ಶಾಲೆಯಲ್ಲಿ ಸಂಭ್ರಮದಿಂದ ಕಾರ್ಯಕ್ರಮ ನಡೆಯುತ್ತಿದ್ದ ಸಮಯ. ಇನ್ನೇನು ಕಾರ್ಯಕ್ರಮ ಆರಂಭವಾಗಬೇಕೆನ್ನುವಷ್ಟರಲ್ಲಿ ಸಭಿಕರಲ್ಲಿ ಕೋಲಾಹಲವೇ ಉಂಟಾಯಿತು .ಅಸಹ್ಯಯಿಂದ ನೋಡುತ್ತಾ ,ಒಳಗಡೆ ಪಿಸುಗುಟ್ಟುತ್ತಾ, ಮೂದಲಿಸುವರ ನಡುವೆ ಕಂಡದ್ದು “ಅವರನ್ನು”.ತಕ್ಷಣವೇ ಆಯೋಜಕರು ಓಡೋಡಿ ತೆರಳಿ ಅವರನ್ನು ವೇದಿಕೆಯತ್ತ ಕರೆತಂದರು.
ಸಭಿಕರಿಗೂ ತಳಮಳ .’ಇವರ್ಯಾಕೆ ವೇದಿಕೆಯ ಮೇಲೆ ಹೋದರು? ‘ಎನ್ನುವ ಕುತೂಹಲ .ಇವರೆಲ್ಲರ ಪ್ರಶ್ನೆಗೆ ಉತ್ತರವೆನ್ನುವಂತೆ ಆಯೋಜಕರು ಸಭೆಗೆ ಇವರೊಬ್ಬರು ಪ್ರಸಿದ್ಧ ರಂಗಭೂಮಿ ಕಲಾವಿದರೆಂದು ಪರಿಚಯಿಸಿದಾಗ ಸಭಿಕರ ಮೊಗದಲ್ಲಿ ನೂತನ ಜೀವಕಳೆಯೊಂದು ಕಾಣಿಸಿತು. ಸಭಿಕರ ಮೊಗದಲ್ಲಿನ ಪ್ರಶ್ನಾರ್ಥಕ ಚಿಹ್ನೆಗಳಿಗೆ ಉತ್ತರವೆಂಬಂತೆ ಆ ಕಲಾವಿದರ ಪರಿಚಯವನ್ನು ಹೇಳಿದಾಗ ಸಭೆಯಲ್ಲಿ ಎಲ್ಲಿಲ್ಲದ ಕರಾಡತನ ಕೇಳಿ ಬಂತು .ಅವರ ಅನುಮತಿಯ ಮೇರೆಗೆ ಕಾರ್ಯಕ್ರಮವು ಆರಂಭವಾಯಿತು.
ಆದರೆ ಅವರ ಕಾಯ ಅಲ್ಲಿತ್ತು, ಮನಸ್ಸಲ್ಲ. ತನ್ನದೇ ಬದುಕಿನಲ್ಲಿ ಘಟಿಸಿದ ಘಟನೆಗಳತ್ತ ಮನವು ಹೆಜ್ಜೆ ಹಾಕಿತ್ತು .ಅವರೊಳಗಿನ ಯೋಚನೆ ಅವರನ್ನು ಗತಕಾಲದಡೆಗೆ ಕೊಂಡುಹೋಗಿತ್ತು. ಆಗ ಸಭಿಕರನ್ನು ಉದ್ದೇಶಿಸಿ ಮಾತನಾಡಲು ಅವರಲ್ಲಿ ವಿನಂತಿಸಿಕೊಳ್ಳಲಾಯಿತು .ಅವರು ತಮ್ಮ ಒಡಲಾಳದಲ್ಲಿ ಬಚ್ಚಿಟ್ಟಿದ್ದ ವೇದನೆಯ ವಿಚಾರಗಳ ಕುರಿತು ಮಾತನಾಡಲಾರಂಭಿಸಿದರು .
