Advertisement
ಅನುಕ್ರಮ

ಅಂಕದ “ಸುರಕ್ಷತೆ”ಯಾ? ಬದುಕಿನ “ಸುರಕ್ಷತೆ”ಯಾ? – ಗ್ರಾಮೀಣ ಶಿಕ್ಷಣದ ಮಣ್ಣಿನ ಸತ್ವ ಕಳೆದುಕೊಳ್ಳದಿರೋಣ

Share

ಅಲ್ಲಾ ಮಾರಾಯ್ರೆ… ಇಂದಿಗೂ ಹಳ್ಳಿಯಲ್ಲಿ ಹೊಲಕ್ಕೆ ಹೋಗೋದು ಟ್ರಾಕ್ಟರ್‌ನಲ್ಲಿ… ಕೆಲವೊಮ್ಮೆ ಟಿಲ್ಲರ್‌ನಲ್ಲಿ… ಕೆಲವು ಕಡೆ ಇನ್ನೂ ಎತ್ತಿನ ಗಾಡಿಯಲ್ಲಿ…!. ಅದನ್ನು ಕೆಲವರು “ಅಪಾಯ” ಅಂತ ನೋಡ್ತಾರೆ. ಹಾಗಿದ್ದರೆ ಅವರು ಕೆಲಸ ಮಾಡುವುದು ಹೇಗೆ..?

Advertisement

ಆದರೆ ನಿಜಕ್ಕೂ ಅದು ಅಪಾಯವಲ್ಲ. ಅದು ಮಣ್ಣಿನ ಪಾಠ. ಅದು ಕೇವಲ ಕೃಷಿಯ ಪರಿಚಯವಲ್ಲ, ಬದುಕಿನ ಮೊದಲ ಶಿಕ್ಷಣ.

ಇಂದು ನಮ್ಮ ಶಿಕ್ಷಣ ವ್ಯವಸ್ಥೆ ಯಾವ ದಿಕ್ಕಿಗೆ ಸಾಗುತ್ತಿದೆ ಎಂದು ಒಮ್ಮೆ ನೋಡಿ.   ಅತ್ಯಂತ ಕನಿಷ್ಟ ಅಂಕ ಬಂದರೂ ತೇರ್ಗಡೆ. 13 ಅಂಕ ಪಡೆದರೆ ಎಸ್‌ಎಸ್‌ಎಲ್‌ಸಿ ಪಾಸ್‌…!.  ಅದಕ್ಕೂ ಮೊದಲು ಹೇಗಾದರೂ ತರಗತಿಗಳು ದಾಟುತ್ತಲೇ ಹೋಗುತ್ತವೆ. ಪಾಸ್‌ ಮಾಡಿಸಲೇಬೇಕು. ಅಂಕ ಕೊಡಲೇಬೇಕು.

ಆದರೆ ಒಂದು ಪ್ರಶ್ನೆ, ಅಂಕದಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವೇ?.  ಶಿಕ್ಷಣ ಪಡೆದ ಎಲ್ಲರಿಗೂ ಸರ್ಕಾರ ಉದ್ಯೋಗ ಕೊಡಲು ಸಾಧ್ಯವಿಲ್ಲ. ಹಾಗಿದ್ದರೆ ಶಾಲೆ ಏನು ಮಾಡಬೇಕು? ಮಕ್ಕಳಿಗೆ ಕೇವಲ ಪಠ್ಯಪುಸ್ತಕದ ಪಾಠವೇ? ಅಥವಾ ಬದುಕು ಎದುರಿಸುವ ಧೈರ್ಯವೂ?

