ಚುನಾವಣೆಯ ಸಂದರ್ಭ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸುವ ಹಿನ್ನೆಲೆಯಲ್ಲಿ ವಿವಿಧ ಕ್ರಮಗಳನ್ನು ಚುನಾವಣಾ ಆಯೋಗ ಜಾರಿಗೊಳಿಸುತ್ತದೆ. ಅದರಲ್ಲಿ ಕೃಷಿ ರಕ್ಷಣೆಗೆ ಪರವಾನಿಗೆಯನ್ನು ಪಡೆದ ಕೋವಿಯನ್ನು ಠಾಣೆಗಳಲ್ಲಿ ಕೃಷಿಕರು ಠೇವಣಾತಿ ಇಡುವ ಪ್ರಕ್ರಿಯೆಯೂ ಒಂದು. ಆದರೆ ಕೃಷಿ ರಕ್ಷಣೆಗೆಂದು ಹೊಂದಿರುವ ಕೋವಿಯನ್ನು ಠೇವಣಾತಿ ಇಡುವುದು ಸ್ಥಗಿತಗೊಳ್ಳಬೇಕು ಎನ್ನುವ ಬೇಡಿಕೆಯ ನಡುವೆ ನ್ಯಾಯಾಲಯ ಮೆಟ್ಟಿಲೇರಿದ್ದ ಕೃಷಿಕರ ಕೋವಿ ಠೇವಣಾತಿಗೆ ಈ ಬಾರಿ ವಿನಾಯಿತಿ ಸಿಕ್ಕಿದೆ. ಇದಕ್ಕಾಗಿ ಸ್ಕ್ರೀನಿಂಗ್ ಕಮಿಟಿ ಸಭೆ ಸೇರಿ ಈ ನಿರ್ಧಾರ ಕೈಗೊಂಡಿದ್ದು, ಸಂಬಂಧಿತ ಕೃಷಿಕರಿಗೆ ಆದೇಶವನ್ನೂ ಕಳುಹಿಸಿದೆ.
ಚುನಾವಣೆಯ ಸಂದರ್ಭ ಕೃಷಿಕರ ಕೋವಿಯನ್ನು ಠೇವಣಾತಿ ಇಡುವ ಪ್ರಕ್ರಿಯೆ ಸ್ಥಗಿತಗೊಳ್ಳಬೇಕು, ಯಾವುದೇ ಕ್ರಮಿನಲ್ ಹಿನ್ನೆಲೆ ಇಲ್ಲದ ಕೃಷಿಕರು ಕೂಡಾ ಕೋವಿಯನ್ನು ಹಣ ಪಾವತಿ ಮಾಡಿ ಡಿಪಾಸಿಟ್ ಮಾಡಬೇಕಾದ ಸ್ಥಿತಿ ಹಲವು ಸಮಯಗಳಿಂದ ಇದೆ. ಕಳೆದ ಮೂರು ವರ್ಷಗಳಿಂದ ಅಂದರೆ ಮೂರು ಚುನಾವಣೆಗಳಿಂದ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಕಳೆದ ಚುನಾವಣೆಯಲ್ಲಿ ಈ ಬಗ್ಗೆ ಕೃಷಿಕರು ಹೈಕೋರ್ಟ್ ಮೊರೆ ಹೋಗಿದ್ದರು. ಈ ಸಂದರ್ಭ ಸ್ಕ್ರೀನಿಂಟ್ ಕಮಿಟಿ ರಚನೆ ಮಾಡಿ ಅದಕ್ಕೆ ಕೃಷಿಕರು ಅರ್ಜಿ ಸಲ್ಲಿಸಿ ವಿನಾಯಿತಿ ಪಡೆದುಕೊಳ್ಳಬೇಕು ಎಂದು ಮಾನ್ಯ ಹೈಕೋರ್ಟ್ ನಿರ್ದೇಶನ ನೀಡಿತ್ತು. ಚುನಾವಣೆ ಘೋಷಣೆಯಾಗುವ ಜೊತೆಗೇ ಕಮಿಟಿ ರಚನೆಯಾಗಬೇಕು, ಅದಕ್ಕೆ ಕೃಷಿಕರು ಅರ್ಜಿ ಸಲ್ಲಿಸಬೇಕು ಎಂದು ಸೂಚನೆ ನೀಡಿತ್ತು.
