ಕಬ್ಬಿಗೆ ಪ್ರತಿ ಟನ್ಗೆ ₹5,500 ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ರೈತರು ‘ಜೈಲ್ ಭರೋ’ ಚಳುವಳಿ ಆರಂಭಿಸಿದ್ದಾರೆ. ಕಳೆದ ಒಂಬತ್ತು ದಿನಗಳಿಂದ ಕಬ್ಬಿನ ಬೆಲೆ ನಿಗದಿಗೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದ ರೈತರು, ಇದೀಗ ತಮ್ಮ ಪ್ರತಿಭಟನೆಯನ್ನು ಹಿಂಡಲಗಾ ಕೇಂದ್ರ ಕಾರಾಗೃಹದ ಎದುರಿಗೆ ಸ್ಥಳಾಂತರಿಸಿದ್ದಾರೆ.
ಹುಕ್ಕೇರಿ ತಾಲೂಕಿನ ಗುರ್ಲಾಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಒಂಬತ್ತು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಬೆಳಗಾವಿ ಭಾಗದ ರೈತರು, ಇಂದು ಬೈಕ್ಗಳ ಮೂಲಕ ಹಿಂಡಲಗಾ ಕಾರಾಗೃಹದ ಎದುರಿಗೆ ಆಗಮಿಸಿ ಹೋರಾಟ ಮುಂದುವರಿಸಿದ್ದಾರೆ.
ಕಬ್ಬಿನ ಬೆಲೆ ನಿಗದಿಯಾಗುವವರೆಗೂ ಪ್ರತಿಭಟನಾ ಸ್ಥಳದಿಂದ ಕದಲುವುದಿಲ್ಲ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ವಿವಿಧ ಜಿಲ್ಲೆಗಳ ರೈತರು ಬೆಳಗಾವಿಯತ್ತ ಪಾದಯಾತ್ರೆ ಆರಂಭಿಸಿದ್ದು, ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ಸಕ್ಕರೆಯ ಬೆಲೆಯಲ್ಲಿ ಪ್ರತಿ ಕೆ.ಜಿ.ಗೆ ₹56ರಷ್ಟು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಕಬ್ಬು ಬೆಳೆಗಾರರಿಗೂ ನ್ಯಾಯಯುತ ಬೆಲೆ ದೊರೆಯಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ. ಕಬ್ಬಿನ ಉತ್ಪಾದನಾ ವೆಚ್ಚ, ಕಾರ್ಮಿಕರ ಕೂಲಿ ಹಾಗೂ ಕೃಷಿ ನಿರ್ವಹಣಾ ವೆಚ್ಚ ಹೆಚ್ಚುತ್ತಿರುವ ಸಂದರ್ಭದಲ್ಲಿ ರೈತರಿಗೆ ಸೂಕ್ತ ಬೆಲೆ ನೀಡಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.
ಕಬ್ಬಿಗೆ ಪ್ರತಿ ಟನ್ಗೆ ₹5,500 ಬೆಲೆ ನಿಗದಿಪಡಿಸುವವರೆಗೂ ಹೋರಾಟ ಮುಂದುವರಿಸುವುದಾಗಿ ರೈತರು ಸ್ಪಷ್ಟಪಡಿಸಿದ್ದಾರೆ. ಸರ್ಕಾರಗಳು ಕೂಡಲೇ ಮಧ್ಯಪ್ರವೇಶಿಸಿ ಕಬ್ಬು ಬೆಳೆಗಾರರಿಗೆ ನ್ಯಾಯ ಒದಗಿಸಬೇಕು ಎಂಬುದು ಪ್ರತಿಭಟನಾಕಾರರ ಒತ್ತಾಯವಾಗಿದೆ.
Sugarcane farmers in Belagavi have launched a Jail Bharo protest demanding a price of ₹5,500 per tonne for sugarcane. After nine days of agitation on the national highway at Gurlapur in Hukkeri taluk, farmers shifted their protest to the HIndalaga Central Prison area. Farmers from various districts are also marching towards Belagavi to join the agitation. They argue that the increase in sugar prices should translate into fair returns for sugarcane growers and have vowed to continue their protest until their demand is addressed.


