ಸುಳ್ಯ: ತುಂಬಿ ತುಳುಕುವ ಸುಳ್ಯ ನಗರದಲ್ಲಿ ವಾಹನ ಚಲಾಯಿಸುವುದು ಒಂದು ಸವಾಲು. ಅದೇ ರೀತಿ ದಿನಪೂರ್ತಿ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ನಿಯಂತ್ರಿಸುವುದು ನಿಜಕ್ಕೂ ಒಂದು ಸಾಹಸವೇ ಸರಿ. ಅಂತಹಾ ಸವಾಲಿನ ಕೆಲಸವನ್ನು ಅತ್ಯಂತ ಚಾಕಚಕ್ಯತೆಯಿಂದ, ಸಮರ್ಥವಾಗಿ ನಿಭಾಯಿಸುವವರು ಸುಳ್ಯದ ಗೃಹರಕ್ಷಕ ದಳದ ಸಿಬ್ಬಂದಿಗಳು. ಧೋ ಎಂದು ಸುರಿಯುವ ಮಳೆಯನ್ನೂ, ಸುಡು ಬಿಸಿಲನ್ನೂ ಲೆಕ್ಕಿಸದೆ ಸುಳ್ಯ ನಗರದ ವಾಹನ ಸಂಚಾರವನ್ನು ನಿಯಂತ್ರಿಸುವುದು ಮಹಿಳೆಯರೂ ಸೇರಿದ ಗೃಹ ರಕ್ಷಕ ದಳದ ಸಿಬ್ಬಂದಿಗಳು. ಅದರಲ್ಲೂ ಕಳೆದ ಹಲವು ವರ್ಷಗಳಿಂದ ವಾಹನ ಸಂಚಾರವನ್ನು ಸಮರ್ಥವಾಗಿ ನಿಯಂತ್ರಿಸುವವರು ಗೃಹರಕ್ಷಕ ದಳದ ಸಿಬ್ಬಂದಿ ಪುಷ್ಪಾವತಿ. ನ.ಒಂದರಂದು ರಾಷ್ಟ್ರೀಯ ಹಬ್ಬಗಳ ದಿನಾಚರಣಾ ಸಮಿತಿಯ ವತಿಯಿಂದ ನಡೆದ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಪುಷ್ಪಾವತಿ ಅವರ ಸೇವೆಯನ್ನು ಪರಿಗಣಿಸಿ ಸನ್ಮಾನಿಸಿ ಗೌರವಿಸಲಾಯಿತು. ಶಾಸಕ ಎಸ್.ಅಂಗಾರ ಸನ್ಮಾನ ನೆರವೇರಿಸಿ ಇವರ ಸೇವೆಯನ್ನು ಶ್ಲಾಘಿಸಿದರು.
ಸುಳ್ಯ ನಗರದಲ್ಲಿ ಅತ್ಯಂತ ವಾಹನ ದಟ್ಟಣೆ ಉಂಟಾಗುತ್ತಿರುವುದು ಕಟ್ಟೆಕ್ಕಾರ್ ವೃತ್ತ, ಜಟ್ಟಿಪಳ್ಳ ತಿರುವು,ಜ್ಯೂನಿಯರ್ ಕಾಲೇಜು ತಿರುವು ಮತ್ತು ಜ್ಯೋತಿ ವೃತ್ತದಲ್ಲಿ ಇಲ್ಲಿ ವಾಹನ ದಟ್ಟಣೆ ಉಂಟಾಗದಂತೆ, ಅಪಘಾತ ಅಥವಾ ಯಾವುದೇ ಸಮಸ್ಯೆ ಆಗದಂತೆ ಒಂದು ನಿಮಿಷವೂ ತಡ ಮಾಡದೆ ನಾಲ್ಕು ಕಡೆಗಳಿಂದ ಹರಿದು ಬರುವ ವಾಹನಗಳನ್ನು ಅತ್ಯಂತ ನಾಜೂಕಿನಿಂದ ನಿಯಂತ್ರಿಸುತ್ತಾರೆ ಸುಳ್ಯದ ಗೃಹ ರಕ್ಷಕ ದಳದ ಸಿಬ್ಬಂದಿಗಳು. ಉಳಿದ ಎಲ್ಲಾ ನಗರಗಳಲ್ಲಿಯೂ ಟ್ರಾಫಿಕ್ ಠಾಣೆಗಳಿದ್ದು ಟ್ರಾಫಿಕ್ ಪೊಲೀಸರೇ ವಾಹನ ಸಂಚಾರ ನಿಯಂತ್ರಿಸುತ್ತಾರೆ. ಆದರೆ ಸುಳ್ಯದಲ್ಲಿ ಸಂಚಾರಿ ಪೊಲೀಸ್ ಠಾಣೆ ಇಲ್ಲದ ಕಾರಣ ನಗರದ ಸಂಚಾರಿ ವ್ಯವಸ್ಥೆಯನ್ನು ಸುಳ್ಯ ಪೊಲೀಸ್ ಠಾಣೆಯಿಂದಲೇ ನಿಯಂತ್ರಿಸಲಾಗುತ್ತದೆ. ಪೊಲೀಸರು ಮತ್ತು ಗೃಹರಕ್ಷಕ ದಳದ ಸಿಬ್ಬಂದಿಗಳು ಸಂಚಾರಿ ಠಾಣೆಯ ಕೆಲಸವನ್ನು ನಿಭಾಯಿಸುತ್ತಾರೆ. ಆದುದರಿಂದಲೇ ಗೃಹರಕ್ಷಕ ದಳ ಸಿಬ್ಬಂದಿಗಳ ಪ್ರತಿನಿಧಿಯಾಗಿ ಹಲವು ವರ್ಷಗಳಿಂದ ಸಮರ್ಥವಾಗಿ ಸಂಚಾರಿ ನಿಯಂತ್ರಣವನ್ನು ನಿರ್ವಹಿಸುವ ಪುಷ್ಪಾವತಿಯವರಿಗೆ ತಾಲೂಕು ಆಡಳಿತ ಗೌರವ ಸಲ್ಲಿಸಿದೆ. ಆದುದರಿಂದ ರಾಜ್ಯೋತ್ಸವ ದಿನದ ಬಿಗ್ ಸಲ್ಯೂಟ್ ನಗರದ ಸಂಚಾರಿ ವ್ಯವಸ್ಥೆಯನ್ನು ನಿಯಂತ್ರಿಸುವ ಗೃಹ ರಕ್ಷಕ ದಳದ ಸಿಬ್ಬಂದಿಗಳಿಗಿರಲಿ.