ಇತ್ತೀಚೆಗೆ ಒಂದು ಸರ್ಕಾರಿ ಶಾಲೆಯ ಶಿಕ್ಷಕರು ಮಕ್ಕಳನ್ನು ದೂರದ ಪ್ರವಾಸಕ್ಕೆ ಅಲ್ಲ… ಶಾಲೆಯ ಹತ್ತಿರದ ಒಂದು ಫಾರ್ಮ್‌ಗೆ ಕರೆದುಕೊಂಡು ಹೋದರು.
ಅದು “ಫಾರ್ಮ್ ವಿಸಿಟ್”.  ಅಲ್ಲಿ ಇದ್ದದ್ದು ರೈತರ ಮಕ್ಕಳು. ಸರ್ಕಾರಿ ಶಾಲೆಯ ಮಕ್ಕಳು. ಅವರ ಕಣ್ಣುಗಳಲ್ಲಿ ಭಯ ಇರಲಿಲ್ಲ. ಖುಷಿ ಇತ್ತು, ಕುತೂಹಲ ಇತ್ತು, ಮಣ್ಣಿನ ವಾಸನೆ ಇತ್ತು. ಅವರ ಹೃದಯದಲ್ಲಿ ಅಂಕದ ಒತ್ತಡ ಇರಲಿಲ್ಲ, ಅನುಭವದ ಉಲ್ಲಾಸ ಇತ್ತು.  ಮಣ್ಣು ಕೈಗೆ ತಗುಲಿದಾಗ ಅವರು ಕಲಿಯುವುದು, “ಕೃಷಿ ಎಂದರೇನು?” ಎಂಬ ಪ್ರಶ್ನೆಗೆ ಜೀವಂತ ಉತ್ತರ. ಆ ಕ್ಷಣವೇ ನಿಜವಾದ ಶಿಕ್ಷಣ ನಡೆಯುತ್ತಿತ್ತು. ಆದರೆ ವ್ಯವಸ್ಥೆಗೆ ಅದು ಕಾಣಿಸಲಿಲ್ಲ.
ವ್ಯವಸ್ಥೆಗೆ ಕಂಡದ್ದು ನಿಯಮ.

ಹೀಗಾಗಿ, ಆ ದಿನದ ಅಂತ್ಯವಾದ್ದು, ಶಿಕ್ಷಕರ ಅಮಾನತಿನೊಂದಿಗೆ.  ಒಂದು ವಿಡಿಯೋ ಸಾಕಾಯಿತು.  ಒಳಗೊಳಗೇ ಕುದಿಯುತ್ತಿದ್ದವರಿಗೆ ಇದು ಅವಕಾಶವಾಯಿತು. ಶಿಕ್ಷಕರಿಗೆ ಶಿಕ್ಷೆ…! ಮಕ್ಕಳ ಖುಷಿ ಅಪರಾಧವಾಯಿತೇ?

ನಾವು ಕೇಳೋಣ , ಬಸ್‌ ಅಪಘಾತವಾಗಿದೆಯೆಂದು ಬಸ್ಸು ಓಡಾಟವೇ ನಿಲ್ಲಿಸುತ್ತೇವಾ? , ವಿಮಾನ ದುರಂತವಾಯಿತೆಂದು ವಿಮಾನ ಯಾನವೇ ನಿಲ್ಲಿಸುತ್ತೇವಾ?, ಹಾಗಿದ್ದರೆ ಮಕ್ಕಳಿಗೆ ಪ್ರಕೃತಿ ಪಾಠ ಕಲಿಸಲು ಮಾಡಿದ ಪ್ರಯತ್ನ ಮಾತ್ರ ದೊಡ್ಡ ಅಪರಾಧವೇ?. ನಿಯಮ ಇರಲಿ. ಸುರಕ್ಷತೆ ಇರಲಿ.
ಆದರೆ ಅನುಭವವನ್ನು ಕೊಲ್ಲಬಾರದು.

