ಅಡಿಕೆಗೆ ಕಳೆದ ವರ್ಷ ವ್ಯಾಪಕವಾಗಿ ಎಲೆಚುಕ್ಕಿ ರೋಗ ಕಾಣಿಸಿಕೊಂಡು ಅಡಿಕೆ ಬೆಳೆಗಾರರು ಕಂಗಾಲಾಗಿದ್ದರು. ಹಲವು ಕಡೆ ಬೆಳೆನಷ್ಟವೂ ಉಂಟಾಗಿತ್ತು. ಪರಿಹಾರ, ಔಷಧಿ ಇತ್ಯಾದಿಗಳು ಸದ್ದು ಮಾಡಿತ್ತು. ಭರವಸೆಗಳ ಮೇಲೆ ಭರವಸೆಗಳನ್ನು ಜನಪ್ರತಿನಿಧಿಗಳು, ಸಚಿವರು ನೀಡಿದ್ದರು. ಈ ಸಂದರ್ಭ ಇಸ್ರೇಲ್‌ಗೆ ಎಲೆ ಚುಕ್ಕಿ ರೋಗದ ಅಡಿಕೆ ಎಲೆ ಕಳುಹಿಸಿ ಪ್ರಯೋಗ ನಡೆಸಿ ವರದಿ ತರಿಸುವ ಭರವಸೆಯನ್ನೂ ನೀಡಲಾಗಿತ್ತು. ಈ ಹೇಳಿಕೆಗೆ ಸುಮಾರು ಒಂದು ವರ್ಷ ಆಗುತ್ತಿದೆ, ಇದರ ವರದಿ ಏನಾಗಿದೆ…?. ಕೃಷಿಕರು ಪ್ರತೀ ಬಾರಿ ನಂಬಿ ಮೋಸ ಹೋಗುತ್ತಾರೆ.ಈ ಬಾರಿಯೂ ಹಾಗಾಯಿತೇ…?
ಕಳೆದ ವರ್ಷ ಅದೇ ಅವಧಿಯಲ್ಲಿ ಅಂದರೆ ಮಳೆ ಕಡಿಮೆಯಾಗುವ ಹೊತ್ತಿಗೆ ಎಲೆಚುಕ್ಕಿ ರೋಗದ ಭೀಕರತೆ ಎಲ್ಲೆಡೆಯೂ ಕಂಡುಬಂದಿತ್ತು. ಹೀಗಾಗಿ ವಿಜ್ಞಾನಿಗಳು, ಅಧಿಕಾರಿಗಳು ಎಲ್ಲೆಡೆಯೂ ಸುತ್ತಾಡಿ ಅಧ್ಯಯನದ ಮೇಲೆ ಅಧ್ಯಯನ ನಡೆಸಿದರು. ಅನೇಕರು ವಿವಿಧ ಸಲಹೆಗಳನ್ನೂ ನೀಡಿದ್ದರು. ಕೇಂದ್ರ ಸರ್ಕಾರ ಐಸಿಎಆರ್ ಅಡಿಯಲ್ಲಿ ಬರುವ ಸಿಪಿಸಿಆರ್‌ಐ ವಿಜ್ಞಾನಿಗಳು ಈ ಬಗ್ಗೆ ನಿಖರವಾದ ಔಷಧಿಯನ್ನು, ನಿಯಂತ್ರಣ ಕ್ರಮಗಳ ಬಗ್ಗೆ ಹೇಳಿದ್ದರು. ಈ ಹಿಂದೆಯೇ ಎಲೆಚುಕ್ಕಿ ರೋಗ ಕಂಡುಬಂದಿತ್ತು, ಅದರ ನಿಯಂತ್ರಣಕ್ಕೆ ಸೂಕ್ತವಾದ ಔಷಧವನ್ನೂ ಹೇಳಿದ್ದರು.
ಹಾಗಿದ್ದರೂ ಅಡಿಕೆ ಬೆಳೆಗಾರರಿಗೆ ಈ ಬಗ್ಗೆ ಇನ್ನಷ್ಟು ಅಧ್ಯಯನವಾಗಬೇಕು ಎಂಬ ಬೇಡಿಕೆ ಇತ್ತು. ಜನಪ್ರತಿನಿಧಿಗಳು ಕೂಡಾ ಸಿಪಿಸಿಆರ್‌ಐ ವಿಜ್ಞಾನಿಗಳ ಸಲಹೆಯನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿರಲೂ ಇಲ್ಲ. ಇದಕ್ಕಾಗಿ ಕೇಂದ್ರ ಸರ್ಕಾರದ ಜೊತೆ ಸಭೆ, ಅಧಿಕಾರಿಗಳ ಜೊತೆ ಸಭೆ ನಡೆದಿತ್ತು. ಅದಾದ ಬಳಿಕ ಸಚಿವರು, ಅಧಿಕಾರಿಗಳು ರೈತರ ತೋಟಕ್ಕೆ ಭೇಟಿ ನೀಡಿದ್ದರು.