ಈ ಬಾರಿ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಸ್ಕ್ರೀನಿಂಗ್ ಕಟಿಮಿ ರಚನೆಯಾಗಿತ್ತು. ಈ ಸಮಿತಿ ಅರ್ಜಿ ಸಲ್ಲಿಸಿದ ಬಹುತೇಕ ಎಲ್ಲಾ ಕೃಷಿಕರದೂ ಅರ್ಜಿ ತಿರಸ್ಕಾರಗೊಂಡು ಎಲ್ಲಾ ಕೃಷಿಕರೂ ಕೋವಿ ಠೇವಣಾತಿ ಇಡಬೇಕು ಎಂದು ಸೂಚನೆ ನೀಡಿತ್ತು. ಇದಕ್ಕೆ ಕಾರಣ ನೀಡಿದ ಸ್ಕ್ರೀನಿಂಗ್ ಕಮಿಟಿಯು, ಈಗ ಯಾವುದೇ ಕೃಷಿಗೆ ಮಂಗಗಳು ಹಾನಿ ಮಾಡುವುದಿಲ್ಲ, ಇದರಿಂದ ಸಮಸ್ಯೆಯೂ ಇಲ್ಲ ಎಂದು ಹೇಳಿತ್ತು.
ಈ ಬಗ್ಗೆ ಕೃಷಿಕರು ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಬಂಟ್ವಾಳದ ಗೋವಿಂದ ಭಟ್ ಮಾಣಿಮೂಲೆ ಹಾಗೂ ಬೆಳ್ಳಾರೆಯ ಜಯಪ್ರಸಾದ್ ಜೋಶಿ, ಪುರುಷೋತ್ತಮ ಮಲ್ಕಜೆ ಹಾಗೂ ಗಿರಿಜಾ ಶಂಕರ್ ಮತ್ತುಸುದರ್ಶನ್ ಕುಮಾರ್ ರಿಟ್ ಅರ್ಜಿ ಸಲ್ಲಿಸಿದ್ದರು. ಒಟ್ಟು ಒಂಭತ್ತು ಮಂದಿ ಕೃಷಿಕರು ಜೊತೆಯಾಗಿದ್ದರು. ಈ ಅರ್ಜಿ ವಿಚಾರಣೆ ನಡೆದಿದ್ದು, ಎರಡು ದಿನದಲ್ಲಿ ತೀರ್ಪು ಪ್ರಕಟವಾಗಲಿದೆ.
ಈ ನಡುವೆ ಸ್ಕ್ರೀನಿಂಗ್ ಕಮಿಟಿ ಸಭೆ ಸೇರಿ ತಕ್ಷಣವೇ ನ್ಯಾಯಾಲಯದ ಮೊರೆ ಹೋದ ಕೃಷಿಕರಿಗೆ ಕೋವಿ ಠೇವಣಾತಿಯಿಂದ ವಿನಾಯಿತಿ ನೀಡಿ ಆದೇಶ ನೀಡಿದೆ. ಕೃಷಿ ರಕ್ಷಣೆ, ಕಾಡು ಪ್ರಾಣಿಗಳ ಹಾವಳಿ ಇದೆ ಎಂದು ಕೃಷಿಕರು ತಿಳಿಸಿದ್ದು, ಕೃಷಿಕರು ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲದೇ ಇರುವುದರಿಂದ ಹಾಗೂ ಕೃಷಿ ಭೂಮಿಯು ತೀರಾ ಗ್ರಾಮೀಣ ಭಾಗದಲ್ಲಿ ಇರುವುದರಿಂದ ಸ್ಕ್ರೀನಿಂಗ್ ಕಮಿಟಿಯು ಕೋವಿ ಠೇವಣಾತಿ ಇರಿಸುವುದನ್ನು ವಿನಾಯಿತಿ ನೀಡಿದೆ ಎಂದು ಆದೇಶಿಸಿದೆ.ನ್ಯಾಯಾಲಯದ ತೀರ್ಪು ಎರಡು ದಿನದಲ್ಲಿ ಪ್ರಕಟವಾಗುವ ನಿರೀಕ್ಷೆ ಇದೆ. ಮೊನ್ನೆ ಇದೇ ಸ್ಕ್ರೀನಿಂಗ್ ಕಮಿಟಿ ಕೃಷಿಕರ ವಾಸ್ತವ ಸ್ಥಿತಿಯನ್ನು ಅರಿಯದೇ ಈಗ ಕೃಷಿಗೆ ಯಾವುದೇ ಕಾಡು ಪ್ರಾಣಿಯ ಹಾವಳಿ ಇಲ್ಲ ಎಂದು ಹೇಳಿತ್ತು.
Advertisement