ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಆಕ್ಸಿಯಮ್-4 ಮಿಷನ್ ನ ಡ್ರಾಗನ್ ನೌಕೆ ಯಶಸ್ವಿಯಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಜೋಡಣೆಯಾಗಿದೆ.ಮಧ್ಯಾಹ್ನ ಉಡಾವಣೆಯಾಗಿದ್ದ ಈ ನೌಕೆ, ಇಂದು ಸಂಜೆ 4 ಗಂಟೆ ಸುಮಾರಿಗೆ ಯಶಸ್ವಿಯಾಗಿ ಐಎಸ್ಎಸ್ ನಲ್ಲಿ ಜೋಡಣೆಗೊಂಡಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದೊಂದಿಗೆ ಡಾಕಿಂಗ್ ನಂತರ, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ, ನಾಸಾದ ಕಕ್ಷೆಯ ಪ್ರಯೋಗಾಲಯಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಎನ್ನುವ ಕೀರ್ತಿಗೆ ಭಾಜನರಾಗಿದ್ದಾರೆ. ಗ್ರೂಪ್ ಕ್ಯಾಪ್ಟನ್ ಶುಕ್ಲಾ , ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಎರಡನೇ ಭಾರತೀಯ ಎನಿಸಿದ್ದಾರೆ.
ಈ ಬಾಹ್ಯಾಕಾಶ ಯಾನಕ್ಕೂ ಧಾರವಾಡದ ಕೃಷಿ ವಿಶ್ವವಿದ್ಯಾಲಯಕ್ಕೂ ನಂಟಿರುವುದು ಬಹಿರಂಗಗೊಂಡಿದೆ. ಧಾರವಾಡದ ಹೆಸರು ಮತ್ತು ಮೆಂತ್ಯ ಕಾಳುಗಳನ್ನು ಬಾಹ್ಯಾಕಾಶಕ್ಕೆ ರವಾನಿಸಲಾಗಿದೆ. ಈ ಮೆಂತ್ಯಕಾಳುಗಳು ಬಾಹ್ಯಾಕಾಶದಲ್ಲಿ ಮೊಳಕೆಯೊಡೆದರೆ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಮೊಳಕೆಕಾಳುಗಳ ಮೇಲೆ ಸಂಶೋಧನೆ ನಡೆಯಲಿದೆ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಲ್ ಪಾಟೀಲ್ ಮಾಹಿತಿ ನೀಡಿದ್ದಾರೆ. ಹೆಪ್ಪುಗಟ್ಟಿದ ಈ ಕಾಳುಗಳ ಬೀಜಗಳ ಮುಂದಿನ 14 ದಿನಗಳಲ್ಲಿ ಧಾರವಾಡದ ಕೃಷಿ ವಿವಿಗೆ ಹಿಂತಿರುಗಿಸುವ ನಿರೀಕ್ಷೆಯಿದ್ದು, ಬಾಹ್ಯಾಕಾಶ ಆಧಾರಿತ ಪೌಷ್ಠಿಕಾಂಶ, ಸಂಶೋಧನೆ ನಡೆಯಲಿದೆ. ಈ ಸಂಶೋಧನೆಯನ್ನು ಐಐಟಿ-ಧಾರವಾಡದ ಅಸೋಸಿಯೇಟ್ ಪ್ರೊಫೆಸರ್ ಡಾ. ಸುಧೀರ್ ಸಿದ್ದಾಪುರರೆಡ್ಡಿ ಅವರ ಸಹಯೋಗದೊಂದಿಗೆ ನಡೆಯಲಿದೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದೊಂದಿಗೆ ಯಶಸ್ವಿಯಾಗಿ ಡಾಕಿಂಗ್ ಮಾಡಿದ್ದಕ್ಕಾಗಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಹಾಗೂ ಆಕ್ಸಿಯಮ್-4 ಮಿಷನ್ ತಂಡವನ್ನು ಅಭಿನಂದಿಸಿದ್ದಾರೆ. ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ಶುಭಾಂಶು ಶುಕ್ಲಾ ಐಎಸ್ಎಸ್ ನ ಪ್ರವೇಶ ದ್ವಾರದಲ್ಲಿ ನಿಂತಿದ್ದಾರೆ. ಇಡೀ ಜಗತ್ತು ಉತ್ಸಾಹ, ನಿರೀಕ್ಷೆಯಿಂದ ಎದುರು ನೋಡುತ್ತಿದ್ದು, ಗಗನಯಾತ್ರಿಗಳು 14 ದಿನಗಳ ವಾಸ್ತವ್ಯಕ್ಕಾಗಿ ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಭಾರತದ ನಿರ್ಣಾಯಕ ಪಾತ್ರವನ್ನು ಪ್ರಸ್ತಾಪಿಸಿರುವ ಸಚಿವರು, ಈ ಯಾತ್ರೆಯ ನಿರ್ಣಾಯಕ ಹಂತಗಳಲ್ಲಿ ಅದರಲ್ಲೂ ವಿಶೇಷವಾಗಿ ಜೀವ ವಿಜ್ಞಾನಿಗಳಿಗೆ ಸಂಬಂಧಿಸಿದ ಸಾಮರ್ಥ್ಯ ಅನ್ವೇಷಿಸುವ , ಸೂಕ್ಷ್ಮ ಗುರುತ್ವಾಕರ್ಷಣೆ ಮತ್ತು ಬಾಹ್ಯಾಕಾಶದಲ್ಲಿ ಮಾನವ ಶರೀರ ಶಾಸ್ತ್ರದ ಮೇಲೆ ವಿವಿಧ ಪರಿಣಾಮಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ವಹಿಸಲಾಗಿದೆ ಎಂದು ಹೇಳಿದರು. ಇದು ಜಗತ್ತಿನಾದ್ಯಂತ ಎಲ್ಲ ಭವಿಷ್ಯದ ಬಾಹ್ಯಾಕಾಶ ಯಾತ್ರೆಗಳ ಮೇಲೆ ನಿರ್ಣಾಯಕ ಪರಿಣಾಮ ಬೀರುತ್ತದೆ ಎಂದು ಅವರು ತಿಳಿಸಿದ್ದಾರೆ.