ಸುಳ್ಯ: ಸುಳ್ಯ ತಾಲೂಕಿನಾದ್ಯಂತ ಶುಕ್ರವಾರವೂ ಯಾವುದೇ ಸಮಸ್ಯೆ ಆಗಲಿಲ್ಲ. ಜನಜೀವನಕ್ಕೆ ತೊಂದರೆಯಾಗಲಿಲ್ಲ. ಜನರಿಗೆ ಅಗತ್ಯ ಸಾಮಾಗ್ರಿಗಳು ಮಧ್ಯಾಹ್ನ 12 ಗಂಟೆಯವರೆಗೆ ಲಭ್ಯವಿತ್ತು. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸ್ಥಳೀಯಾಡಳಿತ ಹಾಗೂ ಸ್ವಯಂಸೇವಾ ಕಾರ್ಯಕರ್ತರು ವ್ಯವಸ್ಥೆ ಮಾಡಿದ್ದರು
ಗ್ರಾಮೀಣ ಭಾಗದಲ್ಲಿ ಕೂಡಾ ದಿನಸಿ ಅಂಗಡಿಗಳ ಮುಂದೆ, ಹಾಲಿನ ಡೈರಿಗಳ ಮುಂದೆ, ತರಕಾರಿ ಅಂಗಡಿಗಳ ಮುಂದೆ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಸಾಕಷ್ಟು ಅಂತರದಲ್ಲಿ ಮಾಡಿರುವ ಮಾರ್ಕ್ ನಲ್ಲಿ ನಿಂತು ಕ್ಯೂ ಮೂಲಕ ಸಾಗಿ ದಿನಸಿ ಸಾಮಾಗ್ರಿ ಖರೀದಿ ಮಾಡುವ ವ್ಯವಸ್ಥೆ ಮಾಡಲಾಗಿತ್ತು. ಗ್ಯಾಸ್ ಸಹಿತ ಅಗತ್ಯ ಸೇವೆಗಳು ಪ್ರತೀ ದಿನ 12 ಗಂಟೆಯವರೆಗೆ ತೆರೆದಿರುತ್ತದೆ. ಸರಿಯಾಗಿ 12 ಗಂಟೆಗೆ ಎಲ್ಲಾ ಅಂಗಡಿಗಳು ಬಂದ್ ಆಗುತ್ತವೆ. ಸುಳ್ಯದಲ್ಲಿ ಸಮಯ ಮುಗಿಯುತ್ತಿದ್ದಂತೆಯೇ ಪೊಲೀಸರು ಸೈರನ್ ಮೊಳಗಿಸುತ್ತಾರೆ. ಸಾರ್ವಜನಿಕರು ಮನೆಯಿಂದ ಒಬ್ಬರು ಮಾತ್ರವೇ ವಾರಕ್ಕೆ ಅಗತ್ಯಕ್ಕೆ ಬೇಕಾದಷ್ಟು ದಿನಸಿ ಸಾಮಾಗ್ರಿ ಕೊಂಡೊಯ್ಯ ಬಹುದುದಾಗಿದೆ. ಆದರೆ ಅದೇ ನೆಪದಲ್ಲಿ ಪ್ರತೀ ದಿನವೂ ಪೇಟೆಗೆ ಬಂದರೆ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಹೀಗಾಗಿ ಸಾರ್ವಜನಿಕರು ಇದನ್ನು ಗಮನಿಸಿಕೊಳ್ಳಬೇಕಾಗಿದೆ.
ಎಲ್ಲೆಲ್ಲೆ ಹೇಗಿತ್ತು ?
