ಧರ್ಮಸ್ಥಳ: ಬೆಳ್ತಂಗಡಿಯ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಮುನ್ನ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ನೆರೆಪೀಡಿತ ಜನರಿಗೆ ದೇವರು ದೈರ್ಯ ತುಂಬುವಂತೆ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾದರು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಮುಖ್ಯಮಂತ್ರಿ ಯಡಿಯೂರಪ್ಪ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭ ಸಂಪೂರ್ಣ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಲು 5 ಲಕ್ಷ ಪರಿಹಾರ, ಭಾಗಶಃ ಕಳೆದುಕೊಂಡವರಿಗೆ 1 ಲಕ್ಷ ಪರಿಹಾರ ಎಂದು ಘೋಷಣೆ ಮಾಡಿದ್ದಾರೆ. ಆದರೆ 5 ಲಕ್ಷ ರೂಪಾಯಿಯಲ್ಲಿ ಮನೆ ನಿರ್ಮಿಸಲು ಅಸಾಧ್ಯವಾಗಿದ್ದು ಒಂದು ವ್ಯವಸ್ಥಿತವಾದ ಮನೆ ನಿರ್ಮಿಸಲು ಕನಿಷ್ಠ 10ರಿಂದ 12 ಲಕ್ಷ ಪರಿಹಾರದ ಅಗತ್ಯವಿದೆ ಎಂದರು.
ಕಳೆದ 14 ತಿಂಗಳು ಜೆಡಿಎಸ್ ನೇತೃತ್ವದ ಸರಕಾರವಿದ್ದ ಸಂದರ್ಭ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಲಾಗಿದ್ದರೂ, ಸರಕಾರದ ಯೋಜನೆ ಜನರ ಬಳಿ ತಲುಪಿಸಲು ಸಾಧ್ಯವಾಗಿಲ್ಲ. ಪ್ರಸ್ಥುತ ರಾಜ್ಯ ಪ್ರವಾಹದಿಂದ ತತ್ತರಿಸಿ ಹೋಗಿದ್ದು, ಸರಕಾರದ ಗಮನಸೆಳೆಯಲು ನೆರೆಪೀಡಿತ ಪ್ರದೇಶಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇನೆ. ಈಗಾಗಲೇ ಬೆಂಗಳೂರಿನಿಂದ ನೆರೆಪೀಡಿತ ಪ್ರದೇಶಗಳಿಗೆ ಪರಿಹಾರ ಸಾಮಾಗ್ರಿಗಳನ್ನು ಈಗಾಗಲೇ ತಲುಪಿಸಲಾಗಿದೆ. ನೆರೆಪೀಡಿತ ಪ್ರದೇಶಗಳಿಗೆ ಸಿಎಂ ಯಡಿಯೂರಪ್ಪ ಅವರು ಭೇಟಿ ನೀಡಿ ಸುಳ್ಳು ಭರವಸೆಯ ಘೋಷಣೆ ನೀಡುತ್ತಿದ್ದು, ಜನತೆಯ ಬದುಕಿನಲ್ಲಿ ಚೆಲ್ಲಾಟವಾಡುವ ಬದಲು ಸಮಗ್ರ ಅಧ್ಯಯನ ನಡೆಸಿ ಪರಿಹಾರ ಘೋಷಿಸಲಿ ಎಂದು ಆಗ್ರಹಿಸಿದರು.
ಮಾಜಿ ಸಚಿವ ಸಾ.ರಾ. ಮಹೇಶ್, ವಿಧಾನ ಪರಿಷತ್ ಸದಸ್ಯ ಬೋಜೇಗೌಡ, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಎಂ.ಬಿ.ಸದಾಶಿವ, ಜಿಲ್ಲಾ ಉಪಾಧ್ಯಕ್ಷ ಜಗನ್ನಾಥ ಗೌಡ ಅಡ್ಕಾಡಿ, ಜಿಲ್ಲಾ ಯುವ ಜನತಾದಳ ಅಧ್ಯಕ್ಷ ಅಕ್ಷಿತ್ ಸುವರ್ಣ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಸಿಂಧೂ ದೇವಿ, ಹಿಂದುಳಿದ ವರ್ಗಗಳ ಅಧ್ಯಕ್ಷ ಶ್ರೀನಿವಾಸ ಗೌಡ ಪಟ್ರಮೆ ಉಪಸ್ಥಿತರಿದ್ದರು.