“ನಿಮ್ಮ ಮಕ್ಕಳನ್ನಾದರೆ ಹೀಗೆ ಕಳುಹಿಸುತ್ತೀರಾ?” ಎಂದು ಕೇಳುತ್ತಾರೆ. ಹೌದು, ಜವಾಬ್ದಾರಿ ಇರುವ ಶಿಕ್ಷಕರು ಜೊತೆಯಲ್ಲಿದ್ದರೆ, ಸುರಕ್ಷತೆ ನೋಡಿಕೊಂಡಿದ್ದರೆ… ಏಕೆ ಇಲ್ಲ? ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಇಂದು “ವೈಟ್ ಕಾಲರ್ ಜಾಬ್ ಸಿಕ್ಕಿಲ್ಲ ಅಂದ್ರೆ ನೀನು ಸೋತವನು” ಅಂತ, ನಾವು ಮಕ್ಕಳಿಗೆ ಏನು ಕಲಿಸುತ್ತಿದ್ದೇವೆ, ಸಮಾಜ ಹೇಳಿಕೊಡುತ್ತದೆ. ಮಣ್ಣಿನ ಕೆಲಸ ಎಂದರೆ ಶಿಕ್ಷೆ ಎಂದು ಭಾವಿಸುತ್ತಿದ್ದಾರೆ. ಇದೇ ಮಣ್ಣು ಸೋಲುವ ಕ್ಷಣ. ಇದೇ ಕೃಷಿ ಸೋಲುವ ಕ್ಷಣ. ಇದೇ ದೇಶದ ಮೂಲ ಸೊರಗುವ ಕ್ಷಣ. ಮಣ್ಣಿನ ಕೆಲಸ ಶಿಕ್ಷೆ ಅಲ್ಲ, ಅದು ಸೃಷ್ಟಿಯ ಕೆಲಸ, ಅದು ಆತ್ಮಗೌರವ ಕೆಲಸ ಎಂದು ಹೇಳಿಕೊಡುವುದು ಹೇಗೆ..?

ನಾಳೆ ನಮ್ಮ ಮಕ್ಕಳು, “ಹಾಲು ಹೆಣ್ಣು ಹಸು ಕೊಡುತ್ತದಾ?”, “ಕುಂಬಳಕಾಯಿ ಮರದಲ್ಲಿ ಆಗುತ್ತದಾ?” ಎಂದು ಕೇಳಬಾರದು ಅಂದರೆ, ಇಂತಹ ಮಣ್ಣಿನ ಅನುಭವಗಳು ಬೇಕು. ಅತ್ಯಂತ ಕಠಿಣ ಸಂದರ್ಭದಲ್ಲಿ, ಅನಿವಾರ್ಯ ಸಂದರ್ಭದಲ್ಲಿ ಪಿಕ್‌ಅಪ್‌ ಆದರೂ ಸರಿ, ಲಾರಿ ಆದರೂ ಸರಿ ಓಡಾಟಕ್ಕೆ ಮಾನಸಿಕವಾಗಿ ಸಿದ್ಧವಾಗಬೇಕು. ಅಂತಹ ಅನುಭವವೂ ನನಗೆ ಆಗಿತ್ತು, ಆಗಿದೆ ಎಂದು ಮಗುವಿನ ಮನಸ್ಸಿನೊಳಗೆ ಭದ್ರವಾಗಬೇಕಲ್ಲಾ..?

ನೀವು ಕಾನೂನು ಮಾತನಾಡುತ್ತೀರಿ. ಸುರಕ್ಷತೆ ಮುಖ್ಯವೇ ಸರಿ. ಆದರೆ, ಇನ್ನೂ ಸರ್ಕಾರಿ ಬಸ್ಸಿನ ಕೆಳಗಿನ ಮೆಟ್ಟಿಲಿನಲ್ಲಿ ನೇತಾಡಿಕೊಂಡು ಶಾಲೆಗೆ ಹೋಗುವ ಮಕ್ಕಳು ಯಾಕೆ ಇನ್ನೂ ಕಾಣುತ್ತಾರೆ..?  ಮಳೆಗಾಲದಲ್ಲಿ ಶಾಲೆ ತಲುಪಲು ಪರದಾಡುವ ಹಳ್ಳಿಗಳು ಯಾಕೆ ಕಾಣುತ್ತವೆ?, ಕೆಲವು ಶಾಲೆಗಳಲ್ಲಿ ಶಿಕ್ಷಕರೇ ಇಲ್ಲದ ಪರಿಸ್ಥಿತಿ ಇನ್ನೂ ಇದೆ ಯಾಕೆ? ಅವು ಅಪಾಯವಲ್ಲವೇ? ಯಾಕೆ ಮಾತನಾಡುತ್ತಿಲ್ಲ..?