ಗ್ರಾಮೀಣ ಭಾಗದವರೆಗೂ ದಿನಸಿಯಲ್ಲಿ ಕೊರತೆ ಕಂಡುಬರಲಿಲ್ಲ. ಪೂರೈಕೆಯಿತ್ತು. ಕೆಲವು ಕಡೆ ದಿನಸಿ ಸರಬರಾಜಿಗೆ ವ್ಯವಸ್ಥೆ ಮಾಡದ ಕಾರಣ ದಿನಸಿ ವಸ್ತುಗಳ ಕೊರತೆ ಇತ್ತು. ದಿನಸಿ ಸಾಗಾಟಕ್ಕೆ ಅನುಮತಿ ಇದೆ. ಇದರ ವ್ಯವಸ್ಥೆಯಲ್ಲಿ ಸ್ಥಳೀಯಾಡಳಿತದ ಜೊತೆ ಮಾತುಕತೆ ನಡೆಸಿ ಮಾಡಿಕೊಳ್ಳಬಹುದಾಗಿದೆ. ಸುಳ್ಯದಲ್ಲಿ ಜನ ಸಂದಣಿ ತಪ್ಪಿಸಲು 3 ವಿಭಾಗ ಮಾಡಿ ಬೆಳಗ್ಗೆ 6 ರಿಂದ 8 , 8 ರಿಂದ 10 ಹಾಗೂ 10 -12 ಗಂಟೆಯವರೆಗೆ ದಿನಸಿ ಖರೀದಿಗೆ ಪೊಲೀಸರು ಅವಕಾಶ ಮಾಡಕೊಟ್ಟಿದ್ದಾರೆ.
ಬಳ್ಪದ ಬೀದಿಗುಡ್ಡೆಯಲ್ಲಿ ಮಿತ್ರ ಬಳಗದ ಯುವಕರ ತಂಡ ಸಾರ್ವಜನಿಕರಿಗೆ ಅಗತ್ಯವಿದ್ದರೆ ದಿನಸಿ ಸಾಮಾಗ್ರಿಗಳ ಪೂರೈಕೆಗೆ ವ್ಯವಸ್ಥೆ ಮಾಡುತ್ತಿದೆ. ಬಾಳಿಲದಲ್ಲಿ ಕಾರ್ಯಪಡೆ ಸದಸ್ಯರು ಅಂಗಡಿಗಳ ಮುಂದೆ ಜನರು ಅಂತರ ಕಾಪಾಡಿಕೊಳ್ಳಲು ಬೇಕಾದ ಮಾರ್ಕ್ ವ್ಯವಸ್ಥೆ ಮಾಡಿದ್ದಾರೆ. ಪಂಬೆತ್ತಾಡಿಯಲ್ಲಿ ಸಹಕಾರಿ ಸಂಘದ ನಿರ್ದೇಶಕರ ನೇತೃತ್ವದಲ್ಲಿ ತಮ್ಮ ಸ್ವಂತ ವಾಹನದಲ್ಲಿ ಜನರಿಗೆ ಅಗತ್ಯ ಸಾಮಾಗ್ರಿಗಳ ಸಾಗಾಟಕ್ಕೆ ಸಹಕರಿಸಿದರು.
ಸಂಪಾಜೆಯಲ್ಲಿ ಬಿಗಿಬಂದೋಬಸ್ತ್ : ಜಿಲ್ಲಾ ಗಡಿಭಾಗವಾದ ಸಂಪಾಜೆಯಲ್ಲಿ ತಪಾಸಣೆ ಬಿಗುಗೊಳಿಸಲಾಗಿದೆ. ಯಾವುದೇ ಕಾರಣಕ್ಕೂ ಜಿಲ್ಲೆಯ ನಡುವೆ ಅನಗತ್ಯ ಓಡಾಟ ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ.
ಲಾಕ್ ಡೌನ್ ನಡುವೆ ಚಾರಣ : ರಾಜ್ಯ ಮಾತ್ರವಲ್ಲ ದೇಶವೇ ಕೊರೋನಾ ವೈರಸ್ ಹರಡುವುದು ತಡೆಯಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿರುವಾಗ ಪೆರಾಜೆಯ ಕೋಳಿಕ್ಕಮಲೆಗೆ ಚಾರಣಕ್ಕೆ ಆಗಮಿಸಿದವರನ್ನು ಅರಣ್ಯ ಇಲಾಖೆಯ ಸಿಬಂದಿಗಳು ವಶಕ್ಕೆ ಪಡೆದು ಮನೆಗೆ ಕಳುಹಿಸಿದ್ದಾರೆ.