“ಹಾ ಹೀಗೊಂದು ಕಾಲವಿತ್ತು, ನನ್ನೊಳಗಿನ ನನ್ನನ್ನು ನಾನೇ ಹುಡುಕುತ್ತಿದ್ದ ಕಾಲ .ಯಾರಿಗೂ ಬೇಡವಾಗಿದ್ದ ನಾನು ಅತ್ತ ನರಿ- ನಾಯಿಗಳಿಗೂ ಆಹಾರವಾಗದೆ ಭವಬಂಧನಗಳಿಂದಲೂ ಮುಕ್ತಿ ಕಾಣದೆ ನರಕಯಾತ್ರೆಯ ಅನುಭವಿಸಿದ ಕಾಲ. ಯಾಕೋ ದೇವರಿಗೆ ನಮ್ಮ ಮೇಲೆ ಕರುಣೆ ಜಾಸ್ತಿಯಾಗಿತ್ತೇನೋ ಅತ್ತ ಸ್ತ್ರೀಯೂ ಅಲ್ಲದ ಇತ್ತ ಪುರುಷನು ಅಲ್ಲದ ವರ್ಗವನ್ನು ಸೃಷ್ಟಿಸಿ ‘ನಪುಂಸಕ’ರೆಂದು ಜಗಕ್ಕೆ ಪರಿಚಯಿಸಿದ. ಅದಾವ ಜನ್ಮದಲ್ಲಿ ಮಾಡಿದ ಪಾಪವೋ ಈ ಜನ್ಮದಲ್ಲಿ ನರಕಯಾತ್ರೆಯ ಸುಖವನ್ನ ಪಡಬೇಕಾಯಿತು. ಆಡಿಸುವಾತ ಮೇಲೊಬ್ಬನಿರುವಾಗ ನಮ್ಮ ಕೈಲೇನು ಇಲ್ಲ. ಹೌದು ,ತಾಯ ಗರ್ಭದಲ್ಲಿರುವಾಗ ಎಲ್ಲರಂತೆ ನಾನೂ ಖುಷಿಯಾಗಿದ್ದೆ. ಭಾವನೆ, ಸಂಬಂಧ ,ಆಸೆ ,ಅಭಿಲಾಷೆ, ಯಾವುದೂ ಇಲ್ಲದ ಮುಖ್ಯವಾಗಿ ಜಗತ್ತೇ ಕಾಣಿಸಿದ ಲೋಕವದು. ಯಾವಾಗ ನನ್ನ ಜನನವಾಯಿತೋ ಕಷ್ಟ ಬೆನ್ನ ಹಿಂದೆಯೇ ಇತ್ತು. ಜೀತದಾಳುವಿನಂತೆ ದುಡಿದರೂ ಹಣ ಸಂಪಾದಿಸಲಾಗದ ಅಪ್ಪ ,ಜೊತೆಗೆ ನನ್ನಂತೆ ನನಗಿಂತ ಮೊದಲು ಹುಟ್ಟಿದ ಒಡಹುಟ್ಟಿದವರು ,ಇವರೆಲ್ಲರಿಗೆ ಒಂದು ಹೊತ್ತಿನ ಊಟ ಹಾಕುವಷ್ಟರಲ್ಲಿ ಅಮ್ಮ ಹೈರಾಣಾಗುತ್ತಿದ್ದಳು .ನಾನು ದೊಡ್ಡವನಾಗತೊಡಗಿದೆ . ಯಾಕೋ ಅಕ್ಕನ ದಿರಿಸಿನ ಮೇಲೆ ,ಅವಳ ಒಡವೆಗಳ ಮೇಲೆ ನನ್ನ ಆಸಕ್ತಿ ಹೆಚ್ಚಾಯಿತು. ಕ್ರಮೇಣ ನನ್ನಲ್ಲಿ ಬದಲಾವಣೆಗಳಾಯಿತು. ಸಮಾಜವೇ ವಿಚಿತ್ರ ದೃಷ್ಟಿಯಲ್ಲಿ ನೋಡತೊಡಗಿತು. ಯಾರೊಬ್ಬರೂ ನನ್ನಲ್ಲಿ ಮಾತನಾಡುತ್ತಿರಲಿಲ್ಲ, ಆಟವಾಡುತ್ತಿರಲಿಲ್ಲ.