ಒಬ್ಬ ಉಪನ್ಯಾಸಕರು ಮಕ್ಕಳಿಗೆ ರಜೆಯಲ್ಲಿ ಪ್ರಾಜೆಕ್ಟ್ ಕೊಟ್ಟಿದ್ದರು. ಮನೆಯಲ್ಲೇ ಕೃಷಿ ಕೆಲಸ ಅಥವಾ ಬೇರೆ ತೋಟ, ಪ್ಲಂಬಿಂಗ್‌, ವಯರಿಂಗ್‌, ಕೂಲಿ,  ಯಾವುದಾದರೂ ಕೆಲಸ ಮಾಡಿ.  ಒಂದು ಬ್ಯಾಂಕ್ ಖಾತೆ ತೆರೆಯಿರಿ, ದುಡಿದ ಹಣವನ್ನು ಜಮಾ ಮಾಡಿ, ವರದಿ ಬರೆಯಿರಿ, ಲೆಕ್ಕ ಬರೆಯಿರಿ ಎಂದಿದ್ದರು. ರಜೆ ಮುಗಿದು ಬಂದಾಗ, ಆ ಪ್ರಾಜೆಕ್ಟ್ ಅವರ ಬದುಕನ್ನೇ ಬದಲಿಸಿತು. ಅವರು ಕಲಿತದ್ದು,  ಉದ್ಯೋಗದಲ್ಲಿ ಕೀಳರಿಮೆ ಇಲ್ಲ. ಬದುಕು ಕಟ್ಟಿಕೊಳ್ಳಲು ಕೌಶಲ್ಯ ಬೇಕು.  ಧೈರ್ಯ ಬೇಕು. ಇದು ಬದುಕಿನ ಶಿಕ್ಷಣ. ಇಲ್ಲಿ ಉಪನ್ಯಾಸಕರು ಕಲಿಸಿದದ್ದು ಹಣದ ಮೌಲ್ಯವಲ್ಲ, ಸ್ವಾವಲಂಬನೆಯ ಮೌಲ್ಯ.

ಆದರೆ, ನಾವು ಇಂತಹ ಶಿಕ್ಷಣವನ್ನು ಏನು ಹೇಳುತ್ತೇವೆ? ಇದರ ಹಿಂದೆ ಉಪನ್ಯಾಸಕರ ಹುನ್ನಾರ ಇದೆ, ಕೂಲಿ ಮಾಡಲು ಕಲಿಸುವ ಶಿಕ್ಷಣ ಅಂತಲ್ವೇ..?

ಇಂದು ಅನೇಕ ಮಕ್ಕಳು ಅಂಕ ಶಿಕ್ಷಣದಲ್ಲಿ ಫೇಲ್ ಆದಾಗ ಆತ್ಮಹತ್ಯೆಗೆ ಯೋಚಿಸುತ್ತಾರೆ. ಅವರಿಗೆ ಯಾರು ಹೇಳುತ್ತಾರೆ, “ನೀನು ಅಂಕದಲ್ಲಿ ಸೋತಿರಬಹುದು, ಬದುಕಿನಲ್ಲಿ ಅಲ್ಲ” ಎಂದು?. ಅದು ಶಿಕ್ಷಕರಿಂದ ಮಾತ್ರ ಸಾಧ್ಯ. ಆ ಶಿಕ್ಷಕರ ಕೈ ಮೊಟಕುಗೊಳಿಸಿದರೆ, ನಾಳೆ ಗ್ರಾಮೀಣ ಮಕ್ಕಳಿಗೆ ದಾರಿ ತೋರಿಸುವವರು ಯಾರು?

