು ಬೀಸಿದೆ. ಈಗ ಪೆÇೀಲೀಸರನ್ನು ಸಂಪರ್ಕಿಸಲು ಶಾಲೆಗಳಲ್ಲಿ ಉಚಿತ ಫೋನ್ ನಂಬರ್‍ಗಳನ್ನು ಪ್ರದರ್ಶಿಸಿರುವುದರಿಂದ ಮಾಸ್ತರ್ರ ಮೇಲೆ ದೂರು ಕೊಡಲು ವಿದ್ಯಾರ್ಥಿಗಳಿಗೆ ಸುಲಭವಾಗಿದೆ. ಈ ಸೌಲಭ್ಯವನ್ನು ಅನೇಕ ವಿದ್ಯಾರ್ಥಿಗಳು ಬಳಸಿಕೊಳ್ಳದಿದ್ದರೂ ಶಿಕ್ಷಕವರ್ಗದವರು ಹಾಗೂ ಆಡಳಿತದಲ್ಲಿರುವವರು “ಯಾವತ್ತು ಆಪತ್ತು ಬರಬಹುದೆಂದು ಹೇಳಲು ಸಾಧ್ಯವಿಲ್ಲ” ಎಂಬ ಭಯದಿಂದ ಇರುತ್ತಾರೆ. ಮಕ್ಕಳು ಹೇಗೆ ಬೇಕಿದ್ದರೂ ಬೆಳೆಯಲಿ, ಅವರನ್ನು ತಿದ್ದಲು ಹೋಗಿ ನಾವು ಗತಿಗೆಟ್ಟಿಗೆ ಈಡಾಗುವುದು ಬೇಡ” ಎಂಬ ಚಿಂತನೆಯು ಶಿಕ್ಷಕ ವರ್ಗದಲ್ಲಿ ವ್ಯಾಪಿಸುತ್ತಿದೆ. ಅರ್ಥಾತ್ ವಿದ್ಯಾರ್ಥಿಗಳನ್ನು ಸರಿದಾರಿಗೆ ತರುವ ಹೊಣೆಯಿಂದ ಶಾಲೆ ಮತ್ತು ಶಿಕ್ಷಕರು ಹೊರಗುಳಿಯುುತ್ತಿದ್ದಾರೆ.
ಭಾರತೀಯ ಕೌಟುಂಬಿಕ ನಿಯಮಗಳಲ್ಲಿ ಮಕ್ಕಳನ್ನು ಬೆಳೆಸಲು ಸಾಮ, ದಾನ, ಭೇದ, ದಂಡದ ನಾಲ್ಕು ವಿಧಾನಗಳಿದ್ದುವು. ದಂಡ ಪ್ರಯೋಗವು ಕೊನೆಯದಾಗಿತ್ತು. ಹಾಗಾಗಿ ಶಾಲೆಯಲ್ಲಿಯೂ ಮಕ್ಕಳಿಗೆ ಶಿಕ್ಷೆಯನ್ನು ಕೊಡುವ ಮೊದಲು ಸಾಮ, ದಾನ ಮತ್ತು ಭೇದದ ಪ್ರಯೋಗಗಳಾಗಿವೆಯೇ ಎಂಬುದನ್ನು ಪೋಷಕರು ವಿಚಾರಿಸುವುದು ಅಗತ್ಯ. ಆದರೆ ಹೊಸ ಯುಗದಲ್ಲಿ ಶಿಕ್ಷಕರು ಹೊಡೆದಿದ್ದಾರೆಂದು ಮನೆಯಲ್ಲಿ ಮಗು ದೂರು ಹೇಳಿದ ಕೂಡಲೇ ಶಿಕ್ಷಕರ ಮೇಲೆ  ಪೋಷಕರು ಹರಿಹಾಯ್ದು ಘಟನೆಯನ್ನು ಸಂಕೀರ್ಣಗೊಳಿಸುವ ಪ್ರಕರಣಗಳು ಆಗಾಗ ವರದಿಯಾಗುತ್ತವೆ. ಪೋಷಕರು ಮುಂಜಾನೆ ಶಾಲೆಗೆ ಬಂದು  ಶಾಲೆಯ ಬಯಲಿನಲ್ಲಿ ನಿಂತು ಶಿಕ್ಷಕರನ್ನು ಹೊರಗೆ ಕರೆದು ಬೈದು ತನ್ನ ಮಗುವಿನ ಪರವಾಗಿ ಮಾತಾಡುತ್ತ ದರ್ಪ ತೋರಿಸುವ ದೃಶ್ಯವು ಇನ್ನುಳಿದ ಮಕ್ಕಳ ಮನಸ್ಸಿನ ಮೇಲೆ ಆಘಾತಕಾರಿ ಪರಿಣಾಮ ಬೀರುತ್ತದೆ. ಹಾಗಾಗಿ ಶಾಲೆಯಲ್ಲಿ ಶಿಕ್ಷೆ ನೀಡಿದ ಬಗ್ಗೆ ವಿಚಾರಣೆಯು  ನಾಲ್ಕು ಗೋಡೆಗಳ ಮಧ್ಯೆ ಆಗುವುದೇ ಒಳಿತು. ಆದರೆ ಮಕ್ಕಳ ಹಕ್ಕಿನ ವಿಚಾರದಲ್ಲಿ ಹೆತ್ತವರು ಭಾವನೆಗಳ ವಶವಾಗುವ ಸನ್ನಿವೇಶಗಳು ಭವಿಷ್ಯದಲ್ಲಿ ವಿವಿಧ ಋಣಾತ್ಮಕ ಬೆಳವಣಿಗೆಗಳಿಗೆ ಬೀಜಗಳಾಗುತ್ತವೆ. ಮುಖ್ಯವಾಗಿ ಶಾಲೆಗಳು ವಿದ್ಯಾರ್ಥಿಗಳ   ವರ್ತನೆಗಳಿಗೆ ಮಾರ್ಗದರ್ಶಕರಾಗುವ ಪಾತ್ರವನ್ನು ಬಿಟ್ಟು ಕೊಟ್ಟರೆ ಅದು ಶಾಲೆಗಳ ಶಿಕ್ಷಣ ಕಾರ್ಯವನ್ನು ಅಪೂರ್ಣಗೊಳಿಸಿದ ವಿದ್ಯಮಾನವಾಗುತ್ತದೆ. ಹಾಗಾಗಿಯೇ “ಬಾಲ್ಯದಲ್ಲಿ ಮಕ್ಕಳ ದುರ್ಬುದ್ಧಿಯನ್ನು ಮನೆಯಲ್ಲಿ ಅಥವಾ ಶಾಲೆಯಲ್ಲಿ ನಿಯಂತ್ರಿಸದಿದ್ದರೆ ಅಂತಹ ಮಕ್ಕಳು ದೊಡ್ಡವರಾಗಿ ಪೊಲೀಸ್ ಲಾಠಿಯ ಏಟನ್ನು ತಿನ್ನಬೇಕಾಗುತ್ತದೆ” ಎಂಬ ಹೊಸ ನಾಣ್ನುಡಿ ಹುಟ್ಟಿಕೊಂಡಿದೆ.
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