ಒಂದು ದಿನ ಇದ್ದಕ್ಕಿದ್ದಂತೆ ಅಪ್ಪ ಸಿಟ್ಟಿನಲ್ಲಿ ನನ್ನ ರಟ್ಟೆ ಹಿಡಕೊಂಡು ಮನೆಯಿಂದ ಹೊರ ಹಾಕಿದ. ಜೊತೆಯಲ್ಲಿ ಬಲು ಜೋರಾಗಿ ‘ಎಲಾ ಅನಿಷ್ಟವೇ, ಈ ಮನೆಯಲ್ಯಾಕೆ ಹುಟ್ಟಿದೆ! ಮರ್ಯಾದೆ ಇದ್ರೆ ಬೇಡಿ ಆದ್ರೂ ತಿನ್ನುತ್ತೇನೆ. ನೀನು ನನ್ನೊಂದಿಗೆ ಇದ್ದರೆ ಒಂದು ಹೊತ್ತಿನ ಕೂಳಿಗೂ ಏನೂ ಸಿಗಲಿಕ್ಕಿಲ್ಲ.ನಿನ್ನ ದಾರಿ ನೀನೇ ನೋಡಿಕೋ ‘ಎಂದು ನನ್ನನ್ನು ರಸ್ತೆಗೆ ನೂಕಿ ದರದರನೇ ಹೊರಟುಹೋದ. ಅಸಹಾಯಕತೆಯಿಂದ ಅಮ್ಮ ಅಳುತ್ತಿದ್ದಳಾದರೂ ಆಕೆ ಏನು ಮಾಡುವಂತಿರಲಿಲ್ಲ .ಅಪ್ಪ ಹೋದಂತೆ ಆಕೆಯೂ ಅವನನ್ನೇ ಅನುಸರಿಸಿದಳು. ಒಬ್ಬಂಟಿಯಾಗಿ ಬಿದ್ದಿದ್ದ ನನಗೆ ದಿಕ್ಕೇ ತೋಚಲಿಲ್ಲ .
ಅದೆಷ್ಟು ದಿನ ಅನ್ನ ನೀರಿಲ್ಲದೆ ಬಿದ್ದಿದ್ದೇನೋ ನನಗೆ ತಿಳಿಯದು .ಒಂದು ದಿನ ಯಾರೋ ನನ್ನನ್ನು ಸಮೀಪಿಸಿ ನನ್ನ ಕುರಿತು ಕನಿಕರ ವ್ಯಕ್ತಪಡಿಸುತ್ತಿರುವುದನ್ನು ನನ್ನ ಕಿವಿ ಕೇಳಿತು. ಅವರು ತಮ್ಮ ಕೈಲಾದಷ್ಟು ಆರೈಕೆ ಮಾಡಿ ನನ್ನನ್ನು ಸಹಜ ಸ್ಥಿತಿಗೆ ತಂದರು .ಮತ್ತೆ ನೋಡಿದರೆ ಅವರು ನನ್ನಂತೆ ಸಮಾಜದಿಂದ ಶೋಷಣೆಗೊಳಗಾದವರೆಂದು ತಿಳಿದೆ. ಅಂದಿನಿಂದ ಅವರೇ ನನ್ನನ್ನು ಮಾತೆಯಂತೆ ಸಲಹಿದರು. ಸಮಾಜದಲ್ಲಿ ನಮಗಿರುವ ಗೌರವವನ್ನೂ, ನಮಗಾಗುವ ಶೋಷಣೆಯನ್ನು ಬಿಡಿಬಿಡಿಯಾಗಿ ತಿಳಿಸಿದರು. ಇಂತಹ ಶೋಷಣೆಗಳ ನಡುವೆಯೂ ಗಟ್ಟಿತನವನ್ನು ತೋರಿಸಿ ನಮಗೆಲ್ಲ ಆದರ್ಶ ಪ್ರಾಯ ಆಗಿರುವ ಹಲವರ ಕುರಿತು ತಿಳಿಸಿದರು .ನನ್ನೊಳಗೆ ಹೊಸ ಚೈತನ್ಯ ಪಸರಿಸಿತು .