ನಾಳೆ ಒಂದು ಮಗು ಅಂಕದಲ್ಲಿ ಫೇಲ್ ಆಯಿತು ಅಂದರೆ, ಅದು ಆತ್ಮಹತ್ಯೆಗೆ ಯೋಚಿಸಬಾರದು. ಅದು ಮಣ್ಣಿನತ್ತ ನೋಡುವ ಧೈರ್ಯ ಹೊಂದಿರಬೇಕು.
“ನಾನು ಬದುಕು ಕಟ್ಟಿಕೊಳ್ಳಬಹುದು” ಎಂಬ ನಂಬಿಕೆ ಇರಬೇಕು. ಅದು ಕೊಡುವುದು ಅಂಕದ ಶಿಕ್ಷಣದಿಂದಲಷ್ಟೇ ಅಲ್ಲ, ಅದು ಕೊಡುವುದು ಬದುಕಿನ ಶಿಕ್ಷಣ.

ಶಿಕ್ಷಕರೇ…ನಿಮ್ಮ ಉದ್ದೇಶ ತಪ್ಪಲ್ಲ. ಮಕ್ಕಳಿಗೆ ಮಣ್ಣಿನ ಸ್ಪರ್ಶ ಕೊಡಬೇಕು ಅನ್ನುವ ನಿಮ್ಮ ಕನಸು ತಪ್ಪಲ್ಲ.  ಕಾನೂನು ನಿಮ್ಮನ್ನು ತಿವಿದಿರಬಹುದು.
ಆದರೆ ಇತಿಹಾಸ ನಿಮಗೆ ನ್ಯಾಯ ಕೊಡುತ್ತದೆ. ಯಾಕೆಂದರೆ, ಮಕ್ಕಳಿಗೆ ಮಣ್ಣು ಪರಿಚಯವಾದರೆ ಮಾತ್ರ  ನಾಡಿಗೆ ಭವಿಷ್ಯ ಇರುತ್ತದೆ. ಮಕ್ಕಳು ಅನುಭವದ ಪಾಠ ಕಲಿತರೆ ಮಾತ್ರವೇ ಸಮಾಜವೂ ಸುಸ್ಥಿರವಾಗಿರುತ್ತದೆ. ಸಾಮರಸ್ಯ ಇರುತ್ತದೆ.  ಮಣ್ಣಿನ ಪಾಠ ಕಳೆದುಹೋದರೆ, ಬದುಕಿನ ಪಾಠ ಕಳೆದುಹೋಗುತ್ತದೆ. ಅಂಕದ ಶಿಕ್ಷಣವೇ ಬದುಕನ್ನು ಉಳಿಸುವುದಿಲ್ಲ, ಬದುಕಿನ ಶಿಕ್ಷಣ ಮಾತ್ರ ದೇಶವನ್ನು ಉಳಿಸುತ್ತದೆ.

ಈ ಕಥೆಯಲ್ಲಿ ನಿಜವಾದ ತಿರುವು ಎಲ್ಲಿದೆ?  ಶಿಕ್ಷಕರ ಅಮಾನತು ಆದ ದಿನದಲ್ಲಾ? ಮಕ್ಕಳು ಫಾರ್ಮ್‌ಗೆ ಹೋದ ದಿನದಲ್ಲಾ? ಅಥವಾ ವಿಡಿಯೋ ವೈರಲ್ ಆದ ಕ್ಷಣದಲ್ಲಾ?  ಅಲ್ಲ…ಈಗ ನಿಜವಾದ ತಿರುವು ನಮ್ಮ ಮನಸ್ಸಿನಲ್ಲಿ ಆಗಬೇಕು. ಇಲ್ಲಿಂದಲೇ ತಿರುವು ಆರಂಭವಾಗಬೇಕು.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಪರಿಸರ ಸ್ನೇಹಿ ಗೌರಿ-ಗಣೇಶ ಹಬ್ಬ : ಮಂಗಳೂರು ಮಹಾನಗರಪಾಲಿಕೆ ಸೂಚನೆ

2026ರ ಗೌರಿ-ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವಂತೆ ಮಂಗಳೂರು ಮಹಾನಗರಪಾಲಿಕೆ ಸೂಚಿಸಿದ್ದು, POP…