ಆಗ ತೋಟಗಾರಿಕಾ ಸಚಿವರಾಗಿದ್ದ ಮುನಿರತ್ನ, ಸಚಿವ ಅಂಗಾರ ಸಹಿತ ಹಲವು ಮಂದಿ ಸುಳ್ಯದಲ್ಲೂ ಕೃಷಿಕರ ತೋಟಕ್ಕೆ ಭೇಟಿ ನೀಡಿ ಎಲೆಚುಕ್ಕಿ ರೋಗ, ಹಳದಿ ಎಲೆರೋಗ ಗಂಭೀರತೆ ಬಗ್ಗೆ ತಿಳಿದುಕೊಂಡಿದ್ದರು. ಆಗ ಸುಳ್ಯದ ಮರ್ಕಂಜಕ್ಕೆ ಭೇಟಿ ನೀಡಿದ್ದ ತೋಟಗಾರಿಕಾ ಸಚಿವರು, ಅಡಿಕೆ ಎಲೆ ಚುಕ್ಕಿರೋಗ, ಹಳದಿ ರೋಗ ಬಾಧಿತ ತೋಟಗಳನ್ನು ವೀಕ್ಷಿಸಿದ್ದೇವೆ. ಇದರಿಂದ ರೈತರು ಬಹಳಷ್ಟು ನಷ್ಟ ಅನುಭವಿಸಿದ್ದಾರೆ. ಈ ರೋಗ ಯಾವ ಕಾರಣಕ್ಕೆ ಬರುತ್ತಿದೆ ಎಂಬ ಬಗ್ಗೆ ಸಂಶೋಧನೆ ಮಾಡಬೇಕಾಗಿದೆ. ಮುಂದಿನ ತಿಂಗಳು ಇಸ್ರೇಲ್‌ಗೆ ಹೋಗುವ ವೇಳೆ ಈ ರೋಗದ ಬಗ್ಗೆ ಅಲ್ಲಿನ ವಿಜ್ಞಾನಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆಸಲಾಗುವುದು. ಇದಕ್ಕಾಗಿ ರೋಗ ಬಾಧಿತ ಎಲೆಗಳನ್ನು ಸಂಗ್ರಹಿಸಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಿದ್ದರು. ಈ ಬಗ್ಗೆ ಅಂದು ಎಲ್ಲಾ ಮಾಧ್ಯಮಗಳಲ್ಲೂ ವರದಿಯಾಗಿತ್ತು. ಈ ಬಗ್ಗೆ ಯಾವ ಜನಪ್ರತಿನಿಧಿಗಳೂ ಈಗ ಮಾಡತನಾಡುತ್ತಿಲ್ಲ…!
ಇದೀಗ ಮತ್ತೆ ಎಲೆಚುಕ್ಕಿ ರೋಗ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದೆ. ಇಸ್ರೇಲ್‌ಗೆ ಕಳುಹಿಸಿದ ಅಡಿಕೆ ಸೋಗೆಯ ವರದಿಯ ಬಗ್ಗೆ ಯಾವ ಅಧಿಕಾರಿಗಳಲ್ಲಿ ಕೇಳಿದರೂ ಮಾಹಿತಿ ಇಲ್ಲವಾಗಿದೆ. ಹಾಗಿದ್ದರೆ ಎಲ್ಲಿಂದ ಸೋಗೆ ಕತ್ತರಿಸಲಾಯ್ತು? ಸಚಿವರು ಇಸ್ರೇಲ್ ಗೆ ಅಡಿಕೆ ಸೋಗೆ ಕಳುಹಿಸಿದ್ದಾರೆಯೇ ? ಇತ್ಯಾದಿಗಳ ಬಗ್ಗೆ ಎಲ್ಲೂ ಮಾಹಿತಿ ಇಲ್ಲ. ಈ ಬಾರಿ ಮತ್ತೆ ಅದೇ ರಾಗ ಹಾಡಲಾಗುತ್ತಿದೆ. ಸೂಕ್ತ ಕ್ರಮ, ಭರವಸೆ…!.
ಅಡಿಕೆ ಹಳದಿ ಎಲೆ ರೋಗದ ವಿಚಾರದಲ್ಲೂ ಅಡಿಕೆ ಬೆಳೆಗಾರರು ಇದೇ ಮಾದರಿಯಲ್ಲಿ ಭರವಸೆ ನಂಬಿ ಕುಳಿತಿದ್ದಾರೆ. ಇದುವರೆಗೂ ಯಾವ ಪರಿಹಾರವೂ ಆಗಿಲ್ಲ. ಸಿಪಿಸಿಆರ್‌ಐ ವಿಜ್ಞಾನಿಗಳು ಅಡಿಕೆ ಹಳದಿ ಎಲೆ ರೋಗದ ನೆಲೆಯಲ್ಲಿ ಒಂದಿಷ್ಟು ಕೆಲಸ ಮಾಡುತ್ತಿದ್ದಾರೆ. ನಮ್ಮದೇ ವಿಜ್ಞಾನಿಗಳಿಗೆ ಅಗತ್ಯವಾದ ಯಾವ ಸಲಕರಣೆಗಳು, ತಾಂತ್ರಿಕ ನೆರವೂ ಇಲ್ಲದೆಯೇ ಅವರ ಪಾಡಿಗೆ ಕೆಲಸ ಮಾಡುತ್ತಿದ್ದಾರೆ. ಆದರೆ ಕೃಷಿಕರು ನಂಬುವುದು ರಾಜಕಾರಣಿಗಳ ಭರವಸೆ….!