ಶಾಲೆಗೆ ಹೋದರೂ, ವಿದ್ಯೆ ಕಲಿಯುವ ಮನಸಿದ್ದರೂ ಕಲಿಸುವವರಿರಲಿಲ್ಲ. ಹಾಗಾಗಿ ಆ ಅಮ್ಮ ತಿಳಿಸಿದಂತೆ ನಾನು ರಂಗಭೂಮಿಯೆಡೆಗೆ ಕಾಲಿಟ್ಟೆ. ರಂಗಭೂಮಿ ನನ್ನ ಕೈ ಬಿಡಲಿಲ್ಲ. ಒಂದೊಂದೇ ಹಂತವನ್ನು ಜಯಿಸುತ್ತಾ ಹೋದೆ . ನಮ್ಮಂತೆ ಶೋಷಣೆಗೊಳಗಾದವರನ್ನೆಲ್ಲಾ ಸೇರಿಕೊಂಡು ನಾಟಕ ಕಂಪನಿಯೊಂದನ್ನು ನಿರ್ಮಿಸಿ ಬೀದಿ ನಾಟಕ ,ಏಕಾಂಕ ನಾಟಕಗಳ ಮೂಲಕ ನಮ್ಮ ನೋವನ್ನೂ ಕೀಳರಿಮೆಯನ್ನೂ ಭಾವನೆಗಳನ್ನೂ ಗಲ್ಲಿ ಗಲ್ಲಿಗಳಲ್ಲಿ ಪ್ರದರ್ಶಿಸಿದೆವು. ಕ್ರಮೇಣ ರಂಗಭೂಮಿ ನನಗೊಲಿಯಿತು .ಒಳ್ಳೆಯ ಸ್ಥಾನಮಾನ ದೊರಕಿತು .ಇಂದು ಈ ವೇದಿಕೆಯಲ್ಲಿ ದೊರೆತಂತೆ” ಎನ್ನುತ್ತಾ ಅಶ್ರುಧಾರೆಯನ್ನ ಎರೆದ ಅವರಿಗೆ ಸಭಿಕರೆಲ್ಲ ಎದ್ದು ನಿಂತು ಕರಾಡತನ ಮಾಡಿದರು.
ನಿಜ ಸ್ವಾಭಿಮಾನ ಎನ್ನುವುದು ಎಲ್ಲರ ಜನ್ಮ ಸಿದ್ಧ ಹಕ್ಕು. ಮಂಗಳಮುಖಿಯರೆಂದೋ, ನಪುಂಸಕರೆಂದೋ, ಮೂರನೇ ವರ್ಗವೆಂದೋ, ಲೈಂಗಿಕ ಅಲ್ಪಸಂಖ್ಯಾತರೆಂದೋ ಕರೆಯಲ್ಪಡುವ ಅವರಿಗೆ ಮಿಡಿಯುವವರು, ತುಡಿಯುವವರು ಅಥವಾ ಕರುಣೆ ತೋರುವವರು ಬೇಕಿಲ್ಲ .ಕನಿಕರವೂ ಬೇಡ. ಅವರನ್ನು ಅವರ ಪಾಡಿಗೆ ಬದುಕಲು ಬಿಡಿ ಸಾಕು. ಅವರಲ್ಲೂ ಜೀವವಿದೆ, ಅವರೊಳಗೂ ಮನುಷ್ಯತ್ವವಿದೆ, ಭಾವನೆಗಳಿವೆ ಎಂದು ತಿಳಿದರೆ ಸಾಕು .ಗಂಡಾಗಿ ಹುಟ್ಟಿ ಹೆಣ್ಣಾಗಿ ಬೆಳೆದ ಅವರನ್ನು ಕಾಲ ಕಸಕ್ಕಿಂತ ಕಡೆಯಾಗಿ ನೋಡುವವರೇ ಹೆಚ್ಚು! ರಸ್ತೆಯ ಟ್ರಾಫಿಕ್ ಸಿಗ್ನಲ್ ಗಳಲ್ಲಿ ಮಂಗಳಮುಖಿಯರನ್ನು ಕಂಡಾಗ ಮುಖ ಸಿಂಡರಿಸಿ ದುಡ್ಡಿನ ಚೀಲ ತುಂಬುವವರೇ ಹೆಚ್ಚು. ಯಾರೊಬ್ಬರೂ ಅದರೊಳಗಿನ ಭಾವುಕತೆಯನ್ನು ಗಮನಿಸುವುದಿಲ್ಲ. ಇಂತಹ ಕಟು ಚಿತ್ರಣದ ನಡುವೆ ಲೈಂಗಿಕ ಅಲ್ಪಸಂಖ್ಯಾತರಾಗಿ ಹುಟ್ಟಿದ್ದು ಶಾಪವಲ್ಲ ಎಂದು ತೋರಿಸಿಕೊಟ್ಟ ಗಟ್ಟಿಗಿತ್ತಿಯರು ನಮ್ಮ ನಡುವೆಯೇ ಇದ್ದಾರೆ .