Published by
ಡಾ.ಚಂದ್ರಶೇಖರ ದಾಮ್ಲೆ

Recent Posts

ಸರ್ಕಾರಿ ಶಾಲೆ ಮಕ್ಕಳಿಗೆ ಚೆಸ್ ಪಾಠ | ದ.ಕ ದಲ್ಲಿ “ಚೆಸ್ ಇನ್ ಸ್ಕೂಲ್” ಆರಂಭ | ಗ್ರಾಮೀಣ ಮಕ್ಕಳಿಗೆ ಬೌದ್ಧಿಕ ಅವಕಾಶ

ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ಚೆಸ್ ಆಟವನ್ನು ಪರಿಚಯಿಸುವ “ಚೆಸ್…

4 hours ago

ಕೊಳೆ ರೋಗ ನಿಯಂತ್ರಣಕ್ಕೂ ತೆರಿಗೆ…? ಮೈಲುತುತ್ತಿಗೆ ಸುಂಕ – ಅಡಿಕೆ ರೈತನಿಗೆ ಮತ್ತೊಂದು ಹೊರೆ..!

ಅಡಿಕೆ ಬೆಳೆಗಾರ ಇಂದು ಕೇವಲ ಬೆಳೆಗಾರನಲ್ಲ. ಅವನು ಹವಾಮಾನ ಬದಲಾವಣೆ, ರೋಗದ ಸಮಸ್ಯೆ,…

11 hours ago

ದೇಶದಲ್ಲಿ ರಬಿ ಋತು ಬಿತ್ತನೆ ದಾಖಲೆ ಹೆಚ್ಚಳ | 660.48 ಲಕ್ಷ ಹೆಕ್ಟೇರ್‌ಗೆ ಏರಿದ ಒಟ್ಟು ವಿಸ್ತೀರ್ಣ

ಕೇಂದ್ರ ಕೃಷಿ ಸಚಿವಾಲಯವು ಜನವರಿ 23, 2026ರವರೆಗಿನ ರಬಿ ಬೆಳೆ(ಚಳಿಗಾಲದ ಬಿತ್ತನೆ) ಬಿತ್ತನೆಯ…

11 hours ago

ಯೂರಿಯಾ ಮಾರಾಟ 3.8% ಏರಿಕೆ | ದೇಶೀಯ ಉತ್ಪಾದನೆ ಕುಸಿತ, ಆಮದು 85% ಹೆಚ್ಚಳ

ದೇಶದಲ್ಲಿನ ಕೃಷಿ ಬೆಳೆಗಳಿಗೆ ಅಗತ್ಯವಾದ ಪೋಷಕಾಂಶ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ರಸಗೊಬ್ಬರ ವಲಯವು ದೇಶೀಯ…

11 hours ago

ಶುದ್ಧ ಹಿಮಾಲಯವೂ ಸುರಕ್ಷಿತವಲ್ಲ..! ಮರುಭೂಮಿ ಧೂಳಿನೊಂದಿಗೆ ಹರಡುವ ರೋಗಕಾರಕಗಳು

ಹಿಮಾಲಯವನ್ನು ಶುದ್ಧ ಮತ್ತು ಸುರಕ್ಷಿತ ವಾತಾವರಣದ ಪ್ರತೀಕವೆಂದುಕೊಂಡಿದ್ದರೂ, ಜಾಗತಿಕ ಹವಾಮಾನ ಬದಲಾವಣೆ ಹಾಗೂ…

11 hours ago

ಕೃಷಿ ಆಧಾರಿತ ಕೈಗಾರಿಕೆ ಉತ್ತೇಜನದಿಂದ ರೈತರ ಭವಿಷ್ಯ ರೂಪಾಂತರ

ರಾಜಸ್ಥಾನದಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳನ್ನು ಉತ್ತೇಜಿಸುವ ಮೂಲಕ ರೈತರ ಭವಿಷ್ಯವನ್ನು ಸಂಪೂರ್ಣವಾಗಿ ಬದಲಾಯಿಸಬಹುದು…

11 hours ago