ಸುಳ್ಯ: 2018-19ನೇ ಸಾಲಿನಲ್ಲಿ ತಾಲೂಕು ಪಂಚಾಯತ್ ಗೆ ಮಂಜೂರಾಗಿದ್ದ ಅನುದಾನದಲ್ಲಿ 32 ಲಕ್ಷ ರೂಪಾಯಿ ಲ್ಯಾಪ್ಸ್ ಆಗಿತ್ತು. ಈ ಬಗ್ಗೆ ಕೆಡಿಪಿ ಸಭೆಯಲ್ಲಿ ಚರ್ಚೆ ನಡೆಯಿತು.
ತ್ರೈಮಾಸಿಕ ಕೆಡಿಪಿ ಸಭೆ ಶಾಸಕ ಅಂಗಾರ ಅಧ್ಯಕ್ಷತೆಯಲ್ಲಿ ತಾಪಂ ಸಭಾಂಗಣದಲ್ಲಿ ಗುರುವಾರ ನಡೆಯಿತು. 46 ಕಾಮಗಾರಿಗಳ 32 ಲಕ್ಷ ರೂ ಲ್ಯಾಪ್ಸ್ ಆಗಿರುವ ಬಗ್ಗೆ ವಿಭಾಗದ ಇಂಜಿನಿಯರ್ ಮಾಹಿತಿ ನೀಡಿದರು. ಕಾಮಗಾರಿ ಪೂರ್ತಿಯಾಗಿದೆ ಆದರೆ ಬಿಲ್ ಪಾವತಿಸುವ ಮುನ್ನ ಅನುದಾನ ಹಿಂದಕ್ಕೆ ಹೋಗಿದೆ. ಸಾಮಾನ್ಯವಾಗಿ ಬಿಲ್ ನೀಡದಿದ್ದರೆ ಮಾರ್ಚ್ 31ರ ಬಳಿಕ ಅನುದಾನ ವಾಪಾಸ್ ಹೋಗುತ್ತದೆ. ಆದರೆ ಈ ಬಾರಿ ಮಾ.31 ಮೊದಲೇ ಹಣ ವಾಪಾಸ್ ಹೋದ ಕಾರಣ ಬಿಲ್‍ಗಳು ಬಾಕಿ ಆಗಿದೆ ಎಂದು ಇಂಜಿನಿಯರ್ ಗಳು ಹೇಳಿದರು. ಈ ಕುರಿತು ಚರ್ಚೆ ನಡೆದು ಯಾವ ಕಾಮಗಾರಿಗಳು ಮುಗಿದಿದೆ, ಯಾವುದು ಬಾಕಿ ಇದೆ ಮತ್ತು ಬಿಲ್ ಪಾವತಿಗೆ ಬಾಕಿ ಇದೆ ಎಂಬುದರ ಬಗ್ಗೆ ವರದಿ ನೀಡುವಂತೆ ಶಾಸಕರು ಸೂಚಿಸಿದರು.
ರಸ್ತೆ ಪೊರಂಬೋಕು ಮತ್ತು ನದಿ ಪೊರಂಬೋಕುಗಳಲ್ಲಿ ನಿರ್ಮಾಣವಾಗಿರುವ ಅನಧಿಕೃತ ಕಟ್ಟಡಗಳನ್ನು ತೆರವು ಮಾಡಲು ಕ್ರಮಕ್ಕೆ ಶಾಸಕ ಅಂಗಾರ ಸೂಚನೆ ನೀಡಿದರು.
ಈ ಕುರಿತು ವಿವಿಧ ಇಲಾಖೆಗಳ ಜಂಟಿ ಸರ್ವೆ ನಡೆಸಿ ಅನಧಿಕೃತ ಕಟ್ಟಡಗಳ ತೆರವಿಗೆ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ಎನ್.ಎ.ಕುಂಞ ಅಹಮ್ಮದ್ ತಿಳಿಸಿದರು. ಬೇಂಗಮಲೆ, ಆಲೆಟ್ಟಿ, ಆನೆಗುಂಡಿ, ಅರಂತೋಡು ಮತ್ತಿತರ ಕಡೆಗಳಲ್ಲಿ ಕೋಳಿ ತ್ಯಾಜ್ಯಗಳನ್ನು ಎಸೆಯುವವರ ವಿರುದ್ಧ ಕ್ರಮ ಜರುಗಿಸುವಂತೆ ಪೊಲೀಸ್ ಮತ್ತು ಕಂದಾಯ ಇಲಾಖೆಗಳಿಗೆ ಶಾಸಕರು ಸೂಚಿಸಿದರು. ಕೋಳಿ ಅಂಗಡಿ ಮಾಲಕರ ಸಭೆ ಕರೆದು ಕೋಳಿ ತ್ಯಾಜ್ಯ ಎಸೆಯದಂತೆ ಎಚ್ಚರ ನೀಡುವುದಾಗಿ ತಹಶೀಲ್ದಾರ್ ತಿಳಿಸಿದರು. ರಸ್ತೆ ಬದಿಯ ನೀರು ಹೋಗಿ ಕೊಚ್ಚಿ ಹೋಗುವ ಅಥವಾ ಕುಸಿಯುವ ಸ್ಥಳಗಳಿದ್ದಲ್ಲಿ ಅವುಗಳನ್ನು ಗುರುತಿಸಿ ನೀರು ಹೋಗಲು ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಚರಂಡಿಗಳ ದುರಸ್ಥಿ ನಡೆಯಬೇಕು. ವಿದ್ಯುತ್ ಲೈನ್‍ಗಳ ದುರಸ್ಥಿ, ಲೈನ್‍ಗೆ ತಾಗುವ ಗೆಲ್ಲು ಕಡಿಯಲು, ಅಪಾಯಕಾರಿ ಮರಗಳ ತೆರವು ಮಾಡಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಂಜಿಗಾರು-ಬೊಬ್ಬೆಕೇರಿ ರಸ್ತೆ ನಾದುರಸ್ಥಿಯಲ್ಲಿರುವುದರ ಬಗ್ಗೆ ಸಾರ್ವನಿಕರು ಪ್ರತಿಭಟನೆಗೆ ಮುಂದಾಗಿರುವ ಬಗ್ಗೆ ಕೆಡಿಪಿ ಸದಸ್ಯ ಬಾಲಕೃಷ್ಣ ಸಾಮಾನಿ ಪ್ರಸ್ತಾಪಿಸಿದರು. ಕೊಡಿಯಾಲ ಗ್ರಾಮಕ್ಕೆ ಸಾಕಷ್ಟು ಅಭಿವೃದ್ಧಿಗೆ ಹಣ ನೀಡಲಾಗಿದೆ. ರಸ್ತೆ ಅಭಿವೃದ್ಧಿಗೆ ಕಳೆದ ವರ್ಷ ನಬಾರ್ಡ್ ಯೋಜನೆಯಲ್ಲಿ ಒಂದು ಕೋಟಿ ರೂ ಕಾಮಗಾರಿ ನಡೆಸಲಾಗಿದೆ. ಸ್ವಲ್ಪ ಬಾಕಿ ಆಗಿದೆ. ಮುಂದೆ ಅನುದಾನ ಬಂದರೆ ಉಳಿದ ಕಾಮಗಾರಿ ಪೂರ್ತಿ ಮಾಡಲಾಗುವುದು ಎಂದು ಶಾಸಕರು ಹೇಳಿದರು.
ಕೇರಳ ಮತ್ತು ಕರ್ನಾಟಕ ಗಡಿ ಪ್ರದೇಶವಾದ ಮಂಡೆಕೋಲು, ಅಜ್ಜಾವರ, ಆಲೆಟ್ಟಿ ಭಾಗದಲ್ಲಿ ಆನೆ ಹಾವಳಿ ತೀವ್ರ ಗೊಂಡಿರುವ ಬಗ್ಗೆ ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ಸಭೆಯ ಗಮನಕ್ಕೆ ತಂದರು. ಈ ಕುರಿತು ಚರ್ಚೆ ನಡೆದಾಗ ಆನೆಗಳನ್ನು ಸೆರೆ ಹಿಡಿದು ಬೇರೆ ಕಡೆಗೆ ಸಾಗಿಸಿ ಸಮಸ್ಯೆ ಪರಿಹರಿಸಬಹುದು. ಅದರೆ ಆನೆ ಹಿಡಿಯುವುದಕ್ಕೆ ಸರಕಾರಿ ಮಟ್ಟದಲ್ಲಿ ನಿರ್ಧಾರ ಆಗಬೇಕಿದೆ. ಈ ಕುರಿತು ತಾ.ಪಂ.ಸಭೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳಿಸಬಹುದು ಎಂದು ವಲಯ ಅರಣ್ಯಾಧಿಕಾರಿ ಮಂಜುನಾಥ್ ಹೇಳಿದರು.
ಅಡಕೆ ಕೊಳೆ ರೋಗ ಪರಿಹಾರ ಕೋರಿ ಬಂದ ಬಹುತೇಕ ಅರ್ಜಿಗಳಿಗೆ ಹಣ ಪಾವತಿ ಆಗಿದೆ. ಆಧಾರ್ ಲಿಂಕ್ ಆಗದ ಕೆಲವರಿಗೆ ಸಿಕ್ಕಿಲ್ಲ ಅಂತವರು ಗಮನಕ್ಕೆ ತಂದರೆ ಪರಿಹರಿಸಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು. ಸುಳ್ಯದ ಅಂಬೇಡ್ಕರ್ ಭವನ ಕಾಮಗಾರಿ ಮತ್ತೆ ಸ್ಥಗಿತಗೊಂಡಿರುವುದಕ್ಕೆ ಶಾಸಕ ಎಸ್.ಅಂಗಾರ ಗರಂ ಆದರು. ಈ ಕುರಿತು ಸಮಾಜ ಕಲ್ಯಾಣ ಇಲಾಖೆ ಮತ್ತು ನಿರ್ಮಿತಿ ಕೇಂದ್ರದವರನ್ನು ಶಾಸಕರು ತರಾಟೆಗೆತ್ತಿಕೊಂಡರು.
ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ಉಪಾಧ್ಯಕ್ಷೆ ಶುಭದಾ ಎಸ್.ರೈ, ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಜಿಲ್ಲಾ ಪಂಚಾಯತ್ ಸದಸ್ಯರಾದ ಎಸ್.ಎನ್.ಮನ್ಮಥ, ಹರೀಶ್ ಕಂಜಿಪಿಲಿ, ಪುಷ್ಪಾವತಿ ಬಾಳಿಲ, ಆಶಾ ತಿಮ್ಮಪ್ಪ, ಕೆಡಿಪಿ ಸದಸ್ಯರು ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…