ಪುರುಷನಾಗಲಿ ಸ್ತ್ರೀಯಾಗಲಿ ಅಥವಾ ತೃತೀಯ ವರ್ಗವೇ ಆಗಿರಲಿ ಒಬ್ಬ ವ್ಯಕ್ತಿಯ ಜನನವಾದೊಡನೆ ಅವರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಆ ದೇಶದ ಕರ್ತವ್ಯ. ಅದು ವಾಸಕ್ಕಾಗಿ ಭೂಮಿ ಇರಲಿ, ತಿನ್ನುವುದಕ್ಕಾಗಿ ಅನ್ನವಿರಲಿ, ತೊಡುವುದಕ್ಕಾಗಿ ವಸನಗಳಿರಲಿ, ಶಿಕ್ಷಣವಿರಲಿ ತನ್ನ ಪೌರನಿಗೆ ಅದನ್ನು ನೀಡುವುದು ದೇಶದ ಕರ್ತವ್ಯ .ತೃತೀಯ ಲಿಂಗಗಳೆಂದರೆ ಅವರು ನಮ್ಮಂತೆ ನಮ್ಮೊಡನೆಯೇ ಇರುವವರು .ಆದರೆ ಇಂದು ಲಿಂಗತ್ವದ ಕಾರಣದಿಂದ ಸ್ವಂತ ಮನೆಯಿಂದಲೇ ವರ್ಜಿಸಲ್ಪಟ್ಟು ವಾಸಿಸಲು ಮನೆ ಇಲ್ಲದೆ ಅತ್ತ ಸಂಪಾದನೆಗೆ ಉದ್ಯೋಗವೂ ಇಲ್ಲದಂತಾಗಿದೆ. ಸಮಾಜದಲ್ಲಿನ ಶೋಷಣೆ ,ನಿರಾಕರಣೆ ದೂಷಣೆಗಳಿಂದ ರೋಸಿ ಹೋದ ತೃತೀಯಲಿಂಗೀಯರ ಆಯುಷ್ಯಾವಧಿ ಇಂದು 40 ರಿಂದ 50 ವರ್ಷಕ್ಕೆ ಇಳಿಕೆಯಾಗಿರುವುದು ಬಹು ಜನರಿಗೆ ತಿಳಿದಿರದ ವಿಷಯ .ಅವರು ಗಂಡಾಗಿ ಹುಟ್ಟಿ ಹೆಣ್ಣಾಗಿ ಇರಲು ಬಯಸಿದರೂ ಜನಿಸಿದ್ದು ಮಾನವರಾಗಿ ಹಾಗೂ ಘನತೆಯಿಂದ ಜೀವಿಸಲು ಇಚ್ಛಿಸುತ್ತಾರೆ .ಅವರನ್ನು ಕೀಳಾಗಿ ಕಾಣದೆ, ಹಣಕ್ಕಾಗಿ ತೋರಿಸಿಕೊಳ್ಳದೆ, ಸಮಾಜದ ಎಲ್ಲಾ ಆಯಾಮಗಳಲ್ಲಿ ಅವರಿಗೂ ನಮ್ಮಂತೆ ಮಾನ್ಯತೆ ಕಲ್ಪಿಸಿ ಸಮಾಜದ ಮುಖ್ಯ ವಾಹಿನಿಗೆ ಕರೆ ತರಲು ಪ್ರಯತ್ನಿಸೋಣ.
ನಮ್ಮೊಳಗೆ ಹರಿವ ರಕ್ತ ಒಂದೇ, ನಾವೆಲ್ಲ ಸೇವಿಸುವ ಜಲವೊಂದೇ ,ಉಸಿರಾಡುವ ಗಾಳಿ ಒಂದೇ .ನಾವೆಲ್ಲ ನಿಸರ್ಗಮಾತೆಯ ಒಡಲೊಳಗಾಡಿದ ಕೂಸುಗಳು. ನಿಸರ್ಗಕ್ಕಿಲ್ಲದ ಅಸಮಾನತೆ ನಮ್ಮೊಳಗ್ಯಾಕೆ ?ಅವರು ‘ಅವನು’ ಅಥವಾ ‘ಅವಳೇ’ಆಗಿರಲಿ ನಾವೆಲ್ಲರೂ ಒಂದೇ ಎಂಬ ತತ್ವದಡಿಯಲ್ಲಿ ಬದುಕೋಣ..
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…