3 hours ago

ಹವಾಮಾನ ವರದಿ | 09-09-2026 | ಕರ್ನಾಟಕದಲ್ಲಿ ಮಳೆಯ ಚಿತ್ರಣ ಬದಲಾಗುತ್ತಿದೆ – ಸೆ.11ರಿಂದ ಕರಾವಳಿಯಲ್ಲಿ ಬದಲಾವಣೆ

ಕರ್ನಾಟಕದಲ್ಲಿ ಮಳೆಯ ಸಾಧ್ಯತೆ ಒಟ್ಟಾರೆ ಇಳಿಮುಖವಾಗುತ್ತಿದ್ದು, ಕರಾವಳಿಯಲ್ಲಿ ಸೆ.11ರಿಂದ ಮಳೆ ಕಡಿಮೆಯಾಗುವ ಲಕ್ಷಣಗಳಿವೆ.…

11 hours ago

ಕ್ಯಾಂಪ್ಕೋ ಅಭಿವೃದ್ಧಿಯ ಹಾದಿಯಲ್ಲಿ: ₹2,900 ಕೋಟಿ ಅಡಿಕೆ ವ್ಯವಹಾರದ ನಡುವೆ ಮುಂದಿರುವ ಸವಾಲುಗಳೇನು?

2025-26ರಲ್ಲಿ ಕ್ಯಾಂಪ್ಕೋದ ಅಡಿಕೆ ಖರೀದಿ ಪ್ರಮಾಣ ಹಿಂದಿನ ವರ್ಷಕ್ಕಿಂತ ಕಡಿಮೆಯಾಗಿದ್ದರೂ, ಬೆಲೆ ಏರಿಕೆಯಿಂದ…

18 hours ago

ಅಡಿಕೆಯಷ್ಟೇ ಅಲ್ಲ ಅದೇ ಮರಕ್ಕೆ ವೆನಿಲ್ಲಾ ಬಳ್ಳಿ | ಅಸ್ಸಾಂನಲ್ಲಿ ಅಡಿಕೆಯ ಜೊತೆಗೆ ಇನ್ನೊಂದು ಬೆಳೆ..

ಅಸ್ಸಾಂನ ಗುಹಾಟಿ ಸಮೀಪದ 10 ಅರಣ್ಯ ಅಂಚಿನ ಗ್ರಾಮಗಳಲ್ಲಿ ಅಡಿಕೆ, ತೆಂಗು ಮತ್ತು…

1 day ago

ದೇಶಾದ್ಯಂತ ಮುಂಗಾರು ಬಿತ್ತನೆ 1,086 ಲಕ್ಷ ಹೆಕ್ಟೇರ್ ದಾಟಿದೆ – ಕರ್ನಾಟಕದಲ್ಲಿ ಭತ್ತ, ದ್ವಿದಳ ಧಾನ್ಯ ಕೃಷಿ ಕುಸಿತ

ದೇಶದ ಪ್ರಸಕ್ತ ಮುಂಗಾರು ಬೆಳೆಗಳ ಬಿತ್ತನೆ ಪ್ರದೇಶ 1,086 ಲಕ್ಷ ಹೆಕ್ಟೇರ್ ದಾಟಿದ್ದರೂ…

1 day ago

ಜಾನುವಾರುಗಳ ಮೇವಿನ ಕೊರತೆಗೆ ಅಜೋಲಾ ಪರಿಹಾರ – ರಾಜ್ಯದಲ್ಲಿ 12 ಸಾವಿರ ಘಟಕಗಳ ಸ್ಥಾಪನೆಗೆ ಚಾಲನೆ

ರಾಜ್ಯದಲ್ಲಿ ಜಾನುವಾರುಗಳಿಗೆ ಪೌಷ್ಟಿಕ ಪೂರಕ ಮೇವು ಒದಗಿಸಲು ₹3.78 ಕೋಟಿ ವೆಚ್ಚದಲ್ಲಿ 12…

1 day ago