ಸುಳ್ಯ: ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮ ಪಂಚಾಯತ್ ವತಿಯಿಂದ ಹಳ್ಳಿ ಹಳ್ಳಿಯಲ್ಲಿ ಕೊರೊನಾ ವೈರಸ್ ಹರಡುವುದು ತಡೆಯಲು ಜಾಗೃತಿ ಮೂಡಿಸಲಾಗುತ್ತಿದೆ. ಶುಕ್ರವಾರ ಗ್ರಾಪಂ ಅಧ್ಯಕ್ಷ ಅಚ್ಚುತ ಗುತ್ತಿಗಾರು ಹಾಗೂ ಪಿಡಿಒ ಶ್ಯಾಮ ಪ್ರಸಾದ್ ಹಾಗೂ ಗ್ರಾಪಂ ಸದಸ್ಯ ರಾಕೇಶ್ ಮೆಟ್ಟಿನಡ್ಕ ಅವರ ನೇತೃತ್ವದಲ್ಲಿ ಎರಡನೇ ಬಾರಿ ಮೈಕ್ ಮೂಲಕ ಜಾಗೃತಿ ಸಂದೇಶ ನೀಡಲಾಯಿತು. ಸ್ವತ: ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒ ಅವರೇ ಅನೌನ್ಸ್ ಮಾಡುವ ಮೂಲಕ ಗ್ರಾಮದ ಜನರಿಗೆ ಜಾಗೃತಿ ಮೂಡಿಸಿದರು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೊರೊನಾ ವೈರಸ್ ಹರಡುವುದು ಮಾತ್ರವಲ್ಲ ಗ್ರಾಮದಲ್ಲಿ ಒಂದೇ ಒಂದು ಕೊರೊನಾ ವೈರಸ್ ಪ್ರಕರಣ ಕಂಡುಬರಬಾರದು ಎಂಬ ನೆಲೆಯಲ್ಲಿ ಜಾಗೃತಿ ಹಾಗೂ ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ವಾರದ ಹಿಂದೆಯೇ ಕೊರೊನಾ ವೈರಸ್ ತಡೆಗೆ ತುರ್ತು ಕಾರ್ಯಪಡೆ ರಚಿಸಲಾಗಿತ್ತು. ಅದಾದ ಬಳಿಕ ಹೊರ ದೇಶ ಹಾಗೂ ಹೊರಜಿಲ್ಲೆಗಳಿಂದ ಆಗಮಿಸಿದವರ ಬಗ್ಗೆ ಮಾಹಿತಿ ಕಲೆ ಹಾಕಿ ಅವರೆಲ್ಲರೂ ಕನಿಷ್ಟ 14 ದಿನಗಳ ಕಾಲ ಮನೆಯಿಂದ ಹೊರಬರದಂತೆ ಪ್ರತೀ ಮನೆಗೆ ತೆರಳಿ ಮಾಹಿತಿ ನೀಡಲಾಗಿತ್ತು. ನಂತರ ದಿನಸಿ ಅಂಗಡಿ, ತರಕಾರಿ ಅಂಗಡಿಗಳ ಮುಂದೆ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾರ್ಕ್ ಮಾಡುವ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಎರಡನೇ ಬಾರಿಗೆ ಮೈಕ್ ಮೂಲಕ ಜಾಗೃತಿಗೆ ಅನೌನ್ಸ್ ಮಾಡಲಾಯಿತು. ಇದಕ್ಕಾಗಿ ಸ್ಥಳೀಯರೊಬ್ಬರು ಉಚಿತವಾಗಿ ಕಾರಿನ ವ್ಯವಸ್ಥೆಯನ್ನೂ ಮಾಡಿದ್ದರು.
ಗ್ರಾಮೀಣ ರಸ್ತೆಯಲ್ಲಿ ತೆರಳುತ್ತಿರುವ ವೀಡಿಯೋ :
ವಿಶೇಷ ಎಂದರೆ ಗ್ರಾಮ ಪಂಚಾಯತ್ ಅಧ್ಯಕ್ಷ ಅಚ್ಚುತ ಅವರ ಧ್ವನಿಯಲ್ಲೇ ಕೊರೊನಾ ಹಾಡೊಂದನ್ನು ತಯಾರಿಸಿ ಜಾಗೃತಿ ಮೂಡಿಸುವ ಹಾಡನ್ನು ಬಿತ್ತರಿಸಲಾಯಿತು. ಈ ಹಾಡನ್ನು ವ್ಯಾಟ್ಸಪ್ ಮೂಲಕವೂ ಗ್ರಾಮದ ಜನರಿಗೆ ತಿಳಿಸಲಾಯಿತು.
ಸುಳ್ಯ ತಾಲೂಕಿನಾದ್ಯಂತ ಇಂತಹ ಮಾದರಿಯ ಜಾಗೃತಿ ಅಗತ್ಯವಾಗಿದೆ. ಈ ಜಾಗೃತಿಯನ್ನು ಗ್ರಾಮದ ಜನರು ಅನುಸರಿಸಿದರೆ ಸುಳ್ಯ ತಾಲೂಕು ಕೊರೊನಾ ವೈರಸ್ ಮುಕ್ತವಾಗಿಸುವತ್ತ ಹೆಜ್ಜೆ ಇಡಬಹುದಾಗಿದೆ.