ಸುಳ್ಯ; ಗುಜರಾತಿನಿಂದ ಹುಟ್ಟಿ ಬಂದ ಮಹಾತ್ಮಾ ಗಾಂಧೀಯವರು ಈ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟರು. ದೇಶದ ಬಗ್ಗೆ ಅಂದು ಮಹಾತ್ಮಾ ಗಾಂಧೀಜಿಯವರು ಕಂಡಿದ್ದ ಕಲ್ಪನೆಯನ್ನೂ, ಕನಸನ್ನೂ ಇಂದು ಗುಜರಾತಿನಿಂದ ಬಂದ ಪ್ರಧಾನಿ ನರೇಂದ್ರ ಮೋದಿಯವರು ಸಾಕಾರಗೊಳಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‍ಕುಮಾರ್ ಕಟೀಲ್ ಹೇಳಿದ್ದಾರೆ.
ಮಹಾತ್ಮಾ ಗಾಂಧೀಜಿಯ 150ನೇ ಜನ್ಮ ಜಯಂತಿಯ ಅಂಗವಾಗಿ ಸುಳ್ಯ ಬಿಜೆಪಿ ಮಂಡಲ ಸಮಿತಿಯ ವತಿಯಿಂದ ಹಮ್ಮಿಕೊಂಡ ಗಾಂಧಿ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಗಾಂಧಿಯ ಸ್ಮರಣೆಯಲ್ಲಿ ಅಧಿಕಾರ ಅನುಭವಿಸಿದವರು ಗಾಂಧೀಜಿಯ ಕಲ್ಪನೆಯ ಸಾಕಾರಕ್ಕೆ ಪ್ರಯತ್ನ ನಡೆಸಲಿಲ್ಲ. ಆದರೆ ನರೇಂದ್ರ ಮೋದಿಯವರು ಮಹಾತ್ಮಾ ಗಾಂಧೀಜಿಯವರ ಚಿಂತನೆ, ವಿಚಾರಧಾರೆಯನ್ನು ಅನುಸರಿಸಿ ಆಡಳಿತ ನಡೆಸುತ್ತಿದ್ದಾರೆ. ಗಾಂಧೀ ಕಲ್ಪನೆಯ ಸ್ವಚ್ಛ ಭಾರತ, ಕಟ್ಟ ಕಡೆಯ ವ್ಯಕ್ತಿಗೂ ಸರಕಾರಿ ಸೌಲಭ್ಯ ದೊರಕಿಸಿ ಕೊಡುವ ಮೂಲಕ ಗ್ರಾಮ ಸ್ವರಾಜ್ಯದ ಅನುಷ್ಠಾನಕ್ಕೆ ಶ್ರಮಿಸುತ್ತಿದ್ದಾರೆ ಎಂದರು.
ಗಾಂಧೀ ಕಲ್ಪನೆಯು ಸಾಕಾರವಾಗುವುದರ ಜೊತೆಗೆ ಗಾಂಧೀಜಿಯ ಆದರ್ಶಗಳು ಹಳ್ಳಿ ಹಳ್ಳಿಗೆ ತಲುಪಬೇಕು, ಮುಂದಿನ ತಲೆಮಾರಿಗೂ ಗಾಂಧೀಜಿಯ ಆದರ್ಶ ತಲುಪಬೇಕು ಎಂಬ ದೃಷ್ಠಿಯಲ್ಲಿ ಗಾಂಧೀ ಸಂಕಲ್ಪ ಯಾತ್ರೆಯನ್ನು ಕೈಗೊಳ್ಳಲಾಗುತ್ತಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಹಲವು ಮಂದಿ ಬಲಿದಾನ, ತ್ಯಾಗ ಮಾಡಿದ್ದಾರೆ. ಕ್ರಾಂತಿಕಾರಕ ರೀತಿಯಲ್ಲಿ ಹಲವು ಮಂದಿ ಹೋರಾಟ ನಡೆಸಿದ್ದಾರೆ. ಆದರೆ ಕ್ರಾಂತಿಕಾರಿ ಹೋರಾಟದಿಂದ ಮಾತ್ರ ಸ್ವಾತಂತ್ರ್ಯ ಪಡೆಯುವುದು ಸಾಧ್ಯವಿಲ್ಲ ಎಂದು ಅರಿತು ಮಹಾತ್ಮಾ ಗಾಂಧೀಯವರು ಅಹಿಂಸಾತ್ಮಕವಾದ ಹೋರಾಟದ ಮೂಲಕ ಸ್ವಾತಂತ್ರ್ಯ ಪಡೆದರು. ಭಜನೆಯ ಮೂಲಕ ಎಲ್ಲರನ್ನೂ ಒಟ್ಟಾಗಿ ದೇಶ ಭಕ್ತಿಯನ್ನು ಉದ್ದೀಪನಗೊಳಿಸಿದರು, ಸತ್ಯಾಗ್ರಹದ ಮೂಲಕ ಹೋರಾಟವನ್ನು ಸಂಘಟಿಸಿದರು. ದಕ್ಷಿಣ ಕನ್ನಡ ಜಿಲ್ಲೆ ಸೇರಿ ದೇಶದಾದ್ಯಂತ ರಾಷ್ಟ್ರ ಭಕ್ತಿ ಉದ್ದೀಪನಗೊಳ್ಳಲು ಗಾಂಧೀಜಿ ಪ್ರೇರಣೆಯಾಗಿದ್ದರು ಎಂದರು.
ಸ್ವಾತಂತ್ರ್ಯ ಹೋರಾಟವನ್ನು ನಗಣ್ಯ ಮಾಡುವುದು ಸರಿಯಲ್ಲ: ಹಲವಾರು ಮಂದಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಜೈಲು ಶಿಕ್ಷೆ ಅನುಭವಿಸಿದ್ದಾರೆ. ಆದರೆ ಹಲವಾರು ವರ್ಷಗಳ ಕಾಲ ಜೈಲು ವಾಸ, ಸ್ವಾತಂತ್ರ್ಯಕ್ಕಾಗಿ ಕಠಿಣ ಶಿಕ್ಷೆ ಅನುಭವಿಸಿದವರಿಗೆ ಭಾರತ ರತ್ನ ನೀಡಿ ಗೌರವಿಸುತ್ತೇವೆ ಎಂದರೆ ನಮ್ಮ ದೇಶದಲ್ಲಿ ಹಲವರ ಕಣ್ಣು ಕೆಂಪಾಗುತ್ತದೆ. ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದವರ ಹೋರಾಟವನ್ನು ನಗಣ್ಯವಾಗಿ ಕಾಣುವುದು ದುರದೃಷ್ಟ ಎಂದು ನಳಿನ್‍ಕುಮಾರ್ ಕಟೀಲ್ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಎಸ್.ಅಂಗಾರ, ಯುವ ಪೀಳಿಗೆಗೆ ಮಹಾತ್ಮಾಗಾಂಧೀಜಿಯ ವಿಚಾರಧಾರೆಗಳ ಬಗ್ಗೆ ಚಿಂತನೆಗಳ ಬಗ್ಗೆ ತಿಳಿಸುವುದರ ಜೊತೆಗೆ ಸ್ವಾತಂತ್ರ್ಯದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯ ಇದೆ. ಸ್ವಚ್ಛತೆ, ನೀರು, ಪರಿಸರದ ಬಗ್ಗೆಯೂ ಹೆಚ್ಚಿನ ಜಾಗೃತಿ ಮತ್ತು ಕಾಳಜಿ ಬೆಳೆಸಿಕೊಳ್ಳಬೇಕು ಎಂದರು.
ಕೆ.ವಿ.ಜಿ.ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಎ.ಜ್ಞಾನೇಶ್ ಮುಖ್ಯ ಅತಿಥಿಯಾಗಿದ್ದರು. ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ ವಂದಿಸಿದರು. ವಿನಯಕುಮಾರ್ ಕಂದಡ್ಕ ಕಾರ್ಯಕ್ರಮ ನಿರೂಪಿಸಿದರು.